ಓಂಕಾರ ಜ್ಞಾನಾಮೃತ -೨೦೨೬

ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೇಂದ್ರ ನುತಾಯ ಶ್ರೀ ಕಪೀಂದ್ರಾಯ ನಮೋ ನಮಃ||

ಶ್ರೀ ರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ |
ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ |

ಶುಭ ರಾಮ ನವಮಿಯ ದಿನವಾದ ಅಕ್ಟೋಬರ್ 27 2026 ರಂದು ಮಸ್ಕತ್‌ನ "ಶ್ರೀ ಕೃಷ್ಣ ಮಂದಿರ" ದಾರ್‌ಸೈಟ್ ನಲ್ಲಿ ನಡೆದ ಕಾರ್ಯಕ್ರಮ ಶ್ರೀರಾಮಚರಿತ್ರೆಯನ್ನು ಸಾರುವ ಒಂದು ವಿಶೇಷ ಕಾರ್ಯಕ್ರಮವಾಗಿತ್ತು. "ಓಂಕಾರ" ಓಮಾನ ಕರ್ನಾಟಕ ಆರಾಧನಾ ಸಮಿತಿಯವರು ಕಳೆದ 14 ವರ್ಷಗಳಿಂದ ಆಯೋಜಿಸುತ್ತಿರುವ ಭಕ್ತಿ ಜ್ಞಾನ ಮತ್ತು ಸಂಸ್ಕೃತಿಯ ಸುಂದರ ಸಂಯೋಜನೆ ಈ "ಓಂಕಾರ ಜ್ಞಾನಾಮೃತ 2026".

ಈ ಕಾರ್ಯಕ್ರಮದ ವಿಶೇಷತೆ ಏನೆಂದರೆ ಮಸ್ಕತ್‌ನಲ್ಲಿ ನಡೆದಿರುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯುವಂತೆ, ಹರಿಕಥೆಯಂತಹ ವಿಶಿಷ್ಠ ಕಲೆಯನ್ನು ಮಹಿಳಾ ಹರಿಕಥೆ ವಿದುಷಿಯಿಂದ ಮೊಟ್ಟ ಮೊದಲ ಬಾರಿಗೆ ಮಸ್ಕತ್ ಜನತೆಗೆ ಪರಿಚಯಿಸಿದ ಹೆಗ್ಗಳಿಕೆ ಓಂಕಾರ ಸಮಿತಿಗೆ ಸಲ್ಲುತ್ತದೆ.


"ರಾಮ ಮಂತ್ರವ ಜಪಿಸೊ" ಎಂಬ ಹರಿಕಥೆಯನ್ನು ನಡೆಸಿಕೊಡಲು ಬೆಂಗಳೂರಿನಿಂದ ಶ್ರೀಮತಿ ಅಮೃತ ನಾಯ್ಡು ಹಾಗು ತಂಡದವರು ಬಂದಿದ್ದರು. ಮೊದಲನೆಯದಾಗಿ ಶ್ರೀಯುತ ರವಿಕುಮಾರ್‌ರವರು ತಮ್ಮ ಸ್ವಾಗತ ಭಾಷಣದ ಮೂಲಕ ಅಲ್ಲಿ ಆಗಮಿಸಿರುವ ಎಲ್ಲಾ ಆಹ್ವಾನಿತ ಗಣ್ಯ ಅತಿಥಿಗಳಿಗೆ ಹೂಗುಚ್ಛವನ್ನು ನೀಡಿ ಸ್ವಾಗತಿಸಿದರು. ಅದೇ ಸಂದರ್ಭದಲ್ಲಿ "ಓಂಕಾರ" ಸಮಿತಿಯು ನಡೆಸುವ ಎಲ್ಲಾ ಕಾರ್ಯಕ್ರಮಗಳ ಕಿರು ಪರಿಚಯವನ್ನು ಸಹ ಮಾಡಿಕೊಟ್ಟರು.



