ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ||
ಮಸ್ಕತ್ ನಲ್ಲಿ ಕರಾವಳಿಯ ತಂಗಾಳಿಯೊಂದಿಗೆ ಅಧ್ಯಾತ್ಮದ ಸುಗಂಧ ಬೆರೆತ ಆ ಸುಂದರ ಸಂಜೆ, ಮರಳುಗಾಡಿನಲ್ಲಿ ಕರುನಾಡ ಭಕ್ತಿ ಸಂಗೀತದ ಸಂಸ್ಕೃತಿಯ ತಟಾಕವನ್ನೇ ಸೃಷ್ಟಿಸಿತ್ತು. 2026 ಅಕ್ಟೋಬರ್ 2ರ ಶುಕ್ರವಾರದಂದು, ಸರಿಯಾಗಿ ಸಂಜೆ 6:00 ಗಂಟೆಗೆ ಮಸ್ಕತ್ ನ ಶ್ರೀ ಕೃಷ್ಣ ಮಂದಿರದ ಸಭಾಂಗಣವು ಸುಂದರವಾಗಿ ಕಂಗೊಳಿಸುತ್ತಿತ್ತು. ಅಂದು ನೆರೆದಿದ್ದ ನೂರಾರು ಪ್ರೇಕ್ಷಕರ ಕಣ್ಣುಗಳಲ್ಲಿ ಒಂದು ಅಪೂರ್ವ ಸಾಂಸ್ಕೃತಿಕ ಸೌರಭವನ್ನು ಆಸ್ವಾದಿಸುವ ತವಕವಿತ್ತು. ಓಮಾನ್ ಕರ್ನಾಟಕ ಆರಾಧನಾ ಸಮಿತಿಯು (ಓಂಕಾರ) ಆಯೋಜಿಸಿದ್ದ 'ಓಂಕಾರ ನಾದಾಮೃತ 2026' ಭಕ್ತಿ ಸಂಗೀತ ಕಾರ್ಯಕ್ರಮವು ಕೇವಲ ಒಂದು ಸಂಗೀತ ಸಂಜೆಯಾಗಿರದೆ, ಅನಿವಾಸಿ ಕನ್ನಡಿಗರನ್ನು ತಾಯ್ನಾಡಿನ ಸಾಂಸ್ಕೃತಿಕ ಬೇರುಗಳೊಂದಿಗೆ ಜೋಡಿಸುವ ದಿವ್ಯ ಕೊಂಡಿಯಾಗಿ ಮೂಡಿಬಂದಿತು.
ಮಂಗಳ ಚಾಲನೆ ಹಾಗೂ ಕಲಾವಿದರ ಪರಿಚಯ.
ನಮ್ಮ ಹೆಮ್ಮೆಯ ತಾಯ್ನಾಡಿನಿಂದ ಆಗಮಿಸಿದ ತುಳುನಾಡು ಗಾನ ಗಂಧರ್ವ ಪುತ್ತೂರು ಶ್ರೀ ಜಗದೀಶ್ ಆಚಾರ್ಯ ಅವರು ಅವರ ಪ್ರಖ್ಯಾತ ವಾದ್ಯ ವೃಂದದವರಿಗಾಗಿ ವೇದಿಕೆಯು ಅತ್ಯಂತ ಕಲಾತ್ಮಕವಾಗಿ ಹಾಗೂ ಸುಸಜ್ಜಿತವಾಗಿ ಸಿದ್ಧಗೊಂಡಿತ್ತು. ಭಕ್ತಿ ಸಂಗೀತ ಸುಧೆಯನ್ನು ಅನುಭವಿಸಲು ಮಸ್ಕತ್ ನ ಸಂಗೀತ ಪ್ರೇಮಿಗಳು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಓಂಕಾರ ಸಮಿತಿಯ ಶ್ರೀ ರವಿಕುಮಾರ್ ಅವರು ಸ್ವಾಗತ ಭಾಷಣದೊಂದಿಗೆ ಆಗಮಿಸಿದ ಗಣ್ಯರಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದ ಅವರು, ಸಭಿಕರನ್ನು ಅತ್ಯಂತ ಪ್ರೀತಿ ಮತ್ತು ಆತ್ಮೀಯತೆಯಿಂದ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಓಂಕಾರ ಸಮಿತಿಯ ಧೇಯೋದ್ದೇಶಗಳನ್ನು ನೆನಪಿಸುವ ಕಿರುನೋಟವನ್ನು ಸಭೆಯ ಮುಂದಿಟ್ಟು, ಸಂಸ್ಥೆಯ ಬದ್ಧತೆಯನ್ನು ಪುನರುಚ್ಚರಿಸಿದರು.
