ಓಂಕಾರ ನಾದಾಮೃತ -೨೦೨೩

ಓಂಕಾರ ನಾದಾಮೃತ ೨೦೨೩


ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ||

ದಿನಾಂಕ ೨೮.೧೦.೨೦೨೩ ಶನಿವಾರ ಶುಭಸಾಯಂಕಾಲ ೬ ಘಂಟೆಗೆ ಸರಿಯಾಗಿ ಮಸ್ಕತ್ ನ ಶ್ರೀಕೃಷ್ಣಮಂದಿರದ ಸಭಾಂಗಣ ಸುಂದರವಾಗಿ ಅಲಂಕೃತವಾಗಿತ್ತು. ಓಮಾನ್ ಕರ್ನಾಟಕ ಆರಾಧನಾ  (ಓಂಕಾರ)  ಸಮಿತಿಯ ಓಂಕಾರ ನಾದಾಮೃತ-೨೦೨೩ ರ ಭಕ್ತಿಸಂಗೀತದ ಕಾರ್ಯಕ್ರಮವನ್ನು ಸಾಕಾರಗೊಳಿಸಲು ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಿಂದ ಆಗಮಿಸಿದ್ದ ಸಾಧಕರತ್ನ ಶ್ರೀ ಶ್ರೀಹರ್ಷ ಮತ್ತು ತಂಡದವರಿಗಾಗಿ ಸುಸಜ್ಜಿತವಾದ ವೇದಿಕೆಯೂ ತಯಾರಾಗಿತ್ತು.ರಾಮನಾಮದ ಓಂಕಾರದ ಜೊತೆಗೆ ಹನುಮ ನಾಮದ ಝೇಂಕಾರಕ್ಕಾಗಿ ಮಸ್ಕತ್ ನ ಸಂಗೀತ ಪ್ರೇಮಿಗಳೆಲ್ಲರೂ ಉತ್ಸುಕರಾಗಿದ್ದರು.


ಓಂಕಾರ ಸಮಿತಿಯ ಶ್ರೀರವಿಕುಮಾರ್ ಅವರು ಆತ್ಮೀಯತೆಯಿಂದ ಸ್ವಾಗತಕೋರಿ   ಆಗಮಿಸಿದ್ದ ಮುಖ್ಯ ಅತಿಥಿಗಳಿಗೆ ಹೂಗುಚ್ಚ ನೀಡಿ  ಅಹ್ವಾನಿಸಿದರು ಹಾಗೂ ನೆರೆದಿದ್ದ ಸಭಿಕರಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರಿ, ಓಂಕಾರ ಸಮಿತಿಯ ೧೧ವರ್ಷಗಳ ಸತತ ಸಾಧನೆಯ ಕಿರುನೋಟವನ್ನು ನೆನಪಿಸಿದರು.



ನಂತರ ಶ್ರೀಮತಿ ಶ್ರೀಮಾತ ಹಿರಿಯಣ್ಣ ಅವರಿಂದ ಸಾರಸ್ವತಸರದಾರ ಶ್ರೀ ಶ್ರೀಹರ್ಷರವರ ಪರಿಚಯ ಹಾಗೆಯೇ ಸಂಗೀತದ ನಾಡಿಮಿಡಿತಗಳಾದ ಕೀಬೋರ್ಡ್ ವಾದಕ ಶ್ರೀ ಷಣ್ಮುಗ ಸಜ್ಜ, ರಿದಮ್ ಪ್ಯಾಡ್ ನ ಶ್ರೀ ವಿನಯ್ ರಂಗಧೂಲ್ ಹಾಗೂ ತಬಲಾವಾದ್ಯ ನಿಪುಣ ಶ್ರೀ ಆತ್ಮರಾಂ ಬಿ ರವರ ಕಿರುಪರಿಚಯ ಮಾಡಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು.


