ಓಂಕಾರ ನಾದಾಮೃತ -೨೦೨೦

ಓಂಕಾರ ನಾದಾಮೃತ - ೨೦೨೦


ಮಸ್ಕತ್ತಿನ ಓಂಕಾರ ಸಮಿತಿಯು ಕಳೆದ ಕೆಲವು ವರ್ಷಗಳಿಂದ ಸದಭಿರುಚಿಯ ಓಂಕಾರ ಜ್ಞಾನಾಮೃತ ಮತ್ತು ಓಂಕಾರ ನಾದಾಮೃತ ಕಾರ್ಯಕ್ರಮಗಳನ್ನು ಪ್ರತೀ ವರ್ಷ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಭಾರತದ ಅತ್ಯಂತ ಉತ್ತಮ ವಾಗ್ಮಿಗಳು ಮತ್ತು ಸಂಗೀತ ವಿದ್ವಾಂಸರುಗಳು ಈ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. 

ವರ್ಷದ ಆರಂಭದಲ್ಲಿ ಕರೋನ ಮಹಾಮಾರಿಯ ಕಪಿಮುಷ್ಠಿಯಲ್ಲಿ ಪ್ರಪಂಚ ಸಿಲುಕಿ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ಬಂಧತೆ ಇದ್ದಾಗ ಓಂಕಾರ ಜ್ಞಾನಾಮೃತ ಕಾರ್ಯಕ್ರಮವನ್ನು ಅನಿವಾರ್ಯವಾಗಿ ರದ್ದು ಪಡಿಸಬೇಕಾಯಿತು. ಕಾಲಕಳೆದಂತೆ ಕಲೆ ಕಲಾಸಕ್ತರ ಕಲಾರಸಿಕರ ಬಳಿ ಬರುವುದಕ್ಕೆ ಅನೇಕ ದಾರಿಗಳನ್ನು ಕಂಡುಕೊಂಡಿತು. ಅದರಲ್ಲಿ ಒಂದು ಅಂತರ್ಜಾಲ ಉಪಯೋಗಿಸಿ ಮಾಡುವ ನೇರಪ್ರಸಾರ ಕಾರ್ಯಕ್ರಮಗಳು.

ಓಂಕಾರ ಸಮಿತಿಯು ಕೂಡ ಅದೇ ನಿಟ್ಟಿನಲ್ಲಿ ಹೆಜ್ಜೆ ಇಟ್ಟು ಓಂಕಾರ ನಾದಾಮೃತ - ೨೦೨೦ ಕಾರ್ಯಕ್ರಮವನ್ನು ಸಂಗೀತ ಅಭಿಮಾನಿಗಳಿಗೆ ತಲುಪಿಸುವ ಯೋಜನೆ ಹಮ್ಮಿಕೊಂಡಿತು. ಅದರಂತೆ ಈ ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧಪಡಿಸಲಾಯಿತು.

ಅದರ ಮೊದಲ ಹೆಜ್ಜೆಯಾಗಿ ಪ್ರಖ್ಯಾತ ಭಕ್ತಿ ಸಂಗೀತ ಗಾಯಕ ಯುವ ಕಲಾವಿದ ಶ್ರೀ ಅನಂತರಾಜ ಮಿಸ್ತ್ರಿ ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ ಅವರು ಸಹ ಸಂತೋಷದಿಂದ ಒಪ್ಪಿಕೊಂಡರು.

ಈಗ ಬೆಂಗಳೂರಿನಲ್ಲಿ ನೆಲೆಸಿರುವ ಓಂಕಾರ ಸಮಿತಿಯ ಸದಸ್ಯರಾದ ಶ್ರೀ ಯೋಗಾನಂದ, ಶ್ರೀರಾಮಚಂದ್ರ ರಾವ್, ಅನಿಲ್ ಕುಮಾರ  ಟಿ. ಡಿ.  ಮತ್ತು ಶ್ರೀ ಸುಧೀಂದ್ರ ಅವರ ಸಹಕಾರದಿಂದ ಕಲಾವಿದ ಶ್ರೀ ಅನಂತರಾಜ ಮಿಸ್ತ್ರಿ ಯವರು ಪಕ್ಕವಾದ್ಯ ಕಲಾವಿದರೊಡನೆ ಪ್ರಯೋಗ್ ಸ್ಟುಡಿಯೋಗೆ ಹೋಗಿ ಅಲ್ಲಿ ಸಂಪೂರ್ಣ ಸಂಪೂರ್ಣ ಕಾರ್ಯಕ್ರಮವನ್ನು ನಡೆಸಿ ಅದರ ಧ್ವನಿಮುದ್ರಣವನ್ನು ಮಸ್ತ್ಕತ್ತಿಗೆ ಕಳಿಸಿಕೊಟ್ಟರು.

