ಓಂಕಾರ ನಾದಾಮೃತ -೨೦೨೪
ಓಂಕಾರ ನಾದಾಮೃತ -೨೦೨೩
ಓಂಕಾರ ನಾದಾಮೃತ ೨೦೨೩
ಓಂಕಾರ ದಶಮಾನೋತ್ಸವ
ಓಂಕಾರ ದಶಮಾನೋತ್ಸವ -2021
ಕೆಲವು ಕ್ರಿಯಾಶೀಲ ಉತ್ಸಾಹಭರಿತ ಸಮಾನ ಚಿಂತಕರು ಸೇರಿ ಓಮಾನ್ ನಲ್ಲಿರುವ ಕನ್ನಡಿಗರಿಗಾಗಿ ಉತ್ತಮ ಧಾರ್ಮಿಕ ಸಾಂಸ್ಕ್ರತಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳನ್ನು ನೀಡಬೇಕೆಂಬ ಉತ್ತಮ ಉದ್ದೇಶದಿಂದ 2012 ರಲ್ಲಿ ಆರಂಭವಾದದ್ದು ಓಂಕಾರ ಸಮಿತಿ. ಅದಕ್ಕನುಗುಣವಾಗಿ ಆಗಿನಿಂದ ಇಲ್ಲಿಯವರೆಗೂ ಪ್ರತಿ ವರ್ಷ ಸಮಿತಿಯ ಆರಾಧ್ಯ ದೈವ ಶ್ರೀ ಓಂಕಾರ ಆಂಜನೇಯನ ಭಕ್ತಿ ಪೂರ್ಣ ಪೂಜೆ, ಜ್ಞಾನ ಪೂರ್ಣ ಓಂಕಾರ ಜ್ಞಾನಾಮೃತ, ನಾದಮಯ ಓಂಕಾರ ನಾದಾಮೃತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದು ಎಲ್ಲರ ಅಭಿಮಾನಕ್ಕೆ ಪಾತ್ರವಾಗಿದೆ.
ಕರೋನಾ ಹೆಮ್ಮಾರಿಯ ಧಾಳಿಗೆ ಸಿಲುಕಿ ವಿಶ್ವವೇ ನಲುಗಿದ ಈ ಎರಡು ವರ್ಷಗಳಲ್ಲಿ ಕೂಡ ಕಲಾಭಿಮಾನಿಗಳಿಗೆ ನಿರಾಸೆಯಾಗದಂತೆ ಆದರೆ ಕರೋನಾ ನಿರ್ಬಂಧಗಳನ್ನೂ ಮೀರದಂತೆ ಸಾಮಾಜಿಕ ತಾಣಗಳ ಮೂಲಕ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ ಹಿರಿಮೆ ಓಂಕಾರ ಸಮಿತಿಯದು.
ಮೊದಲನೆಯ ದಿನ
ಶುಕ್ರವಾರ ಡಿಸೆಂಬರ್ ೧೭ರಂದು ಓಂಕಾರ ಆಂಜನೇಯ ಪೂಜೆ, ಓಂಕಾರ ಸಿಂಹಾವಲೋಕನ ಮತ್ತು ಹರಿಕಥೆ ಕಾರ್ಯಕ್ರಮಗಳನ್ನು ಓಂಕಾರ ಸಮಿತಿಯ ಚಾನೆಲ್ ಲೈವ್ ಗಳಲ್ಲಿ ಬಿತ್ತರಿಸಲಾಯಿತು.
Click here for Day-1 Complete Video
ಅದರಂತೆ ಮೊದಲು ಒಂದು ಶುಭದಿನ ಅತ್ಯಂತ ಸರಳವಾಗಿ ಯಾವುದೇ ವಿಜೃಂಭಣೆ ಇಲ್ಲದೇ ಸರಳವಾಗಿ ಆದರೆ ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಆಚರಣೆಗಳಿಗೆ ಚ್ಯುತಿ ಇಲ್ಲದಂತೆ ಪ್ರತಿಬಾರಿಯಂತೆ ಸಂಪ್ರದಾಯ ಬದ್ಧವಾಗಿ ಶ್ರೀ ಓಂಕಾರ ಆಂಜನೇಯನ ವಾರ್ಷಿಕ ಪೂಜೆ ನಡೆಸಿತು.
