ಓಂಕಾರ ಜ್ಞಾನಾಮೃತ - ೨೦೧೯

ಓಂಕಾರ ಜ್ಞಾನಾಮೃತ - ೨೦೧೯

ಭಾರತೀಯ ಸಂಸ್ಕೃತಿ - ಉಪನ್ಯಾಸ ಕಾರ್ಯಕ್ರಮ



ಓಮಾನ್ ಕರ್ನಾಟಕ ಆರಾಧನಾ (ಓಂಕಾರ) ಸಮಿತಿಯ ಹೆಮ್ಮೆಯ ಕಾರ್ಯಕ್ರಮಗಳಲ್ಲಿ ಒಂದಾದ ಓಂಕಾರ - ಜ್ಞಾನಾಮೃತ ೨೦೧೯ ಕಾರ್ಯಕ್ರಮವು "ಭಾರತೀಯ ಸಂಸ್ಕೃತಿ"ಯ ವಿಷಯದಲ್ಲಿ ಡಾ. ಗುರುರಾಜ ಕರಜಗಿಯವರ ಉಪನ್ಯಾಸದೊಂದಿಗೆ ಮಾರ್ಚ್ ೮ ರಂದು, ಮಸ್ಕತ್ತಿನ ಶ್ರೀಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಸುಂದರವಾಗಿ ಮೂಡಿ ಬಂತು.


ನಿಗದಿತ ಸಮಯ ಸಂಜೆ ೬.೩೦ಕ್ಕೆ ಸರಿಯಾಗಿ ಕಾರ್ಯಕ್ರಮ ಶ್ರೀ ರವಿಕುಮಾರ್ ಅವರ ಸ್ವಾಗತ ಭಾಷಣದೊಂದಿಗೆ ಅತಿಥಿಗಳಾದ ಶ್ರೀ ಬಕುಲಭಾಯಿ ಮೆಹತಾ, ಶ್ರೀ ಜಿ.ವಿ. ರಾಮಕೃಷ್ಣ, ಶ್ರೀ ಮಂಜುನಾಥ ನಾಯಕ, ಶ್ರೀ ಅನಂತಪದ್ಮನಾಭ ಮತ್ತು ಮುಖ್ಯ ಅತಿಥಿಗಳಾದ ಡಾ. ಗುರುರಾಜ ಕರಜಗಿಯವರಿಗೆ ಹೂಗುಚ್ಛ ನೀಡಿ ಸ್ವಾಗತಿಸುವುದರ ಮೂಲಕ ಆರಂಭವಾಯಿತು.






ನಂತರ ಶ್ರೀಮತಿ ಸುಧಾ ಶಶಿಕಾಂತ್ ಡಾ. ಗುರುರಾಜ ಕರಜಗಿಯವರನ್ನು ಪರಿಚಯಿಸುವದರ ಮೂಲಕ ಕಾರ್ಯಕ್ರಮವನ್ನು ಮುಂದುವರಿಸಿದರು.


ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರು ವಿದ್ಯೆಯ ಅಧಿಪತಿಯಾದ ಗಜಾನನನಿಗೂ ಹಾಗೂ ಓಂಕಾರ ಸಮಿತಿಯ ಆರಾಧ್ಯ ದೇವನಾದ ಆಂಜನೇಯ ಸ್ವಾಮಿಗೆ ಆರತಿಯನ್ನು ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.



ತಮ್ಮದೇ ಶೈಲಿಯಲ್ಲಿ ಉಪನ್ಯಾಸವನ್ನು ಆರಂಬಿಸಿದ ಡಾ. ಗುರುರಾಜ ಕರಜಗಿಯವರು

"ನೂರು ಶಿಕ್ಷಕರಿಗಿಂತ ಒಬ್ಬ ಗುರು ಮೇಲು
ನೂರು ಗುರುಗಳಿಗಿಂತ ಒಬ್ಬ ತಂದೆ ಮೇಲು
ನೂರು ತಂದೆಯರಿಗಿಂತ ಒಬ್ಬ ತಾಯಿ ಶ್ರೇಷ್ಠ"

ಎನ್ನುವ ಮನುಸ್ಮೃತಿಯ ಸಂದೇಶವನ್ನು ಹೇಳಿ ಮಹಿಳಾ ದಿನದ ಸಂದೇಶದೊಂದಿಗೆ ನಮ್ಮ ಸಂಸ್ಕೃತಿಯಲ್ಲಿ ಮಹಿಳೆಗಿರುವ ಮಹತ್ವವನ್ನು ವಿವರಿಸುವದರೊಂದಿಗೆ ಆರಂಭಿಸಿದರು. 



