ಓಂಕಾರ ನಾದಾಮೃತ -೨೦೨೪

ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ ।
ಸುಗುಣೇಂದ್ರನುತಾಯ ಶ್ರೀ ಕಪಿಂದ್ರಾಯ ನಮೋ ನಮಃ ।।
ಅಕ್ಟೋಬರ್ 27, 2024 ಶುಕ್ರವಾರದ ಶುಭ ಸಂಜೆ 6:00 ಘಂಟೆಗೆ ಸರಿಯಾಗಿ ಮಸ್ಕತ್ ಶ್ರೀ ಕೃಷ್ಣ ಮಂದಿರದ ಸಭಾಂಗಣ ಸುಂದರವಾಗಿ ಅಲಂಕೃತವಾಗಿತ್ತು. ಓಮಾನ್ ಕರ್ನಾಟಕ ಆರಾಧನಾ ಸಮಿತಿಯು ಓಂಕಾರ ನಾದಾಮೃತ 2024ರ ಭಕ್ತಿಸಂಗೀತ ಕಾರ್ಯಕ್ರಮವನ್ನು ಸಾಕಾರಗೊಳಿಸಲು ನಮ್ಮ ತಾಯ್ನಾಡಿನಿಂದ ಆಗಮಿಸಿದ ಗಾನಕೋಗಿಲೆ ಕು. ಸಾಧ್ವಿನಿ ಕೊಪ್ಪ ಮತ್ತು ತಂಡದವರಿಗಾಗಿ ಸುಸಜ್ಜಿತ ವೇದಿಕೆ ತಯಾರಾಗಿತ್ತು. ರಾಮನಾಮದ ಓಂಕಾರದ ಜೊತೆಗೆ ಹನುಮ ನಾಮದ ಜೈಕಾರಕ್ಕಾಗಿ ಮಸ್ಕತ್ತಿನ ಸಂಗೀತ ಪ್ರೇಮಿಗಳೆಲ್ಲರೂ ಉತ್ಸುಕರಾಗಿದ್ದರು. ಓಂಕಾರ ಸಮಿತಿಯ ಶ್ರೀ ರವಿಕುಮಾರ್ ಅವರು ಸ್ವಾಗತಭಾಷಣ ಆರಂಭಿಸಿ ಆಗಮಿಸಿದ್ದ ಮುಖ್ಯ ಅತಿಥಿಗಳಿಗೆ ಹೂಗುಚ್ಚ ನೀಡಿ ಹಾಗೂ ನೆರೆದಿದ್ದ ಸಭಿಕರಿಗೆ ಆತ್ಮೀಯತೆಯಿಂದ ಹೃತ್ಪೂರ್ವಕ ಸ್ವಾಗತ ಕೋರುತ್ತ ಓಂಕಾರ ಸಮಿತಿಯ ಹನ್ನೆರಡು ವರ್ಷದ ಸತತ ಸಾಧನೆಯ ಕಿರುನೋಟವನ್ನು ನೆನಪಿಸಿ ಕೊಟ್ಟರು.
