ಓಂಕಾರ ಬಾಲ ಜ್ಞಾನಾಮೃತ-೨೦೧೯
ಮಕ್ಕಳಿಗಾಗಿ "ಜೀವನದಲ್ಲಿ ಮೌಲ್ಯಗಳು "
ಓಂಕಾರ ಸಮಿತಿ, ಮಸ್ಕತ್ ವತಿಯಿಂದ ದಿನಾಂಕ ೯-೩-೨೦೧೯, ಶನಿವಾರದಂದು ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಓಂಕಾರ ಬಾಲ-ಜ್ಞಾನಾಮೃತ ವಿಶೇಷವಾಗಿ ಡಾ. ಗುರುರಾಜ ಕರಜಗಿಯವರಿಂದ ಮಕ್ಕಳೊಂದಿಗೆ ಸಂವಾದ "ಜೀವನದಲ್ಲಿ ಮೌಲ್ಯಗಳು" ಎಂಬ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂದಿತು.
ಈ ಕಾರ್ಯಕ್ರಮದ ತಯಾರಿಯು ಒಂದು ವಾರದಿಂದ ಮಕ್ಕಳ ಹೆಸರುಗಳ ನೊಂದಾವಣಿಯೊಂದಿಗೆ ಪ್ರಾರಂಭವಾಯಿತು. ಶ್ರೀಯುತ ಕಿರಣ್ ಮಂಜುನಾಥ್ ರವರು ಮಕ್ಕಳ ಹೆಸರುಗಳನ್ನು ನೋಂದಾಯಿಸಿಕೊಂಡರು. ಶ್ರೇಷ್ಠ ಪ್ರೇರಣಾತ್ಮಕ ಮಾತುಗಾರರಾದ ಡಾ. ಗುರುರಾಜ ಕರಜಗಿಯವರ ಮಾತುಗಳನ್ನು ಆಲಿಸುವುದು ಮಕ್ಕಳ ಸೌಭಾಗ್ಯವೇ ಆದುದರಿಂದ ಎಲ್ಲ ಪೋಷಕರು ತಮ್ಮ ಮಕ್ಕಳ ಹೆಸರುಗಳನ್ನು ಅತ್ಯಂತ ಶೀಘ್ರತೆಯಿಂದ ನೋಂದಾಯಿಸಿದರು. ಒಟ್ಟು ೭೫ ಮಕ್ಕಳ ಹೆಸರುಗಳನ್ನು ನೊಂದಾಯಿಸಿಕೊಳ್ಳಲಾಯಿತು.
ಶನಿವಾರ ಬೆಳಿಗ್ಗೆ ೯:೪೫ ಗಂಟೆಗೆ ಅಲ್-ಅಸ್ಸಲಾಹ್ ಟವರ್ ಗುಬ್ರಾ ನಲ್ಲಿ ಮರುನೊಂದಾವಣಿಯೊಂದಿಗೆ ಎಲ್ಲ ಮಕ್ಕಳು ಅತ್ಯಂತ ಉತ್ಸಾಹದಿಂದ ಸೇರಿದರು. ಅತಿಥಿಗಳ ಆಗಮನದ ನಂತರ ಸರಿಯಾಗಿ ೧೦:೦೦ ಗಂಟೆಗೆ ಕಾರ್ಯಕ್ರಮ ಆರಂಭವಾಯಿತು.
ಕಾರ್ಯಕ್ರಮದ ನಿರೂಪಕಿಯಾದ ಶ್ರೀಮತಿ ಜಯಾ ಛಬ್ಬಿಯವರು, "ಕರುಣಾಳು ಬಾ ಬೆಳಕೇ ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು" ಎಂಬ ಹಾಡನ್ನು ಮೆಲುಕು ಹಾಕುತ್ತಾ ಕಾರ್ಯಕ್ರಮದ ಶುಭಾರಂಭ ಮಾಡಿದರು. ಮೌಲ್ಯ ಎಂದರೇನು ಎಂದು ವಿವರಿಸುತ್ತಾ ಕಾರ್ಯಕ್ರಮದ ಮುಖ್ಯ ವಿಷಯ "ಜೀವನದಲ್ಲಿ ಮೌಲ್ಯಗಳು" ಎಂದು ಪರಿಚಯಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಗುರುರಾಜ ಕರಜಗಿಯವರನ್ನು ಮುದ್ದು ಮಕ್ಕಳಿಂದ ಪುಷ್ಪ ಗುಚ್ಛ ಅರ್ಪಣೆ ಮಾಡುವುದರೊಂದಿಗೆ ಬರಮಾಡಿಕೊಂಡರು.
