ಓಂಕಾರ ಆಂಜನೇಯ ಪೂಜೆ-೨೦೨೩

 ಮಸ್ಕತ್ ನಲ್ಲಿ ವಿಜ್ರಂಭಣೆಯಿಂದ ಜರುಗಿದ ಶ್ರೀ ಆಂಜನೇಯ ಸ್ವಾಮಿ ಪೂಜೆ

ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ||

ಓಂಕಾರ ಆಂಜನೇಯ ಪೂಜಾ ಮಹೋತ್ಸವ- 2023,  ಡಿಸೆಂಬರ್ 29 ರಂದು ಅದ್ದೂರಿಯಾಗಿ ಎಲ್ಲ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಮಸ್ಕತ್ತಿನ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನೆರದ ಭಕ್ತ ಸಮೂಹದ ನಡುವೆ ನಡೆಯಿತು. 


ಅನೇಕ ದಿನಗಳಿಂದ ಈ ದಿನಕ್ಕೆ ತಯಾರಿ ನಡೆಸಿದ್ದ ಓಂಕಾರ ಸ್ವಯಂ ಸೇವಕರ ತಂಡದ ನಿಜವಾದ ಸಾಮರ್ಥ್ಯ ತಿಳಿಯುವುದು ಪೂಜೆಯ ಹಿಂದಿನ ದಿನ ರಾತ್ರಿ. ಸಂಜೆಯೇ ದೇವಸ್ಥಾನದ ಸಭಾಂಗಣಕ್ಕೆ ಎಲ್ಲ ಸ್ವಯಂಸೇವಕರೂ ಕುಟುಂಬ ಸಮೇತರಾಗಿ ಆಗಮಿಸಿ ಪೂಜೆಗೆ ವೇದಿಕೆಯನ್ನು ಸಜ್ಜುಗೊಳಿಸುವ ಕೆಲಸವನ್ನು ಮಾಡುವುದು ವಾಡಿಕೆ.  



ಅಂದು ಸಂಜೆ ಎಲ್ಲರೂ ಒಟ್ಟಾಗಿ ಬಂದು ಕೆಲಸಗಳನ್ನು ಹಂಚಿಕೊಳ್ಳುತ್ತಾರೆ. ಅರ್ಚಕರಾದ, ವಿದ್ವಾನ್ ಶ್ರೀ ಬಿ. ವಿ. ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯರು ಮತ್ತು ಅವರ ಪುತ್ರ ವಾಸುದೇವ ಭಟ್   ಅವರು ಪೂಜೆ ಮಾಡಿ ಅಡಿಗೆಯ ಕೆಲಸಗಳಿಗೆ ಚಾಲನೆಯನ್ನು ನೀಡಿದ ನಂತರ ಮಹಿಳೆಯರು ತರಕಾರಿ ಹೆಚ್ಚುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮತ್ತು ಸಮರ್ಥವಾಗಿ ನಿರ್ವಹಿಸಿದರು.  ಭಾರತದಿಂದ ಬಂದಿದ್ದ ಪಾಕತಜ್ಞ ಗಣೇಶ್ ಐತಾಳ್  ಅವರ  ನೇತೃತ್ವದಲ್ಲಿ ಮಸ್ಕತ್ತಿನ ಅಡುಗೆ ತಂಡ ಮರುದಿನದ ಅಡುಗೆಗೆ ಭರದ ಸಿದ್ಧತೆಯನ್ನ ಮಾಡಿಕೊಂಡರು. ಬಂದಿದ್ದ ಮಕ್ಕಳು, ಮಹಿಳೆಯರು ಪುರುಷರ ಉತ್ಸಾಹ ಅಲ್ಲಿ ಒಂದು ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು.

ಪೂಜೆಯ ದಿನ ಬೆಳಿಗ್ಗೆ ಭಾರತದಿಂದ ಇದಕ್ಕಾಗಿಯೇ ಆಗಮಿಸಿದ ಗಾಳಿ ಆಂಜನೇಯ ದೇವಸ್ಥಾನ, ಬೆಂಗಳೂರು- ಇದರ ಮುಖ್ಯ ಅರ್ಚಕರಾದ, ವಿದ್ವಾನ್ ಶ್ರೀ. ಬಿ. ವಿ. ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯರು ಮತ್ತು ಅವರ ಪುತ್ರ ವಾಸುದೇವ ಭಟ್  ನೇತೃತ್ವದಲ್ಲಿ ದೇವಸ್ಥಾನದ ವಿಘ್ನವಿನಾಯಕ, ಕೃಷ್ಣ, ದೇವಿ- ಎಲ್ಲರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಸಂಕಲ್ಪ ಪೂಜೆಯ ಮೂಲಕ ವಿಧಿವಿಧಾನಗಳು ಆರಂಭಗೊಂಡವು. 