ನಂತರ ಮಸ್ಕತ್ತಿನ ಅಧ್ಯಾತ್ಮ ಸಮಿತಿಯವರು ರಾಮ ರಕ್ಷಾ ಸ್ತೋತ್ರದ ಪಠಣ ಮಾಡುವ ಮೂಲಕ ಮತ್ತು ಶ್ರೀಯುತ ಅರುಣ್‌ಕುಮಾರ್ ಹಾಗೂ ಶ್ರೀಯುತ ಶಶಿ ಪ್ರಕಾಶ್‌ರವರಿಂದ ಗಣಪತಿ ಮತ್ತು ಓಂಕಾರ ಆಂಜನೇಯನಿಗೆ ಆರತಿ ಮಾಡುವ ಮೂಲಕ ಹರಿಕಥೆಯ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.



ಮುಂದೆ ಶ್ರೀಮತಿ ಉಷಾ ಹರ್ಷರವರು, ಹರಿಕಥೆ ವಿದುಷಿ ಶ್ರೀಮತಿ ಅಮೃತ ನಾಯ್ಡುರವರ ಹಾಗೂ ಅವರ ಜೊತೆ ಆಗಮಿಸಿದ್ದ ಹಾರ್ಮೋನಿಯಂ ಕಲಾವಿದರಾದ ಶ್ರೀ ರಘು (ರಾಘವೇಂದ್ರಾಚಾರ್), ತಬಲ ವಾದಕರಾದ ಶ್ರೀ ಬೆಳಕವಾಡಿ ಎಂ. ಕೃಷ್ಣಮೂರ್ತಿ ರವರ ಪರಿಚಯ ಹಾಗೂ ಸ್ವಾಗತದ ಜವಾಬ್ದಾರಿಯನ್ನು ಹೊತ್ತಿದ್ದರು. ಓಂಕಾರ ಸಮಿತಿಯ ಸದಸ್ಯರು ಶ್ರೀಮತಿ ಅಮೃತ ನಾಯ್ಡು ಹಾಗೂ ಸಹ ಕಲಾವಿದರನ್ನು ವೇದಿಕೆಗೆ ಗೌರವ ಪೂರ್ವಕವಾಗಿ ಕರೆತಂದರು.


ಹರಿಕಥೆ ಭಗವಂತನ ಮಹಿಮೆ ಮತ್ತು ಧರ್ಮದ ಮಾರ್ಗವನ್ನು ಕಥೆ, ಸಂಗೀತ ಹಾಗೂ ಉಪದೇಶದ ಮೂಲಕ ತಿಳಿಸುವ ಮಾರ್ಗವಾಗಿದೆ. ಹರಿಕಥೆಯನ್ನು ಕೇಳುವುದು ಕೋಟಿ ಪುಣ್ಯಕ್ಕೆ ಸಮಾನ ಎಂಬ ಮಾತಿದೆ.


ದಾಸ ಸಾಹಿತ್ಯದ ಮರ್ಮವನ್ನು ಸಾರುವ "ರಾಮ ಮಂತ್ರವ ಜಪಿಸೊ" ಎಂಬ ಹರಿಕಥೆಯನ್ನು ಶ್ರೀಮತಿ ಅಮೃತ ನಾಯ್ಡುರವರು ಗಜಾನನನ ಕೃತಿಯೊಂದಿಗೆ ಪ್ರಾರಂಭಿಸಿದರು. ರಾಮ ನಾಮವ ಜಪಿಸಿ ಧನ್ಯರಾಗಿರೋ, ರಾಮ ನಾಮ ಎಂಬ ಪದ ಭಜಿಸಿ ಪಾವನರಾಗಿರೋ, ಅಂತಹ ರಾಮ ನಾಮವನ್ನು ಅಷ್ಟಾಕ್ಷರಿ ಮಂತ್ರದಿಂದ 'ರ' ಎಂಬ ಅಕ್ಷರ, ಪಂಚಾಕ್ಷರಿ ಮಂತ್ರದಿಂದ 'ಮ' ಎಂಬ ಅಕ್ಷರ ಎರಡು ಕೂಡಿ 'ರಾಮ' ಎಂಬ ಪವಿತ್ರ ನಾಮವಾಗಿದೆ ಎಂದು ತಿಳಿಸಿದರು. ಸತ್ಯಕ್ಕೆ ಮಿಗಿಲಾದ ದೇವರಿಲ್ಲ, ಧರ್ಮಕ್ಕೆ ಮಿಗಿಲಾದ ಸುಖವಿಲ್ಲ, ಭಕ್ತಿಯೊಂದೇ ಮುಕ್ತಿಗೆ ಸಾಧನ, ನಾನು ನನ್ನದು ಎನ್ನುವುದನ್ನು ಬಿಟ್ಟು ಭಕ್ತಿಗೆ ಶರಣಾಗಬೇಕು ಎಂಬುದನ್ನು ತಮ್ಮ ಕೀರ್ತನೆ, ಶ್ಲೋಕ ಉಪಕಥೆ, ನೀತಿ ಪ್ರಬೋಧನೆ ಮತ್ತು ಹಾಸ್ಯ ಪ್ರಸಂಗಗಳ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಭಕ್ತಿಯ ರಸವನ್ನು ತುಂಬಿದರು.