ಅದೇ ರೀತಿ ಉಪನ್ಯಾಸವನ್ನು ಆಲಿಸಲು ನೆರೆದಂತಹ ಮುದ್ದು ಮಕ್ಕಳನ್ನು ಸ್ವಾಗತಿಸಿದರು. ಡಾ. ಗುರುರಾಜ ಕರಜಗಿ ಗುರುಗಳ ಸುದೀರ್ಘ ಪರಿಚಯದೊಂದಿಗೆ ಕಾರ್ಯಕ್ರಮ ಮುಂದುವರೆಯಿತು. ಗುರುಗಳ ಜೀವನ ಹಾಗು ಸಾಧನೆಗಳನ್ನು ಮೆಲುಕು ಹಾಕುತ್ತ ಗುರುಗಳನ್ನು ಉತ್ಸಾಹಭರಿತ ಚಪ್ಪಾಳೆಗಳೊಂದಿಗೆ ವೇದಿಕೆಗೆ ಆಹ್ವಾನಿಸಿ, ಮಕ್ಕಳ ಜ್ಯೋತಿಮಂತ್ರದೊಂದಿಗೆ ಡಾ. ಗುರುರಾಜ ಕರಜಗಿಯವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗುರುಗಳ ಉಪನ್ಯಾಸ "ಮೌಲ್ಯ" ಎಂದರೇನು? ಎಂಬ ಸರಳ ಪ್ರಶ್ನೆಯೊಂದಿಗೆ ಪ್ರಾರಂಭವಾಯಿತು. ಮೌಲ್ಯ ಅಂದರೆ ಬೆಲೆ ಅಂತಾನೂ ಅರ್ಥ ಆಗುತ್ತದೆ, ಉದಾಹರಣೆಗೆ ಪೆನ್ನು, ಬಿಲ್ಡಿಂಗ್, ಮೈಕ್ ಮುಂತಾದವು. ಎಲ್ಲ ವಸ್ತುಗಳ ಮೌಲ್ಯವನ್ನು ಅಳೆಯಬಹುದು, ಆದರೆ ಮನುಷ್ಯನ ಜೀವನದ ಮೌಲ್ಯವನ್ನು ಹೇಗೆ ಅಳೆಯುವುದು ಎಂದು ಪ್ರಶ್ನಿಸಿದರು. ಈ ಪ್ರಶ್ನೆಯ ಉತ್ತರವನ್ನು ವಿವರಿಸುವಾಗ ಗಾಂಧಿ ಹೇಗೆ ಮಹಾತ್ಮರಾದರು, ಬುದ್ಧ, ಮದರ್ ತೆರೇಸಾ ಹೇಗೆ ಮಹಾನ್ ವ್ಯಕ್ತಿಗಳಾದರು? ಜನರು ಅವರನ್ನು ಏಕೆ ಸ್ಮರಿಸುತ್ತಾರೆ? ಎಂದು ವಿವರಿಸಿ, ಯಾವ ಗುಣಗಳಿಂದ ಮನುಷ್ಯ ದೊಡ್ಡವನಾಗುತ್ತಾನೋ ಆ ಗುಣಗಳನ್ನು ಮೌಲ್ಯ ಎನ್ನುತ್ತೇವೆ ಎಂದರು. ಗಾಂಧೀಜಿಯವರ ಅಹಿಂಸೆ ಮತ್ತು ಪ್ರಾಮಾಣಿಕತೆಯ ಗುಣ ಒಬ್ಬ ಶತ್ರುವನ್ನು ಮಿತ್ರನನ್ನಾಗಿಸಿತು. ಸ್ವತಂತ್ರ ಹೋರಾಟದಲ್ಲಿ ಅವರ ತಾಳ್ಮೆ ಮತ್ತು ಸಹಿಷ್ಣುತೆಯ ಗುಣ ಅವರನ್ನು ಎತ್ತರಕ್ಕೇರಿಸಿತು. ಮನುಷ್ಯನ ಜೀವನವನ್ನು ಅವನು ಬದುಕಿದ ರೀತಿಯಿಂದ ಅಳೆಯಬಹುದು ಹಣದಿಂದಲ್ಲ ಎಂದು ಸಮರ್ಥಿಸಿದರು. ಇದರೊಂದಿಗೆ ಕಠೋಪನಿಷತ್ತಿನಿಂದ ಆಯ್ದುಕೊಂಡು ನಚಿಕೇತನ ಕತೆಯನ್ನು ಬಣ್ಣಿಸಿದರು. ಸಮಾಜದಲ್ಲಿ ನಮ್ಮ ನಡವಳಿಕೆ ಹೇಗಿರಬೇಕು, ಎಂತಹ ನಡವಳಿಕೆಗಳನ್ನು ನಾವು ಹೊಂದಿರಬೇಕು, ಯಾವ ನಡವಳಿಕೆಗಳನ್ನು ವ್ಯಯಕ್ತಿಕವಾಗಿ ಹಾಗು ಸಾಮಾಜಿಕವಾಗಿ ಅಳವಡಿಸಿಕೊಂಡರೆ ಉತ್ತಮ ಎಂದು ಮಕ್ಕಳಿಗೆ ಸೂಕ್ತವಾದ ಉದಾಹರಣೆಗಳೊಂದಿಗೆ ತಿಳಿಸಿದರು.