ಈ ಬಾರಿ ಪೂಜಾ ವಿಧಿಯ ದಂಪತಿಗಳಾಗಿ ಶ್ರೀ ಸುರೇಶ್ ಮತ್ತು ಲಕ್ಷ್ಮಿ  ದಂಪತಿಗಳು ಪೂಜಾ ಕೈಂಕರ್ಯ  ನೆರವೇರಿಸಿದರು. ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಮುಂದುವರೆದರೆ, ಒಟ್ಟಿಗೆ ನಡೆಯುತ್ತಿದ್ದ, ಹರಿವಾಯುಸ್ತುತಿ, ವಿಷ್ಣು ಸಹಸ್ರನಾಮ, ರಾಮ ರಕ್ಷಾ ಸ್ತೋತ್ರ, ಹನುಮಾನ್ ಚಾಲೀಸಾ ಪಾರಾಯಣಗಳು ಸಭಿಕರಲ್ಲಿ ಭಕ್ತಿಭಾವವನ್ನು ಸಂಚಲಿಸಿತು. 











ಓಂಕಾರ ಮಹಿಳಾ ಭಜನಾ ಮಂಡಳಿಯ- ಸಿಂಧೂರ ವದನ, ಭಾಗ್ಯವ ಕೊಡು ತಾಯೇ, ರಾಮ ರಾಮ ಎನ್ನಿರೇ, ರಾಮನೆಂಬೋ, ಎಂತ ಬಲವಂತನೆ, ಸಾರಿ ಬಂದನೆ,  ರಾಮ ಸ್ಮರಣೆ ಮುಂತಾದ ಹಾಡುಗಳ ಮೂಲಕ ಪ್ರಸ್ತುತಪಡಿಸಿದ ಇವರ ಗಾಯನವು ಪೂಜೆಯಲ್ಲಿ ಭಾಗಿಯಾದವರ ಮನಸ್ಸನ್ನು ಸೂರೆಗೊಂಡಿತು. ನಂತರ ಅರ್ಚನೆ ಪೂಜಾ ವಿಧಿಗಳನ್ನು ಪೂರೈಸಿದ ಅರ್ಚಕರು ಆಶೀರ್ವಚನವನ್ನು ನೀಡಿದ ಬಳಿಕ ಪಂಚವಾದ್ಯ ದೊಂದಿಗೆ ಮಹಾಮಂಗಳಾರತಿಯನ್ನು ಮಾಡಿದರು. ಮಹೋತ್ಸವಕ್ಕೆ  ಒಂದು ಸಂಚಲನವನ್ನೇ ಮೂಡಿಸಿದ ಪಂಚವಾದ್ಯಗಳ ನಾದ ನೆರೆದ ಭಕ್ತರನ್ನು ಭಕ್ತಿಭಾವದ ಪರಾಕಾಷ್ಠೆಗೆ ಒಯ್ದಿತು. 






ಪೂಜೆಯ ನಂತರ ಪ್ರಸಾದದ ವಿತರಣೆಗೆ ಸಜ್ಜಾಗಿದ್ದ ಸ್ವಯಂಸೇವಕರ ಓಂಕಾರ ತಂಡವು ನೆರೆದ ಸಮಸ್ತ ಭಕ್ತಸಮೂಹಕ್ಕೆ ಮಹಾಪ್ರಸಾದದ ವಿತರಣೆ ಮಾಡಿತು. 







ಸಂಪೂರ್ಣವಾದ ಸೇವೆಯನ್ನು ನೀಡಿದ ಓಂಕಾರ ಸಮಿತಿಯು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರಿಗೆಲ್ಲ ಕೃತಜ್ಞತೆಯನ್ನು ಸಲ್ಲಿಸಿತು. ಹೀಗೆಯೇ ನಿರಂತರ ಸೇವೆಯನ್ನು ನೀಡುವ ಅವಕಾಶವನ್ನು ಕಲ್ಪಿಸೆಂದು ಶ್ರೀ ಮುಖ್ಯಪ್ರಾಣನನ್ನು ಪ್ರಾರ್ಥಿಸುತ್ತ ಮಸ್ಕತ್ತಿನ ಹನ್ನೆರಡನೇಯ ವರ್ಷದ ಓಂಕಾರ ಪೂಜಾ ಮಹೋತ್ಸವವು ಸಂಪೂರ್ಣಗೊಂಡಿತು.