ನಂತರ ಶ್ರೀಮತಿ ಮುಕ್ತಾ ಪ್ರವೀಣ ಅವರಿಂದ ಗಾನಶ್ರೀ ಕು. ಸಾಧ್ವಿನಿ ಕೊಪ್ಪರವರ ಪರಿಚಯದೊಂದಿಗೆ ಸಂಗೀತದ ನಾಡಿಮಿಡಿತಗಳಾದ ಕೀಬೋರ್ಡ್ ವಾದಕ ಶ್ರೀಯುತ ಶ್ರೀನಿಧಿ ಕೊಪ್ಪ, ರಿದಮ್ ಪ್ಯಾಡ್ ಪರಿಣಿತ ಅಭಿಷೇಕ್ ಎಂ ಎ, ತಬಲಾ ಮಾಂತ್ರಿಕ ಶ್ರೀ ಕಾರ್ತಿಕ್ ಭಟ್ ಹಾಗೂ ಸ್ಥಳೀಯ ಕೊಳಲು ವಾದಕರಾದ ಶ್ರೀ ಪ್ರದೀಪ್ ಕುಮಾರ್ ರವರ ಕಿರು ಪರಿಚಯ ಮಾಡಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀ ಅರುಣಕುಮಾರ್ ಅಯ್ಯರ್ ಅವರು ಆದಿಪೂಜಿತ ಶ್ರೀ ಗಣಪತಿಗೆ ಹಾಗೂ ಓಂಕಾರ ಸಮಿತಿಯ ಆರಾಧ್ಯ ದೈವ ಹಾಗೂ ಚೈತನ್ಯ ಮೂರ್ತಿ ಶ್ರೀ ಆಂಜನೇಯ ಸ್ವಾಮಿಗೆ ಆರತಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಾರತದಲ್ಲಿ ಸಂಗೀತ ಪಡೆದ ನಾವು ಎಷ್ಟು ಪುಣ್ಯವಂತರು ಎಂದು ಹೇಳುತ್ತಾ ಕು ಸಾದ್ವಿನಿ ಕೊಪ್ಪರವರು "ಗಣಪತಿ ಬಪ್ಪ ಮೋರಯಾ ಮಂಗಳ ಮೂರ್ತಿ ಮೋರಯಾ" ಹಾಡುತ್ತಾ ಗಣಪತಿಗೆ ವಂದಿಸಿ ಕಾರ್ಯಕ್ರಮ ಪ್ರಾರಂಭಿಸಿದರು. ನಂತರ "ಶಂಭೋ ಶಿವ ಶಂಭೋ" ಹಾಡಿ, ಶ್ರೀಕೃಷ್ಣನ ಸಾನಿಧ್ಯದಲ್ಲಿ "ಸ್ವಾಗತಂ ಕೃಷ್ಣ ಶರಣಾಗತಂ ಕೃಷ್ಣ" ಎಂದು ಕೃಷ್ಣನನ್ನು ಆಹ್ವಾನಿಸಿದರು. ಮುಂದೆ "ರಾಮ ಎಂಬ ಎರಡಕ್ಷರ ಪಾಮರರು ತಾವೇನು ಬಲ್ಲಿರಯ್ಯಾ" ಎಂಬ ದಾಸಸಾಹಿತ್ಯದ ಮಹತ್ವವನ್ನು ಎಷ್ಟೊಂದು ಸ್ವಾರಸ್ಯವಾಗಿ ನಮಗೆ ಹಾಡಿ ತಿಳಿಸಿದರು. ಆಂಜನೇಯನ ಭಜನೆಯಾದ "ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ಎಂದು ಎಲ್ಲರೂ ಕುಣಿದು ಕುಪ್ಪಳಿಸುವಂತೆ ಮಾಡಿದರು. ಹೀಗೆ ಒಂದರ ನಂತರ ಇನ್ನೊಂದು ಹಾಡು ಪ್ರತಿಯೊಬ್ಬ ಪ್ರೇಕ್ಷಕರನ್ನು ಮಂತ್ರಮುಗ್ಧನನ್ನಾಗಿಸುತ್ತಿತ್ತು. ಸುಸ್ವರ ಸಂಗೀತದೊಂದಿಗೆ ಪ್ರತಿಯೊಂದು ಹಾಡಿನ ವಿಶೇಷತೆಗಳನ್ನು ತಿಳಿಸಿ ಕೊಡುತ್ತ ತಾವು ಹಾಡುತ್ತ ಪ್ರೇಕ್ಷಕರನ್ನು ಜೊತೆಗೆ ಹಾಡಲು ಪ್ರೋತ್ಸಾಹಿಸುತ್ತಿದ್ದರು.
ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಿ ಸನ್ಮಾನಿಸುವದೂ ಮುಖ್ಯ ಎಂಬಂತೆ ಮಸ್ಕತ್ ನ ಇಂಡಿಯನ್ ಡಾಕ್ಟರ್ಸ್ ಅಸೋಸಿಯೇಷನ್ ಕರ್ನಾಟಕ ವಿಭಾಗದವರು ಕು ಸಾಧ್ವಿನಿ ಕೊಪ್ಪ ಅವರನ್ನು ಸನ್ಮಾನಿಸಿದರು. ತದನಂತರ ಉಪಸ್ಥಿತರಿದ್ದ ಗಣ್ಯರಿಂದ ರಿದಮ್ ಪ್ಯಾಡ್ ಕಲಾವಿದ ಅಭಿಷೇಕ ಎಂ ಎ, ತಬಲಾ ವಾದಕ ಕಾರ್ತೀಕ ಭಟ್, ಕೊಳಲು ವಾದಕ ಪ್ರದೀಪ್ ಕುಮಾರ ಹಾಗೂ ಕೀಬೋರ್ಡ್ ವಾದಕರಾದ ಶ್ರೀನಿಧಿ ಕೊಪ್ಪರವರನ್ನು ಓಂಕಾರ ಸಮಿತಿಯ ಪರವಾಗಿ ಸನ್ಮಾನಿಸಿದರು. ನಂತರ ಓಂಕಾರ ಸಮಿತಿಯ ಎಲ್ಲ ಸದಸ್ಯರು ವೇದಿಕೆಗೆ ಆಗಮಿಸಿ ನಾದಾಮೃತ 2024ರ ಕಾರ್ಯಕ್ರಮದ ಕೇಂದ್ರ ಬಿಂದುವಾದ ಹೆಮ್ಮೆಯ ಕನ್ನಡತಿ ಕು ಸಾಧ್ವಿನಿ ಕೊಪ್ಪ ಅವರಿಗೆ ಗೌರವಪೂರ್ವಕವಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಮನೆಗೆ ಬಂದು ಹೆಣ್ಣುಮಕ್ಕಳಿಗೆ ಸಂಪ್ರದಾಯದಂತೆ ಬಾಗಿನ ಕೊಟ್ಟು ಖುಷಿಯಿಂದ ಕಳುಹಿಸಿಕೊಡುವ ಹಾಗೆ ನಮ್ಮ ಓಂಕಾರ ಸಮಿತಿಯ ಮಹಿಳೆಯರು ಕು ಸಾಧ್ವಿನಿ ಕೊಪ್ಪ ಅವರಿಗೆ ಬಾಗಿನ ನೀಡಿ ಭಾವನಾತ್ಮಕವಾದ ಶುಭ ಹಾರೈಸಿದರು.
ಕಾರ್ಯಕ್ರಮ ಮುಂದುವರಿದು "ರಘುಕುಲ ನಂದನ ರಾಜಾರಾಮ ಕರುಣಾಸಾಗರ ಶ್ರೀ ಸೀತಾರಾಮ" ಎಂದು ಇಡೀ ರಾಮಾಯಣವನ್ನು ನಮಗೆ ತಿಳಿಸಿಕೊಟ್ಟರು. ಅದರ ಜೊತೆಗೆ ನಮ್ಮನ್ನು ಭಕ್ತಿಯಲ್ಲಿ ತಲ್ಲೀನರಾಗಿಸಿದರು. ವಿಠ್ಠಲನ ಭಜನೆಯಂತೂ ಪಂಡರಪುರಕ್ಕೆ ಹೋಗಿ ಬಂದಂತಿತ್ತು. "ವಿಠ್ಠಲ ವಿಠ್ಠಲ" ಎಂದು ಕಣ್ಣು ಭಜನೆ ಮಾಡುತ್ತಿದ್ದರೆ ಸ್ವತಃ ಪಾಂಡುರಂಗನೇ ಕಣ್ಣು ಮುಂದೆ ಬಂದಂತಹ ಅನುಭವ ಆಗಿತ್ತು. ಭಜನೆ ಮಾಡುತ್ತಾ ಓಂಕಾರ ಸಮಿತಿಯ ಸದಸ್ಯರುಗಳು ನೃತ್ಯವಂತೂ ಸಭಿಕರೆಲ್ಲರಲ್ಲಿ ಒಂದು ಅದ್ಭುತವಾದ ಖುಷಿ ತಂದುಕೊಟ್ಟಿತು. "ಜಗದೋದ್ಧಾರನ ಆಡಿಸಿದಳು