ಈ ದಿವ್ಯ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ದೊರೆತಿದ್ದು ಮಂಗಳಾರತಿಯ ಮೂಲಕ. ಶ್ರೀ ಜಗದೀಶ್ ಅವರು ಆದಿಪೂಜಿತ ಶ್ರೀ ಗಣಪತಿಗೆ ಹಾಗೂ ಓಂಕಾರ ಸಮಿತಿಯ ಆರಾಧ್ಯ ದೇವ, ಚೈತನ್ಯ ಮೂರ್ತಿ ಶ್ರೀ ಓಂಕಾರ ಆಂಜನೇಯ ಸ್ವಾಮಿಗೆ ಭಕ್ತಿಯಿಂದ ಆರತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಭವ್ಯ ಚಾಲನೆ ನೀಡಿದರು.
ತದನಂತರ, ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತ ಶ್ರೀಮತಿ ಶ್ವೇತಾ ರಿತೇಶ್ ಆಚಾರ್ಯ ಅವರು ವೇದಿಕೆಗೆ ಆಗಮಿಸಿದರು.
ಅವರು ಪುತ್ತೂರು ಶ್ರೀ ಜಗದೀಶ್ ಆಚಾರ್ಯ ಹಾಗೂ ಅವರ ತಂಡದ ಪ್ರತಿಭಾವಂತ ಕಲಾವಿದರನ್ನು ಸಭಿಕರಿಗೆ ಪರಿಚಯಿಸಿದರು. ಸಂಗೀತದ ನಾಡಿ ಮಿಡಿತಗಳಾದ ಕೀಬೋರ್ಡ್ ವಾದಕ ಶ್ರೀ ಶಿಜಿಮೋನ್ ಭಾಸ್ಕರನ್, ತಬಲಾ ಚತುರ ಶ್ರೀ ಶರತ್ ಪ್ರಭು, ಪ್ರಸಿದ್ಧ ಕೊಳಲು ವಾದಕ ಶ್ರೀ ವೇಣುಗೋಪಾಲ್ ಜ್ಯೋತಿಗುಡ್ಡೆ, ರಿದಮ್ ಪ್ಯಾಡ್ ಮಾಂತ್ರಿಕರಾದ ಶ್ರೀ ವಾಮನ್ ಕಣಜಾರು, ಮಧುರ ಕಂಠದ ಸಹಗಾಯಕಿಯರಾದ ಕುಮಾರಿ ಜನ್ಮಪ್ರಸಾದ್ ಅನಂತಾಡಿ ಹಾಗೂ ಶ್ರೀಮತಿ ಉಜ್ವಲಾ ಆಚಾರ್ ಅವರ ಪರಿಚಯದ ನಂತರ ಕಾರ್ಯಕ್ರಮದ ಕೇಂದ್ರಬಿಂದುವಾದ ಶ್ರೀ ಪುತ್ತೂರು ಜಗದೀಶ ಅವರನ್ನು ವೇದಿಕೆಗೆ ಕರೆತಂದು ಪರಿಚಯ ಮಾಡಿಸುತ್ತಿದ್ದಂತೆ ಸಭಾಂಗಣದಲ್ಲಿ ಸಭಿಕರಿಂದ ಕರತಾಡನ ಮೊಳಗಿತು.