ದಶಮಾನೋತ್ಸವದ ಸಂದರ್ಭದಲ್ಲಿ ಶ್ರೀ ಓಂಕಾರ ಆಂಜನೇಯ ಸ್ವಾಮಿಗಾಗಿ ಶತಾವಧಾನಿ ಶ್ರೀಯುತ ಡಾ ಆರ್ ಗಣೇಶ್ ಅವರಿಂದ ರಚಿಸಲ್ಪಟ್ಟ ಈ ಕೆಳಗಿನ ಶ್ಲೋಕವನ್ನು ಆಂಜನೇಯ ಸ್ವಾಮಿಗೆ ಸಮರ್ಪಿಸಲಾಯಿತು.
ಸುಗುಣೇಂದ್ರನುತಾಯ ಶ್ರೀ ಕಪಿಂದ್ರಾದ್ರಾಯ ನಮೋ ನಮಃ ||
ಓಂಕಾರ ಸಿಂಹಾವಲೋಕನ
ಓಂಕಾರ ಸಮಿತಿಯು ದಶಮಾನೋತ್ಸವದ ಪ್ರಯುಕ್ತ ದಶಮಾನ ಕಾಲ ಓಂಕಾರ ಸಮಿತಿಯು ನಡೆದು ಬಂದ ದಾರಿಯ ಮಾಹಿತಿ ನೀಡುವ ಪ್ರಯುಕ್ತವಾಗಿ ಓಂಕಾರ ಸಿಂಹಾವಲೋಕನ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದರು. ಈ ಕಿರುಚಿತ್ರವನ್ನು ಬೆಂಗಳೂರಿನ ಶ್ರೀ ಸೌರಭ ಕುಲಕರ್ಣಿ ಮತ್ತು ಕುಮಾರಿ ನಮಿತಾ ರವರು ನಿರೂಪಿಸಿ ತಯಾರಿಸಿದ್ದರು. ಓಂಕಾರ ಸಿಂಹಾವಲೋಕನ ಕಿರುಚಿತ್ರ ಓಂಕಾರ ಸಮಿತಿ ಇಲ್ಲಿಯವರೆಗೆ ನಡೆಸಿಕೊಂಡು ಬಂದ ಕಾರ್ಯಕ್ರಮಗಳು ಮತ್ತು ಅವುಗಳ ನಿರ್ವಹಣೆಯ ಮಾಹಿತಿಯನ್ನು ಎಳೆ - ಎಳೆಯಾಗಿ ಬಿಚ್ಚಿಟ್ಟರು.
Click here Omkar Simahavalokana
Click here for Omkar Guests Wishes
ಹರಿಕಥೆ - ಸುಂದರಕಾಂಡ ಆಧಾರಿತ ಹನುಮದ್-ಭಕ್ತಿ
ಈ ಬಾರಿಯ ಜ್ಞಾನಾಮೃತ ಕಾರ್ಯಕ್ರಮದ ಅಂಗವಾಗಿ ಹರಿಕಥೆ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಮಂಗಳೂರಿನ ಹರಿಕಥಾ ವಿದ್ವಾನ್ ಶ್ರೀ ಡಾ. ಎಸ್ ಪಿ ಗುರುದಾಸ್ ರವರು. ನಶಿಸಿ ಹೋಗುತ್ತಿರುವ ಅದ್ಭುತ ಕಲಾಪ್ರಾಕಾರ ಹರಿಕಥಾ ಕಾಲಕ್ಷೇಪ. ಈ ಕಲೆಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಈ ಬಾರಿ ಹರಿಕಥೆಯನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಯುತ ಡಾ ಎಸ್ ಪಿ ಗುರುದಾಸ ಅವರು ಸುಂದರಕಾಂಡ ಆಧಾರಿತ ಹನುಮದ್-ಭಕ್ತಿ ಎಂಬ ಹರಿಕಥೆಯನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಎಲ್ಲರ ಮನಮುಟ್ಟುವಂತೆ ನಿರೂಪಿಸಿ ಮಸ್ಕತ್ ಕನ್ನಡಿಗರನ್ನೆಲ್ಲ ಆಂಜನೇಯನ ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗಿಸಿದರೆಂದರೆ ತಪ್ಪಾಗಲಾರದು. ಶ್ರೀ ಗುರುದಾಸ್ ಅವರಿಗೆ ಹಿಮ್ಮೇಳ ಸಹಕಾರವನ್ನು ಶ್ರೀ ರಮೇಶ್ ಹೆಬ್ಬಾರ್, ಶ್ರೀ ಸುಮನ್ ದೇವಾಡಿಗ, ಶ್ರೀ ಆತ್ರೇಯ ಗಂಗಾಧರ್ ಮತ್ತು ಶ್ರೀ ಸತೀಶ್ ಕಾಮತ್ ರವರು ಅಷ್ಟೇ ಅದ್ಭುತವಾಗಿ ನೀಡಿದರು.