ಓಂಕಾರ ಸಮಿತಿಯ ಸದಸ್ಯರಾದ ಶ್ರೀ ಮಹೇಶ್ ಪುರೋಹಿತ್ ರವರು ಅದನ್ನು ಇಲ್ಲಿ ಸಂಕಲನ ಮಾಡಿ ನೇರಪ್ರಸಾರಕ್ಕೆ ಸಿದ್ಧಪಡಿಸಿದರು. ಹೀಗೆ ಒಂದು ಸುಂದರ ಸಂಗೀತ ಕಾರ್ಯಕ್ರಮ ಸಿದ್ಧವಾಯಿತು. ಬರಿಯ ಮಸ್ಕತ್ ಮಾತ್ರವೇ ಅಲ್ಲದೆ ಪ್ರಪಂಚದ ಎಲ್ಲೆಡೆಯೂ ಇರುವ ಸಂಗೀತಾಸಕ್ತರನ್ನು ಕೂಡ ತಲುಪಲು ಸಾಧ್ಯವಾಯಿತು.

ಇದೇ ಸೆಪ್ಟೆಂಬರ್ 25 ನೇ ತಾರೀಖು,  ಶುಕ್ರವಾರ ಸಂಜೆ ಓಮಾನ್ ಸಮಯ 6:00 ಮತ್ತು ಭಾರತೀಯ ಕಾಲಮಾನ 7.30 ಗೆ ಸರಿಯಾಗಿ ಯೂಟ್ಯೂಬ್ ಮತ್ತು ಫೇಸ್ಬುಕ್ನಲ್ಲಿ ಈ ಕಾರ್ಯಕ್ರಮವನ್ನು ನೇರವಾಗಿ ಪ್ರಸಾರ ಮಾಡಲಾಯಿತು.

ಮೊದಲು ಅಂದು ನಿಧನರಾದ ಪ್ರಖ್ಯಾತ ಗಾಯಕ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಂತರ ಓಂಕಾರ ಸಮಿತಿಯ ಸದಸ್ಯ ಶ್ರೀ ರವಿಕುಮಾರ್ ರವರ ಸ್ವಾಗತ ಭಾಷಣದಿಂದ ಕಾರ್ಯಕ್ರಮ ಆರಂಭವಾಯಿತು. ಅವರು ತಮ್ಮ ಕಿರು ಭಾಷಣದಲ್ಲಿ ನೇರ ಪ್ರಸಾರ ಕಾರ್ಯಕ್ರಮದ ಹಿನ್ನೆಲೆ,  ಯೋಜನೆ ಮತ್ತು ಕಾರ್ಯರೂಪಕ್ಕೆ ತಂದ ಬಗೆಗೆ ಹೇಳಿದರು. 


ನಂತರ ಶ್ರೀಮತಿ ವೀಣಾ ಶ್ರೀನಿವಾಸ್ ರವರು ಕಲಾವಿದರ ಕಿರುಪರಿಚಯ ಮತ್ತು ಕಾರ್ಯಕ್ರಮದ ನಿರೂಪಣೆ ಮಾಡಿಕೊಟ್ಟರು. 


ಪರಿಚಯದ ನಂತರ ಓಂಕಾರ ಸಮಿತಿಯ ಆರಾಧ್ಯದೈವ ಆಂಜನೇಯನನ್ನು ಸ್ಮರಿಸಿ ಸಂಗೀತ ಕಾರ್ಯಕ್ರಮ ಆರಂಭವಾಯಿತು.