ವರದಿ: ಶ್ರೀಮತಿ ಸುಧಾ ಶಶಿಕಾಂತ್ 

ಓಂಕಾರ ನಾದಾಮೃತ -೨೦೨೩

ಓಂಕಾರ ನಾದಾಮೃತ ೨೦೨೩


ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ||

ದಿನಾಂಕ ೨೮.೧೦.೨೦೨೩ ಶನಿವಾರ ಶುಭಸಾಯಂಕಾಲ ೬ ಘಂಟೆಗೆ ಸರಿಯಾಗಿ ಮಸ್ಕತ್ ನ ಶ್ರೀಕೃಷ್ಣಮಂದಿರದ ಸಭಾಂಗಣ ಸುಂದರವಾಗಿ ಅಲಂಕೃತವಾಗಿತ್ತು. ಓಮಾನ್ ಕರ್ನಾಟಕ ಆರಾಧನಾ  (ಓಂಕಾರ)  ಸಮಿತಿಯ ಓಂಕಾರ ನಾದಾಮೃತ-೨೦೨೩ ರ ಭಕ್ತಿಸಂಗೀತದ ಕಾರ್ಯಕ್ರಮವನ್ನು ಸಾಕಾರಗೊಳಿಸಲು ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಿಂದ ಆಗಮಿಸಿದ್ದ ಸಾಧಕರತ್ನ ಶ್ರೀ ಶ್ರೀಹರ್ಷ ಮತ್ತು ತಂಡದವರಿಗಾಗಿ ಸುಸಜ್ಜಿತವಾದ ವೇದಿಕೆಯೂ ತಯಾರಾಗಿತ್ತು.ರಾಮನಾಮದ ಓಂಕಾರದ ಜೊತೆಗೆ ಹನುಮ ನಾಮದ ಝೇಂಕಾರಕ್ಕಾಗಿ ಮಸ್ಕತ್ ನ ಸಂಗೀತ ಪ್ರೇಮಿಗಳೆಲ್ಲರೂ ಉತ್ಸುಕರಾಗಿದ್ದರು.


ಓಂಕಾರ ಸಮಿತಿಯ ಶ್ರೀರವಿಕುಮಾರ್ ಅವರು ಆತ್ಮೀಯತೆಯಿಂದ ಸ್ವಾಗತಕೋರಿ   ಆಗಮಿಸಿದ್ದ ಮುಖ್ಯ ಅತಿಥಿಗಳಿಗೆ ಹೂಗುಚ್ಚ ನೀಡಿ  ಅಹ್ವಾನಿಸಿದರು ಹಾಗೂ ನೆರೆದಿದ್ದ ಸಭಿಕರಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರಿ, ಓಂಕಾರ ಸಮಿತಿಯ ೧೧ವರ್ಷಗಳ ಸತತ ಸಾಧನೆಯ ಕಿರುನೋಟವನ್ನು ನೆನಪಿಸಿದರು.



ನಂತರ ಶ್ರೀಮತಿ ಶ್ರೀಮಾತ ಹಿರಿಯಣ್ಣ ಅವರಿಂದ ಸಾರಸ್ವತಸರದಾರ ಶ್ರೀ ಶ್ರೀಹರ್ಷರವರ ಪರಿಚಯ ಹಾಗೆಯೇ ಸಂಗೀತದ ನಾಡಿಮಿಡಿತಗಳಾದ ಕೀಬೋರ್ಡ್ ವಾದಕ ಶ್ರೀ ಷಣ್ಮುಗ ಸಜ್ಜ, ರಿದಮ್ ಪ್ಯಾಡ್ ನ ಶ್ರೀ ವಿನಯ್ ರಂಗಧೂಲ್ ಹಾಗೂ ತಬಲಾವಾದ್ಯ ನಿಪುಣ ಶ್ರೀ ಆತ್ಮರಾಂ ಬಿ ರವರ ಕಿರುಪರಿಚಯ ಮಾಡಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು.


ಶ್ರೀ ಅರುಣ್ ಕುಮಾರ್ ಐಯ್ಯರ್ ಅವರು ಓಂಕಾರ ಸಮಿತಿಯ ಆರಾಧ್ಯ ದೈವ, ಚೈತನ್ಯ ಮೂರುತಿ ಆಂಜನೇಯಸ್ವಾಮಿಗೆ ಮಂಗಳಾರತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಶ್ರೀಹರ್ಷ ಅವರು ಆದಿವಂದ್ಯ ಗಣೇಶನ ಸ್ತುತಿ ಗಜವದನ ಹೇರಂಬ ಎಂದು ಪ್ರಾರಂಭಿಸಿ ವಾಗ್ದೇವಿಯನ್ನು ಪ್ರಾರ್ಥಿಸಿ ಮಾಣಿಕ್ಯವೀಣಾ ಮುಪಲಾಲಯಂತಾಂ ಶ್ಲೋಕವನ್ನು ಭಕ್ತಿ-ಭಾವ ಪರವಶರಾಗಿ ಹಾಡಿದರು. ನಂತರ ಗುರುವನ್ನು ವಂದಿಸುತ್ತಾ ಪಂಡಿತ್ ಪುಟ್ಟರಾಜ ಗವಾಯಿಗಳ ಗಾನವಿದ್ಯಾಬಹುತ್ ಕಠಿಣ್ ಹೇ, ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ, ಗುಡಗುಡಿಯ ಸೇದುವ ಮಹಾ ತತ್ವ ದ ಹಾಡು ಹೀಗೆ ಒಂದರ ನಂತರ ಇನ್ನೊಂದು ಹಾಡು ಪ್ರತಿಯೊಬ್ಬ ಪ್ರೇಕ್ಷಕನನ್ನು ಮಂತ್ರಮುಗ್ಧನನ್ನಾಗಸಿತ್ತು.