ಎರಡನೆಯ ದಿನ
ಶನಿವಾರ ಡಿಸೆಂಬರ್ ೧೮ರಂದು ಓಂಕಾರ ಜ್ಞಾನಾಮೃತ ಹಾಗೂ ಓಂಕಾರ ಸಂವಾದ ಕಾರ್ಯಕ್ರಮಗಳನ್ನು ಓಂಕಾರ ಸಮಿತಿಯ ಚಾನೆಲ್ ಲೈವ್ ಗಳಲ್ಲಿ ಬಿತ್ತರಿಸಲಾಯಿತು.
Click here for Day-2 Complete Video
ಓಂಕಾರ ನಾದಾಮೃತ
ಈ ವರ್ಷದ ಓಂಕಾರ ನಾದಾಮೃತ ಕಾರ್ಯಕ್ರಮದ ಈ ಬಾರಿಯ ಅತಿಥಿಗಳು ಮೈಸೂರಿನ ಜನಪ್ರಿಯ ಗಾಯಕ ಶ್ರೀ ಶ್ರೀಹರ್ಷರವರು ನಡೆಸಿಕೊಟ್ಟರು. ಶ್ರೀಹರ್ಷ ಅವರು ರಂಗಗೀತೆ, ದಾಸರ ಪದಗಳು, ಶರೀಫರ ತತ್ವಪದ, ತೆಲುಗು ಭಕ್ತಿಗೀತೆಗಳನ್ನೊಳಗೊಂಡ ಅಮೋಘ ಗಾಯನ ಮತ್ತು ವಿಭಿನ್ನವಾದ ಹಾಡುಗಳ ನಿರೂಪಣೆ ಸಂಗೀತದ ರಸಿಕರಿಗೆ ರಸದೌತಣ ನೀಡಿ ಸಂಗೀತ ಸುಧೆಯಲ್ಲಿ ಎಲ್ಲರನ್ನೂ ಮೀಯಿಸಿತು. ಶ್ರೀಹರ್ಷ ಅವರ ಸಂಗೀತ ಎಲ್ಲಾ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿ ಮಸ್ಕತ್ ನ ಸಭಾಂಗಣದಲ್ಲಿಯೇ ಕಾರ್ಯಕ್ರಮ ನಡೆಸಿಕೊಡುವಂತೆ ಕೇಳಿಕೊಳ್ಳುವ ಸಂದೇಶಗಳು ಹರಿಯುತ್ತಿದ್ದವು.
ಓಂಕಾರ ಸಂವಾದ
ಓಂಕಾರ ಜ್ಞಾನಾಮೃತ ಕಾರ್ಯಕ್ರಮದ ನಂತರ ಓಂಕಾರ ಸಮಿತಿಯ ನೇರವಾಗಿ ನಡೆದ ಓಂಕಾರ ಸಂವಾದ ಕಾರ್ಯಕ್ರಮದಲ್ಲಿ ವಿಶ್ವದ ಬೇರೆ ಬೇರೆ ಸ್ಥಳಗಳಿಂದ ಓಂಕಾರ ಸಮಿತಿಯ ರೂವಾರಿಗಳು , ಸದಸ್ಯರು , ಕಾರ್ಯಕರ್ತರು ಸಮಿತಿಯೊಂದಿಗಿನ ತಮ್ಮ ತಮ್ಮ ಒಡನಾಟಗಳನ್ನು ಅನುಭವವನ್ನು ಎರಡು ಘಂಟೆಗಳ ಕಾಲ ಹಂಚಿಕೊಂಡು ತಮ್ಮ ಹರ್ಷ ವ್ಯಕ್ತಪಡಿಸಿದರು.
