ಓಂಕಾರ ನಾದಾಮೃತ -೨೦೧೯
ದಿನಾಂಕ ೧೩-ಸೆಪ್ಟೆಂಬರ್-೨೦೧೯ ಶುಕ್ರವಾರದ ಶುಭಸಂಜೆ ೬:೩೦ ಘಂಟೆಗೆ ಅತ್ಯುತ್ತಮವಾದ ಹರಿನಾಮ ಸಂಕೀರ್ತನೆಗಳನ್ನು ಕೇಳಿ ಇಂದ್ರೀಯ ಮತ್ತು ಮನಸ್ಸುಗಳಿಗೆ ಆಹ್ಲಾದ ಹಾಗೂ ಪುಣ್ಯ ಸಂಪಾದನೆ ಮಾಡಿಕೊಳ್ಳಲು ಮಸ್ಕತ್ ನ ಸಂಗೀತಪ್ರಿಯರು ಭಗವದ್ ಭಕ್ತರು ಶ್ರೀಕೃಷ್ಣಮಂದಿರದ ಸಭಾಂಗಣದಲ್ಲಿ ಸೇರಿದ್ದರು.
ನಾಹಮ್ ಕರ್ತಾ ಹರಿಃ ಕರ್ತಾ ಎಂಬ ತತ್ವವನ್ನು ಪ್ರತಿಪಾದಿಸುವ ಓಂಕಾರ ಸಮಿತಿಯು ಭಕ್ತಿ, ಜ್ಞಾನ ಮತ್ತು ನಾದಭರಿತ ಕಾರ್ಯಕ್ರಮಗಳಲ್ಲಿ ಗಾಂಧರ್ವ ಗಾನದ ಮೂಲಕ ನಾದಾಮೃತವನ್ನು ಪಸರಿಸುತ್ತಿರುವ ಶ್ರೀ ಪುತ್ತೂರು ನರಸಿಂಹ ನಾಯಕ ಮತ್ತು ವೃಂದದವರು ಓಂಕಾರ ನಾದಾಮೃತ-೨೦೧೯ ಕಾರ್ಯಕ್ರಮಕ್ಕಾಗಿ ಬೆಂಗಳೂರಿನಿಂದ ಆಗಮಿಸಿದ್ದರು.
ಶ್ರೀ ರವಿಕುಮಾರ್ ಅವರು ತಮ್ಮ ಸ್ವಾಗತ ಭಾಷಣದೊಂದಿಗೆ ಆಗಮಿಸಿದ ಮುಖ್ಯ ಅತಿಥಿಗಳನ್ನು ಹೂಗುಚ್ಚ ನೀಡಿ ವೇದಿಕೆಗೆ ಅಹ್ವಾನಿಸಿದರು ಹಾಗೂ ನೆರೆದಿದ್ದ ಸಭಿಕರಿಗೆ ಹೃತ್ಪೂರ್ವಕ ಸ್ವಾಗತವನ್ನು ಕೋರಿ, ಓಂಕಾರ ಸಮಿತಿಯ ಏಳು ವರ್ಷಗಳ ಸತತ ಸಾಧನೆಯ ಕಿರುನೋಟವನ್ನು ತಿಳಿಸಿಕೊಟ್ಟರು.
ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರವರು ಅತಿ ಸುಂದರಕ್ಕೆ ಸುಂದರವಾದ ಭಗವಂತನ ಮಂದಸ್ಮಿಕ ರೂಪವನ್ನು ನಮ್ಮೆಲ್ಲರ ಹೃತ್ಕಮಲದಲ್ಲಿ ನೆಲೆಸುವಂತೆ ಬೇಡಿ, ಎಲ್ಲರ ಒಳಿತಿಗಾಗಿ ದೇವರಿಗೆ ಮಂಗಳಾರತಿಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಶ್ರೀಮತಿ ಕವಿತಾ ರಾಮಕೃಷ್ಣ ಅವರಿಂದ ಗಾನಗಂಧರ್ವರಾದ ಶ್ರೀ ಪುತ್ತೂರು ನರಸಿಂಹ ನಾಯಕರವರ ಪರಿಚಯ ಹಾಗೆಯೇ ಸಂಗೀತದ ನಾಡಿಮಿಡಿತಗಳಾದ ಕೀಬೋರ್ಡ್ ಕಿಶನ್ ಎಂದೇ ಹೆಸರುವಾಸಿಯಾಗಿರುವ ಶ್ರೀ ಎನ್ ಆರ್ ಕೃಷ್ಣ ಉಡುಪ ಹಾಗೂ ತಬಲಾವಾದ್ಯ ನಿಪುಣ ಶ್ರೀ ರಘುನಾಥ್ ರಾಜುರವರ ಹಾಗೂ ಮಸ್ಕತ್ತಿನವರೇ ಆದ ತಾಳವಾದ್ಯ ಕಲಾವಿದ ಶ್ರೀ ವಿಶಾಲ್ ಪಡಿಯಾರ್ ಇವರೆಲ್ಲರ ಕಿರುಪರಿಚಯ ಮಾಡಿಸಿ ಕೊಟ್ಟರು.