ಸುಸ್ವರ ಸಂಗೀತದೊಂದಿಗೆ, ಪ್ರತಿಯೊಂದು ಹಾಡಿಗೂ ವಿವರಗಳನ್ನು ಹಾಗೂ ಹಾಡಿನ ವಿಷೇಷಣ ವಿಶೇಷತೆಗಳನ್ನು ತಿಳಿಸಿಕೊಡುತ್ತಿದ್ದ ಶ್ರೀ ಶ್ರೀಹರ್ಷ ಮತ್ತು ಅವರ ತಂಡದವರಿಗೆ ಕಾರ್ಯಕ್ರಮದ ಮಧ್ಯದಲ್ಲಿ ಮಸ್ಕತ್ತಿನ ಭಾರತೀಯ ಸಾಮಾಜಿಕ ಒಕ್ಕೂಟ - ಕರ್ನಾಟಕ ವಿಭಾಗದವರು ಶ್ರೀಹರ್ಷ ಅವರನ್ನು ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು.


ತದನಂತರ ಮಸ್ಕತ್ ನ ಆಗಮಿಸಿದ ಗಣ್ಯರಿಂದ  ಎಲ್ಲ ಕಲಾವಿದರನ್ನು ಓಂಕಾರ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.





ನಂತರ ಓಂಕಾರ ಸಮಿತಿಯ ಎಲ್ಲ ಸದಸ್ಯರು ವೇದಿಕೆಗೆ ಆಗಮಿಸಿ ನಾದಾಮೃತ ೨೦೨೩ ರ ಕಾರ್ಯಕ್ರಮದ ಕೇಂದ್ರಬಿಂದುವಾದ ಹೆಮ್ಮೆಯ ಕನ್ನಡಿಗ ಶ್ರೀ ಹರ್ಷ ಅವರಿಗೆ “ಓಂಕಾರಶ್ರೀ “ ಎಂಬ ವಿಶೇಷ ಬಿರುದು ನೀಡಿ ಗೌರವ ಸಲ್ಲಿಸಿದರು.



ಕಾರ್ಯಕ್ರಮದ ಮುಂದುವರೆದ ಭಾಗದಲ್ಲಿ ನಿಂದಾಸ್ತುತಿ, ಈಶ ನಿನ್ನ ಚರಣ ಭಜನೆ, ದೇವಕಿಕಂದ ಮುಕುಂದ, ಕಂಡೆನಾ ನರಸಿಂಹನಾ ಎಂದು ಹಾಡುತ್ತಾ ಶ್ರೀಹರ್ಷ ಅವರು ಪ್ರತಿಯೊಬ್ಬ  ಪ್ರೇಕ್ಷಕನನ್ನು ಭಗವಂತನ ಧ್ಯಾನಾಸಕ್ತರನ್ನಾಗಿಸಿದ್ದು ಉತ್ಪ್ರೇಕ್ಷೆಯಂತು ಅಲ್ಲ.

ಇನ್ನಷ್ಟು ಬೇಕೇನ್ನ ಹೃದಯಕ್ಕೆ ರಾಮ, ರಾಮ ರಾಮ ರಾಮ ಎನ್ನಿರೋ, ಕೇವಲ “ಶ್ರೀ ರಾಮ ರಾಮ ರಾಮೇತಿ“ ಎಂಬ ವಿಷ್ಣುಸಹಸ್ರನಾಮದ ಒಂದು ಶ್ಲೋಕ  ಹೇಳುವುದರಿಂದ ಸಹಸ್ರನಾಮ ಪಾರಾಯಣ ಹೇಗೆ ಸಾಧ್ಯ ಎಂಬುದರ ವಿಶ್ಲೇಷಣೆ, ಪ್ರೇಕ್ಷಕರ ಅಪೇಕ್ಷೆಯ ಮೇರೆಗೆ ರೋರಿಂಗ್ ರಾಮ ಹಾಡಿದ ಮೇಲಂತೂ ಅಂದಿನ ಸಭಾಂಗಣವಂತೂ ಸಕಲಂ ರಾಮಮಯ ಈ ಜಗಮಖಿಲಂ ರಾಮಮಯ  ಅನಿಸಿ ಸಭಾಂಗಣದಲ್ಲಿ ಅಖಂಡ ರಾಮ ಭಜನೆ ನಡೆಯುತ್ತಿದಿಯೇನೋ ಎಂದು ಭಾಸವಾಗಿದ್ದಂತೂ ಸತ್ಯ. 

ಕಡೆಯದಾಗಿ ಕೃಷ್ಣಾ ಎನಬಾರದೇ, ಭಾಗ್ಯದ ಲಕ್ಷ್ಮೀ ಬಾರಮ್ಮ, ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ  ಎಂದು ಮಂಗಳ ಹಾಡಿದರು .

