ಓಂಕಾರ ನಾದಾಮೃತ - ೨೦೧೭

ಓಂಕಾರ ನಾದಾಮೃತ - ೨೦೧೭

ಸಂಗೀತಾ ಕಟ್ಟಿ ಮತ್ತು ವೃಂದದವರಿಂದ



ಮಸ್ಕತ್ ನ ಓಂಕಾರ ಸಮಿತಿಯು ಈ ವರ್ಷದ ’ಓಂಕಾರ ನಾದಮೃತ-೨೦೧೭’ ಕಾರ್ಯಕ್ರಮವನ್ನು ಸೆಪ್ಟೆಂಬರ್ ೧೫, ೨೦೧೭ ರಂದು ದಾರಸೇಟ್ ನ ಶ್ರೀಕೃಷ್ಣಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಅಚ್ಚುಕಟ್ಟಾಗಿ ಏರ್ಪಡಿಸಿದ ’ನಾದಮೃತ’ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.


ಈ ವರ್ಷದ ನಾದಾಮೃತ ಕಾರ್ಯಕ್ರಮವನ್ನು ನಡೆಸಿಕೊಡಲು ಕನ್ನಡನಾಡಿನ ಹೆಸರಾಂತ ಗಾಯಕಿ ಗಾನಕೋಗಿಲೆ ಶ್ರೀಮತಿ ಸಂಗೀತಾ ಕಟ್ಟಿ (ಕುಲಕರ್ಣಿ) ಯವರು ಆಗಮಿಸಿದ್ದರು. ಈ ಭಕ್ತಿ ಸಂಗೀತ ಸಂಜೆಗೆ ತಬಲಾ ವಾದಕರಾದ ಶ್ರೀಯುತ ರಾಜೇಂದ್ರ ನಾಕೋಡ, ಹಾರ್ಮೋನಿಯಮ್ ವಾದಕರಾದ ಶ್ರೀಯುತ ಸತೀಶ ಕೊಳ್ಳಿ ಮತ್ತು ತಾಳದ ಜೊತೆಗೆ ಶ್ರೀಯುತ ರಾಜೇಶ್ ಪಡಿಯಾರ ಇವರು ಸಾಥ್ ನೀಡಿದರು.

ಸಾಯಂಕಾಲ ಸರಿಯಾಗಿ ೬:೩೦ಕ್ಕೆ ಶ್ರೀಯುತ ರವಿಕುಮಾರ ರಾವ್ ಅವರ ಸ್ವಾಗತ ಭಾಷಣದೊಂದಿಗೆ ನಾದಾಮೃತ ಕಾರ್ಯಕ್ರಮ ಆರಂಭವಾಯಿತು. 


ಕನ್ನಡನಾಡಿನಿಂದ ಆಗಮಿಸಿದ ಕಲಾವಿದರನ್ನು ಮತ್ತು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಪುಷ್ಪಗುಚ್ಚ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಬರ ಮಾಡಿಕೊಂಡರು.





ನಂತರ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರವರು ಶ್ರೀ ಗಣೇಶ ಮತ್ತು ಶ್ರೀ ಓಂಕಾರ ಆಂಜನೇಯ ಸ್ವಾಮಿಗೆ ಆರತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. 


ಕಾರ್ಯಕ್ರಮದ ನಿರೂಪಕಿಯಾದ ಶ್ರೀಮತಿ ಹೇಮಲತಾ ಶ್ರೀಕಾಂತ ಅವರು ಕಲಾವಿದರನ್ನು ಅವರ ಕಿರುಪರಿಚಯದೊಂದಿಗೆ ವೇದಿಕೆಗೆ ಅಹ್ವಾನಿಸಿದರು.