ಯಶೋಧೆ" ಹಾಗೂ "ಕಾನಡಾ ರಾಜಾ ಪಂಡರೀಚಾ" ಎಂಬ ಮರಾಠಿ ಹಾಡುಗಳು ಸಭಿಕರ ಮನಸ್ಸಿಗೆ ಆನಂದ ತಂದುಕೊಟ್ಟವು. ಭಕ್ತಿಗೀತೆ ಜೊತೆಗೆ ಮೂಡಲಮನೆ ಧಾರವಾಹಿಯ ಖ್ಯಾತ ಶೀರ್ಷಿಕೆಯ ಹಾಡು "ನಂಬಿ ಕೊಂಬೆಯ ಮೇಲೆ ಗೂಡು ಕಟ್ಟುತವ ರೆಕ್ಕೆ ಬಲಿತ ಹಕ್ಕಿ" ಎಂದು ಅದೇ ಭಾಷೆಯ ಸೊಗಡಿನಲ್ಲಿ ಹಾಡಿದ್ದು ಇನ್ನೊಂದು ವಿಶೇಷತೆಯಾಗಿತ್ತು. ಅದರ ಜೊತೆಗೆ "ಉಧೋ ಉಧೋ ಎಲ್ಲಮ್ಮ" ಎಂಬ ರೇಣುಕೆ ಎಲ್ಲಮ್ಮನ ಹಾಡು ಪ್ರೇಕ್ಷಕರ ವಿಶೇಷ ಮನಸೆಳೆದಿತ್ತು. ಇನ್ನೂ ಭಕ್ತಿಯಲ್ಲಿ ಮಗ್ನರಾಗಿದ್ದ ಸಂಗೀತ ಪ್ರಿಯರಿಗೆ ಕಾರ್ಯಕ್ರಮ ಹೇಗೆ ಮುಕ್ತಾಯದ ಹಂತಕ್ಕೆ ಬಂತು ಅಂತ ಗೊತ್ತಾಗಲಿಲ್ಲ. ಕಡೆಯದಾಗಿ ಸಭಿಕರ ಕೋರಿಕೆಯ ಮೇರೆಗೆ "ಭಾಗ್ಯದ ಲಕ್ಷ್ಮಿ ಬಾರಮ್ಮ" ಮತ್ತು "ಪವಮಾನ ಜಗದ ಪ್ರಾಣ" ಹಾಡುಗಳ ಮೂಲಕ ಮಂಗಳ ಹಾಡಿದರು. ಹೀಗೆ ಸತತವಾಗಿ ಮೂರು ಗಂಟೆಗಳ ಕಾಲ ಶ್ರದ್ಧಾ ಭಕ್ತಿಯಿಂದ ಸುಶ್ರಾವ್ಯವಾಗಿ, ಸುಮಧುರವಾಗಿ ಹಾಡಿದ ಕುಮಾರಿ ಸಾಧ್ವಿನಿ ಕೊಪ್ಪ ಅವರು ಪ್ರತಿಯೊಬ್ಬ ಪ್ರೇಕ್ಷಕನನ್ನು ಭಗವಂತನ ಕೃಪಾಕಟಾಕ್ಷಕ್ಕೆ ಪಾತ್ರರನ್ನಾಗಿಸಿದಂತೂ ಸತ್ಯ.
ಶ್ರೀಯುತ ಅರುಣ ಹೊಳ್ಳರವರು ವೇದಿಕೆಗೆ ಆಗಮಿಸಿ, ತಮ್ಮ ಕಂಠಸಿರಿಯಿಂದ ಸಭಿಕರನ್ನು ಭಕ್ತಿ ಲೋಕಕ್ಕೆ ಕರೆದೊಯ್ದ ಕು. ಸಾಧ್ವಿನಿ ಕೊಪ್ಪ ಮತ್ತು ತಂಡದವರಿಗೆ, ಮಂದಿರದ ಆಡಳಿತ ಮಂಡಳಿಗೆ, ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ, ಸಭಿಕರಿಗೆ ಮತ್ತು ಓಂಕಾರ ಸಮಿತಿಯ ತಂಡದ ಎಲ್ಲಾ ಸದಸ್ಯರಿಗೆ ವಂದನೆಯನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಮುಕ್ತಾಯ ಹೇಳಿದರು. ಉಪಸ್ಥಿತರಿದ್ದ ಎಲ್ಲ ಪ್ರೇಕ್ಷಕರಿಗೆ ಹಣ್ಣು ಹಾಗೂ ಲಘು ಉಪಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.