ಶ್ರೀ ಅರುಣ್ ಕುಮಾರ್ ಐಯ್ಯರ್ ಅವರು ಓಂಕಾರ ಸಮಿತಿಯ ಆರಾಧ್ಯ ದೈವ, ಚೈತನ್ಯ ಮೂರುತಿ ಆಂಜನೇಯಸ್ವಾಮಿಗೆ ಮಂಗಳಾರತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಶ್ರೀಹರ್ಷ ಅವರು ಆದಿವಂದ್ಯ ಗಣೇಶನ ಸ್ತುತಿ ಗಜವದನ ಹೇರಂಬ ಎಂದು ಪ್ರಾರಂಭಿಸಿ ವಾಗ್ದೇವಿಯನ್ನು ಪ್ರಾರ್ಥಿಸಿ ಮಾಣಿಕ್ಯವೀಣಾ ಮುಪಲಾಲಯಂತಾಂ ಶ್ಲೋಕವನ್ನು ಭಕ್ತಿ-ಭಾವ ಪರವಶರಾಗಿ ಹಾಡಿದರು. ನಂತರ ಗುರುವನ್ನು ವಂದಿಸುತ್ತಾ ಪಂಡಿತ್ ಪುಟ್ಟರಾಜ ಗವಾಯಿಗಳ ಗಾನವಿದ್ಯಾಬಹುತ್ ಕಠಿಣ್ ಹೇ, ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ, ಗುಡಗುಡಿಯ ಸೇದುವ ಮಹಾ ತತ್ವ ದ ಹಾಡು ಹೀಗೆ ಒಂದರ ನಂತರ ಇನ್ನೊಂದು ಹಾಡು ಪ್ರತಿಯೊಬ್ಬ ಪ್ರೇಕ್ಷಕನನ್ನು ಮಂತ್ರಮುಗ್ಧನನ್ನಾಗಸಿತ್ತು.


ಸುಸ್ವರ ಸಂಗೀತದೊಂದಿಗೆ, ಪ್ರತಿಯೊಂದು ಹಾಡಿಗೂ ವಿವರಗಳನ್ನು ಹಾಗೂ ಹಾಡಿನ ವಿಷೇಷಣ ವಿಶೇಷತೆಗಳನ್ನು ತಿಳಿಸಿಕೊಡುತ್ತಿದ್ದ ಶ್ರೀ ಶ್ರೀಹರ್ಷ ಮತ್ತು ಅವರ ತಂಡದವರಿಗೆ ಕಾರ್ಯಕ್ರಮದ ಮಧ್ಯದಲ್ಲಿ ಮಸ್ಕತ್ತಿನ ಭಾರತೀಯ ಸಾಮಾಜಿಕ ಒಕ್ಕೂಟ - ಕರ್ನಾಟಕ ವಿಭಾಗದವರು ಶ್ರೀಹರ್ಷ ಅವರನ್ನು ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು.


ತದನಂತರ ಮಸ್ಕತ್ ನ ಆಗಮಿಸಿದ ಗಣ್ಯರಿಂದ  ಎಲ್ಲ ಕಲಾವಿದರನ್ನು ಓಂಕಾರ ಸಮಿತಿಯ ಪರವಾಗಿ ಸನ್ಮಾನಿಸಲಾಯಿತು.





ನಂತರ ಓಂಕಾರ ಸಮಿತಿಯ ಎಲ್ಲ ಸದಸ್ಯರು ವೇದಿಕೆಗೆ ಆಗಮಿಸಿ ನಾದಾಮೃತ ೨೦೨೩ ರ ಕಾರ್ಯಕ್ರಮದ ಕೇಂದ್ರಬಿಂದುವಾದ ಹೆಮ್ಮೆಯ ಕನ್ನಡಿಗ ಶ್ರೀ ಹರ್ಷ ಅವರಿಗೆ “ಓಂಕಾರಶ್ರೀ “ ಎಂಬ ವಿಶೇಷ ಬಿರುದು ನೀಡಿ ಗೌರವ ಸಲ್ಲಿಸಿದರು.



ಕಾರ್ಯಕ್ರಮದ ಮುಂದುವರೆದ ಭಾಗದಲ್ಲಿ ನಿಂದಾಸ್ತುತಿ, ಈಶ ನಿನ್ನ ಚರಣ ಭಜನೆ, ದೇವಕಿಕಂದ ಮುಕುಂದ, ಕಂಡೆನಾ ನರಸಿಂಹನಾ ಎಂದು ಹಾಡುತ್ತಾ ಶ್ರೀಹರ್ಷ ಅವರು ಪ್ರತಿಯೊಬ್ಬ  ಪ್ರೇಕ್ಷಕನನ್ನು ಭಗವಂತನ ಧ್ಯಾನಾಸಕ್ತರನ್ನಾಗಿಸಿದ್ದು ಉತ್ಪ್ರೇಕ್ಷೆಯಂತು ಅಲ್ಲ.