ವರದಿ : ಶ್ರೀಮತಿ ವೀಣಾ ಶ್ರೀನಿವಾಸ
ಓಂಕಾರ ನಾದಾಮೃತ -೨೦೨೦
ಓಂಕಾರ ನಾದಾಮೃತ - ೨೦೨೦

ವರ್ಷದ ಆರಂಭದಲ್ಲಿ ಕರೋನ ಮಹಾಮಾರಿಯ ಕಪಿಮುಷ್ಠಿಯಲ್ಲಿ ಪ್ರಪಂಚ ಸಿಲುಕಿ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಬಂಧತೆ ಇದ್ದಾಗ ಓಂಕಾರ ಜ್ಞಾನಾಮೃತ ಕಾರ್ಯಕ್ರಮವನ್ನು ಅನಿವಾರ್ಯವಾಗಿ ರದ್ದು ಪಡಿಸಬೇಕಾಯಿತು. ಕಾಲಕಳೆದಂತೆ ಕಲೆ ಕಲಾಸಕ್ತರ ಕಲಾರಸಿಕರ ಬಳಿ ಬರುವುದಕ್ಕೆ ಅನೇಕ ದಾರಿಗಳನ್ನು ಕಂಡುಕೊಂಡಿತು. ಅದರಲ್ಲಿ ಒಂದು ಅಂತರ್ಜಾಲ ಉಪಯೋಗಿಸಿ ಮಾಡುವ ನೇರಪ್ರಸಾರ ಕಾರ್ಯಕ್ರಮಗಳು.
ಓಂಕಾರ ಸಮಿತಿಯು ಕೂಡ ಅದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟು ಓಂಕಾರ ನಾದಾಮೃತ - ೨೦೨೦ ಕಾರ್ಯಕ್ರಮವನ್ನು ಸಂಗೀತ ಅಭಿಮಾನಿಗಳಿಗೆ ತಲುಪಿಸುವ ಯೋಜನೆ ಹಮ್ಮಿಕೊಂಡಿತು. ಅದರಂತೆ ಈ ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧಪಡಿಸಲಾಯಿತು.
ಅದರ ಮೊದಲ ಹೆಜ್ಜೆಯಾಗಿ ಪ್ರಖ್ಯಾತ ಭಕ್ತಿ ಸಂಗೀತ ಗಾಯಕ ಯುವ ಕಲಾವಿದ ಶ್ರೀ ಅನಂತರಾಜ ಮಿಸ್ತ್ರಿ ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ ಅವರು ಸಹ ಸಂತೋಷದಿಂದ ಒಪ್ಪಿಕೊಂಡರು.
ಈಗ ಬೆಂಗಳೂರಿನಲ್ಲಿ ನೆಲೆಸಿರುವ ಓಂಕಾರ ಸಮಿತಿಯ ಸದಸ್ಯರಾದ ಶ್ರೀ ಯೋಗಾನಂದ, ಶ್ರೀರಾಮಚಂದ್ರ ರಾವ್, ಅನಿಲ್ ಕುಮಾರ ಟಿ. ಡಿ. ಮತ್ತು ಶ್ರೀ ಸುಧೀಂದ್ರ ಅವರ ಸಹಕಾರದಿಂದ ಕಲಾವಿದ ಶ್ರೀ ಅನಂತರಾಜ ಮಿಸ್ತ್ರಿ ಯವರು ಪಕ್ಕವಾದ್ಯ ಕಲಾವಿದರೊಡನೆ ಪ್ರಯೋಗ್ ಸ್ಟುಡಿಯೋಗೆ ಹೋಗಿ ಅಲ್ಲಿ ಸಂಪೂರ್ಣ ಸಂಪೂರ್ಣ ಕಾರ್ಯಕ್ರಮವನ್ನು ನಡೆಸಿ ಅದರ ಧ್ವನಿಮುದ್ರಣವನ್ನು ಮಸ್ತ್ಕತ್ತಿಗೆ ಕಳಿಸಿಕೊಟ್ಟರು.
ಓಂಕಾರ ಸಮಿತಿಯ ಸದಸ್ಯರಾದ ಶ್ರೀ ಮಹೇಶ್ ಪುರೋಹಿತ್ ರವರು ಅದನ್ನು ಇಲ್ಲಿ ಸಂಕಲನ ಮಾಡಿ ನೇರಪ್ರಸಾರಕ್ಕೆ ಸಿದ್ಧಪಡಿಸಿದರು. ಹೀಗೆ ಒಂದು ಸುಂದರ ಸಂಗೀತ ಕಾರ್ಯಕ್ರಮ ಸಿದ್ಧವಾಯಿತು. ಬರಿಯ ಮಸ್ಕತ್ ಮಾತ್ರವೇ ಅಲ್ಲದೆ ಪ್ರಪಂಚದ ಎಲ್ಲೆಡೆಯೂ ಇರುವ ಸಂಗೀತಾಸಕ್ತರನ್ನು ಕೂಡ ತಲುಪಲು ಸಾಧ್ಯವಾಯಿತು.
ಇದೇ ಸೆಪ್ಟೆಂಬರ್ 25 ನೇ ತಾರೀಖು, ಶುಕ್ರವಾರ ಸಂಜೆ ಓಮಾನ್ ಸಮಯ 6:00 ಮತ್ತು ಭಾರತೀಯ ಕಾಲಮಾನ 7.30 ಗೆ ಸರಿಯಾಗಿ ಯೂಟ್ಯೂಬ್ ಮತ್ತು ಫೇಸ್ಬುಕ್ನಲ್ಲಿ ಈ ಕಾರ್ಯಕ್ರಮವನ್ನು ನೇರವಾಗಿ ಪ್ರಸಾರ ಮಾಡಲಾಯಿತು.
ಮೊದಲು ಅಂದು ನಿಧನರಾದ ಪ್ರಖ್ಯಾತ ಗಾಯಕ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಂತರ ಓಂಕಾರ ಸಮಿತಿಯ ಸದಸ್ಯ ಶ್ರೀ ರವಿಕುಮಾರ್ ರವರ ಸ್ವಾಗತ ಭಾಷಣದಿಂದ ಕಾರ್ಯಕ್ರಮ ಆರಂಭವಾಯಿತು. ಅವರು ತಮ್ಮ ಕಿರು ಭಾಷಣದಲ್ಲಿ ನೇರ ಪ್ರಸಾರ ಕಾರ್ಯಕ್ರಮದ ಹಿನ್ನೆಲೆ, ಯೋಜನೆ ಮತ್ತು ಕಾರ್ಯರೂಪಕ್ಕೆ ತಂದ ಬಗೆಗೆ ಹೇಳಿದರು.




ನಂತರದ ಶ್ರೀ ಶ್ರೀಪಾದರಾಯರ ಮೊದಲೊಂದಿಪೆ ನಿನಗೆ ಗಣನಾಥ ಕೃತಿಯಿಂದ ವಿಘ್ನೇಶ್ವರನನ್ನು ಪ್ರಾರ್ಥಿಸಿದರು. ಮುಂದೆ ಶ್ರೀಪುರಂದರದಾಸರ ಗೆದ್ದೆಯೋ ಹನುಮಂತ, ಪ್ರಾಣೇಶ ವಿಠ್ಠಲ ರಾಯರ ಪವನ ಸಂಭೂತ ಕೃತಿಗಳು ಹನುಮಂತನನ್ನು ಕಣ್ಣಮುಂದೆ ತಂದು ನಿಲ್ಲಿಸಿದವು.

ಮುಂದಿನದು ಹರಿನಾಮದ ಬಲವನ್ನು ಹೇಳುವ ಶ್ರೀಪುರಂದರದಾಸರ ಕಲಿಯುಗದಲ್ಲಿ ಹರಿನಾಮವ ನೆನೆದರೆ ಕೃತಿ ಶ್ರೀ ಅನಂತರಾಜ್ ಮಿಸ್ತ್ರಿ ಯವರನ್ನು ಜನಪ್ರಿಯಗೊಳಿಸಿ ಅವರನ್ನು ಮನೆಮಾತಾಗಿಸಿದ ಅವರ ಪ್ರಖ್ಯಾತಗೀತೆ ಶ್ರೀ ವಾದಿರಾಜ ವಿರಚಿತ ಆವಕುಲವೋ ರಂಗ ಕೃತಿಯನ್ನು ಹಾಡಿ ಕೇಳುಗರ ಮನ ರಂಜಿಸಿದರು.