ಲೇಖನ : ಶ್ರೀಮತಿ ಮುಕ್ತಾ ಪ್ರವೀಣ್

ಓಂಕಾರ ಜ್ಞಾನಾಮೃತ -೨೦೨೪

ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ ।
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ।।

ಓಂಕಾರ ಸಮಿತಿ (ಓಮಾನ್ ಕರ್ನಾಟಕ ಆರಾಧನಾ ಸಮಿತಿ) ಕಳೆದ 12 ವರ್ಷಗಳಿಂದ ಮಸ್ಕತ್ನಲ್ಲಿ ನೆಲಸಿರುವ ಕನ್ನಡಿಗರಿಗೆಂದೇ ಭಕ್ತಿ, ಜ್ಞಾನ ಹಾಗೂ ಸಂಗೀತವೆನ್ನುವ ತತ್ವಗಳೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಈ ವರ್ಷ 'ಓಂಕಾರ ಜ್ಞಾನಾಮೃತ-2024‘ ದ ಕಾರ್ಯಕ್ರಮವು ಸನಾತನ ಸಂಸ್ಕೃತಿ - ಧರ್ಮವೋ ಅಥವಾ ವಿಜ್ಞಾನವೋ..?! ಎಂಬ ವಿಷಯದಲ್ಲಿ ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರ (ರಾಮಕ್ರೃಷ್ಣ – ವಿವೇಕಾನಂದ ಆಶ್ರಮ, ತುಮಕೂರು) ಉಪನ್ಯಾಸದೊಂದಿಗೆ ಹಾಗೂ ಶ್ರೀ ಪರಮಾನಂದಜೀ ಓಂ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಾರ್ಚ್ 15 ರಂದು ಮಸ್ಕತ್ತಿನ ಶ್ರೀಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಅದ್ಭುತವಾಗಿ ಮೂಡಿಬಂತು.

ಮೊದಲನೆಯದಾಗಿ ಶ್ರೀಯುತ ರವಿಕುಮಾರ್ ರವರು ತಮ್ಮ ಸ್ವಾಗತ ಭಾಷಣದ ಮೂಲಕ, ಅಲ್ಲಿ ಆಗಮಿಸಿರುವ ಎಲ್ಲಾ ಆಹ್ವಾನಿತ ಗಣ್ಯ ಅಥಿತಿಗಳಿಗೆ ಹೂಗುಚ್ಚವನ್ನು ನೀಡಿ ಸ್ವಾಗತಿಸಲಾಯಿತು. ಅದೇ ಸಂದರ್ಭದಲ್ಲಿ ‘ಓಂಕಾರ’ ಸಮಿತಿಯು ನಡೆಸುವ ಎಲ್ಲಾ ಕಾರ್ಯಕ್ರಮಗಳ ಕಿರು ಪರಿಚಯವನ್ನು ಸಹ ಮಾಡಿಸಿಕೊಟ್ಟರು.
ನಂತರ ಶ್ರೀಯುತ ಅರುಣಕುಮಾರರವರು ಗಣಪತಿ ಹಾಗೂ ಓಂಕಾರ ಆಂಜನೇಯನಿಗೆ ಆರತಿಮಾಡುವ ಮೂಲಕ ಹಾಗೂ ಓಂಕಾರ ಮಹಿಳಾ ವೃಂದದವರಿಂದ ಶ್ಲೋಕಗಳೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಶ್ರೀಮತಿ ಉಷಾಹರ್ಷ ಅವರು ಮುಖ್ಯ ಅಥಿತಿಗಳ ಪರಿಚಯದೊಂದಿಗೆ ಕಾರ್ಯಕ್ರಮದ ನಿರೂಪಣೆ ವಹಿಸಿಕೊಂಡಿದ್ದರು.

