ಓಂಕಾರ ಜ್ಞಾನಾಮೃತ ೨೦೨೩
ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ||
ಓಂಕಾರ ಸಮಿತಿ ಮಸ್ಕತ್ ನಡೆಸುವ ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಂದಾದ ಓಂಕಾರ ಜ್ಞಾನಾಮೃತ ಕಾರ್ಯಕ್ರಮವು ಮೂರು ವರ್ಷಗಳ ನಂತರ ಇದೆ ಮಾರ್ಚ್ ತಿಂಗಳ ೧೭ನೆಯ ತಾರೀಖಿನಂದು ನಡೆಯಿತು. ಈ ವರ್ಷದ ಓಂಕಾರ ಜ್ಞಾನಾಮೃತ-೨೦೨೩ "ಭಗವದ್ಗೀತಾದರ್ಶನ" ವನ್ನು ಮೇರು ವಿದ್ವಾಂಸ ಶ್ರೀಯುತ ಡಾ ಪಾವಗಡ ಪ್ರಕಾಶ್ ರಾವ್ ಅವರು ಅದ್ಭುತವಾಗಿ ನಡೆಸಿಕೊಟ್ಟರು.
ಶ್ರೀ ರವಿ ಕುಮಾರ್ ಅವರು ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರೆ ಅರುಣ್ ಕುಮಾರ್ ಅವರು ಓಂಕಾರ ಸಮಿತಿಯ ಆರಾಧ್ಯ ದೈವ ಅಂಜನೆಯನಿಗೆ ಆರತಿ ಬೆಳಗಿ ಕಾರ್ಯಕ್ರಮಕ್ಕೆ ಶುಭ ಆರಂಭವನ್ನು ನೀಡಿದರು.
ಕಾರ್ಯಕ್ರಮಕ್ಕೆ ಸುಂದರ ಪೀಠಿಕೆಯನ್ನು ಜಯದೇವನ ಗೀತಗೋವಿಂದ ಆಧಾರಿತ ದಶಾವತಾರದ ನೃತ್ಯ ರೂಪಕದ ಮೂಲಕ ಜ್ಯೋತಿ ಹೆಗ್ಡೆ ಮತ್ತು ಸಹ ಕಲಾವಿದರಾದ ಅಪೂರ್ವ, ಆಕಾಂಕ್ಷ, ವಿಭಾ ಮತ್ತು ಸುಪ್ರಜಾ ನೀಡಿದರು.
ಗಣ್ಯರಾದ ಶ್ರೀ ಶಶಿಧರ್ ಶೆಟ್ಟಿ ಮತ್ತು ಶ್ರೀ ಜಿ ವಿ ರಾಮಕೃಷ್ಣ ಅವರು ಪಾವಗಡ ಪ್ರಕಾಶ್ ರಾವ್ ಅವರನ್ನು ಸುಂದರವಾಗಿ ಸಜ್ಜಾದ ವೇದಿಕೆಗೆ ಕರೆತಂದರು.
ತಮ್ಮದೇ ಶೈಲಿಯಿಂದ ಭಗವದ್ಗೀತಾ ದರ್ಶನವನ್ನು ಆರಂಭಿಸಿದ ಪ್ರಕಾಶ್ ರಾಯರು ಮಾನವನು ತನ್ನ ದೈಹಿಕ , ಮಾನಸಿಕ ಕ್ಲೇಶಗಳ ಈ ಜೀವನದಲ್ಲಿ ಸುಖವಾಗಿರುವುದು ಹೇಗೆಂಬ ಪ್ರಶ್ನೆಗೆ ನಿರಂತರವಾಗಿ ಉತ್ತರದ ಹುಡುಕಾಟದಲ್ಲಿದ್ದಾನೆ. ಈ ಹುಡುಕಾಟದಲ್ಲಿ ಸಾವಿರಾರು ವರ್ಷಗಳಿಂದ ಅನೇಕ ಪ್ರಯತ್ನಗಳು ನಡೆದವು ಅದರಲ್ಲಿ ಮೊದಲನೆಯದು ಸ್ವಾತ್ಮರಾಮನ ಹಠಯೋಗಪ್ರದೀಪಿಕ, ಎರಡನೆಯದು ಪತಂಜಲಿ ಮುನಿಯ ಯೋಗಸೂತ್ರ, ಮೂರನೆಯದು ವೇದಗಳು ಎಂದು ಹೇಳುತ್ತಾ ನಾಲ್ಕನೆಯ ಮತ್ತು ಅತಿ ಪ್ರಸಿದ್ಧವಾದ ಪ್ರಯತ್ನ ಶ್ರೀ ಕೃಷ್ಣನ ಭಗವದ್ಗೀತೆ ಎಂದರು. ಜೀವನಕ್ಕೆ ಶಾಂತಿಯನ್ನು ನೀಡಬಲ್ಲ ಎಲ್ಲ ವಿಚಾರಗಳು ಈ 700 ಶ್ಲೋಕಗಳ ಭಗವತಗೀತೆ ಯಲ್ಲಿದೆ; ಅಲ್ಲದೇ ಇಡೀ ಪ್ರಪಂಚದ ಎಲ್ಲ ಧರ್ಮಗಳ ಸಾರ ಭಗವದ್ಗೀತೆಯಲ್ಲಿದೆ ಎಂಬುದನ್ನು ನಾನು ಆಧಾರ ಸಹಿತ ಸಿದ್ಧಮಾಡಿ ತೋರಿಸಬಲ್ಲೆ ಎಂದು ತಿಳಿಸಿದರು.
ಮಧುಸೂಧನ ಭಾರತಿಯವರು ಬರೆದ ಭಗವದ್ಗೀತೆಯ ಪ್ರಾರ್ಥನಾ ಶ್ಲೋಕವನ್ನು ಸಂಪೂರ್ಣ ಶುದ್ಧವಾಗಿ ಹೇಳಿ ಅವುಗಳ ಅರ್ಥವನ್ನು ಚಟುಕಾಗಿ ವಿವರಿಸಿದರು. ನಂತರ ಭಗವದ್ಗೀತೆಯ ಬಗೆಗೆ ಇರುವ ಆಕ್ಷೇಪಣೆಗಳನ್ನು ಸ್ಥೂಲವಾಗಿ ನಮೂದಿಸಿ ಅದರಲ್ಲಿ ಶ್ರೀಕೃಷ್ಣ ಯುದ್ದ ಮಾಡೆಂದು ಅರ್ಜುನನಿಗೆ ಅವನ ಕರ್ತವ್ಯವನ್ನು ಬೋದಿಸಿದರೂ ಅದರಲ್ಲಿ ಅವನ ಹಕ್ಕನ್ನು , ಅವನಿಗಾದ ಅನ್ಯಾಯದ ವಿರುದ್ಧ ಮಾತ್ರ ಹೋರಾಡುವುದು ಅವನ ಕರ್ತವ್ಯ ಎಂದು ಒತ್ತಿ ಹೇಳುವ ಮೂಲಕ ಅನಗತ್ಯ ಹಿಂಸೆಯನ್ನು ಕೃಷ್ಣ ವಿರೋಡಿಸುತ್ತಾನೆ. ಅಲ್ಲದೇ ಕ್ಷಮೆಯೆಂದು ನಮಗಾದ ಅನ್ಯಾಯವನ್ನು ಸಹಿಸಿದರೆ ತಪ್ಪುಗಳನ್ನು ಪ್ರೋತ್ಸಾಹಿಸುವ ಪರಿಪಾಠವನ್ನು ಮುಂದಿನ ತಲೆಮಾರಿಗೆ ಭೋದಿಸಿದಂತಾಗುತ್ತದೆಂದು ಶ್ರೀಕೃಷ್ಣ ಎಚ್ಚರಿಕೆ ನೀಡುತ್ತಾನೆ. ಆದ್ದರಿಂದ ಭಗವದ್ಗೀತೆ ಯೋಗಶಾಸ್ತ್ರ ಎಂದು ವಿವರಿಸುತ್ತಾ ಅದು ಏಕೆ ಯುದ್ಧ ಶಾಸ್ತ್ರವಲ್ಲ ಎಂದು ತಿಳಿಸಿದರು.
