ಓಂಕಾರ ಆಂಜನೇಯ ಪೂಜೆ-೨೦೨೨

ಮಸ್ಕತ್ ನಲ್ಲಿ ವಿಜ್ರಂಭಣೆಯಿಂದ ಜರುಗಿದ ಶ್ರೀ ಆಂಜನೇಯ ಸ್ವಾಮಿ ಪೂಜೆ


ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೆಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ||


ಓಂಕಾರ  (ಒಮಾನ್ ಕರ್ನಾಟಕ ಆರಾಧನ) ಸಮಿತಿಯಿಂದ 30-12-2022 ರಂದು ಮಸ್ಕತ್ ನಲ್ಲಿ ಶ್ರೀ ಆಂಜನೇಯ ಸ್ವಾಮಿ ಪೂಜೆಯನ್ನು  ಮಸ್ಕತ್ ನ ಶ್ರೀ ಕೃಷ್ಣ ಮಂದಿರ ಸಭಾಂಗಣದಲ್ಲಿ ಏರ್ಪಡಿಸಿದ್ದರು. ತುಂಬಾ ಅಧ್ಭುತವಾಗಿ, ವಿಜ್ರಂಭಣೆಯಿಂದ ಕಾರ್ಯಕ್ರಮ ಮೂಡಿ ಬಂತು. ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾದರು. ಕೋವಿಡ್ ಕಾರಾಣಾಂತರದಿಂದ ಮೂರು ವರ್ಷಗಳ ಕಾಲ ಸಾರ್ವಜನಿಕವಾಗಿ ಕಾರ್ಯಕ್ರಮವನ್ನು ಏರ್ಪಡಿಸಿರಲಿಲ್ಲ. 




ಬೆಳಿಗ್ಗೆ 8:30 ರಿಂದ ಪೂಜೆಗೆ ಆಗಮಿಸಿದ ಸಾವಿರಾರು ಭಕ್ತರು, ಮಧ್ಯಾಹ್ನ ಮಹಾ ಪ್ರಸಾದ ವಿನಿಯೋಗದ ವರೆವಿಗೂ ಪಾಲ್ಗೊಂಡು ಶ್ರೀ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಿದ್ದು ವಿಶೇಷ ವಾಗಿತ್ತು. ಸಾವಿರಾರು ಭಕ್ತರು ಈ ಧಾರ್ಮಿಕ ಕಾರ್ಯಕ್ಕೆ ಆಗಮಿಸಿ ತನು, ಮನ, ಧನದ ಸಹಕಾರ ನೀಡಿ ಪೂಜೆಯ ಯಶಸ್ಸಿಗೆ ಕಾರಣೀಭೂತರಾದರು. 





ಓಂಕಾರ ಸಮಿತಿಯ ತಂಡ ಕಳೆದ ಹಲವಾರು ದಿನಗಳಿಂದ ವ್ಯವಸ್ಥಿತವಾಗಿ ಕಾರ್ಯಯೋಜನೆಗಳನ್ನು ಸಿದ್ದ ಪಡಿಸಿಕೊಂಡು ಪೂಜಾ ಕಾರ್ಯಕ್ರಮದ ಅದ್ಭುತ ಯಶಸ್ಸಿಗೆ ಕಾರಣರಾದರು.  ಶ್ರೀ ಆಂಜನೇಯ ಪೂಜಾ ವೇದಿಕೆಯನ್ನು ಸ್ವಯಂ ಸೇವಾ ಕಾರ್ಯಕರ್ತರು ಮತ್ತು ಸಮಿತಿ ಸದಸ್ಯರು ಅತೀ ಉತ್ಸಾಹದಿಂದ ಫಲ ಪುಷ್ಪಗಳಿಂದ ಅಲಂಕರಿಸಿದ್ದರು. ಸುತ್ತಲೂ ಪುಷ್ಪಾಲಂಕಾರದೊಂದಿಗೆ, ಮಧ್ಯದಲ್ಲಿ ಬೃಹತ್ ಶ್ರೀ ಆಂಜನೇಯ ಚಿತ್ರಪಟ ಅದರ ಮುಂದೆ ಸುಂದರ ಶ್ರೀ ಆಂಜನೇಯ ವಿಗ್ರಹ,  ಇರಿಸಿದ್ದು, ಪೂಜಾ ಸಭಾಂಗಣದಲ್ಲಿ ಭಕ್ತ ಸಮೂಹವನ್ನು ಆಕರ್ಷಿಸುತ್ತಿತ್ತು. ಪೂಜೆಗಾಗಿ ಬೆಂಗಳೂರಿನಿಂದ ವಿಶೇಷವಾಗಿ ಹೂವು, ಪೂಜ ಸಾಮಗ್ರಿ ಗಳನ್ನು ತರಿಸಿದ್ದರು.