ನಾದಲಹರಿ: ಶ್ರೀಕೃಷ್ಣನನ್ನು ಮಂತ್ರಮುಗ್ಧಗೊಳಿಸಿದ ಗಾಯನ.
ಮಸ್ಕತ್ ನ ನೆಲದಲ್ಲಿ ಸೇರಿದ ಜನಸಾಗರವನ್ನು ನೋಡಿ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಾ ಶ್ರೀ ಪುತ್ತೂರು ಜಗದೀಶ್ ಆಚಾರ್ಯ ಅವರು ಗಣೇಶನ ಸ್ತುತಿಯೊಂದಿಗೆ ಗಾಯನವನ್ನು ಆರಂಭಿಸಿದರು. ಗಣಪತಿಯ ಭಜನೆ ಕೇಳುತ್ತಿದ್ದಂತೆ ಸಭಾಂಗಣದಲ್ಲಿ ಭಕ್ತಿಯ ಸಂಚಲನ ಮೂಡಿತು. ಮುಂದುವರಿದು 'ಮರಳು ಮಾಡಿಕೊಂಡಿಹಳ್ಳಿ ಮಹಾದೇವಿಯೇ' ಹಾಗೂ 'ರಾಮಮಂತ್ರವ ಜಪಿಸಿ ಪಾಪವ ಕಳೆಯೋಣ' ಗೀತೆಗಳಂತೂ ಭಕ್ತರು ಅವರೊಂದಿಗೆ ಸೇರಿ ಭಕ್ತಿಯ ತಾಳದೊಂದಿಗೆ ಭಜಿಸುವಂತೆ ಮಾಡಿತು. ಪ್ರಖ್ಯಾತ ಹಿಂದಿ ಗೀತೆಯಾದ 'ಸತ್ಯಂ ಶಿವಂ ಸುಂದರಂ' ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು. 'ತುಂಗಾತೀರದಿ ನಿಂತ ಸುಯತಿವರ' ಗೀತೆಯಂತೂ ರಾಯರೇ ಕಣ್ಣೆದುರು ಬಂದಂತಾಗಿತ್ತು. ಪೀನಮಾಯೋ ವಾಸುದೇವಂ ಹಾಗೂ ಪಿಳ್ಳಂಗೋವಿಯ ಗೀತೆಗಳೂ ಸಭಿಕರನ್ನು ನಾದಲೋಕದಲ್ಲಿ ತೇಲುವಂತೆ ಮಾಡಿತು.
ಸಾಂಪ್ರದಾಯಿಕ ಸನ್ಮಾನ ಹಾಗೂ ವಿಶೇಷ ಬಿರುದು ನೀಡಿದ ಕ್ಷಣಗಳು.
ಕಲಾವಿದರನ್ನು ಗೌರವಿಸುವುದು ಕಲೆಯನ್ನು ಗೌರವಿಸಿದಂತೆ ಎಂಬ ಉದಾತ್ತ ಚಿಂತನೆಯೊಂದಿಗೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಸ್ಕತ್ ಚಾಪ್ಟರ್, ಕನ್ನಡ ಸಂಘ ಮಸ್ಕತ್, ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್ ಹಾಗೂ ಕರ್ನಾಟಕ ಜನಪದ ಪರಿಷತ್ ಮಸ್ಕತ್ ತಂಡದಿಂದ ನಮ್ಮ ಮುಖ್ಯ ಗಾಯಕರಾದ ಶ್ರೀ ಪುತ್ತೂರು ಜಗದೀಶ್ ಆಚಾರ್ಯ ಅವರಿಗೆ ಆತ್ಮೀಯ ಸನ್ಮಾನವನ್ನು ನೆರವೇರಿಸಲಾಯಿತು.