ತದನಂತರ ಶ್ರೀಪರಮಾನಂದಜೀ ಓ೦ ಸ್ವಾಮೀಜಿಯವರನ್ನು ಶ್ರೀ ಜಿ.ವಿ.ರಾಮಕ್ರೃಷ್ಣ ಹಾಗು ಶ್ರೀ ರಾಜೇಂದ್ರ ಕಾಮತರವರು ಮತ್ತು ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿಯವರನ್ನು ಶ್ರೀ ಹಿರಿಯಣ್ಣ ಹಾಗೂ ಶ್ರೀ ಶಶಿಧರ್ ಶೆಟ್ಟಿಯವರು ವೇದಿಕೆಗೆ ಕರೆತಂದರು.
ಸರಿಯಾದ ಸಮಯಕ್ಕೆ ಶ್ರೀ ಶ್ರೀ ವೀರೇಶಾನಂದ ಸರಸ್ವತಿಯವರ ಉಪನ್ಯಾಸವನ್ನು ಸಭಿಕರು ಒಳಗೊಂಡಂತೆ ಶ್ರೀಗಳು ತಮ್ಮ ಭಜನೆಯ ಮೂಲಕ ಅರಂಭಿಸಿದರು. ಸನಾತನ ಸಂಸ್ಕೃತಿ ಎಂಬ ಗಹನವಾದ, ಗಂಭೀರವಾದ ವಿಷಯದ ಬಗ್ಗೆ ತಮ್ಮ ಉಪನ್ಯಾಸದಲ್ಲಿ ಸನಾತನದ ಮೂಲದಿಂದ ಈಗಿನ ಮನುಷ್ಯನವರೆಗೆ ಯಾವ ಯಾವ ರೀತಿಯಲ್ಲಿ ಮನುಷ್ಯನ ವಿಕಾಸವಾಗಿದೆ, ಮನುಷ್ಯ ತಾನು ಈಗಿರುವ ಸಾಮಾನ್ಯ ಸ್ಥಿತಿಯಿಂದ ಅದ್ಭುತ ವ್ಯಕ್ತಿಯಾಗುವುದಕ್ಕೆ ಯಾವವೂಂದು ವಿಕಾಸದ ಬೇರೆ ಬೇರೆ ಹಂತಗಳು ಬೇಕಿದೆ, ಅದನ್ನು ಸಾಧಿಸುವುದಕ್ಕೆ ಏನು ಮಾಡಬೇಕು ಈ ವಿವರಣೆಯೇ ಸನಾತನ ಸಂಸ್ಕೃತಿ ಎಂದು ತಿಳಿಸಿಕೊಟ್ಟರು. ವ್ಯಕ್ತಿಯಿಂದ ಮತ, ತತ್ವದಿಂದ ಧರ್ಮ, ಭಾರತೀಯರು ಧಾರ್ಮಿಕರು, ಧರ್ಮ ಅಂದರೆ “Being and Becoming” ಅನ್ನುವ ಮೂಲಕ ಯಾವುದೇ ಧರ್ಮದ ಮೂಲ ಉಪನಿಷತ್ತುಗಳು, ಪ್ರಸ್ತಾನತ್ರಯಗಳಾದ ವೇದೋಪನಿಷತ್ತು, ಭಗವದ್ಗೀತೆ ಹಾಗೂ ಬ್ರಹ್ಮ ಸೂತ್ರಗಳು ನಮಗೆ ಹೇಗೆ ಧರ್ಮದ ಆಧಾರಗಳು ಎಂಬುದನ್ನು ತಮ್ಮ ಮಾತುಗಳಲ್ಲಿ ಸರಳವಾಗಿ ಸಭಿಕರಿಗೆ ಅರ್ಥವಾಗುವಂತೆ ಹೇಳಿಕೊಟ್ಟರು.