ಸರ್ವರ ಪರವಾಗಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸಂಕಲ್ಪದೊಂದಿಗೆ ಪೂಜಾ ವಿಧಿ ವಿಧಾನಗಳನ್ನು ಬೆಂಗಳೂರಿನ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರು  ಶ್ರೀ ಡಾ.ಬಿ.ವಿ.ಶ್ರೀನಿವಾಸ ರಾಮಾನುಜ ಭಟ್ಟಾಚಾರ್ಯರು ಪ್ರಾರಂಭಿಸಿದರು.  ಶ್ರೀ ಆಂಜನೇಯ ವಿಗ್ರಹ ಪ್ರತಿಷ್ಠಾಪನೆಯ ನಂತರ, ಪಂಚಾಮೃತ ಹಾಗು ಗಂಧದ ಮಹಾಅಭಿಷೇಕ ನೆರೆವೇರಿಸಿದರು. ಮೂರ್ತಿಗೆ ಸುವರ್ಣ ಕಿರೀಟ ಧಾರಣೆ ಮಾಡಿ, ನಂತರ ಅಲಂಕಾರ, ಪೂಜೆ ಮತ್ತು ವಡಮಾಲ ಸಮರ್ಪಣೆ ಮಾಡಿದರು.





ಬೆಳಿಗ್ಗೆ 8:30 ಪ್ರಾರ್ಥನೆ ಯಿಂದ ಶುರುವಾದ ಕಾರ್ಯಕ್ರಮ, ಸಂಕಲ್ಪ, ಮೂರ್ತಿ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಮಹಾ ಅಭಿಷೇಕ,  ಅಲಂಕಾರ, ಹರಿವಾಯುಸ್ತುತಿ, ಹನುಮಾನ್ ಚಾಲೀಸ, ಭಜನೆ, ಮಹಾ ಮಂಗಳಾರತಿ ತದನಂತರ ಮಹಾಪ್ರಸಾದ ದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.




ಪೂಜಾ ಸಮಯದಲ್ಲಿ ರಾಮ ರಕ್ಷಾ ಸ್ತೋತ್ರ, ಪವಮಾನ, ಹರಿವಾಯು ಸ್ತುತಿ, ಹನುಮಾನ್ ಚಾಳಿಸಾ, ಆಂಜನೇಯ ಸ್ತೋತ್ರ, ಗಣಪತಿ, ಶ್ರೀಕೃಷ್ಣ, ಲಕ್ಷ್ಮಿ ದೇವಿ, ರಾಮನಾಮ, ಇನ್ನು ಮುಂತಾದ ದೇವರ ಹಾಡುಗಳನ್ನು,ಗಾಯನವನ್ನು ಶ್ರೀಮತಿ ವೀಣಾ ಶ್ರೀನಿವಾಸ್ ತಂಡದವರು ಹಾಡಿ ಭಕ್ತರನ್ನು ಪರಿವಶರನ್ನಾಗಿ ಮಾಡಿದರು. 