ತದನಂತರ ಓಂಕಾರ ಸಮಿತಿಯ ವತಿಯಿಂದ ಉಪಸ್ಥಿತರಿದ್ದ ಗಣ್ಯರಿಂದ ಎಲ್ಲ ಕಲಾವಿದರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕೀಬೋರ್ಡ್ ವಾದಕರಾದ ಶ್ರೀ ಶಿಜಿಮೋನ್ ಭಾಸ್ಕರನ್ ಇವರಿಗೆ ಶ್ರೀಯುತ ಮಂಜುನಾಥ್ ನಾಯಕ್ ಹಾಗೂ ಶ್ರೀಯುತ ಗಣೇಶ್ ಶೆಟ್ಟಿ ಯವರಿಂದ ಸನ್ಮಾನ, ತಬಲಾ ವಾದಕರಾದ ಶ್ರೀ ಶರತ್ ಪ್ರಭು ಇವರಿಗೆ ಶ್ರೀಯುತ ಡಾ ಸಿ. ಕೆ ಅಂಚನ್ ಹಾಗೂ ಶ್ರೀಯುತ ಅನಂತ್ ಪದ್ಮನಾಭರಿಂದ ಸನ್ಮಾನ, ಕೊಳಲು ವಾದಕರಾದ ಶ್ರೀ ವೇಣುಗೋಪಾಲ್ ಜ್ಯೋತಿಗುಡ್ಡೆ ಇವರಿಗೆ ಶ್ರೀಯುತ ಯುವರಾಜ್ ಸಾಲ್ಯಾನ್ ಅವರಿಂದ ಸನ್ಮಾನ ಹಾಗೂ ರಿದಮ್ ಪ್ಯಾಡ್ ಮಾಂತ್ರಿಕರಾದ ಶ್ರೀ ವಾಮನ ಕಣಜಾರು ಅವರಿಗೆ ಶ್ರೀಯುತ ಶಶಿಧರ ಶೆಟ್ಟಿ ಹಾಗೂ ಶ್ರೀಯುತ ಜಿ ವಿ ರಾಮಕೃಷ್ಣ ಅವರಿಂದ ಸನ್ಮಾನ, ಸಹಗಾಯಕಿಯರಾದ ಕುಮಾರಿ ಜನ್ಮಪ್ರಸಾದ್ ಅನಂತಾಡಿ ಇವರಿಗೆ ಶ್ರೀಮತಿ ಕವಿತಾ ರಾಮಕೃಷ್ಣ ಇವರಿಂದ ಸನ್ಮಾನ ಮತ್ತು ಶ್ರೀಮತಿ ಉಜ್ವಲಾ ಆಚಾರ್ ಇವರಿಗೆ ಶ್ರೀಮತಿ ಶ್ರೀಮಾತಾ ಹಿರಿಯಣ್ಣ ಇವರಿಂದ ಸನ್ಮಾನ ಮಾಡಲಾಯಿತು. ನಮ್ಮ ಸ್ವರಸಾಮ್ರಾಟ್ ಪುತ್ತೂರು ಶ್ರೀ ಜಗದೀಶ್ ಆಚಾರ್ಯ ಅವರನ್ನು ಓಂಕಾರ ಸಮಿತಿಯ ಪರವಾಗಿ ಗೌರವಪೂರ್ವಕವಾಗಿ ಶ್ರೀಯುತ ಹಿರಿಯಣ್ಣ ಅವರು ಸನ್ಮಾನಿಸಿದರು.