ಶ್ರೀಮತಿ ಅಮೃತ ನಾಯ್ಡುರವರ ಅಂದಿನ ಹರಿಕಥೆಯ ಆಕರ್ಷಣೆ ಜೀವನದ ಒಂಭತ್ತರ ಮಗ್ಗಿಯ ಮಹತ್ವ, ಈ ಒಂಭತ್ತರ ಮಗ್ಗಿಯ ಮೂಲಕ ಜೀವನದ ತತ್ವಗಳನ್ನು ಆಧ್ಯಾತ್ಮದ ಅಳವನ್ನು ಒಂದರಿಂದ ಒಂಭತ್ತು ಹೀಗಿತ್ತು ಎಂದು ತಾತ್ವಿಕವಾಗಿ ಪ್ರಸ್ತುತ ಪಡಿಸಿದರು.

ಒಂದರಿಂದ ಒಂಭತ್ತು ಹೀಗಿತ್ತು:
ಒಂದು - ಸೂರ್ಯ, ಚಂದ್ರರು ಒಂದು.
ಎರಡು - ಅಪ್ಪ ಅಮ್ಮ, ಕಣ್ಣುಗಳು ಎರಡು.
ಮೂರು - ತ್ರಿಮೂರ್ತಿಗಳು ಮೂರು (ಬ್ರಹ್ಮ, ವಿಷ್ಣು, ಮಹೇಶ್ವರ).
ನಾಲ್ಕು - ನಾಲ್ಕು ವೇದಗಳು (ಋಗ್, ಯಜುರ್, ಸಾಮವೇದ, ಅಥರ್ವಣವೇದ).
ಐದು - ಪಂಚಭೂತಗಳು (ಆಕಾಶ, ವಾಯು, ನೀರು, ಭೂಮಿ, ಅಗ್ನಿ).
ಆರು - ಅರಿಷಡ್ವರ್ಗಗಳು (ಕಾಮ, ಕ್ರೋದ, ಮೋಹ, ಲೋಭ, ಮದ, ಮತ್ಸರ).
ಏಳು - ಸಪ್ತ ಋಷಿಗಳು (ಕಶ್ಯಪ, ಅತ್ರಿ, ವಶಿಷ್ಠ, ವಿಶ್ವಾಮಿತ್ರ, ಗೌತಮ, ಜಮದಗ್ನಿ, ಭಾರದ್ವಾಜ).
ಎಂಟು - ಅಷ್ಟ ದಿಕ್ಕುಗಳು (ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಆಗ್ನೇಯ, ನೈರುತ್ಯ, ವಾಯುವ್ಯ).
ಒಂಬತ್ತು - ನವಗ್ರಹಗಳು.

ಹೀಗೆ ಗಣಿತದ ಜೊತೆ ಅಧ್ಯಾತ್ಮದ ಆಳವನ್ನು ಬೆಸೆದು ಹೇಳಿದ ಕಥೆ, ಉಪಕಥೆ, ಪ್ರಸಂಗಗಳು ನಿಜಕ್ಕೂ ಸ್ಮರಣೀಯ.