ಭಕ್ತರಿಗೆ ಸರ್ವ ಸೇವೆ ಹಾಗೂ ವಡಮಾಲೆ ಸಮರ್ಪಣೆ ಸೇವೆಯ ಸೌಲಭ್ಯ ನೀಡಿದ್ದರು. ಮಹಾಮಂಗಾಳಾರತಿಯ ನಂತರ ತೀರ್ಥ ಪ್ರಸಾದ ಸ್ವೀಕರಿಸಿದ ನಂತರ ದೇವಸ್ಥಾನದ ಆವರಣ ದಲ್ಲಿ ಅತ್ಯಂತ ರುಚಿಯಾದ ಭೋಜನವನ್ನು ಮಹಾಪ್ರಸಾದವನ್ನಾಗಿ ಸಾರ್ವಜನಿಕರಿಗೆ ವಿತರಿಸಲಾಯಿತು.  ಶ್ರೀ ಆಂಜನೇಯ ಸ್ವಾಮಿ ಪೂಜೆ ಬಹು ವಿಜ್ರಂಭಣೆ ಯಿಂದ ನಡೆದಿದ್ದಕ್ಕೆ ಈ ಸಂಧರ್ಭದಲ್ಲಿ ಸಾವಿರಾರು ಜನರು ಸಾಕ್ಷಿಗಳಾದರು. 












ಓಂಕಾರ ಸಮಿತಿಯು ಹತ್ತು ವರ್ಷಗಳಿಂದ ವಿವಿಧ  ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡುಬರುತಿದ್ದಾರೆ. ಕೋವಿಡ್ ಅವಧಿಯಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಭಂಧವಿದ್ದ ಸಮಯದಲ್ಲಿ ಆನ್ ಲೈನ್ ಮುಖಾಂತರ ಕಾರ್ಯಕ್ರಮಗಳನ್ನು ನೀಡಿದ್ದರು. ಈ ಎಲ್ಲಾ ಕಾರ್ಯಕ್ರಮಗಳನ್ನು  ಓಂಕಾರ ಸಮಿತಿಯು ಸ್ವ ಇಚ್ಚೆಯಿಂದ ಮಾಡಿಕೊಂಡು ಬರುತಿದ್ದು ನಿರಂತರತೆ ಕಾಪಾಡಿಕೊಳ್ಳುತ್ತಿದೆ. ಒಮಾನ್ ಕನ್ನಡಿಗರಲ್ಲದೆ, ಇತರೆ ರಾಜ್ಯದ ಜನರಿಗೂ ಸಹ ಮಾದರಿಯಾಗಿದ್ದಾರೆ. 




ಒಮಾನ್ ನಲ್ಲಿ ಘನತೆವೆತ್ತ H.M.  ಸುಲ್ತಾನ್ ಖಾಬುಸ್ ರವರು ಒಮಾನ್ ನಲ್ಲಿ ಹಿಂದೂ ಧಾರ್ಮಿಕ ಆಚರಣೆಗಳಿಗೆ ಇತರೆ ಅರಬ್ ರಾಷ್ಟ್ರಗಳಂತೆ ಇಲ್ಲಿ ಹೆಚ್ಚಿನ ನಿರ್ಭಂಧಗಳನ್ನು ವಿಧಿಸದೆ ಸ್ವಾತಂತ್ಯವನ್ನು ಮತ್ತು ಸಹಕಾರವನ್ನು ನೀಡುವ ಮೂಲಕ ಭಾರತೀಯ ಹಿಂದೂ ಸಮಾಜದವರ ಮನಗೆದ್ದಿದ್ದರು. ಅದೇ ಮನೋಗುಣವನ್ನು ಈಗಿನ ಸುಲ್ತಾನ್ ರಾದ H.M. ಹೈತಮ್ ಬಿನ್ ತಾರಿಕ್ ಅವರು ಹೊಂದಿದ್ದು ಹಳೆಯ ಸಂಪ್ರದಾಯವನ್ನು ಮುಂದುವರೆಸುತಿದ್ದಾರೆ.

ಬರಹ:- ಪಿ.ಎಸ್.ರಂಗನಾಥ, ಮಸ್ಕತ್