ಓಂಕಾರ ದಶಮಾನೋತ್ಸವ

ಓಂಕಾರ ದಶಮಾನೋತ್ಸವ -2021

ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೇಂದ್ರನುತಾಯ ಶ್ರೀ ಕಪೀಂದ್ರಾಯ ನಮೋ ನಮಃ ||

ಕೆಲವು ಕ್ರಿಯಾಶೀಲ ಉತ್ಸಾಹಭರಿತ ಸಮಾನ ಚಿಂತಕರು ಸೇರಿ ಓಮಾನ್ ನಲ್ಲಿರುವ ಕನ್ನಡಿಗರಿಗಾಗಿ ಉತ್ತಮ ಧಾರ್ಮಿಕ ಸಾಂಸ್ಕ್ರತಿಕ ಹಾಗೂ ಆಧ್ಯಾತ್ಮಿಕ ಕಾರ್ಯಗಳನ್ನು ನೀಡಬೇಕೆಂಬ ಉತ್ತಮ ಉದ್ದೇಶದಿಂದ 2012 ರಲ್ಲಿ ಆರಂಭವಾದದ್ದು ಓಂಕಾರ ಸಮಿತಿ. ಅದಕ್ಕನುಗುಣವಾಗಿ ಆಗಿನಿಂದ ಇಲ್ಲಿಯವರೆಗೂ ಪ್ರತಿ ವರ್ಷ ಸಮಿತಿಯ ಆರಾಧ್ಯ ದೈವ ಶ್ರೀ ಓಂಕಾರ ಆಂಜನೇಯನ ಭಕ್ತಿ ಪೂರ್ಣ  ಪೂಜೆ, ಜ್ಞಾನ ಪೂರ್ಣ ಓಂಕಾರ ಜ್ಞಾನಾಮೃತ, ನಾದಮಯ ಓಂಕಾರ ನಾದಾಮೃತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಾ ಬಂದು ಎಲ್ಲರ ಅಭಿಮಾನಕ್ಕೆ ಪಾತ್ರವಾಗಿದೆ.

ಕರೋನಾ ಹೆಮ್ಮಾರಿಯ ಧಾಳಿಗೆ ಸಿಲುಕಿ ವಿಶ್ವವೇ ನಲುಗಿದ ಈ ಎರಡು ವರ್ಷಗಳಲ್ಲಿ ಕೂಡ ಕಲಾಭಿಮಾನಿಗಳಿಗೆ ನಿರಾಸೆಯಾಗದಂತೆ ಆದರೆ ಕರೋನಾ ನಿರ್ಬಂಧಗಳನ್ನೂ ಮೀರದಂತೆ ಸಾಮಾಜಿಕ ತಾಣಗಳ ಮೂಲಕ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ ಹಿರಿಮೆ ಓಂಕಾರ ಸಮಿತಿಯದು.

ಈ ಬಾರಿ ಓಂಕಾರ ಸಮಿತಿಗೆ ದಶಮಾನೋತ್ಸವದ ವಿಶೇಷ ಸಂಭ್ರಮ. ಈ ಬಾರಿ ದಶಮಾನೋತ್ಸವಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ಮಾಡಬೇಕೆಂದು ನಿರ್ಧರಿಸಿ, ಓಂಕಾರ ಸಮಿತಿಯು ಶ್ರೀ ಓಂಕಾರ ಆಂಜನೇಯನ ಪೂಜೆ, ದಶಕ ನಡೆದು ಬಂದ ದಾರಿಯ ಓಂಕಾರ ಸಿಂಹಾವಲೋಕನ, ಓಂಕಾರ ಜ್ಞಾನಾಮೃತದ ಅಂಗವಾಗಿ ಹರಿಕಥೆ ಕಾರ್ಯಕ್ರಮ ಮತ್ತು ಓಂಕಾರ ನಾದಾಮೃತಕ್ಕಾಗಿ ಭಕ್ತಿ ಸಂಗೀತ ಮತ್ತು ಓಂಕಾರ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಿ, ಡಿಸೆಂಬರ್ ೧೭ ಮತ್ತು ೧೮ರಂದು ಎರಡು ದಿನಗಳ ಕಾಲ ಸಾಮಾಜಿಕ ತಾಣಗಳಾದ ಓಂಕಾರ ಸಮಿತಿಯ ಫೇಸ್‌ಬುಕ್‌ ಮತ್ತು ಯೂಟ್ಯೂಬ್ ನಲ್ಲಿ ಲೈವ್ ಮೂಲಕ ಪ್ರಸಾರ ಮಾಡಲಾಯಿತು. 