ಮೌಲ್ಯಗಳನ್ನು ಕಲಿಸಲಾಗುವುದಿಲ್ಲ ಅವುಗಳನ್ನು ತಿಳಿಸಿ ಹೇಳಲಾಗುತ್ತದೆ, ಅನುಸರಣೆ ಮಾಡಲಾಗುತ್ತದೆ ಎಂದು ಹೇಳಲು ಕೆಲವು ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಿದರು.
೧. ಚಟುವಟಿಕೆ: ಎರಡು ಹಗ್ಗದ ತುಣುಕುಗಳು, ಇಬ್ಬರು ಮಕ್ಕಳು ಒಂದು ಹಗ್ಗದ ಎರಡು ತುದಿಗಳನ್ನು ಒಂದು ಮಗುವಿನ ಎರಡು ಕೈಗಳಿಗೆ ಕಟ್ಟಿದರು. ಇನ್ನೊಂದು ಹಗ್ಗವನ್ನು ಅದರೊಳಗೆ ಹಾಯಿಸಿ ತೆಗೆದುಕೊಂಡು ಮತ್ತೊಂದು ಮಗುವಿನ ಎರಡು ಕೈಗಳಿಗೆ ಕಟ್ಟಿದರು. ಈಗ ಎರಡು ಮಕ್ಕಳಿಗೆ ಹಗ್ಗವನ್ನು ಬಿಡಿಸಿಕೊಳ್ಳಲು ತಿಳಿಸಿದರು. ಮಕ್ಕಳು ಎಷ್ಟೇ ಪ್ರಯತ್ನಪಟ್ಟರೂ ಆಗಲಿಲ್ಲ. ಬೇರೆ ಮಕ್ಕಳಿಗೆ ಅದು ಸರಳವೆನಿಸಿ ಮೇಲೆ ಬಂದು ಅವರಿಬ್ಬರನ್ನು ಬಿಡಿಸಲು ಪ್ರಯತ್ನಿಸಿದರೂ ಆಗಲಿಲ್ಲ. ಆಗ ಗುರುಗಳು ಉಪಾಯ ತಿಳಿಸಿದರು, ಅದರಂತೆ ಮಕ್ಕಳು ಪ್ರಯತ್ನಿಸಿದಾಗ ಆ ಇಬ್ಬರು ಮಕ್ಕಳನ್ನು ಬೇರ್ಪಡಿಸುವುದು ಸರಳವಾಯಿತು.