ಶ್ರೀಮತಿ ಅಮೃತ ನಾಯ್ಡುರವರ ಹರಿಕಥೆಯಲ್ಲಿ ಶ್ರೀರಾಮ ಮತ್ತು ಆಂಜನೇಯರ ನಡುವಿನ ವಿಶಿಷ್ಟ ಪ್ರಸಂಗಗಳು ಭಾವನಾತ್ಮಕ ಮತ್ತು ಧಾರ್ಮಿಕ ಸಂಘರ್ಷವನ್ನು, ಆಂಜನೇಯನ ಅಚಲವಾದ ಭಕ್ತಿ, ಶ್ರೀರಾಮನ ಧರ್ಮನಿಷ್ಠೆಯನ್ನು ಬಹಳ ಅದ್ಭುತವಾಗಿ ಪ್ರಸ್ತುತ ಪಡಿಸಿದರು.

ಆಂಜನೇಯ ತನ್ನ ಗುರು ಆದೇಶವನ್ನು ಪಾಲಿಸಲು ಶ್ರೀರಾಮನ ವಿರುದ್ಧವೇ ಯುದ್ಧಕ್ಕೆ ಇಳಿಯ ಬೇಕಾದ ಪರಿಸ್ಥಿತಿ ಎದುರಾಗುತ್ತದೆ. ತನ್ನ ಆರಾಧ್ಯ ದೈವದ ವಿರುದ್ಧ ಹೋರಾಡಬೇಕಾದ ಆಂಜನೇಯನ ಮನಸ್ಥಿತಿ ಅವನ ಭಕ್ತಿಯ ಗಾಢತೆ, ಹಾಗೆಯೇ ಶ್ರೀರಾಮನು ಭಕ್ತನ ನಿಷ್ಠೆಯನ್ನು ಪರೀಕ್ಷಿಸುವ ಪರಮಾತ್ಮನಾಗಿ ಕಾಣಿಸಿಕೊಳ್ಳುತ್ತಾನೆ. ರಾಮಾಯಣದ ಭಕ್ತಿರಸವನ್ನು ತಮ್ಮ "ರಾಮ ನಾಮವ ಜಪಿಸೊ" ಎಂಬ ಹರಿಕಥೆಯಲ್ಲಿ ಧರ್ಮಪಾಲನೆ, ವಚನ ಪಾಲನೆ ಮತ್ತು ಭಕ್ತಿಯ ಪರಾಕಾಷ್ಠೆಯನ್ನು ಶ್ರೀಮತಿ ಅಮೃತ ನಾಯ್ಡು ರವರು ಗುರು ಭಕ್ತಿ, ದಾಸ್ಯ ಭಕ್ತಿ ಮತ್ತು ದೇವರ ಮೇಲಿನ ಅಚಲ ನಂಬಿಕೆ ಎಂಬ ಮೌಲ್ಯಗಳನ್ನು ಮನಮೋಹಕವಾಗಿ ಪ್ರಸ್ತುತ ಪಡಿಸಿದರು.


ಆಂಜನೇಯನ ಅಚಲವಾದ ಭಕ್ತಿ, ಶ್ರೀರಾಮನ ಧರ್ಮನಿಷ್ಠೆಯನ್ನು ಅರಿತು ವಾಸ್ತವದಲ್ಲಿ ಭಕ್ತ - ಭಗವಂತನ ನಡುವಿನ ಸಂಘರ್ಷ, ಅದು ಯುದ್ಧವಲ್ಲ , ಧರ್ಮದ ಜಯ ಮತ್ತು ಕರ್ತವ್ಯ ಎಂಬುದನ್ನು ನಿರೂಪಿಸಲಾಗಿದೆ.

