ಮಸ್ಕತ್ ನಲ್ಲಿ ವಿಜ್ರಂಭಣೆಯಿಂದ ಜರುಗಿದ ಶ್ರೀ ಆಂಜನೇಯ ಸ್ವಾಮಿ ಪೂಜೆ

ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ||

ಓಂಕಾರ ಆಂಜನೇಯ ಪೂಜಾ ಮಹೋತ್ಸವ- 2023,  ಡಿಸೆಂಬರ್ 29 ರಂದು ಅದ್ದೂರಿಯಾಗಿ ಎಲ್ಲ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಮಸ್ಕತ್ತಿನ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನೆರದ ಭಕ್ತ ಸಮೂಹದ ನಡುವೆ ನಡೆಯಿತು. 


ಅನೇಕ ದಿನಗಳಿಂದ ಈ ದಿನಕ್ಕೆ ತಯಾರಿ ನಡೆಸಿದ್ದ ಓಂಕಾರ ಸ್ವಯಂ ಸೇವಕರ ತಂಡದ ನಿಜವಾದ ಸಾಮರ್ಥ್ಯ ತಿಳಿಯುವುದು ಪೂಜೆಯ ಹಿಂದಿನ ದಿನ ರಾತ್ರಿ. ಸಂಜೆಯೇ ದೇವಸ್ಥಾನದ ಸಭಾಂಗಣಕ್ಕೆ ಎಲ್ಲ ಸ್ವಯಂಸೇವಕರೂ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆಗೆ ವೇದಿಕೆಯನ್ನು ಸಜ್ಜುಗೊಳಿಸುವ ಕೆಲಸವನ್ನು ಮಾಡುವುದು ವಾಡಿಕೆ.  



ಅಂದು ಸಂಜೆ ಎಲ್ಲರೂ ಒಟ್ಟಾಗಿ ಬಂದು ಕೆಲಸಗಳನ್ನು ಹಂಚಿಕೊಳ್ಳುತ್ತಾರೆ. ಅರ್ಚಕರಾದ, ವಿದ್ವಾನ್ ಶ್ರೀ ಬಿ. ವಿ. ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯರು ಮತ್ತು ಅವರ ಪುತ್ರ ವಾಸುದೇವ ಭಟ್   ಅವರು ಪೂಜೆ ಮಾಡಿ ಅಡಿಗೆಯ ಕೆಲಸಗಳಿಗೆ ಚಾಲನೆಯನ್ನು ನೀಡಿದ ನಂತರ ಮಹಿಳೆಯರು ತರಕಾರಿ ಹೆಚ್ಚುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮತ್ತು ಸಮರ್ಥವಾಗಿ ನಿರ್ವಹಿಸಿದರು.  ಭಾರತದಿಂದ ಬಂದಿದ್ದ ಪಾಕತಜ್ಞ ಗಣೇಶ್ ಐತಾಳ್  ಅವರ  ನೇತೃತ್ವದಲ್ಲಿ ಮಸ್ಕತ್ತಿನ ಅಡುಗೆ ತಂಡ ಮರುದಿನದ ಅಡುಗೆಗೆ ಭರದ ಸಿದ್ಧತೆಯನ್ನ ಮಾಡಿಕೊಂಡರು. ಬಂದಿದ್ದ ಮಕ್ಕಳು, ಮಹಿಳೆಯರು ಪುರುಷರ ಉತ್ಸಾಹ ಅಲ್ಲಿ ಒಂದು ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು.

ಪೂಜೆಯ ದಿನ ಬೆಳಿಗ್ಗೆ ಭಾರತದಿಂದ ಇದಕ್ಕಾಗಿಯೇ ಆಗಮಿಸಿದ ಗಾಳಿ ಆಂಜನೇಯ ದೇವಸ್ಥಾನ, ಬೆಂಗಳೂರು- ಇದರ ಮುಖ್ಯ ಅರ್ಚಕರಾದ, ವಿದ್ವಾನ್ ಶ್ರೀ. ಬಿ. ವಿ. ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯರು ಮತ್ತು ಅವರ ಪುತ್ರ ವಾಸುದೇವ ಭಟ್  ನೇತೃತ್ವದಲ್ಲಿ ದೇವಸ್ಥಾನದ ವಿಘ್ನವಿನಾಯಕ, ಕೃಷ್ಣ, ದೇವಿ- ಎಲ್ಲರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಸಂಕಲ್ಪ ಪೂಜೆಯ ಮೂಲಕ ವಿಧಿವಿಧಾನಗಳು ಆರಂಭಗೊಂಡವು.