ಕರೋನಾ ನಿರ್ಬಂಧಗಳು ಇನ್ನೂ ಇರುವುದರಿಂದ ಅವುಗಳಿಗನುಗುಣವಾಗಿ ಈ ಬಾರಿಯೂ ಸಾಮಾಜಿಕ ತಾಣಗಳ ಮೂಲಕವೇ ಕಾರ್ಯಕ್ರಮಗಳನ್ನು ನಡೆಸಲು ಮುಂಚೆಯೇ ನಿರ್ಧರಿಸಲಾಗಿತ್ತು ಮತ್ತು ಈ ಎಲ್ಲ ಕಾರ್ಯಕ್ರಮಗಳ ಪೂರ್ವಭಾವಿ ತಯಾರಿಗಳನ್ನು ಬಹಳ ವ್ಯವಸ್ಥಿತವಾಗಿ ಮಾಡಲಾಯಿತು.

ಮೊದಲನೆಯ ದಿನ 

ಶುಕ್ರವಾರ ಡಿಸೆಂಬರ್ ೧೭ರಂದು ಓಂಕಾರ ಆಂಜನೇಯ ಪೂಜೆ, ಓಂಕಾರ ಸಿಂಹಾವಲೋಕನ ಮತ್ತು ಹರಿಕಥೆ ಕಾರ್ಯಕ್ರಮಗಳನ್ನು ಓಂಕಾರ ಸಮಿತಿಯ ಚಾನೆಲ್ ಲೈವ್ ಗಳಲ್ಲಿ ಬಿತ್ತರಿಸಲಾಯಿತು. 

Click here for Day-1 Complete Video

ಅದರಂತೆ ಮೊದಲು ಒಂದು ಶುಭದಿನ ಅತ್ಯಂತ ಸರಳವಾಗಿ ಯಾವುದೇ ವಿಜೃಂಭಣೆ ಇಲ್ಲದೇ ಸರಳವಾಗಿ ಆದರೆ ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಆಚರಣೆಗಳಿಗೆ ಚ್ಯುತಿ ಇಲ್ಲದಂತೆ ಪ್ರತಿಬಾರಿಯಂತೆ ಸಂಪ್ರದಾಯ ಬದ್ಧವಾಗಿ ಶ್ರೀ ಓಂಕಾರ ಆಂಜನೇಯನ ವಾರ್ಷಿಕ ಪೂಜೆ ನಡೆಸಿತು.

ದಶಮಾನೋತ್ಸವದ ಸಂದರ್ಭದಲ್ಲಿ ಶ್ರೀ ಓಂಕಾರ ಆಂಜನೇಯ ಸ್ವಾಮಿಗಾಗಿ ಶತಾವಧಾನಿ ಶ್ರೀಯುತ ಡಾ ಆರ್ ಗಣೇಶ್ ಅವರಿಂದ ರಚಿಸಲ್ಪಟ್ಟ ಈ ಕೆಳಗಿನ ಶ್ಲೋಕವನ್ನು ಆಂಜನೇಯ ಸ್ವಾಮಿಗೆ ಸಮರ್ಪಿಸಲಾಯಿತು.

 || ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ |
ಸುಗುಣೇಂದ್ರನುತಾಯ ಶ್ರೀ ಕಪಿಂದ್ರಾದ್ರಾಯ ನಮೋ ನಮಃ ||  

ಓಂಕಾರ ಸಿಂಹಾವಲೋಕನ

ಓಂಕಾರ ಸಮಿತಿಯು ದಶಮಾನೋತ್ಸವದ ಪ್ರಯುಕ್ತ ದಶಮಾನ ಕಾಲ ಓಂಕಾರ ಸಮಿತಿಯು ನಡೆದು ಬಂದ ದಾರಿಯ ಮಾಹಿತಿ ನೀಡುವ  ಪ್ರಯುಕ್ತವಾಗಿ ಓಂಕಾರ ಸಿಂಹಾವಲೋಕನ ಎಂಬ ಕಿರುಚಿತ್ರವನ್ನು ನಿರ್ಮಿಸಿದ್ದರು. ಈ ಕಿರುಚಿತ್ರವನ್ನು ಬೆಂಗಳೂರಿನ ಶ್ರೀ ಸೌರಭ ಕುಲಕರ್ಣಿ ಮತ್ತು ಕುಮಾರಿ ನಮಿತಾ ರವರು ನಿರೂಪಿಸಿ ತಯಾರಿಸಿದ್ದರು. ಓಂಕಾರ ಸಿಂಹಾವಲೋಕನ ಕಿರುಚಿತ್ರ ಓಂಕಾರ ಸಮಿತಿ ಇಲ್ಲಿಯವರೆಗೆ ನಡೆಸಿಕೊಂಡು ಬಂದ ಕಾರ್ಯಕ್ರಮಗಳು ಮತ್ತು ಅವುಗಳ ನಿರ್ವಹಣೆಯ ಮಾಹಿತಿಯನ್ನು ಎಳೆ - ಎಳೆಯಾಗಿ ಬಿಚ್ಚಿಟ್ಟರು. 