ಹೀಗೆ ಸತತ ಮೂರೂವರೆ ಘಂಟೆಗಳ ಶ್ರದ್ಧಾ ಭಕ್ತಿಯಿಂದ, ಸುಶ್ರಾವ್ಯವಾಗಿ, ಸುಮಧುರವಾಗಿ ಹಾಡಿದ ಶ್ರೀಹರ್ಷ ಅವರು ಪ್ರತಿಯೊಬ್ಬ ಪ್ರೇಕ್ಷಕನನ್ನು ಭಗವಂತನ ಕೃಪಾಕಟಾಕ್ಷಕ್ಕೆ. ಪಾತ್ರರನ್ನಾಗಿಸಿದ್ದಂತು ಸತ್ಯ.


ಶ್ರೀಯುತ ಕೆ.ಪಿ ಶಿವಾನಂದ್ ಅವರು ವೇದಿಕೆಗೆ ಆಗಮಿಸಿ, ತಮ್ಮ ಕಂಠಸಿರಿಯಿಂದ ಸಭಿಕರನ್ನು ಗಾಂಧರ್ವ ಲೋಕಕ್ಕೆ ಕರೆದೊಯ್ದ ಶ್ರೀ   ಶ್ರೀಹರ್ಷ ಮತ್ತು ವೃಂದದವರಿಗೆ, ಸಹಾಯ ಮಾಡಿದವರಿಗೆ, ಸಭಿಕರಿಗೆ ಮತ್ತು ಸ್ವಯಂಸೇವಕರಿಗೆ ವಂದನೆಗಳನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.





ಒಟ್ಟಿನಲ್ಲಿ ಓಂಕಾರ ಸಮಿತಿಯು ಆಯೋಜಿಸಿರುವ ಉತ್ತಮೋತ್ತಮ ಕಾರ್ಯಕ್ರಮಗಳಲ್ಲಿ ಶ್ರೀ ಶ್ರೀಹರ್ಷ ಮತ್ತು ತಂಡದವರಿಂದ ಸಾಕಾರಗೊಂಡ ಓಂಕಾರ ನಾದಾಮೃತ -೨೦೨೩ ನಿಸ್ಸಂದೇಹವಾಗಿ ಅತ್ತ್ಯುತ್ತಮ ಕಾರ್ಯಕ್ರಮ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿತ್ತು.

ವರದಿ: ಶ್ರೀಮತಿ ಶ್ರೀಮಾತ ಹಿರಿಯಣ್ಣ 

ಓಂಕಾರ ಜ್ಞಾನಾಮೃತ -೨೦೨೩

ಓಂಕಾರ ಜ್ಞಾನಾಮೃತ ೨೦೨೩ 

ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ||


ಓಂಕಾರ ಸಮಿತಿ ಮಸ್ಕತ್ ನಡೆಸುವ ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಂದಾದ ಓಂಕಾರ ಜ್ಞಾನಾಮೃತ ಕಾರ್ಯಕ್ರಮವು ಮೂರು ವರ್ಷಗಳ ನಂತರ ಇದೆ ಮಾರ್ಚ್ ತಿಂಗಳ ೧೭ನೆಯ ತಾರೀಖಿನಂದು ನಡೆಯಿತು. ಈ ವರ್ಷದ ಓಂಕಾರ ಜ್ಞಾನಾಮೃತ-೨೦೨೩ "ಭಗವದ್ಗೀತಾದರ್ಶನ" ವನ್ನು ಮೇರು ವಿದ್ವಾಂಸ ಶ್ರೀಯುತ ಡಾ ಪಾವಗಡ ಪ್ರಕಾಶ್ ರಾವ್ ಅವರು ಅದ್ಭುತವಾಗಿ ನಡೆಸಿಕೊಟ್ಟರು.

ಶ್ರೀ ರವಿ ಕುಮಾರ್ ಅವರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರೆ ಅರುಣ್ ಕುಮಾರ್ ಅವರು ಓಂಕಾರ ಸಮಿತಿಯ ಆರಾಧ್ಯ ದೈವ ಅಂಜನೆಯನಿಗೆ ಆರತಿ ಬೆಳಗಿ ಕಾರ್ಯಕ್ರಮಕ್ಕೆ ಶುಭ ಆರಂಭವನ್ನು ನೀಡಿದರು.


ಕಾರ್ಯಕ್ರಮಕ್ಕೆ ಸುಂದರ ಪೀಠಿಕೆಯನ್ನು ಜಯದೇವನ ಗೀತಗೋವಿಂದ ಆಧಾರಿತ ದಶಾವತಾರದ ನೃತ್ಯ ರೂಪಕದ ಮೂಲಕ ಜ್ಯೋತಿ ಹೆಗ್ಡೆ ಮತ್ತು ಸಹ ಕಲಾವಿದರಾದ ಅಪೂರ್ವ, ಆಕಾಂಕ್ಷ, ವಿಭಾ ಮತ್ತು ಸುಪ್ರಜಾ ನೀಡಿದರು.