ಸರ್ವೇ ಜನಾಃ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು” ಎಂಬ ತತ್ವದ ಆಧಾರ ಸನಾತನ ಸಂಸ್ಕೃತಿ, ಈ ಸನಾತನ ಸಂಸ್ಕೃತಿಯು ಯಾವುದೇ ಒಂದು ಮತ ಮತ್ತು ಧರ್ಮಕ್ಕೆ ಸೀಮಿತವಲ್ಲ ಎಂದರು. ತಾವು ತಮ್ಮ ಶಾಲಾ ದಿನಗಳಲ್ಲಿ ಕಲಿತ “ ಸೋಮೇಗೌಡರ ನಾಯಿ” ಎಂಬ ಕಥೆಯ ಮೂಲಕ ಸನಾತನ ಸಂಸ್ಕೃತಿಯನ್ನು ಗುರುತಿಸುವ ಬಗೆ ಮತ್ತು ಧರ್ಮ ಹಾಗೂ ಮತದ ವ್ಯತ್ಯಾಸಗಳು, ಮೊದಲು ನಾವು ಧಾರ್ಮಿಕರು, ನಿನ್ನ ಉದ್ಧಾರ ನನ್ನಲ್ಲಿ, ಪ್ರಯತ್ನವೇ ಪರಮಪೂಜೆ  ಪರಮೇಶ್ವರ ಪ್ರಾಪ್ತಿ ಎಂದು ಮೂರ್ತಿಪೂಜೆಯಲ್ಲಿನ  ಮಹತ್ವವನ್ನು ವಿವರಿಸುತ್ತಾ  “ಎಲ್ಲಿ ಧರ್ಮವೋ  ಅಲ್ಲಿ ಜಯ”ಎಂದು ಹೇಳಿಕೊಟ್ಟರು.


ತಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಂದೆ ವಿಜ್ಞಾನದ ಬುನಾದಿ  ಧರ್ಮ ಹಾಗೂ Material Science, Big Bang Theory, Modern Physics ಮುಂತಾದ ವೈಜ್ಞಾನಿಕ ವಿಷಯಗಳಿಗೆ ಹೇಗೆ ಸನಾತನವೇ ಮೂಲ, ಸನಾತನಕ್ಕೂ ಹಾಗು ವಿಜ್ಞಾನಕ್ಕೂ ಇರುವ ಸಂಬಂಧವನ್ನು, ‘ಸನಾತನ supports change’  ಎಂಬುದನ್ನು ತಮ್ಮ ವಾಗ್ಚರಿಯಲ್ಲಿ ಬಹಳ ಅದ್ಭುತವಾಗಿ ಸಭಿಕರಿಗೆಲ್ಲ ಅರ್ಥೈಸಿದರು. ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ತಮ್ಮದೇ ಶೈಲಿಯಲ್ಲಿ, ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಜ್ಞಾನದ ಹೊಳೆಯನ್ನೇ  ಹರಿಸಿದರೆಂದರೆ ತಪ್ಪಾಗಲಾರದು. ಉಪನ್ಯಾಸದ  ಕೊನೆಯಲ್ಲಿ ಶ್ರೀಗಳು ತಮ್ಮ ಪೂರ್ವ ಜ್ಞಾನ ಭಂಡಾರದಿಂದ, ಸನಾತನ ಸಂಸ್ಕೃತಿ ಎಂಬ ಆಳವಾದ ವಿಷಯದ ಕುರಿತ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸಭಿಕರ ಅನುಮಾನವನ್ನು ಬಹಳ ಅಚ್ಚುಕಟ್ಟಾಗಿ ಪರಿಹರಿಸಿದರು. ಶ್ರೀ ಶ್ರೀ ವೀರೇಶಾನಂದ ಸರಸ್ವತಿಯವರ  ಉಪನ್ಯಾಸ ಮುಗಿಯುತ್ತಿದಂತೆ ,ಸಭಿಕರೆಲ್ಲರೂ ಎದ್ದು ನಿಂತು ಕರತಾಡನದ  ಮೂಲಕ ಶ್ರೀಗಳಿಗೆ ಗೌರವ ಸೂಚಿಸಿದರು. ನಂತರ ಶ್ರೀದ್ವಯರಿಗೆ ಭಕ್ತಿಪೂರ್ವಕ  ಗೌರವ ಸಮರ್ಪಣೆ ಮಾಡಲಾಯಿತು.