ಶ್ರೀ ಅನಂತರಾಜ್ ಮಿಸ್ತ್ರಿ ಅವರ ಭಕ್ತಿ ರಸಪೂರ್ಣ ಸಂಗೀತ ಕಾರ್ಯಕ್ರಮಕ್ಕೆ ಪಕ್ಕವಾದ್ಯದಲ್ಲಿ ಪ್ರತಿಭಾನ್ವಿತ ಕಲಾವಿದರುಗಳಾದ ಶ್ರೀ ಭರತ್ ಆತ್ರೇಯಸ್ ರವರು ಕೊಳಲಿನಲ್ಲಿ , ಶ್ರೀ ಎಂ ಸಿ ಶ್ರೀನಿವಾಸ್ ರವರು ರಿದಮ್ ಪ್ಯಾಡಿನಲ್ಲಿ , ಶ್ರೀ ವಿಕಾಸ್ ನರೇಗಲ್ ರವರು ತಬಲದಲ್ಲಿ,  ಶ್ರೀ ಆಕಾಶ್ ಪರ್ವರವರು ಕೀಬೋರ್ಡಿನಲ್ಲಿ ಮತ್ತು ಶ್ರೀ ಸಂಜೀವ ಕುಲಕರ್ಣಿಯವರು ತಾಳದಲ್ಲಿ ಸಾಥ್ ನೀಡಿದರು.


ಕಲಾವಿದ ಶ್ರೀ ಅನಂತರಾಜ್ ಮಿಸ್ತ್ರಿ ಅವರು ಮೊದಲಿಗೆ ಶ್ರೀ ರಮಾಕಾಂತ ವಿಠಲ ದಾಸರ ಚಿಪ್ಪಗಿರಿ ನಿಲಯ ಕೃತಿಯಿಂದ ಭಕ್ತಿಪೂರ್ಣ ಕಾರ್ಯಕ್ರಮವನ್ನು ಆರಂಭಿಸಿ ಎಲ್ಲ ಶ್ರೋತೃಗಳ ಮನದಲ್ಲಿ ಭಕ್ತಿಭಾವ ಬಿತ್ತಿದರು. ನಂತರ ಶ್ರೀ ಜಗನ್ನಾಥದಾಸರ ರೋಗಹರನೇ ಕೃಪಾಸಾಗರ ಕೃತಿಯ ಮೂಲಕ ಶ್ರೀ ಗುರು ರಾಯರನ್ನು ಈ ಕರೋನಾ ಮಾರಿಯಿಂದ ರಕ್ಷಿಸು ಎಂದು ಪ್ರಾರ್ಥಿಸಿಕೊಂಡರು.

ನಂತರದ ಶ್ರೀ ಶ್ರೀಪಾದರಾಯರ ಮೊದಲೊಂದಿಪೆ ನಿನಗೆ ಗಣನಾಥ ಕೃತಿಯಿಂದ ವಿಘ್ನೇಶ್ವರನನ್ನು ಪ್ರಾರ್ಥಿಸಿದರು. ಮುಂದೆ ಶ್ರೀಪುರಂದರದಾಸರ ಗೆದ್ದೆಯೋ ಹನುಮಂತ,  ಪ್ರಾಣೇಶ ವಿಠ್ಠಲ ರಾಯರ ಪವನ ಸಂಭೂತ ಕೃತಿಗಳು ಹನುಮಂತನನ್ನು ಕಣ್ಣಮುಂದೆ ತಂದು ನಿಲ್ಲಿಸಿದವು.


ನಂತರದ ಪ್ರಸ್ತುತಿ ಶ್ರೀ ಶೇಷ ವಿಠಲ ದಾಸರ ರಮಾಸಮುದ್ರನ ಕುಮಾರಿ,  ಶ್ರೀ ಪುರಂದರದಾಸರ ಬಾರಯ್ಯ ಮನೆಗೆ ಭರತಾಗ್ರಜ ಕೃತಿಗಳು ಶ್ರೋತೃಗಳನ್ನು   ಭಕ್ತಿರಸದಲ್ಲಿ ಮುಳುಗಿಸಿದವು. ಅವರ ಮುಂದಿನ ಕೃತಿ  ಈ ಸಂಕಷ್ಟ ಕಾಲದಲ್ಲಿ  ಸಮಾಧಾನಿಸುವಂಥ ಸಾವಧಾನದಿಂದಿರು ಮನವೇ ಶ್ರೋತೃಗಳ ಅಂತರಂಗ ಮುಟ್ಟಿತು.