ಗಣ್ಯರಾದ ಶ್ರೀ ಶಶಿಧರ್ ಶೆಟ್ಟಿ ಮತ್ತು ಶ್ರೀ ಜಿ ವಿ ರಾಮಕೃಷ್ಣ ಅವರು ಪಾವಗಡ ಪ್ರಕಾಶ್ ರಾವ್ ಅವರನ್ನು ಸುಂದರವಾಗಿ ಸಜ್ಜಾದ ವೇದಿಕೆಗೆ ಕರೆತಂದರು.


ತಮ್ಮದೇ ಶೈಲಿಯಿಂದ ಭಗವದ್ಗೀತಾ ದರ್ಶನವನ್ನು ಆರಂಭಿಸಿದ ಪ್ರಕಾಶ್ ರಾಯರು ಮಾನವನು ತನ್ನ ದೈಹಿಕ , ಮಾನಸಿಕ ಕ್ಲೇಶಗಳ ಈ ಜೀವನದಲ್ಲಿ ಸುಖವಾಗಿರುವುದು ಹೇಗೆಂಬ ಪ್ರಶ್ನೆಗೆ ನಿರಂತರವಾಗಿ ಉತ್ತರದ ಹುಡುಕಾಟದಲ್ಲಿದ್ದಾನೆ. ಈ ಹುಡುಕಾಟದಲ್ಲಿ ಸಾವಿರಾರು ವರ್ಷಗಳಿಂದ ಅನೇಕ ಪ್ರಯತ್ನಗಳು ನಡೆದವು ಅದರಲ್ಲಿ ಮೊದಲನೆಯದು ಸ್ವಾತ್ಮರಾಮನ ಹಠಯೋಗಪ್ರದೀಪಿಕ, ಎರಡನೆಯದು ಪತಂಜಲಿ ಮುನಿಯ ಯೋಗಸೂತ್ರ, ಮೂರನೆಯದು ವೇದಗಳು ಎಂದು ಹೇಳುತ್ತಾ ನಾಲ್ಕನೆಯ ಮತ್ತು ಅತಿ ಪ್ರಸಿದ್ಧವಾದ ಪ್ರಯತ್ನ ಶ್ರೀ ಕೃಷ್ಣನ ಭಗವದ್ಗೀತೆ ಎಂದರು. ಜೀವನಕ್ಕೆ ಶಾಂತಿಯನ್ನು ನೀಡಬಲ್ಲ ಎಲ್ಲ ವಿಚಾರಗಳು ಈ 700 ಶ್ಲೋಕಗಳ ಭಗವತಗೀತೆ ಯಲ್ಲಿದೆ; ಅಲ್ಲದೇ ಇಡೀ ಪ್ರಪಂಚದ ಎಲ್ಲ ಧರ್ಮಗಳ ಸಾರ ಭಗವದ್ಗೀತೆಯಲ್ಲಿದೆ ಎಂಬುದನ್ನು ನಾನು ಆಧಾರ ಸಹಿತ ಸಿದ್ಧಮಾಡಿ ತೋರಿಸಬಲ್ಲೆ ಎಂದು ತಿಳಿಸಿದರು.


ಮಧುಸೂಧನ ಭಾರತಿಯವರು ಬರೆದ ಭಗವದ್ಗೀತೆಯ ಪ್ರಾರ್ಥನಾ ಶ್ಲೋಕವನ್ನು ಸಂಪೂರ್ಣ  ಶುದ್ಧವಾಗಿ ಹೇಳಿ ಅವುಗಳ ಅರ್ಥವನ್ನು ಚಟುಕಾಗಿ ವಿವರಿಸಿದರು. ನಂತರ ಭಗವದ್ಗೀತೆಯ ಬಗೆಗೆ ಇರುವ ಆಕ್ಷೇಪಣೆಗಳನ್ನು ಸ್ಥೂಲವಾಗಿ ನಮೂದಿಸಿ ಅದರಲ್ಲಿ ಶ್ರೀಕೃಷ್ಣ ಯುದ್ದ ಮಾಡೆಂದು ಅರ್ಜುನನಿಗೆ ಅವನ ಕರ್ತವ್ಯವನ್ನು ಬೋದಿಸಿದರೂ ಅದರಲ್ಲಿ ಅವನ ಹಕ್ಕನ್ನು , ಅವನಿಗಾದ ಅನ್ಯಾಯದ ವಿರುದ್ಧ ಮಾತ್ರ ಹೋರಾಡುವುದು ಅವನ ಕರ್ತವ್ಯ ಎಂದು ಒತ್ತಿ ಹೇಳುವ ಮೂಲಕ ಅನಗತ್ಯ ಹಿಂಸೆಯನ್ನು ಕೃಷ್ಣ ವಿರೋಡಿಸುತ್ತಾನೆ. ಅಲ್ಲದೇ  ಕ್ಷಮೆಯೆಂದು ನಮಗಾದ ಅನ್ಯಾಯವನ್ನು ಸಹಿಸಿದರೆ ತಪ್ಪುಗಳನ್ನು ಪ್ರೋತ್ಸಾಹಿಸುವ ಪರಿಪಾಠವನ್ನು ಮುಂದಿನ ತಲೆಮಾರಿಗೆ ಭೋದಿಸಿದಂತಾಗುತ್ತದೆಂದು ಶ್ರೀಕೃಷ್ಣ ಎಚ್ಚರಿಕೆ ನೀಡುತ್ತಾನೆ. ಆದ್ದರಿಂದ ಭಗವದ್ಗೀತೆ ಯೋಗಶಾಸ್ತ್ರ ಎಂದು ವಿವರಿಸುತ್ತಾ ಅದು ಏಕೆ ಯುದ್ಧ ಶಾಸ್ತ್ರವಲ್ಲ ಎಂದು ತಿಳಿಸಿದರು.