ಸಾರಾಂಶ - ಮೌಲ್ಯಗಳೊಂದಿಗೆ ಬದುಕುವವರನ್ನು ನೋಡಿದಾಗ ಅದು ಸುಲಭವೆನಿಸುತ್ತದೆ ಆದರೆ ಅದೇ ರೀತಿ ನಾವು ಅನುಸರಿಸಲು ಹೋದರೆ ಕಷ್ಟಗಳ ಅರಿವಾಗುತ್ತದೆ, ಆದ್ದರಿಂದ ಗಾಂಧಿಯಂತೆ ಬುದ್ಧನಂತೆ ಜೀವನ ನಡೆಸುವುದು ಕಷ್ಟವೆಂದು ವಿವರಿಸಿದರು. ಅದೇ ರೀತಿ ಅಡ್ಡಹಾದಿಗಳು, ಠಕ್ಕ ಉಪಾಯಗಳು ನೆರವಿಗೆ ಬರಲಾರವು ಎಂದು ಪ್ರತಿಪಾದಿಸಿದರು. ನಮ್ಮ ಸ್ವಂತ ಅನುಭವಗಳ ಉತ್ಪನ್ನಗಳು, ಮೌಲ್ಯಗಳ ಆಚರಣೆಗಳು ಸರಿಯಾದ ಗ್ರಹಿಕೆಗೆ ಅನುವು ಮಾಡಿಕೊಡುತ್ತವೆ. ತಪ್ಪು ಗ್ರಹಿಕೆಗಳು ಮೌಲ್ಯಗಳನ್ನು ತಪ್ಪಾಗಿ ಅರ್ಥೈಸಬಹುದು.
೨. ಚಟುವಟಿಕೆ: ೧೨ ಮೊಳೆಗಳು- ಒಂದು ಮೊಳೆಯನ್ನು ನಿಲ್ಲಿಸಿ ಉಳಿದ ೧೧ ಮೊಳೆಗಳನ್ನು ಅದರ ಮೇಲೆ ಇಟ್ಟು ಬೀಳದಂತೆ ನೋಡಿಕೊಳ್ಳಬೇಕು. ಹಲವು ಮಕ್ಕಳು ಬಂದು ಈ ಚಟುವಟಿಕೆಯನ್ನು ಮಾಡಿದರು ಆದರೆ ಮೊಳೆಗಳು ಬೀಳತೊಡಗಿದವು. ನಂತರ ಗುರುಗಳು ಈ ಪ್ರಯೋಗವನ್ನು ಹೇಗೆ ಮಾಡುವುದು ಎಂದು ವಿವರಿಸಿದರು, ಒಂದು ಮೊಳೆಯ ಮೇಲೆ ಉಳಿದ ೧೧ ಮೊಳೆಗಳನ್ನು ಬೀಳದಂತೆ ಇಟ್ಟರು.
ಸಾರಾಂಶ - ಒಂದು ಕುಟುಂಬದಲ್ಲಿ ಎಲ್ಲರೂ ಸರಿಯಾಗಿ ಕೈ ಜೋಡಿಸಿದರೆ ಮಾತ್ರ ಆ ಕುಟುಂಬ ಸೌಖ್ಯವಾಗಿರಲು ಸಾಧ್ಯ. ಪ್ರತಿಯೊಂದು ಮೊಳೆಯೂ ತುಂಬಾ ಮುಖ್ಯ, ಕುಟುಂಬದಲ್ಲಿ ಎಲ್ಲರೂ ಅಷ್ಟೇ ಮುಖ್ಯ. ಶಿಸ್ತು, ಪ್ರೀತಿ ಮತ್ತು ಮುಖ್ಯವಾಗಿ ಭರವಸೆ ಪ್ರಮುಖ ಪಾತ್ರವಹಿಸುತ್ತದೆ.
೩.ಚಟುವಟಿಕೆ : ಒಂದರೊಳಗೊಂದು ಸಿಕ್ಕಿಸಿದ ಆಯತಾಕಾರದ ಪ್ಲಾಸ್ಟಿಕ್ ಡಬ್ಬದ ತುಂಡುಗಳನ್ನು ಬೇರ್ಪಡಿಸಲು ತಿಳಿಸಿದರು. ತುಂಬಾ ಮಕ್ಕಳು ಈ ಚಟುವಟಿಕೆಯಲ್ಲಿ ಪಾಲ್ಗೊಂಡರು. ಬೇರ್ಪಡಿಸಲಾಗಲಿಲ್ಲ, ಗುರುಗಳು ಆ ಕೌಶಲ್ಯವನ್ನು ತೋರಿಸಿಕೊಟ್ಟರು.