ಮುಂದಿನದು ಹರಿನಾಮದ ಬಲವನ್ನು ಹೇಳುವ ಶ್ರೀಪುರಂದರದಾಸರ ಕಲಿಯುಗದಲ್ಲಿ ಹರಿನಾಮವ ನೆನೆದರೆ  ಕೃತಿ ಶ್ರೀ ಅನಂತರಾಜ್ ಮಿಸ್ತ್ರಿ ಯವರನ್ನು ಜನಪ್ರಿಯಗೊಳಿಸಿ ಅವರನ್ನು ಮನೆಮಾತಾಗಿಸಿದ ಅವರ ಪ್ರಖ್ಯಾತಗೀತೆ ಶ್ರೀ ವಾದಿರಾಜ ವಿರಚಿತ ಆವಕುಲವೋ ರಂಗ ಕೃತಿಯನ್ನು ಹಾಡಿ ಕೇಳುಗರ ಮನ ರಂಜಿಸಿದರು.

ನಂತರದಲ್ಲಿ ಅವರು ಪ್ರಸ್ತುತಪಡಿಸಿದ ಶ್ರೀಪುರಂದರದಾಸರ ಹೂವ ತರುವರ ಮನೆಗೆ ಹುಲ್ಲ ತರುವ , ಶ್ರೀ ಪ್ರಸನ್ನ ವೆಂಕಟದಾಸರ ದಡ ಸೇರಿಸೋ ಭವದ ಗೀತೆಗಳು ಎಲ್ಲರ ಮನ ಗೆದ್ದವು. ಅವರು ಮುಂದಿನ ಕೃತಿ ಶ್ರೀ ಕನಕದಾಸರ ತೊರೆದು ಜೀವಿಸಬಹುದೇ ಕೃತಿ ಕೇಳುಗರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ದಿತು.

ಅವರ ಮುಂದಿನ‌ಪ್ರಸ್ತುತಿ ಶ್ರೀ ಶ್ರೀಪತಿ ವಿಠ್ಠಲ ದಾಸರ ಪಾಂಡುರಂಗ ತ್ವತ್ಪಾದ ಪಾಲಿಸಯ್ಯ ಮತ್ತು ಅಪರೂಪದ ರಚನೆಕಾರ ಪರಮ ವೈರಾಗ್ಯಶಾಲಿ ಶ್ರೀ ತಮ್ಮಣ್ಣ ದಾಸರ ಪರಿಪೂರ್ಣ ಪಾವನ ಗುಣ ಕೃತಿಗಳು ಕಲಾರಸಿಕರನ್ನು ಮೈಮರೆಯುವಂತೆ ಮಾಡಿದವು.

ಹೀಗೆ ಶ್ರೀ ಅನಂತರಾಜ ಮಿಸ್ತ್ರಿ ಯವರು ಅವರಷ್ಟೇ ಪ್ರತಿಭಾನ್ವಿತ ಯುವ ಪಕ್ಕವಾದ್ಯದವರೊಡನೆ ಶ್ರೋತೃಗಳನ್ನು ತಮ್ಮ ಮಾಂತ್ರಿಕ ಗಾನದಿಂದ  ಅದ್ಭುತ ನಾದಲೋಕಕ್ಕೆ  ಕೊಂಡೊಯ್ದು ನಾದದ ರಸದೌತಣವನ್ನೇ ಉಣಬಡಿಸಿದರು.

ಈ ಅದ್ಭುತ ಸುಂದರ ಸಂಗೀತ ಕಾರ್ಯಕ್ರಮದ ನಂತರ ಎಲ್ಲಾ ಕಲಾವಿದರನ್ನು ಬೆಂಗಳೂರಿನಲ್ಲಿ ನೆಲೆಸಿರುವ ಓಂಕಾರ ಸಮಿತಿಯ ಸದಸ್ಯರು ಶ್ರೀ ಯೋಗಾನಂದ, ಶ್ರೀರಾಮಚಂದ್ರ ರಾವ್  ಮತ್ತು ಶ್ರೀ ಸುಧೀಂದ್ರ  ಅವರು ಪರಿವಾರದೊಂದಿಗೆ ಸನ್ಮಾನಿಸಿದರು.



ನಂತರ ಶ್ರೀ ರವೀಂದ್ರ ಅವರು ವಂದನಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮ ಸಂಪನ್ನವಾಯಿತು.


ನೇರ ಸಂಗೀತ ಕಾರ್ಯಕ್ರಮ ಪ್ರಸಾರದ ಯೋಜನೆ ಯಶಸ್ವಿಯಾಗಿ ಮುಕ್ತಾಯವಾಯಿತು.

ಕಾರ್ಯಕ್ರಮದ ವಿಡಿಯೋ ಲಿಂಕ್:


ವರದಿ ಶ್ರೀಮತಿ ವೀಣಾ ಶ್ರೀನಿವಾಸ್