'ಓಂಕಾರ ನಾದಾಮೃತ 2026' ರ ಭಕ್ತಿ ಸಂಗೀತ ಕಾರ್ಯಕ್ರಮದ ಅತ್ಯಂತ ಸಾಂಪ್ರದಾಯಿಕ ಕ್ಷಣವನ್ನು ನೆರವೇರಿಸಲು ಓಂಕಾರ ಸಮಿತಿಯ ಸದಸ್ಯರೆಲ್ಲರೂ ವೇದಿಕೆಗೆ ಆಗಮಿಸಿ ಪುತ್ತೂರು ಶ್ರೀ ಜಗದೀಶ್ ಆಚಾರ್ಯ ಅವರಿಗೆ "ಓಂಕಾರಶ್ರೀ" ಪುರಸ್ಕಾರ ನೀಡಿ ಗೌರವಿಸಿದರು. ಕರತಾಡನಗಳ ಚಪ್ಪಾಳೆಯ ಸದ್ದು ಇಡೀ ಸಭಾಂಗಣವನ್ನು ಮೆರುಗುಗೊಳಿಸಿತು.
ತದನಂತರ ಅನಿರೀಕ್ಷಿತ ಮಸ್ಕತ್ ಪ್ರವಾಸದಲ್ಲಿ ಬಂದಿದ್ದ ಸದಾ ಸಮಾಜದ ಹಿತವನ್ನೇ ಬಯಸುವ ಕರಾವಳಿ ಭಾಗದ ಹೆಮ್ಮೆಯ ನಿಜರೂಪದ 'ರಕ್ತಸಂಗಾತಿ' ಎಂದೇ ಖ್ಯಾತರಾಗಿರುವ ಶ್ರೀಯುತ ಸತೀಶ್ ಸಾಲಿಯಾನ್ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಓಂಕಾರ ಸಮಿತಿಯ ಸದಸ್ಯರೊಂದಿಗೆ ಶ್ರೀ ಯುವರಾಜ್ ಸಾಲ್ಯಾನ್, ಶ್ರೀ ಶಿವಾನಂದ ಕೋಟ್ಯಾನ್, ಡಾ. C.K. ಅಂಚನ್, ಶ್ರೀ ಶಶಿಧರ ಶೆಟ್ಟಿ ಹಾಗೂ ಶ್ರೀ ಗಣೇಶ ಶೆಟ್ಟಿ ಯವರೊಂದಿಗೆ ಶ್ರೀ ಸತೀಶ್ ಸಾಲಿಯಾನ್ ಅವರನ್ನು ಪ್ರೀತ್ಯಾದರತೆಯಿಂದ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ಮುಂದುವರಿಕೆ ಹಾಗೂ ಮಂಗಳ ಗೀತೆ.
ಸಂಗೀತದ ರಸದೌತಣ ಇಲ್ಲಿಗೆ ನಿಲ್ಲಲಿಲ್ಲ, ಭಕ್ತಿ ಲಹರಿ ಮುಂದುವರಿಯುತ್ತಾ, ಶ್ರೀಕೃಷ್ಣನ ಮನಸೂರೆಗೊಂಡ ಜನಪ್ರಿಯ ದೇವರ ಭಜನೆಗಳಾದ 'ಓಂಕಾರ ಪ್ರಿಯ ಶ್ರೀನಿವಾಸರಾಯ', ಭಕ್ತಿಯ ಪರಾಕಾಷ್ಠೆಯನ್ನು ತಲುಪಿಸಿದ 'ಬಾರೆ ಸಖಿ', ಕರುನಾಡಿನ ಮನೆಮನಗಳ ಮಂತ್ರವಾದ 'ಭಾಗ್ಯದ ಲಕ್ಷ್ಮಿ ಬಾರಮ್ಮ' ಗೀತೆಗಳನ್ನು ಶ್ರದ್ಧಾಭಕ್ತಿಯಿಂದ ಪ್ರಸ್ತುತ ಪಡಿಸಲಾಯಿತು. ಇದರೊಂದಿಗೆ ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುವ ತುಳುನಾಡಿನ ದೈವಿಕ ಶಕ್ತಿ ಕೊರಗಜ್ಜನ ಭಜನೆ, ಜಗತ್ತಿನ ಸೃಷ್ಟಿಕರ್ತನನ್ನು ಸ್ತುತಿಸಲು ವಿಶ್ವಕರ್ಮ ಭಜನೆ ಹಾಗೂ ಇಡೀ ಸಭಾಂಗಣದಲ್ಲಿ ಭಕ್ತಿಯ ರಕ್ತವನ್ನು ಇಮ್ಮಡಿಗೊಳಿಸಿದ 'ಜೈ ಜೈ ಹನುಮಾನ್' ಭಜನೆಗಳು ನೆರೆಡಿದ್ದ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದ್ದವು. ಈ ಎಲ್ಲಾ ಭಕ್ತಿಗೀತೆಗಳ ಜೊತೆಗೆ, ಭಗವಂತನ ಕೃಪೆಯನ್ನು ಕೋರುವ ಹಲವಾರು ದಿವ್ಯ ದೇವರ ಸ್ತುತಿಗಳನ್ನು ಸಾಮೂಹಿಕವಾಗಿ ಜಪಿಸುವುದರ ಮೂಲಕ ಇಡೀ ಸಾಂಸ್ಕೃತಿಕ ಉತ್ಸವಕ್ಕೆ ಅತ್ಯಂತ ಯಶಸ್ವಿ ಹಾಗೂ ಮಂಗಳಕರವಾದ ಮುಕ್ತಾಯವನ್ನು ಹಾಡಲಾಯಿತು. ಕಾರ್ಯಕ್ರಮದ ಅಂತಿಮ ಹಂತದಲ್ಲಿ ಸುರಿದ ಭಜನೆಗಳ ಹಾಗೂ ಚಪ್ಪಾಳೆಗಳ ಧಾರೆ ಇಡೀ ಸಭಾಂಗಣವನ್ನು ದಿವ್ಯ ಭಕ್ತಿಲೋಕವನ್ನಾಗಿಸಿತು.
ಮುಕ್ತಾಯ: ಧನ್ಯವಾದ ಸಮರ್ಪಣೆ.
ಕಾರ್ಯಕ್ರಮದ ಅಂತಿಮ ಹಂತದಲ್ಲಿ ಶ್ರೀಯುತ ಪ್ರವೀಣ್ ಕುಮಾರ್ ಕಲಾಲ್ ಅವರು ವೇದಿಕೆಗೆ ಆಗಮಿಸಿ, ಪುತ್ತೂರು ಶ್ರೀ ಜಗದೀಶ್ ಆಚಾರ್ಯ ಹಾಗೂ ತಂಡದವರಿಗೆ, ಮಂದಿರದ ಆಡಳಿತ ಮಂಡಳಿಗೆ, ಕಾರ್ಯಕ್ರಮದ ನಿರೂಪಣೆಯನ್ನು ರೂಪುಗೊಳಿಸಿದ ಶ್ರೀಮತಿ ಶ್ವೇತಾ ರಿತೇಶ್ ಆಚಾರ್ಯ ಅವರಿಗೆ, ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ, ಓಂಕಾರ ಸಮಿತಿಯ ಎಲ್ಲಾ ಸದಸ್ಯರಿಗೂ ಹಾಗೂ ಕಲಾಭಿಮಾನಿಗಳಿಗೆ ಕೃತಜ್ಞತಾಪೂರ್ವಕ ವಂದನೆಯನ್ನು ಸಲ್ಲಿಸಿ ಮುಕ್ತಾಯ ಘೋಷಿಸಿದರು.
ನೆರೆದಿದ್ದ ಕಲಾಭಿಮಾನಿಗಳೆಲ್ಲರೂ ಮುಖದಲ್ಲಿ ತೃಪ್ತಿಯ ಮಂದಹಾಸ ಹಾಗೂ ಮನದಲ್ಲಿ ಮರೆಯಲಾಗದ ಭಕ್ತಿ ನೆನಪುಗಳನ್ನು ಹೊತ್ತು ಅತ್ಯಂತ ಸಂತೋಷದಿಂದ ನಿರ್ಗಮಿಸಿದರು.