ಸಂಸ್ಕೃತಿಯು ಸಮ್ಯಕ್ ಮತ್ತು ಕೃತಿ ಎಂಬ ಶಬ್ದಗಳಿಂದ ಕೂಡಿದ ಶಬ್ದವಾಗಿದೆ. ಸಂಸ್ಕ್ರತಿಯ ವ್ಯಾಖ್ಯೆಯೊಂದಿಗೆ ಹೇಗೆ ನಮ್ಮ ಮನಸ್ಸನ್ನು ಕಲಿಯುವಿಕೆಗೆ ಯಾವಾಗಲೂ ತೆರೆದಿಟ್ಟುಕೊಳ್ಳುವ ಮೂಲಕ ಸಂಸ್ಕೃತಿವಂತರಾಗಬಹುದೆಂದು ವಿವರಿಸಿದರು. 


ಒಬ್ಬ ವ್ಯಕ್ತಿ ಉನ್ನತ ಶಿಕ್ಷಣವನ್ನು ಪಡೆದ ಮಾತ್ರಕ್ಕೆ ಸುಸಂಸ್ಕೃತ ಎಂದು ಹೇಳಲು ಸಾಧ್ಯವಿಲ್ಲ ಎಂದು ನಿದರ್ಶನಗಳೊಂದಿಗೆ ಹೇಳುತ್ತಾ ಒಬ್ಬ ಮನುಷ್ಯನ ಸಂಸ್ಕೃತಿ ಬೆಳೆಯಲು ಧಾರ್ಮಿಕ ಕೇಂದ್ರಗಳು, ಸಾಹಿತ್ಯ, ಪರಿಸರ, ಪ್ರವಾಸಗಳು ಮತ್ತು ಸರಸತೆಗಳು ಹೇಗೆ ಕಾರಣವಾಗುತ್ತವೆ ಎಂದು ತಿಳಿಸಿದರು. ಮಂಕುತಿಮ್ಮನ ಕಗ್ಗದ ಹಾಡುಗಳೊಂದಿಗೆ, ತಮ್ಮ ಅಗಾಧ ಜೀವನಾನುಭವನ್ನು ಸೇರಿಸಿ ಸುಮಾರು ಎರಡು ಗಂಟೆಗಳ ಕಾಲ ಜನರನ್ನು ಮಂತ್ರ-ಮುಗ್ಧರನ್ನಾಗಿಸಿ ಹಿಡಿದಿಟ್ಟಿದ್ದರು.






ಉಪನ್ಯಾಸದ ನಂತರ ವಿವಿಧ ಸಂಘ ಸಂಸ್ಥೆಗಳು ಕ್ರಮವಾಗಿ ಬಂದು ಬಹುಶ್ರುತರು, ಮಹಾನ್ ವಿದ್ವಾಂಸರು, ಉತ್ತಮ ಲೇಖಕರು, ವಾಗ್ಮಿಯೂ, ವಿನಯವಂತರು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಮಾನವತಾವಾದದ ಸಂಕೇತವಾಗಿರುವ ಡಾ. ಕರಜಗಿಯವರನ್ನು ಗೌರವ ಕಾಣಿಕೆಗಳೊಂದಿಗೆ ಸನ್ಮಾನಿಸಿದರು. 

1. ಭಾರತೀಯ ಸಮಾಜಿಕ ವೇದಿಕೆ - ಕರ್ನಾಟಕ ವಿಭಾಗದಿಂದ ಡಾ. ಗುರುರಾಜ ಕರಜಗಿಯವರಿಗೆ ಸನ್ಮಾನ


2. ಬಸವ ಬಳಗ ಮಸ್ಕತ್, ನಿಂದ ಡಾ. ಗುರುರಾಜ ಕರಜಗಿಯವರಿಗೆ ಸನ್ಮಾನ


3. ರಾಮಕೃಷ್ಣ ಗ್ರೂಪ್, ಮಸ್ಕತ್ ನಿಂದ ಡಾ. ಗುರುರಾಜ ಕರಜಗಿಯವರಿಗೆ ಸನ್ಮಾನ


ಓಂಕಾರ ಸಮಿತಿಯು ಡಾ. ಗುರುರಾಜ ಕರಜಗಿಯವರಿಗೆ ಶಾಲು ಹೊದಿಸಿ ಸನ್ಮಾನಿಸಿ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.