ಸಾರಾಂಶ- ಜೀವನದಲ್ಲಿ ಮೂರು ವಿಷಯಗಳು ತುಂಬಾ ಮುಖ್ಯ ಅವು ಜ್ಞಾನ, ಕೌಶಲ ಮತ್ತು ಧೋರಣೆ. ನಾವು ಜ್ಞಾನ ಮತ್ತು ಕೌಶಲಗಳನ್ನು ಕಲಿಯಬಹುದು, ಆದರೆ ಧೋರಣೆ ಮತ್ತು ವರ್ತನೆ ಜೀವನದಲ್ಲಿ ಬಹಳ ಮುಖ್ಯ. ಅದು ನೋಡಿ ಕಲಿಯುವುದರಿಂದ ಬಾರದು, ಅನುಸರಣೆ ಮಾಡುವುದರಿಂದ ಬರುವುದು. ಆದ್ದರಿಂದ ಅನುಕರಣೆ ಬೇಡ ಅನುಸರಣೆ ಇರಲಿ ಎಂದರು.
ಹೀಗೆ ಮಕ್ಕಳೊಂದಿಗೆ ಚಟುವಟಿಕೆ ಭರಿತ ಒಡನಾಟ ಮತ್ತು ಪ್ರತಿಕ್ರಿಯೆಗಳನ್ನೊಳಗೊಂಡ ಈ ಉಪನ್ಯಾಸದಲ್ಲಿ ಡಾ. ಗುರುರಾಜ ಕರಜಗಿ ಗುರುಗಳು ಜೀವನದ ಮೌಲ್ಯಗಳನ್ನು ಅಚ್ಚುಕಟ್ಟಾಗಿ ಮನದಟ್ಟಾಗುವಂತೆ ತಿಳಿಸಿಕೊಟ್ಟರು.
ಅನಂತರ ಪ್ರಶ್ನೋತ್ತರ ಕಾರ್ಯಕ್ರಮ ಆರಂಭವಾಯಿತು, ಮಕ್ಕಳ ಎಲ್ಲ ಪ್ರಶ್ನೆಗಳಿಗೆ ಗುರುಗಳು ಸುಂದರವಾದ ಉತ್ತರಗಳೊಂದಿಗೆ ಪ್ರತಿಕ್ರಿಯಿಸಿದರು.
ಮಕ್ಕಳೇ, ಕಾರ್ಯಕ್ರಮ ಇಷ್ಟ ಆಯ್ತಾ? ಅಂತ ಕೇಳುತ್ತ, ಶ್ರೀಮತಿ ಜಯಾ ಛಬ್ಬಿಯವರು ಈ ರೀತಿ ಕಲಿಕೆ, ಪ್ರೋತ್ಸಾಹಭರಿತ, ಜ್ಞಾನೋದಯವಾಗುವಂತಹ ಉಪನ್ಯಾಸ ನೀಡಿದ್ದಕ್ಕಾಗಿ ಗುರುಗಳಿಗೆ ನಮನ ಸಲ್ಲಿಸಿದರು.
ಭಾಗವಹಿಸಿದ ಮಕ್ಕಳಿಗೆಲ್ಲ ಡಾ. ಗುರುರಾಜ ಕರಜಗಿಯವರ ಮುಖಾಂತರ ತಿಂಡಿ ಹಂಚಲಾಯಿತು.
ಶ್ರೀಯುತ ಕಿರಣ್ ಮಂಜುನಾಥ್ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಈ ರೀತಿ ಬಾಲ ಜ್ಞಾನಾಮೃತ - ಮಕ್ಕಳಿಗಾಗಿ "ಜೀವನದಲ್ಲಿ ಮೌಲ್ಯಗಳು" ಕಾರ್ಯಕ್ರಮ ಅತ್ಯುಪಯುಕ್ತವಾಗಿ ಸೊಗಸಾಗಿ ಮೂಡಿಬಂದಿತು. ಧನ್ಯವಾದಗಳು.
ಡಾ. ಗುರುರಾಜ ಕರಜಗಿಯವರ ಓಂಕಾರ ಬಾಲ ಜ್ಞಾನಾಮೃತ - ೨೦೧೯ ರ ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಇಲ್ಲಿದೆ.
ವರದಿ : ಶ್ರೀಮತಿ ಜಯಾ ಛಬ್ಬಿ
ಡಾ. ಗುರುರಾಜ ಕರಜಗಿಯವರ ಓಂಕಾರ ಬಾಲ ಜ್ಞಾನಾಮೃತ - ೨೦೧೯ ರ ಕಾರ್ಯಕ್ರಮದ ಸಂಪೂರ್ಣ ವಿಡಿಯೋ ಇಲ್ಲಿದೆ.
ವರದಿ : ಶ್ರೀಮತಿ ಜಯಾ ಛಬ್ಬಿ