ಕಥೆಯ ಮಧ್ಯೆ ಶ್ರೀಮತಿ ಅಮೃತ ನಾಯ್ಡು ರವರು ಹಾಡುವ ಕೀರ್ತನೆಗಳು, ಶ್ಲೋಕಗಳು, ಉಪಕಥೆಗಳು, ನೀತಿ ಬೋಧನೆಗಳು ಹಾಗೂ ಹಾಸ್ಯ ಪ್ರಸಂಗಗಳು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯುವಂತೆ ನಿರೂಪಣೆ ಮಾಡಿದರು. ಶ್ರೀಮತಿ ಅಮೃತ ನಾಯ್ಡು ರವರ ಕಲಾವಂತಿಕೆ ಅವರ ನಿರೂಪಣೆ ಶೈಲಿ, ವಾಚನ ಶೈಲಿ, ಕಥಾ ನಿರ್ಮಾಣ, ಭಾವ, ಹಾಸ್ಯ, ಕರುಣೆ, ಸುಶ್ರಾವ್ಯ ಕಂಠ, ಆ ಮನಮೋಹಕ ವಾಗ್ಝರಿಯಿಂದ ಸಭಿಕರನ್ನು 30-40 ವರ್ಷಗಳ ಹಿಂದಿನ ಹರಿಕಥಾ ಪರಂಪರೆಯ ಸುವರ್ಣ ಯುಗಕ್ಕೆ ಕರೆದೊಯ್ದರು ಎಂದರೆ ಅತಿಶಯೋಕ್ತಿಯಲ್ಲ.


ಒಟ್ಟಿನಲ್ಲಿ ಈ ಹರಿಕಥೆಯು ನಮಗೆ ನಿತ್ಯಭಕ್ತಿ ಎಂದರೆ ಕೇವಲ ಸೇವೆಯಲ್ಲ, ಧರ್ಮದ ಪಾಲನೆಯು ಆಗಿದೆ. ಸತ್ಯಭಕ್ತಿ ಎಂದಿಗೂ ವ್ಯರ್ಥವಾಗುವುದಿಲ್ಲ. ಅದು ಯಾವಾಗಲೂ ದೇವರ ಕೃಪೆಯನ್ನು ಪಡೆದುಕೊಳ್ಳುತ್ತದೆ ಎಂಬ ಸಂದೇಶವನ್ನು ನೀಡುತ್ತದೆ. ಇಂತಹ ಅರ್ಥಪೂರ್ಣ ಹರಿಕಥೆಯನ್ನು ಶ್ರೀಮತಿ ಅಮೃತ ನಾಯ್ಡುರವರ ಭಾವಪೂರ್ಣ ನಿರೂಪಣೆ ನಮ್ಮೆಲ್ಲರ ಮನಸ್ಸನ್ನು ತಟ್ಟಿದ್ದು, ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಭಕ್ತಿರಸದ ಹೊಳೆಯನ್ನೇ ಹರಿಸಿದರೆಂದರೆ ತಪ್ಪಾಗಲಾರದು.


ಶ್ರೀಮತಿ ಅಮೃತ ನಾಯ್ಡುರವರು ಹರಿಕಥೆಯನ್ನು ಮಂಗಳ ಹಾಡುವುದರ ಮೂಲಕ ಕೊನೆಗೊಳಿಸುತ್ತಿದ್ದಂತೆ ಸಭಿಕರೆಲ್ಲರೂ ಎದ್ದು ನಿಂತು ಕರತಾಡನದ ಮೂಲಕ 'ಕೀರ್ತನ ಕೇಸರಿ' ‘ಹರಿಕಥಾ ವಿದುಷಿ’ ಶ್ರೀಮತಿ ಅಮೃತ ನಾಯ್ಡುರವರಿಗೆ ಗೌರವ ಸೂಚಿಸಿದರು.


ಮುಂದೆ ಇಂದಿನ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಉಪಸ್ಥಿತಿಯಿಂದ ವೇದಿಕೆಗೆ ಮೆರುಗು ನೀಡಿದಂತಹ "ಹರಿಕಥಾ ವಿದುಷಿ" ಶ್ರೀಮತಿ ಅಮೃತ ನಾಯ್ಡು ಹಾಗು ಸಹ ಕಲಾವಿದರಿಗೆ ಸನ್ಮಾನಿಸಲಾಯಿತು. ಮೊದಲಿಗೆ "ಇಂಡಿಯನ್ ಮೆಡಿಕಲ್ ಅಸೋಸಿಯೇಷನ್", ಓವರ್ಸೀಸ್ ಬ್ರಾಂಚ್, ಮಸ್ಕತ್ ಇದರ ಅಧ್ಯಕ್ಷರಾಗಿರುವಂತಹ ಡಾ||ದ್ವಾರಕಾನಾಥ್ ಮತ್ತು ತಂಡದವರು ಶ್ರೀಮತಿ ಅಮೃತ ನಾಯ್ಡು ರವರಿಗೆ ಗೌರವ ಸಮರ್ಪಣೆ ಮಾಡಿದರು. 