ನಂತರ ಸಾರ್ಥಕ ಶಿಕ್ಷಕರಾಗಿ, ಶಿಕ್ಷಣ ತಜ್ಞರಾಗಿ, ಉತ್ತಮ ವಾಗ್ಮಿಯಾಗಿ, ಒಳ್ಳೆಯ ಲೇಖಕನಾಗಿ, ಮಾನವತಾವಾದಿಯಾಗಿ, ವೇದೋಪನಿಷತ್ತುಗಳ ಜ್ಞಾನಿಯಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಹೆಮ್ಮೆಯ ಕನ್ನಡಿಗ ಡಾ. ಗುರುರಾಜ ಕರಜಗಿಯವರು ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸಿ || ಓಂಕಾರಶ್ರೀ ||ಪುರಸ್ಕಾರ  ನೀಡಿ ಗೌರವಿಸಲಾಯಿತು.



ಕೊನೆಗೆ ಶ್ರೀ ಧನಂಜಯ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. 


ಓಂಕಾರ ಸಮಿತಿಯ ಮೂಲಕ ನಡೆಯುತ್ತಿರುವ ಭಕ್ತಿ, ಸಂಗೀತ ಮತ್ತು ಜ್ಞಾನಾರ್ಜನೆ ಹೀಗೆಯೇ ನಿರಂತರ ಮುಂದುವರಿಯಲಿ ಎಂದು ಆಶಿಸುತ್ತಾ ಕಾರ್ಯಕ್ರಮದ ಶ್ರೋತೃಗಳು ಧನ್ಯತಾ ಭಾವದೊಂದಿಗೆ ಮರಳಿದರು.


ಓಂಕಾರ ಜ್ಞಾನಾಮೃತವು ಓಂಕಾರ ಸಮಿತಿಯ ಮೂರು ಪ್ರಮುಖ ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಂದು. ಪ್ರತಿವರ್ಷ ಈ ಕಾರ್ಯಕ್ರಮಕ್ಕೆ ನಮ್ಮ ನಾಡಿನಿಂದ ಒಬ್ಬ ಪ್ರಖ್ಯಾತ ವಿದ್ವಾಂಸರನ್ನು ಇಲ್ಲಿಗೆ ಕರೆಯಿಸಿ, ಇಲ್ಲಿನ ಕನ್ನಡಿಗರಿಗಾಗಿ ಉಪನ್ಯಾಸವನ್ನು ಏರ್ಪಡಿಸುವ ಪರಿಪಾಠವನ್ನು ಓಂಕಾರ ಸಮಿತಿ ಕಳೆದ ಆರು ವರ್ಷಗಳಿಂದ ಇಟ್ಟುಕೊಂಡಿದೆ. ಈ ಕಾರ್ಯಕ್ರಮದಲ್ಲಿ ಇಲ್ಲಿಯ ತನಕ ಶತಾವಧಾನಿ ಆರ್ ಗಣೇಶ್, ಡಾ. ಬಿ. ಎಂ. ಹೆಗಡೆ, ಶ್ರೀ ಚಕ್ರವರ್ತಿ ಸೂಲಿಬೆಲೆ- ಮುಂತಾದ ವಿವಿಧ ಕ್ಷೇತ್ರದ ಸಾಧಕರು ಓಂಕಾರ ಜ್ಞಾನಾಮೃತದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ.

ವರದಿ: ಶ್ರೀಮತಿ ಸುಧಾ ಶಶಿಕಾಂತ್

Program Video  :

ಡಾ. ಗುರುರಾಜ ಕರಜಗಿಯವರ ಓಂಕಾರ ಜ್ಞಾನಾಮೃತ - ೨೦೧೯ ರ ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಇಲ್ಲಿದೆ.



No comments:

Post a Comment

Please provide your comment to improve