ಈ ಬಾರಿ ಪೂಜಾ ವಿಧಿಯ ದಂಪತಿಗಳಾಗಿ ಶ್ರೀ ಸುರೇಶ್ ಮತ್ತು ಲಕ್ಷ್ಮಿ  ದಂಪತಿಗಳು ಪೂಜಾ ಕೈಂಕರ್ಯ  ನೆರವೇರಿಸಿದರು. ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಮುಂದುವರೆದರೆ, ಒಟ್ಟಿಗೆ ನಡೆಯುತ್ತಿದ್ದ, ಹರಿವಾಯುಸ್ತುತಿ, ವಿಷ್ಣು ಸಹಸ್ರನಾಮ, ರಾಮ ರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಪಾರಾಯಣಗಳು ಸಭಿಕರಲ್ಲಿ ಭಕ್ತಿಭಾವವನ್ನು ಸಂಚಲಿಸಿತು. 











ಓಂಕಾರ ಮಹಿಳಾ ಭಜನಾ ಮಂಡಳಿಯ- ಸಿಂಧೂರ ವದನ, ಭಾಗ್ಯವ ಕೊಡು ತಾಯೇ, ರಾಮ ರಾಮ ಎನ್ನಿರೇ, ರಾಮನೆಂಬೋ, ಎಂತ ಬಲವಂತನೆ, ಸಾರಿ ಬಂದನೆ,  ರಾಮ ಸ್ಮರಣೆ ಮುಂತಾದ ಹಾಡುಗಳ ಮೂಲಕ ಪ್ರಸ್ತುತಪಡಿಸಿದ ಇವರ ಗಾಯನವು ಪೂಜೆಯಲ್ಲಿ ಭಾಗಿಯಾದವರ ಮನಸ್ಸನ್ನು ಸೂರೆಗೊಂಡಿತು. ನಂತರ ಅರ್ಚನೆ ಪೂಜಾ ವಿಧಿಗಳನ್ನು ಪೂರೈಸಿದ ಅರ್ಚಕರು ಆಶೀರ್ವಚನವನ್ನು ನೀಡಿದ ಬಳಿಕ ಪಂಚವಾದ್ಯ ದೊಂದಿಗೆ ಮಹಾಮಂಗಳಾರತಿಯನ್ನು ಮಾಡಿದರು. ಮಹೋತ್ಸವಕ್ಕೆ  ಒಂದು ಸಂಚಲನವನ್ನೇ ಮೂಡಿಸಿದ ಪಂಚವಾದ್ಯಗಳ ನಾದ ನೆರೆದ ಭಕ್ತರನ್ನು ಭಕ್ತಿಭಾವದ ಪರಾಕಾಷ್ಠೆಗೆ ಒಯ್ದಿತು. 







ಪೂಜೆಯ ನಂತರ ಪ್ರಸಾದದ ವಿತರಣೆಗೆ ಸಜ್ಜಾಗಿದ್ದ ಸ್ವಯಂಸೇವಕರ ಓಂಕಾರ ತಂಡವು ನೆರೆದ ಸಮಸ್ತ ಭಕ್ತಸಮೂಹಕ್ಕೆ ಮಹಾಪ್ರಸಾದದ ವಿತರಣೆ ಮಾಡಿತು. 







ಸಂಪೂರ್ಣವಾದ ಸೇವೆಯನ್ನು ನೀಡಿದ ಓಂಕಾರ ಸಮಿತಿಯು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರಿಗೆಲ್ಲ ಕೃತಜ್ಞತೆಯನ್ನು ಸಲ್ಲಿಸಿತು. ಹೀಗೆಯೇ ನಿರಂತರ ಸೇವೆಯನ್ನು ನೀಡುವ ಅವಕಾಶವನ್ನು ಕಲ್ಪಿಸೆಂದು ಶ್ರೀ ಮುಖ್ಯಪ್ರಾಣನನ್ನು ಪ್ರಾರ್ಥಿಸುತ್ತ ಮಸ್ಕತ್ತಿನ ಹನ್ನೆರಡನೇಯ ವರ್ಷದ ಓಂಕಾರ ಪೂಜಾ ಮಹೋತ್ಸವವು ಸಂಪೂರ್ಣಗೊಂಡಿತು.





ವರದಿ: ಶ್ರೀಮತಿ ಸುಧಾ ಶಶಿಕಾಂತ್