ಶ್ರೀಮತಿ ಸಂಗೀತಾ ಕಟ್ಟಿಯವರು ಕಾರ್ಯಕ್ರಮವನ್ನು ಶಾಸ್ತ್ರೀಯ ಸಂಗೀತದೊಂದಿಗೆ ಕಾನ್ಹಾರೇ.. ನಂದ ನಂದನ ಹಾಡಿನಿಂದ ಆರಂಭಿಸಿದರು. ಕಾರ್ಯಕ್ರಮದುದ್ದಕ್ಕೂ ಸಂಗೀತಾ ಕಟ್ಟಿಯವರು ದಾಸರ ಪದಗಳು, ಬಸವಣ್ಣನವರ ವಚನಗಳು ಮತ್ತು ಶರೀಫ಼್ ಸಾಹೇಬರ ಕೃತಿಗಳು, ತುಕಾರಾಮರ ಮರಾಠಿ ಅಭಂಗ ಮತ್ತು ಹಿಂದಿ ಭಜನೆಗಳೊಂದಿಗೆ ಸಭಿಕರನ್ನೆಲ್ಲ ಮಂತ್ರ ಮುಗ್ಧಗೊಳಿಸಿದರು.


ಕಾರ್ಯಕ್ರಮದ ಆರಂಭದಲ್ಲಿ ಹೇಳಿದ ವಾಸುದೇವ ಹರೇ..., ಪಾಯೋಜೀ ಮೈನೇ..., ಬೋಲಾವಾ ವಿಠ್ಠಲ ಕರಾವಾ ವಿಠ್ಠಲ... ಹಾಡಿನ ಲಹರಿಗೆ ಇಡೀ ಸಭಾಂಗಣವೇ ತಲೆದೂಗುವಂತಾಯಿತು. ಭಾಗ್ಯದ ಲಕ್ಷ್ಮೀ ಬಾರಮ್ಮಾ ಹಾಡನ್ನು ತಮ್ಮದೇ ಆದ ಶೈಲಿಯಲ್ಲಿ ಹೇಳುವಾಗ ಪ್ರೇಕ್ಷಕರು ಕೂಡ ತಾಳ ಹಾಕಲಾರಂಭಿಸಿದರು.


ನಂತರ ಕಾರ್ಯಕ್ರಮಕ್ಕೆ ಚಿಕ್ಕ ವಿರಾಮ ನೀಡಿ ಕಲಾವಿದರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಸಮಾರಂಭ ನೆರವೇರಿತು. ಕಾರ್ಯಕ್ರಮಕ್ಕೆ ಉಪಸ್ಥಿತರಾಗಿದ್ದ ಮುಖ್ಯ ಅತಿಥಿಗಳಾದ ಶ್ರೀಯುತ ಜಿ. ವಿ ರಾಮಕೃಷ್ಣ, ಶ್ರೀಯುತ ಮಂಜುನಾಥ ನಾಯಕ,  ಶ್ರೀಯುತ ಶಶಿಧರ ಶೆಟ್ಟಿ ಮತ್ತು ಬಕುಲಭಾಯಿ ಮೆಹತಾ ಇವರು ಕಲಾವಿದರನ್ನು ಸನ್ಮಾನಿಸಿದರು.





ಓಂಕಾರ ಸಮಿತಿಯು ಸಂಗೀತಾ ಕಟ್ಟಿಯವರ ಸಂಗೀತ ಲೋಕದ ಸೇವೆಯನ್ನು ಪರಿಗಣಿಸಿ

’ಓಂಕಾರಶ್ರೀ’ 

ಬಿರುದನ್ನು ನೀಡಿ ಗೌರವಿಸಿತು.


ವಿರಾಮದ ನಂತರ ಮತ್ತೆ ಕಾರ್ಯಕ್ರಮವನ್ನು ಗಣಪತಿ ಎನ್ನ ಪಾಲಿಸೋ ಗಂಭೀರಾ ಹಾಡಿನೊಂದಿಗೆ ಆರಂಭಿಸಿದರು. ಸುಶ್ರಾವ್ಯವಾಗಿ ಬಸವಣ್ಣನವರ ವಚನಗಳನ್ನು ಹಾಡಿ ಜನರೆಲ್ಲರ ಮನಸೋಲುವಂತೆ ಮಾಡಿತು.