ನಂತರದಲ್ಲಿ ಅವರು ಪ್ರಸ್ತುತಪಡಿಸಿದ ಶ್ರೀಪುರಂದರದಾಸರ ಹೂವ ತರುವರ ಮನೆಗೆ ಹುಲ್ಲ ತರುವ , ಶ್ರೀ ಪ್ರಸನ್ನ ವೆಂಕಟದಾಸರ ದಡ ಸೇರಿಸೋ ಭವದ ಗೀತೆಗಳು ಎಲ್ಲರ ಮನ ಗೆದ್ದವು. ಅವರು ಮುಂದಿನ ಕೃತಿ ಶ್ರೀ ಕನಕದಾಸರ ತೊರೆದು ಜೀವಿಸಬಹುದೇ ಕೃತಿ ಕೇಳುಗರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ದಿತು.
ಅವರ ಮುಂದಿನಪ್ರಸ್ತುತಿ ಶ್ರೀ ಶ್ರೀಪತಿ ವಿಠ್ಠಲ ದಾಸರ ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಮತ್ತು ಅಪರೂಪದ ರಚನೆಕಾರ ಪರಮ ವೈರಾಗ್ಯಶಾಲಿ ಶ್ರೀ ತಮ್ಮಣ್ಣ ದಾಸರ ಪರಿಪೂರ್ಣ ಪಾವನ ಗುಣ ಕೃತಿಗಳು ಕಲಾರಸಿಕರನ್ನು ಮೈಮರೆಯುವಂತೆ ಮಾಡಿದವು.
ಹೀಗೆ ಶ್ರೀ ಅನಂತರಾಜ ಮಿಸ್ತ್ರಿ ಯವರು ಅವರಷ್ಟೇ ಪ್ರತಿಭಾನ್ವಿತ ಯುವ ಪಕ್ಕವಾದ್ಯದವರೊಡನೆ ಶ್ರೋತೃಗಳನ್ನು ತಮ್ಮ ಮಾಂತ್ರಿಕ ಗಾನದಿಂದ ಅದ್ಭುತ ನಾದಲೋಕಕ್ಕೆ ಕೊಂಡೊಯ್ದು ನಾದದ ರಸದೌತಣವನ್ನೇ ಉಣಬಡಿಸಿದರು.
ಈ ಅದ್ಭುತ ಸುಂದರ ಸಂಗೀತ ಕಾರ್ಯಕ್ರಮದ ನಂತರ ಎಲ್ಲಾ ಕಲಾವಿದರನ್ನು ಬೆಂಗಳೂರಿನಲ್ಲಿ ನೆಲೆಸಿರುವ ಓಂಕಾರ ಸಮಿತಿಯ ಸದಸ್ಯರು ಶ್ರೀ ಯೋಗಾನಂದ, ಶ್ರೀರಾಮಚಂದ್ರ ರಾವ್ ಮತ್ತು ಶ್ರೀ ಸುಧೀಂದ್ರ ಅವರು ಪರಿವಾರದೊಂದಿಗೆ ಸನ್ಮಾನಿಸಿದರು.



ಓಂಕಾರ ನಾದಾಮೃತ -೨೦೧೯
ಓಂಕಾರ ನಾದಾಮೃತ -೨೦೧೯
ದಿನಾಂಕ ೧೩-ಸೆಪ್ಟೆಂಬರ್-೨೦೧೯ ಶುಕ್ರವಾರದ ಶುಭಸಂಜೆ ೬:೩೦ ಘಂಟೆಗೆ ಅತ್ಯುತ್ತಮವಾದ ಹರಿನಾಮ ಸಂಕೀರ್ತನೆಗಳನ್ನು ಕೇಳಿ ಇಂದ್ರೀಯ ಮತ್ತು ಮನಸ್ಸುಗಳಿಗೆ ಆಹ್ಲಾದ ಹಾಗೂ ಪುಣ್ಯ ಸಂಪಾದನೆ ಮಾಡಿಕೊಳ್ಳಲು ಮಸ್ಕತ್ ನ ಸಂಗೀತಪ್ರಿಯರು ಭಗವದ್ ಭಕ್ತರು ಶ್ರೀಕೃಷ್ಣಮಂದಿರದ ಸಭಾಂಗಣದಲ್ಲಿ ಸೇರಿದ್ದರು.