ಭಾರತೀಯ ಸಾಮಾಜಿಕ ವೇದಿಕೆ- ಕರ್ನಾಟಕ ವಿಭಾಗ, ಮಸ್ಕತ್  (ಕರ್ನಾಟಕ ಸಂಘ, ಮಸ್ಕತ್) ಆಡಳಿತ ಮಂಡಳಿಯಿಂದ ಶ್ರೀ ಪರಮಾನಂದಜೀ ಓಂ ಸ್ವಾಮೀಜಿ ಹಾಗೂ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಯವರಿಗೆ  ಸನ್ಮಾನಿಸಲಾಯಿತು. 
ಓಂಕಾರ  ಸಮಿತಿಯ ಪರವಾಗಿ ಶ್ರೀ ಪರಮಾನಂದಜೀ ಓಂ ಸ್ವಾಮೀಜಿಯವರಿಗೆ ಶ್ರೀ ಡಾ. ಅಂಚನ್, ಶ್ರೀ ಡಾ. ರಾಜೇಂದ್ರ ಕಾಮತ, ಶ್ರೀ ಗಣೇಶ ಶೆಟ್ಟಿ ಅವರಿಂದ ಶಾಲು, ಹೂಮಾಲೆ ಹಾಗೂ ಹಣ್ಣಿನ ಬುಟ್ಟಿಯನ್ನು ನೀಡಿ ಗೌರವಿಸಿದರೇ ಇನ್ನೂ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಗೆ ಶ್ರೀ ಹಿರಿಯಣ್ಣ, ಶ್ರೀ ಜಿ.ವಿ.ರಾಮಕೃಷ್ಣ ಹಾಗೂ ಶ್ರೀ ಶಶಿಧರ್ ಶೆಟ್ಟಿ ಅವರು ಶ್ರೀಗಳಿಗೆ ಶಾಲು ಹೊದಿಸಿ,  ಹೂಮಾಲೆ ಹಾಕಿ, ಹಣ್ಣಿನ ಬುಟ್ಟಿಯನ್ನು ಕೊಟ್ಟು ಗೌರವಿಸಿದರು.
ನಂತರ ಮಾನವೀಯತೆಯ ಸೇವಾಮೂರ್ತಿ ಶ್ರೀ ಪರಮಾನಂದಜೀ ಓಂ ಸ್ವಾಮೀಜಿಯವರಿಗೆ ಮಾನವೀಯ ಮೌಲ್ಯಗಳುಳ್ಳ ಕಾರ್ಯಕ್ರಮ, ತಮ್ಮ ಸೇವಾ ಜೀವನ, ನೈಸರ್ಗಿಕ ಸಂಪತ್ತಿನ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ, ಅವರ ಅಪಾರವಾದ ಸೇವೆಯನ್ನು ಪರಿಗಣಿಸಿ, ಹಾಗೆಯೇ ಸಾಕ್ಷಾತ್ ಶಾರದಾ ಪುತ್ರ- ವೇದಾಂತ ವೀರ ಪರಮಪೂಜ್ಯ ಶ್ರೀ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಗೂ, ವಿಧ್ಯಾರ್ಥಿಗಳಿಗಾಗಿ, ಶಿಕ್ಷಕರಿಗಾಗಿ, ದೀನರಿಗಾಗಿ ತಮ್ಮ ಕಾರ್ಯಾಗಾರಗಳ ಮೂಲಕ, ಪ್ರಾಚೀನ ಭಾರತೀಯ ಕೃತಿಗಳ ಪ್ರಚಾರ, ಸಂಗೀತ, ದೃಶ್ಯ, ಶ್ರವಣ, ಲೇಖಕಿ ಎಲ್ಲ ಮಾಧ್ಯಮದ ಮೂಲಕ ಹತ್ತು ಹಲವು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾಡಿರುವ ಸಾಧನೆಗೆ ಹಾಗೂ ಸಲ್ಲಿಸಿರುವ ಅನುಪಮ ಸೇವೆಗೆ ಓಂಕಾರ ಸಮಿತಿಯು ಶ್ರೀ ದ್ವಯರಿಗೆ “ಓಂಕಾರ ಶ್ರೀ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.