Click here Omkar Simahavalokana

ಸುಂದರ ನಿರೂಪಣೆಯೊಂದಿಗೆ ಓಂಕಾರ ಸಮಿತಿಯ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಎಲ್ಲ ಮಹನೀಯರ ಓಂಕಾರ ಸಮಿತಿಯ ಬಗ್ಗೆ ಮಾತನಾಡಿದ ಮನದಾಳದ ಮಾತುಗಳು ಮತ್ತು ಶುಭಾಶಯಗಳು ವಿಶಿಷ್ಟವಾಗಿತ್ತು.

Click here for Omkar Guests Wishes 

ಹರಿಕಥೆ - ಸುಂದರಕಾಂಡ ಆಧಾರಿತ ಹನುಮದ್-ಭಕ್ತಿ 

ಈ ಬಾರಿಯ ಜ್ಞಾನಾಮೃತ ಕಾರ್ಯಕ್ರಮದ ಅಂಗವಾಗಿ ಹರಿಕಥೆ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಮಂಗಳೂರಿನ ಹರಿಕಥಾ ವಿದ್ವಾನ್ ಶ್ರೀ ಡಾ. ಎಸ್ ಪಿ ಗುರುದಾಸ್ ರವರು. ನಶಿಸಿ ಹೋಗುತ್ತಿರುವ ಅದ್ಭುತ ಕಲಾಪ್ರಾಕಾರ ಹರಿಕಥಾ ಕಾಲಕ್ಷೇಪ. ಈ ಕಲೆಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಈ ಬಾರಿ ಹರಿಕಥೆಯನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಯುತ ಡಾ ಎಸ್ ಪಿ ಗುರುದಾಸ ಅವರು ಸುಂದರಕಾಂಡ ಆಧಾರಿತ ಹನುಮದ್-ಭಕ್ತಿ ಎಂಬ ಹರಿಕಥೆಯನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಎಲ್ಲರ ಮನಮುಟ್ಟುವಂತೆ ನಿರೂಪಿಸಿ ಮಸ್ಕತ್ ಕನ್ನಡಿಗರನ್ನೆಲ್ಲ ಆಂಜನೇಯನ ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗಿಸಿದರೆಂದರೆ ತಪ್ಪಾಗಲಾರದು. ಶ್ರೀ ಗುರುದಾಸ್ ಅವರಿಗೆ ಹಿಮ್ಮೇಳ ಸಹಕಾರವನ್ನು  ಶ್ರೀ ರಮೇಶ್ ಹೆಬ್ಬಾರ್, ಶ್ರೀ ಸುಮನ್ ದೇವಾಡಿಗ, ಶ್ರೀ ಆತ್ರೇಯ ಗಂಗಾಧರ್ ಮತ್ತು ಶ್ರೀ ಸತೀಶ್ ಕಾಮತ್ ರವರು ಅಷ್ಟೇ ಅದ್ಭುತವಾಗಿ ನೀಡಿದರು.


ಶ್ರೀಮತಿ ಕವಿತಾ ರಾಮಕೃಷ್ಣ ಮತ್ತು ಶ್ರೀಮತಿ ವೀಣಾ ಶ್ರೀನಿವಾಸ ಅವರು ದಶಮಾನೋತ್ಸವದ ವಿವರಣೆ, ಕಲಾವಿದರ ಪರಿಚಯ ಹಾಗೂ ಸುಂದರವಾದ ನಿರೂಪಣೆಯೊಂದಿಗೆ ಮೊದಲನೆಯ ದಿನದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಎರಡನೆಯ ದಿನ 

ಶನಿವಾರ ಡಿಸೆಂಬರ್ ೧೮ರಂದು ಓಂಕಾರ ಜ್ಞಾನಾಮೃತ ಹಾಗೂ ಓಂಕಾರ ಸಂವಾದ ಕಾರ್ಯಕ್ರಮಗಳನ್ನು ಓಂಕಾರ ಸಮಿತಿಯ ಚಾನೆಲ್ ಲೈವ್ ಗಳಲ್ಲಿ ಬಿತ್ತರಿಸಲಾಯಿತು. 