ನಂತರ ಭಗವದ್ಗೀತೆಯ ಪ್ರಮುಖ ಸೂತ್ರಗಳನ್ನು  ಒಂದೊಂದಾಗಿ ವಿವರಿಸುತ್ತ ಭಗವದ್ಗೀತೆ ಕೊಡುವ ಒಂದು ಸುಂದರ ಅಭಯ ಅಥವಾ ರಕ್ಷಣೆಯೆಂದರೆ ಆತ್ಮಕ್ಕೆ ಸಾವು ಇಲ್ಲ ಎನ್ನುವುದು. ಆತ್ಮ ನಿರಂತರ. ದೇಹ ಜೀರ್ಣವಾದಾಗ ಈ ದೇಹವನ್ನು ಬಿಟ್ಟು ಇನ್ನೊಂದು ದೇಹಕ್ಕೆ ಆತ್ಮ ಹೋಗುವ ಕ್ರಿಯೆಯೇ ಸಾವು ಎಂದು ತಿಳಿಸಿದರು. ನಮಗೆ ಮುಂದಿನ ಜನ್ಮದಲ್ಲಿ  ಒಳ್ಳೆಯ ದೇಹ ಸಿಗಬೇಕಾದರೆ ಈ ದೇಹವನ್ನು ನಾವು ಸದ್ವಿನಿಯೋಗ ಮಾಡಬೇಕು ಎಂದು ಮತ್ತೆ ಕರ್ಮಯೋಗವನ್ನು ಹೇಳುತ್ತಾನೆ ಶ್ರೀ ಕೃಷ್ಣ "ಕರ್ಮಣ್ಯೇ ವಾದಿಕಾರಸ್ಥೆ ಮಾ ಪಲೇಷು ಕದಾಚನ"- ನಿನ್ನ ಕರ್ತವ್ಯವನ್ನು ನೀನು ಪ್ರಾಮಾಣಿಕವಾಗಿ ಮಾಡು ಅದರ ಫಲದ ಬಗೆಗಿನ ವ್ಯಾಮೋಹ ಬಿಡು- ಇದು ಮನುಷ್ಯ ಸಂತೋಷವಾಗಿರಬೇಕಾದರೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಇನ್ನೊಂದು ಸುಂದರವಾದ ಸೂತ್ರ. ನಂತರದ ಅಧ್ಯಾಯಗಳಲ್ಲಿ ಮೋಹವನ್ನು ಬಿಟ್ಟು ಕೆಲಸ ಮಾಡುವುದು ಹೇಗೆ, ಸ್ಥಿತಪ್ರಜ್ಞತೆಯನ್ನು ಗಳಿಸುವುದು ಹೇಗೆ. ಸಮತ್ವದಿಂದ, ಯೋಗ ಭಾವದಿಂದ ಜೀವಿಸುವುದು ಹೇಗೆ ಎಂಬ ವಿವರಣೆ ಭಗವದ್ಗೀತೆಯಲ್ಲಿದೆ ಎಂದು ಹೇಳುತ್ತಾ ತಮ್ಮ ಎರಡು ಗಂಟೆಗಳ ಅವಧಿಯಲ್ಲಿ ಕೇಳುಗರನ್ನು ತಮ್ಮೊಡನೆ ಭಗವದ್ಗೀತೆಯ ಅದ್ಭುತ ಲೋಕಕ್ಕೆ ಕರೆದುಕೊಂಡು ಹೋದರು.  ಭಗವದ್ಗೀತೆಯ ಲಕ್ಷಣಗಳನ್ನು ವಿವರಿಸುತ್ತಾ  ಪ್ರಸಕ್ತ  ಜೀವನದ ಉದಾಹರಣೆಗಳ ಮೂಲಕ ಪ್ರತಿಯೊಂದು ವಿಚಾರವನ್ನೂ ಕೇಳುಗರಿಗೆ ಮನದಟ್ಟು ಮಾಡಿಸಿದರು. ಅಲ್ಲದೇ  ಕೇಳುಗರಿಗೆ ತಮ್ಮ ಪ್ರಶ್ನೆಗಳ ಮೂಲಕ ತಮ್ಮ ಪ್ರವಚನ ಅರ್ಥವಾಗಿದೆ  ಎಂದು ದ್ರಢಪಡಿಸಿಕೊಳ್ಳುತ್ತ  ತಾವೊಬ್ಬ ಉತ್ತಮ ಶಿಕ್ಷಕ ಎಂದು  ಸಾಬೀತುಪಡಿಸಿದರು.  ಹೀಗೆ 2023 ರ ಓಂಕಾರ ಜ್ಞಾನಾಮೃತವನ್ನು ಯಶಸ್ವಿಯಾಗಿ ಪಾವಗಡ ಪ್ರಕಾಶ್ ರಾವ್ ಅವರು ನಡೆಸಿಕೊಟ್ಟು  ಮಸ್ಕತ್ ಕನ್ನಡಿಗರ ಮೇಲೆ ದೀರ್ಘ ಕಾಲದ ಪ್ರಭಾವ ಬೀರಿದರು.