ಕಾರ್ಯಕ್ರಮದ ಮಧ್ಯದಲ್ಲಿ ಶಿಶುನಾಳ ಶರೀಫರ ಕೃತಿ "ಎಲ್ಲಿ ಕಾಣೆ ಎಲ್ಲಿ ಕಾಣೇನ... ಎಲ್ಲಮ್ಮನಂತಾಕಿನೆಲ್ಲಿ ಕಾಣೇನ" ಜನಪದ ಶೈಲಿಯ ಹಾಡಿನಿಂದ ಸಭಿಕರೆನ್ನೆಲ್ಲ ರೋಮಾಂಚನಗೊಳಿಸಿದರು. ಇದರಂತೆ ಶೇಷವಾಹನನಾಗಿ ಬಂದ ಶ್ರೀನಿವಾಸ, ಎನ್ನ ಪಾಲಿಸೋ ಕರುಣಾಕರ... ಮುಂತಾದ ಹಲವಾರು ಭಕ್ತಿಗೀತೆಗಳನ್ನು ಮಧುರವಾಗಿ ಹಾಡಿದರು.



ಪ್ರತಿಬಾರಿಯೂ ಸಭಿಕರೆಲ್ಲರೂ ತಮ್ಮ ಕರತಾಳದ ಮೂಲಕ ಮೆಚ್ಚುಗೆಯನ್ನಿ ವ್ಯಕ್ತಪಡಿಸುತ್ತಿದ್ದರು. ತಬಲಾ, ಹಾರ್ಮೋನಿಯಮ್ ಹಾಗೂ ತಾಳದ ಜೊತೆಗೆ ಸಾಥ್ ನೀಡುತ್ತಿದ್ದ ಕಲಾವಿದರು ಮಧ್ಯ ಮಧ್ಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಸಿಸುತ್ತಾ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡರು.






ಕರವ ಮುಗಿದ ಮುಖ್ಯಪ್ರಾಣಾ...., ಮುತ್ತಿನಾರತಿ ಎತ್ತಿ ಬೆಳಗಿರೆ ಯೋಗಿವರ ಗುರುರಾಯಗೆ...., ಶಿವ ಶಿವ ಕೆ ಮನ ಶರಣ....  ಗೀತೆಗಳೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.


ಸುಮಾರು ಮೂರು ಘಂಟೆಗಳ ಕಾಲ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹೇಳುವುದರ ಮೂಲಕ ತಮ್ಮ ಶಾಸ್ತ್ರೀಯ ಸಂಗೀತದ ಪಾಂಡಿತ್ಯವನ್ನು ಮೆರೆದರು. ಸಂಗೀತ ಕಾರ್ಯಕ್ರಮವು ಆರಂಭದಿಂದ ಅಂತ್ಯದವರೆಗೂ ಯಾವುದೇ ಅಡಚಣೆಗಳಿಲ್ಲದೆ ಸುಗಮವಾಗಿ ನಡೆದುಕೊಂಡು ಬಂದಿತು.



ಕೊನೆಯದಾಗಿ ಶ್ರೀಯುತ ಬರಗೂರು ಶಿವಣ್ಣ ಅವರ ಮನಮುಟ್ಟುವ ಮಾತುಗಳಿಂದ ವಂದನಾರ್ಪಣಾ ಕಾರ್ಯಕ್ರಮ ನೆರವೇರಿತು. 


ಬೇಸಿಗೆ ರಜೆಯನ್ನು ಕಳೆದು ತಮ್ಮ ದೈನಂದಿನ ಜೀವನದಲ್ಲಿ ತೊಡಗಿದ್ದ ಮಸ್ಕತ್ ನ ಕನ್ನಡಿಗರಿಗೆ ಓಂಕಾರ ಸಮಿತಿಯ ’ಓಂಕಾರ ನಾದಾಮೃತ-೨೦೧೭’ ಕಾರ್ಯಕ್ರಮವು ಸಂಗೀತದ ರಸಧಾರೆಯನ್ನು ನೀಡಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ವರದಿ: ಶ್ರೀಮತಿ ಹೇಮಲತಾ ಶ್ರೀಕಾಂತ


No comments:

Post a Comment

Please provide your comment to improve