Click here for Day-2 Complete Video

ಓಂಕಾರ ನಾದಾಮೃತ

ಈ ವರ್ಷದ ಓಂಕಾರ ನಾದಾಮೃತ ಕಾರ್ಯಕ್ರಮದ ಈ ಬಾರಿಯ ಅತಿಥಿಗಳು ಮೈಸೂರಿನ ಜನಪ್ರಿಯ ಗಾಯಕ ಶ್ರೀ ಶ್ರೀಹರ್ಷರವರು ನಡೆಸಿಕೊಟ್ಟರು‌. ಶ್ರೀಹರ್ಷ ಅವರು ರಂಗಗೀತೆ, ದಾಸರ ಪದಗಳು, ಶರೀಫರ ತತ್ವಪದ, ತೆಲುಗು ಭಕ್ತಿಗೀತೆಗಳನ್ನೊಳಗೊಂಡ ಅಮೋಘ ಗಾಯನ ಮತ್ತು ವಿಭಿನ್ನವಾದ ಹಾಡುಗಳ ನಿರೂಪಣೆ ಸಂಗೀತದ ರಸಿಕರಿಗೆ ರಸದೌತಣ ನೀಡಿ ಸಂಗೀತ ಸುಧೆಯಲ್ಲಿ ಎಲ್ಲರನ್ನೂ ಮೀಯಿಸಿತು.  ಶ್ರೀಹರ್ಷ ಅವರ ಸಂಗೀತ ಎಲ್ಲಾ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿಸಿ ಮಸ್ಕತ್ ನ ಸಭಾಂಗಣದಲ್ಲಿಯೇ ಕಾರ್ಯಕ್ರಮ ನಡೆಸಿಕೊಡುವಂತೆ ಕೇಳಿಕೊಳ್ಳುವ ಸಂದೇಶಗಳು ಹರಿಯುತ್ತಿದ್ದವು. 

ಓಂಕಾರ ಸಂವಾದ

ಓಂಕಾರ ಜ್ಞಾನಾಮೃತ ಕಾರ್ಯಕ್ರಮದ ನಂತರ ಓಂಕಾರ ಸಮಿತಿಯ ನೇರವಾಗಿ ನಡೆದ ಓಂಕಾರ ಸಂವಾದ ಕಾರ್ಯಕ್ರಮದಲ್ಲಿ ವಿಶ್ವದ ಬೇರೆ ಬೇರೆ ಸ್ಥಳಗಳಿಂದ ಓಂಕಾರ ಸಮಿತಿಯ ರೂವಾರಿಗಳು , ಸದಸ್ಯರು , ಕಾರ್ಯಕರ್ತರು ಸಮಿತಿಯೊಂದಿಗಿನ ತಮ್ಮ ತಮ್ಮ  ಒಡನಾಟಗಳನ್ನು ಅನುಭವವನ್ನು ಎರಡು ಘಂಟೆಗಳ ಕಾಲ ಹಂಚಿಕೊಂಡು ತಮ್ಮ ಹರ್ಷ ವ್ಯಕ್ತಪಡಿಸಿದರು. 

Click here for Omkar Samvaada 

ಶ್ರೀಮತಿ ಗಿರಿಜಾ ರವಿಕುಮಾರ ಮತ್ತು ಶ್ರೀಮತಿ ಶ್ರೀಮಾತಾ ಹಿರಿಯಣ್ಣ ಅವರು ಜ್ಞಾನಾಮೃತದ ವಿವರಣೆ, ಕಲಾವಿದರ ಪರಿಚಯ ಹಾಗೂ  ಸುಂದರವಾದ ನಿರೂಪಣೆಯೊಂದಿಗೆ ಎರಡನೇಯ ದಿನದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ  ನಡೆಸಿಕೊಟ್ಟರು. 

ಒಟ್ಟಿನಲ್ಲಿ ಓಂಕಾರ ಸಮಿತಿಯ ದಶಮಾನೋತ್ಸವ  ವರ್ಷದ ವಿಶೇಷ ಕಾರ್ಯಕ್ರಮಗಳು ನಿರ್ಬಂಧಗಳ ನಡುವೆಯೂ  ಅವಿಸ್ಮರಣೀಯವಾಗಿ   ಅತ್ಯಂತ ಸಂಭ್ರಮದಿಂದ ಎರಡು ದಿನಗಳ ಕಾಲ ಯಶಸ್ವಿಯಾಗಿ ನೆರವೇರಿತು.

ವರದಿ : ಶ್ರೀಮತಿ ವೀಣಾ ಶ್ರೀನಿವಾಸ