ಪ್ರವಚನದ ನಂತರ ಕರ್ನಾಟಕ ಸಂಘ ಮಸ್ಕತ್ತಿನ ಪದಾಧಿಕಾರಿಗಳು ಮಸ್ಕತ್ತಿಗೆ ಆಗಮಿಸಿದ ಮೇರು ವಿದ್ವಾಂಸ ಪ್ರಕಾಶ್ ರಾವ್ ಅವರನ್ನು ಸನ್ಮಾನಿಸಿದರು.


ಶ್ರೀಯುತ ಪಾವಗಡ ಪ್ರಕಾಶ ರಾವ್ ಅವರನ್ನು ಶ್ರೀ ಶಶಿಧರ ಶೆಟ್ಟಿಯವರು ಶಾಲು ಹೊದಿಸಿ, ಶ್ರೀ ಅನಂತ್ ಪದ್ಮನಾಭ ಅವರು ಫಲಪುಷ್ಪ ನೀಡಿ ಮತ್ತು ಶ್ರೀ ರಾಮಕೃಷ್ಣ ಜಿ ವಿ ಯವರು ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು.


ಓಂಕಾರ ಸಮಿತಿಯು ಕನ್ನಡ ಅಧ್ಯಾಪಕ, ಶಿಕ್ಷಣ ತಜ್ಞ, ಉತ್ತಮ ವಾಗ್ಮಿ, ಲೇಖಕ, ಕನ್ನಡ ಸಾಹಿತ್ಯ ಸೇವಕ, ನ್ಯಾಯವಾದಿ, ಪತ್ರಕರ್ತ, ವೇದೋಪನಿಷತ್ತುಗಳ ಜ್ಞಾನಿ, ಅಲ್ಲದೇ ಪ್ರಾಚೀನ ಭಾರತೀಯ ಕೃತಿಗಳ ಪ್ರಚಾರಕರಾಗಿ, ದೃಶ್ಯ, ಶ್ರವಣ, ಲೇಖನಿ- ಎಲ್ಲ ಮಾಧ್ಯಮಗಳ ಮೂಲಕ ಪ್ರಾಚೀನ ಭಾರತದ ಸಾಹಿತ್ಯದ ಹಲವಾರು ವಿಷಯಗಳನ್ನು ಬೆಳಕಿಗೆ ತಂದು ಹತ್ತು ಹಲವು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಹೆಮ್ಮೆಯ ಕನ್ನಡಿಗ ಪ್ರಕಾಶ್ ರಾವ್ ಅವರನ್ನು ಓಂಕಾರಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.


ಶ್ರೀ ಪಾವಗಡ ಪ್ರಕಾಶ್ ರಾವ್ ಅವರೊಂದಿಗೆ ಆಗಮಿಸಿದ್ದ ಅವರ ಧರ್ಮಪತ್ನಿ ಶ್ರೀಮತಿ ಕಲ್ಪನಾ ರಾನಡೆ ಮತ್ತು ಅವರ ಸಹಾಯಕ ಶ್ರೀ ವೇಣು ಗೋಪಾಲ್ ಅವರನ್ನು ವೇದಿಕೆಗೆ ಆಹ್ವಾನಿಸಿ ಸತ್ಕರಿಸಲಾಯಿತು.



ಶ್ರೀ ಸುಬ್ರಹ್ಮಣ್ಯ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ಶ್ರೀಮತಿ ಸುಧಾ ಶಶಿಕಾಂತ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.


ವರದಿ: ಶ್ರೀಮತಿ ಸುಧಾ ಕೊಡಂಚ 


ಫೋಟೋ ಗ್ಯಾಲರಿ