ನಂತರ ಭಗವದ್ಗೀತೆಯ ಪ್ರಮುಖ ಸೂತ್ರಗಳನ್ನು ಒಂದೊಂದಾಗಿ ವಿವರಿಸುತ್ತ ಭಗವದ್ಗೀತೆ ಕೊಡುವ ಒಂದು ಸುಂದರ ಅಭಯ ಅಥವಾ ರಕ್ಷಣೆಯೆಂದರೆ ಆತ್ಮಕ್ಕೆ ಸಾವು ಇಲ್ಲ ಎನ್ನುವುದು. ಆತ್ಮ ನಿರಂತರ. ದೇಹ ಜೀರ್ಣವಾದಾಗ ಈ ದೇಹವನ್ನು ಬಿಟ್ಟು ಇನ್ನೊಂದು ದೇಹಕ್ಕೆ ಆತ್ಮ ಹೋಗುವ ಕ್ರಿಯೆಯೇ ಸಾವು ಎಂದು ತಿಳಿಸಿದರು. ನಮಗೆ ಮುಂದಿನ ಜನ್ಮದಲ್ಲಿ ಒಳ್ಳೆಯ ದೇಹ ಸಿಗಬೇಕಾದರೆ ಈ ದೇಹವನ್ನು ನಾವು ಸದ್ವಿನಿಯೋಗ ಮಾಡಬೇಕು ಎಂದು ಮತ್ತೆ ಕರ್ಮಯೋಗವನ್ನು ಹೇಳುತ್ತಾನೆ ಶ್ರೀ ಕೃಷ್ಣ "ಕರ್ಮಣ್ಯೇ ವಾದಿಕಾರಸ್ಥೆ ಮಾ ಪಲೇಷು ಕದಾಚನ"- ನಿನ್ನ ಕರ್ತವ್ಯವನ್ನು ನೀನು ಪ್ರಾಮಾಣಿಕವಾಗಿ ಮಾಡು ಅದರ ಫಲದ ಬಗೆಗಿನ ವ್ಯಾಮೋಹ ಬಿಡು- ಇದು ಮನುಷ್ಯ ಸಂತೋಷವಾಗಿರಬೇಕಾದರೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಇನ್ನೊಂದು ಸುಂದರವಾದ ಸೂತ್ರ. ನಂತರದ ಅಧ್ಯಾಯಗಳಲ್ಲಿ ಮೋಹವನ್ನು ಬಿಟ್ಟು ಕೆಲಸ ಮಾಡುವುದು ಹೇಗೆ, ಸ್ಥಿತಪ್ರಜ್ಞತೆಯನ್ನು ಗಳಿಸುವುದು ಹೇಗೆ. ಸಮತ್ವದಿಂದ, ಯೋಗ ಭಾವದಿಂದ ಜೀವಿಸುವುದು ಹೇಗೆ ಎಂಬ ವಿವರಣೆ ಭಗವದ್ಗೀತೆಯಲ್ಲಿದೆ ಎಂದು ಹೇಳುತ್ತಾ ತಮ್ಮ ಎರಡು ಗಂಟೆಗಳ ಅವಧಿಯಲ್ಲಿ ಕೇಳುಗರನ್ನು ತಮ್ಮೊಡನೆ ಭಗವದ್ಗೀತೆಯ ಅದ್ಭುತ ಲೋಕಕ್ಕೆ ಕರೆದುಕೊಂಡು ಹೋದರು. ಭಗವದ್ಗೀತೆಯ ಲಕ್ಷಣಗಳನ್ನು ವಿವರಿಸುತ್ತಾ ಪ್ರಸಕ್ತ ಜೀವನದ ಉದಾಹರಣೆಗಳ ಮೂಲಕ ಪ್ರತಿಯೊಂದು ವಿಚಾರವನ್ನೂ ಕೇಳುಗರಿಗೆ ಮನದಟ್ಟು ಮಾಡಿಸಿದರು. ಅಲ್ಲದೇ ಕೇಳುಗರಿಗೆ ತಮ್ಮ ಪ್ರಶ್ನೆಗಳ ಮೂಲಕ ತಮ್ಮ ಪ್ರವಚನ ಅರ್ಥವಾಗಿದೆ ಎಂದು ದ್ರಢಪಡಿಸಿಕೊಳ್ಳುತ್ತ ತಾವೊಬ್ಬ ಉತ್ತಮ ಶಿಕ್ಷಕ ಎಂದು ಸಾಬೀತುಪಡಿಸಿದರು. ಹೀಗೆ 2023 ರ ಓಂಕಾರ ಜ್ಞಾನಾಮೃತವನ್ನು ಯಶಸ್ವಿಯಾಗಿ ಪಾವಗಡ ಪ್ರಕಾಶ್ ರಾವ್ ಅವರು ನಡೆಸಿಕೊಟ್ಟು ಮಸ್ಕತ್ ಕನ್ನಡಿಗರ ಮೇಲೆ ದೀರ್ಘ ಕಾಲದ ಪ್ರಭಾವ ಬೀರಿದರು.