ಸುಸ್ವರ ಸಂಗೀತದೊಂದಿಗೆ ವಿವರಗಳನ್ನು, ಹಾಡಿನ ವಿಶೇಷತೆಗಳನ್ನು ತಿಳಿಸಿಕೊಡುತ್ತಿದ್ದ ಶ್ರೀ ಪುತ್ತೂರು ನರಸಿಂಹ ನಾಯಕರು ಮತ್ತು ಅವರ ತಂಡದವರಿಗೆ ಕಾರ್ಯಕ್ರಮದ ಮಧ್ಯದಲ್ಲಿ ಗಣ್ಯವ್ಯಕ್ತಿಗಳಿಂದ ಸನ್ಮಾನ ಮಾಡಲಾಯಿತು. ನಂತರ ಮಸ್ಕತ್ತಿನ ಸ್ಥಳೀಯ ಸಂಘಟನೆಗಳಾದ ಬಸವ ಬಳಗ, ಜಿ. ಎಸ್. ಬಿ ಕುಟುಂಬದವರು ಹಾಗೂ ಭಾರತೀಯ ಸಾಮಾಜಿಕ ಒಕ್ಕೂಟ - ಕರ್ನಾಟಕ ವಿಭಾಗದವರಿಂದ ಸನ್ಮಾನಿಸಲ್ಪಟ್ಟರು.
ತದನಂತರ ಓಂಕಾರ ಸಮಿತಿಯ ಗಣ್ಯರು ಮತ್ತು ಸಮಿತಿಯ ಎಲ್ಲ ಸದಸ್ಯರಿಂದ ಸನ್ಮಾನದೊಂದಿಗೆ ನೆನಪಿನ ಕಾಣಿಕೆಗಳನ್ನು ಸಲ್ಲಿಸಿದರು.
ಕಲಾವಿದರ ಸನ್ಮಾನದ ನಂತರ ಓಂಕಾರ ಸಮಿತಿಯ ಸದಸ್ಯರಾದ ಡಾ. ಸಿ. ಕೆ. ಅಂಚನ್ ರವರು ಓಂಕಾರ ಸಮಿತಿಯ ಭಕ್ತಿಯ ಧ್ಯೋತಕದ ಕಾರ್ಯಕ್ರಮವಾದ ಈ ವರ್ಷದ ಶ್ರೀ ಆಂಜನೇಯ ಪೂಜೆಯ ಸಂದರ್ಭದಲ್ಲಿ ದಿನಾಂಕ ೧೩-ಡಿಸೆಂಬರ್-೨೦೧೯ ರಿಂದ ಒಂದು ವಾರದ ಕಾಲ ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥರ ಕಾರ್ಯಕ್ರಮದ ಯೋಜನೆ ಹಮ್ಮಿಕೊಂಡಿರುವ ಬಗ್ಗೆ ನೆರದ ಸಭಿಕರೆಲ್ಲರಿಗೂ ತಿಳಿಸಿದರು. ಮಸ್ಕತ್ ಸದ್ಭಕ್ತ ಕನ್ನಡಿಗರೆಲ್ಲರೂ ತನು, ಮನ, ಧನದೊಂದಿಗೆ ಓಂಕಾರ ಸಮಿತಿಯೊಂದಿಗೆ ಈ ಸುವರ್ಣ ಅವಕಾಶದಲ್ಲಿ ಭಾಗಿಯಾಗಲು ಕರೆಕೊಟ್ಟರು.
































