ಇನ್ನಷ್ಟು ಬೇಕೇನ್ನ ಹೃದಯಕ್ಕೆ ರಾಮ, ರಾಮ ರಾಮ ರಾಮ ಎನ್ನಿರೋ, ಕೇವಲ “ಶ್ರೀ ರಾಮ ರಾಮ ರಾಮೇತಿ“ ಎಂಬ ವಿಷ್ಣುಸಹಸ್ರನಾಮದ ಒಂದು ಶ್ಲೋಕ  ಹೇಳುವುದರಿಂದ ಸಹಸ್ರನಾಮ ಪಾರಾಯಣ ಹೇಗೆ ಸಾಧ್ಯ ಎಂಬುದರ ವಿಶ್ಲೇಷಣೆ, ಪ್ರೇಕ್ಷಕರ ಅಪೇಕ್ಷೆಯ ಮೇರೆಗೆ ರೋರಿಂಗ್ ರಾಮ ಹಾಡಿದ ಮೇಲಂತೂ ಅಂದಿನ ಸಭಾಂಗಣವಂತೂ ಸಕಲಂ ರಾಮಮಯ ಈ ಜಗಮಖಿಲಂ ರಾಮಮಯ  ಅನಿಸಿ ಸಭಾಂಗಣದಲ್ಲಿ ಅಖಂಡ ರಾಮ ಭಜನೆ ನಡೆಯುತ್ತಿದಿಯೇನೋ ಎಂದು ಭಾಸವಾಗಿದ್ದಂತೂ ಸತ್ಯ. 

ಕಡೆಯದಾಗಿ ಕೃಷ್ಣಾ ಎನಬಾರದೇ, ಭಾಗ್ಯದ ಲಕ್ಷ್ಮೀ ಬಾರಮ್ಮ, ಶರಣಂ ಅಯ್ಯಪ್ಪ ಸ್ವಾಮಿ ಶರಣಂ ಅಯ್ಯಪ್ಪ  ಎಂದು ಮಂಗಳ ಹಾಡಿದರು .

ಹೀಗೆ ಸತತ ಮೂರೂವರೆ ಘಂಟೆಗಳ ಶ್ರದ್ಧಾ ಭಕ್ತಿಯಿಂದ, ಸುಶ್ರಾವ್ಯವಾಗಿ, ಸುಮಧುರವಾಗಿ ಹಾಡಿದ ಶ್ರೀಹರ್ಷ ಅವರು ಪ್ರತಿಯೊಬ್ಬ ಪ್ರೇಕ್ಷಕನನ್ನು ಭಗವಂತನ ಕೃಪಾಕಟಾಕ್ಷಕ್ಕೆ. ಪಾತ್ರರನ್ನಾಗಿಸಿದ್ದಂತು ಸತ್ಯ.


ಶ್ರೀಯುತ ಕೆ.ಪಿ ಶಿವಾನಂದ್ ಅವರು ವೇದಿಕೆಗೆ ಆಗಮಿಸಿ, ತಮ್ಮ ಕಂಠಸಿರಿಯಿಂದ ಸಭಿಕರನ್ನು ಗಾಂಧರ್ವ ಲೋಕಕ್ಕೆ ಕರೆದೊಯ್ದ ಶ್ರೀ   ಶ್ರೀಹರ್ಷ ಮತ್ತು ವೃಂದದವರಿಗೆ, ಸಹಾಯ ಮಾಡಿದವರಿಗೆ, ಸಭಿಕರಿಗೆ ಮತ್ತು ಸ್ವಯಂಸೇವಕರಿಗೆ ವಂದನೆಗಳನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.





ಒಟ್ಟಿನಲ್ಲಿ ಓಂಕಾರ ಸಮಿತಿಯು ಆಯೋಜಿಸಿರುವ ಉತ್ತಮೋತ್ತಮ ಕಾರ್ಯಕ್ರಮಗಳಲ್ಲಿ ಶ್ರೀ ಶ್ರೀಹರ್ಷ ಮತ್ತು ತಂಡದವರಿಂದ ಸಾಕಾರಗೊಂಡ ಓಂಕಾರ ನಾದಾಮೃತ -೨೦೨೩ ನಿಸ್ಸಂದೇಹವಾಗಿ ಅತ್ತ್ಯುತ್ತಮ ಕಾರ್ಯಕ್ರಮ ಎಂಬುದು ಪ್ರೇಕ್ಷಕರ ಅಭಿಪ್ರಾಯವಾಗಿತ್ತು.

ವರದಿ: ಶ್ರೀಮತಿ ಶ್ರೀಮಾತ ಹಿರಿಯಣ್ಣ