ನಂತರ "ಭಾರತೀಯ ಸಾಮಾಜಿಕ ವೇದಿಕೆ ಕರ್ನಾಟಕ ವಿಭಾಗ" (ಕರ್ನಾಟಕ ಸಂಘ ಮಸ್ಕತ್) ವತಿಯಿಂದ ಶ್ರೀಮತಿ ಅಮೃತ ನಾಯ್ಡುರವರಿಗೆ ಕನ್ನಡ ಸಂಘದ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರುಗಳು ಗೌರವ ಸಮರ್ಪಣೆ ಮಾಡಿದರು.


ಓಂಕಾರ ಸಮಿತಿಯ ಪರವಾಗಿ ಕಾರ್ಯಕ್ರಮದ ಸಹ ಕಲಾವಿದರಾದ ಶ್ರೀ ರಘು (ರಾಘವೇಂದ್ರಚಾರ್) ರವರಿಗೆ, ಶ್ರೀ ಬಾಲಾಜಿ ಶ್ರೀನಿವಾಸ್, ಶ್ರೀ ಹಿರಿಯಣ್ಣ, ಶ್ರೀ ಸುರೇಶ್ ರವರು ಶಾಲು ಹೊದಿಸಿ, ಹೂಮಾಲೆ ಹಾಕಿ, ಹಣ್ಣಿನ ತಟ್ಟೆ ಕೊಟ್ಟು ಗೌರವಿಸಿದರು. 


ಇನ್ನು ತಬಲ ವಾದಕರಾದ ಶ್ರೀ ಬೆಳಕವಾಡಿ ಎಂ. ಕೃಷ್ಣಮೂರ್ತಿ ರವರಿಗೆ ಶ್ರೀ ಡಾ|| ಅಂಚನ್, ಶ್ರೀ ಮಂಜುನಾಥ ನಾಯ್ಕ್, ಶ್ರೀ ಅನಂತ ರವರು ಶಾಲು, ಹೂಮಾಲೆ ಮತ್ತು ಹಣ್ಣಿನ ತಟ್ಟೆ ನೀಡಿ ಗೌರವಿಸಿದರು. 


ಇನ್ನು ಶ್ರೀಮತಿ ಅಮೃತ ನಾಯ್ಡು ರವರಿಗೆ ಶ್ರೀಮತಿ ಸುಜಾತ ಬಾಲಾಜಿ, ಶ್ರೀಮತಿ ಶ್ರೀಮಾತಾ ಹಿರಿಯಣ್ಣ, ಶ್ರೀಮತಿ ಲಕ್ಷ್ಮಿ ಸುರೇಶ್ ರವರು ಶಾಲು ಹೊದಿಸಿ, ಹೂಮಾಲೆ ಹಾಕಿ, ಹಣ್ಣಿನ ತಟ್ಟೆಯನ್ನು ನೀಡಿ ಗೌರವಿಸಿದರು.


ನಂತರ ಓಂಕಾರ ಮಹಿಳಾ ಸಮಿತಿಯ ಮಹಿಳಾ ಸದಸ್ಯರಿಂದ ಶ್ರೀಮತಿ ಅಮೃತ ನಾಯ್ಡು ರವರಿಗೆ ಬಾಗಿನ ಕೊಟ್ಟು ಗೌರವಿಸಲಾಯಿತು.


ಎಂದಿನಂತೆ ಓಂಕಾರ ಸಮಿತಿಯು ಸಂಗೀತ ಹಾಗೂ ಜ್ಞಾನ ಕ್ಷೇತ್ರದ ಸಾಧಕರಿಗೆ "ಓಂಕಾರಶ್ರೀ" ಪ್ರಶಸ್ತಿಯನ್ನು ನೀಡಿ ಗೌರವಿಸುತ್ತ ಬರುತ್ತಿದೆ.