ಪ್ರವಚನದ ನಂತರ ಕರ್ನಾಟಕ ಸಂಘ ಮಸ್ಕತ್ತಿನ ಪದಾಧಿಕಾರಿಗಳು ಮಸ್ಕತ್ತಿಗೆ ಆಗಮಿಸಿದ ಮೇರು ವಿದ್ವಾಂಸ ಪ್ರಕಾಶ್ ರಾವ್ ಅವರನ್ನು ಸನ್ಮಾನಿಸಿದರು.
ಶ್ರೀಯುತ ಪಾವಗಡ ಪ್ರಕಾಶ ರಾವ್ ಅವರನ್ನು ಶ್ರೀ ಶಶಿಧರ ಶೆಟ್ಟಿಯವರು ಶಾಲು ಹೊದಿಸಿ, ಶ್ರೀ ಅನಂತ್ ಪದ್ಮನಾಭ ಅವರು ಫಲಪುಷ್ಪ ನೀಡಿ ಮತ್ತು ಶ್ರೀ ರಾಮಕೃಷ್ಣ ಜಿ ವಿ ಯವರು ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಿದರು.
ಓಂಕಾರ ಸಮಿತಿಯು ಕನ್ನಡ ಅಧ್ಯಾಪಕ, ಶಿಕ್ಷಣ ತಜ್ಞ, ಉತ್ತಮ ವಾಗ್ಮಿ, ಲೇಖಕ, ಕನ್ನಡ ಸಾಹಿತ್ಯ ಸೇವಕ, ನ್ಯಾಯವಾದಿ, ಪತ್ರಕರ್ತ, ವೇದೋಪನಿಷತ್ತುಗಳ ಜ್ಞಾನಿ, ಅಲ್ಲದೇ ಪ್ರಾಚೀನ ಭಾರತೀಯ ಕೃತಿಗಳ ಪ್ರಚಾರಕರಾಗಿ, ದೃಶ್ಯ, ಶ್ರವಣ, ಲೇಖನಿ- ಎಲ್ಲ ಮಾಧ್ಯಮಗಳ ಮೂಲಕ ಪ್ರಾಚೀನ ಭಾರತದ ಸಾಹಿತ್ಯದ ಹಲವಾರು ವಿಷಯಗಳನ್ನು ಬೆಳಕಿಗೆ ತಂದು ಹತ್ತು ಹಲವು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಹೆಮ್ಮೆಯ ಕನ್ನಡಿಗ ಪ್ರಕಾಶ್ ರಾವ್ ಅವರನ್ನು ಓಂಕಾರಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ಶ್ರೀ ಪಾವಗಡ ಪ್ರಕಾಶ್ ರಾವ್ ಅವರೊಂದಿಗೆ ಆಗಮಿಸಿದ್ದ ಅವರ ಧರ್ಮಪತ್ನಿ ಶ್ರೀಮತಿ ಕಲ್ಪನಾ ರಾನಡೆ ಮತ್ತು ಅವರ ಸಹಾಯಕ ಶ್ರೀ ವೇಣು ಗೋಪಾಲ್ ಅವರನ್ನು ವೇದಿಕೆಗೆ ಆಹ್ವಾನಿಸಿ ಸತ್ಕರಿಸಲಾಯಿತು.
ಶ್ರೀ ಸುಬ್ರಹ್ಮಣ್ಯ ಅವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಯಿತು. ಶ್ರೀಮತಿ ಸುಧಾ ಶಶಿಕಾಂತ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಶ್ರೀಮತಿ ಸುಧಾ ಕೊಡಂಚ
ಫೋಟೋ ಗ್ಯಾಲರಿ