ಸಾಂಪ್ರದಾಯಿಕ ಕಥನ, ಭಕ್ತಿರಸ ಸಂಗೀತ, ಶಾಸ್ತ್ರೀಯ ಅಭಿವ್ಯಕ್ತಿ, ಆಳವಾದ ತತ್ವಶಾಸ್ತ್ರದ ಸುಂದರ ಸಂಯೋಜನೆ, ಈ ಹರಿಕಥೆ ಪ್ರದರ್ಶನವಲ್ಲದೆ, ಭಕ್ತಿಯನ್ನು ಪ್ರೇರೇಪಿಸುವ, ನೈತಿಕ ಮೌಲ್ಯಗಳನ್ನು ಬೋಧಿಸುವ ಹರಿಕಥಾ ಕಲಾವಿದೆ, ತಾತ ಹರಿಕಥಾ ಪಿತಾಮಹ ಕೀರ್ತನ ಕೇಸರಿ ಶ್ರೀ ಆರ್. ಗುರುರಾಜುಲು ನಾಯ್ಡು ಹಾಗೂ ತಾಯಿ ಶ್ರೀಮತಿ ಶೋಭಾ ನಾಯ್ಡು ರವರ ಮಾರ್ಗದರ್ಶನ ಮತ್ತು ಕೃಪಾಶೀರ್ವಾದದಿಂದ ತಮ್ಮ ಬಾಲ್ಯದಿಂದಲೇ ಹರಿಕಥೆ ಕಾರ್ಯಕ್ರಮಗಳನ್ನು ನಾಡಿನ ವಿವಿಧ ಭಾಗಗಳಲ್ಲಿ ಯಶಸ್ವಿಯಾಗಿ ಪ್ರಸ್ತುತ ಪಡಿಸುತ್ತ ಹರಿಕಥೆ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ಇಂದಿನ ಯುವ ಪೀಳಿಗೆಗೆ ಆಧ್ಯಾತ್ಮಿಕ ಅನುಭೂತಿಯ ಮಹತ್ವವನ್ನು ಸಾರುತ್ತಾ ನಾಡಿನ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡು, ಹಿರಿತೆರೆ ಮತ್ತು ಕಿರಿತೆರೆ ಸೇರಿದಂತೆ ವಿವಿಧ ವಾಹಿನಿಗಳ ಜನಪ್ರಿಯ ಕಾರ್ಯಕ್ರಮಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಮನಗೆಲ್ಲುವುದಲ್ಲದೆ ಹರಿಕಥೆಯ ಸಾರ್ಥಕತೆಯನ್ನು ಉಳಿಸಿ ಅದನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಸಿ, ಅದರ ಅಭಿವೃದ್ಧಿಗೆ ನೀಡಿದ ಮಹತ್ತರ ಕೊಡುಗೆಯನ್ನು ಪರಿಗಣಿಸಿ, ಓಂಕಾರ ಸಮಿತಿಯು "ಓಂಕಾರಶ್ರೀ" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದ ಕೊನೆಗೆ ಶ್ರೀ ಪ್ರದೀಪ್ ರಂಗನಾಥ ರವರಿಂದ ವಂದನಾರ್ಪಣೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು.


ಪ್ರಕೃತಿ ನಿರ್ಮಿತ, ಯುದ್ಧದ ಸಂಘರ್ಷ, ಮಾನವ ನಿರ್ಮಿತ ಅಡಚಣೆಗಳಾಗಲಿ ಇದೆಲ್ಲದರ ನಡುವೆ ಅಸಾಧ್ಯವನ್ನು ಸಾಧ್ಯವಾಗಿಸುವ ದಯಾಸಾಗರನಾದ ರಾಮದೂತ ಓಂಕಾರ ಆಂಜನೇಯ ಸ್ವಾಮಿಯ ಅನಂತ ಕೃಪಾಕಟಾಕ್ಷದಿಂದ “ಓಂಕಾರ ಜ್ಞಾನಾಮೃತ - 2026”ರ ಕಾರ್ಯಕ್ರಮವು ಭಕ್ತಿ ಭಾವಪೂರ್ಣವಾಗಿ ಅತ್ಯಂತ ಯಶಸ್ವಿಯಾಗಿ ನೆರವೇರಿತು.


ವರದಿ: ಶ್ರೀಮತಿ ಉಷಾ ಹರ್ಷಾ 

No comments:

Post a Comment

Please provide your comment to improve