೧೨೦೦೦ಕ್ಕೂ ಹೆಚ್ಚು ಹಾಡುಗಳನ್ನು ಹಾಡಿರುವ, ೫೦೦೦ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಸ್ವದೇಶದಲ್ಲಿ ಅಲ್ಲದೇ ವಿದೇಶಗಳಲ್ಲೂ ಹಾಡಿರುವ ವಿವಿಧ ಪುರಸ್ಕಾರಗಳ ನಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕರವರು ತಮ್ಮ ತಂಡದೊಂದಿಗೆ ಮೂಷಕವಾಹನ ವಿಘ್ನವಿನಾಶಕ ಗಣೇಶನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಅರಂಭಿಸಿದರು. ನಂತರ ಎಲ್ಲ ಜಾತಿ, ಮತ ಮತ್ತು ಪಂಥ ಒಂದೇ ಎಂದು ಸಾರುವ ಗುರುಗಳಾದ ಶ್ರೀ ನಾರಾಯಣ ಗುರುಗಳ ತುಳುಗೀತೆ ಹಾಡಿನೊಂದಿಗೆ ಗುರುಗಳ ಮಹತ್ವವನ್ನು ತಿಳಿಸಿಕೊಟ್ಟರು. ತನ್ನ ಮೋಹಕ ರೂಪದಿಂದ ಎಲ್ಲರನ್ನೂ ಸೆಳೆಯುತ್ತಿರುವ ಕೃಷ್ಣನ ಭಕ್ತರಾದ ಪುರಂದರದಾಸರು ಹಾಗೂ ವ್ಯಾಸರಾಜರ ಮಹತ್ವ ಮತ್ತು ಯಾರಿಗೆ ಯಾರು ಗುರು ಎಂದು ಹಾಡಿನಲ್ಲೇ ತೋರಿಸಿದರು. ಸ್ವಾಮಿನಿಷ್ಠೆಗೆ ಮತ್ತೊಂದು ಹೆಸರಾದ ಭಕ್ತಿಗೆ ಸಾಕರಮೂರ್ತಿಯಾದ ರಾಮದೂತ ನಮ್ಮ ಓಂಕಾರ ಸಮಿತಿಯ ಚಿಕ್ಕ ಹನುಮಂತನನ್ನು ತಮ್ಮ "ಇಕ್ಕೋ ನೋಡಿರೇ ಚಿಕ್ಕ ಹನುಮಂತ " ಹಾಡಿನ ಮೂಲಕ ಹಾಡಿ ಹೊಗಳಿದರು.
ಸುಸ್ವರ ಸಂಗೀತದೊಂದಿಗೆ ವಿವರಗಳನ್ನು, ಹಾಡಿನ ವಿಶೇಷತೆಗಳನ್ನು ತಿಳಿಸಿಕೊಡುತ್ತಿದ್ದ ಶ್ರೀ ಪುತ್ತೂರು ನರಸಿಂಹ ನಾಯಕರು ಮತ್ತು ಅವರ ತಂಡದವರಿಗೆ ಕಾರ್ಯಕ್ರಮದ ಮಧ್ಯದಲ್ಲಿ ಗಣ್ಯವ್ಯಕ್ತಿಗಳಿಂದ ಸನ್ಮಾನ ಮಾಡಲಾಯಿತು. ನಂತರ ಮಸ್ಕತ್ತಿನ ಸ್ಥಳೀಯ ಸಂಘಟನೆಗಳಾದ ಬಸವ ಬಳಗ, ಜಿ. ಎಸ್. ಬಿ ಕುಟುಂಬದವರು ಹಾಗೂ ಭಾರತೀಯ ಸಾಮಾಜಿಕ ಒಕ್ಕೂಟ - ಕರ್ನಾಟಕ ವಿಭಾಗದವರಿಂದ ಸನ್ಮಾನಿಸಲ್ಪಟ್ಟರು.
ತದನಂತರ ಓಂಕಾರ ಸಮಿತಿಯ ಗಣ್ಯರು ಮತ್ತು ಸಮಿತಿಯ ಎಲ್ಲ ಸದಸ್ಯರಿಂದ ಸನ್ಮಾನದೊಂದಿಗೆ ನೆನಪಿನ ಕಾಣಿಕೆಗಳನ್ನು ಸಲ್ಲಿಸಿದರು.
ಕಲಾವಿದರ ಸನ್ಮಾನದ ನಂತರ ಓಂಕಾರ ಸಮಿತಿಯ ಸದಸ್ಯರಾದ ಡಾ. ಸಿ. ಕೆ. ಅಂಚನ್ ರವರು ಓಂಕಾರ ಸಮಿತಿಯ ಭಕ್ತಿಯ ಧ್ಯೋತಕದ ಕಾರ್ಯಕ್ರಮವಾದ ಈ ವರ್ಷದ ಶ್ರೀ ಆಂಜನೇಯ ಪೂಜೆಯ ಸಂದರ್ಭದಲ್ಲಿ ದಿನಾಂಕ ೧೩-ಡಿಸೆಂಬರ್-೨೦೧೯ ರಿಂದ ಒಂದು ವಾರದ ಕಾಲ
ಪುತ್ತಿಗೆ ಮಠದ ಶ್ರೀ ಸುಗಣೇಂದ್ರ ತೀರ್ಥರ ಕಾರ್ಯಕ್ರಮದ ಯೋಜನೆ ಹಮ್ಮಿಕೊಂಡಿರುವ ಬಗ್ಗೆ ನೆರದ ಸಭಿಕರೆಲ್ಲರಿಗೂ ತಿಳಿಸಿದರು. ಮಸ್ಕತ್ ಸದ್ಭಕ್ತ ಕನ್ನಡಿಗರೆಲ್ಲರೂ ತನು, ಮನ, ಧನದೊಂದಿಗೆ ಓಂಕಾರ ಸಮಿತಿಯೊಂದಿಗೆ ಈ ಸುವರ್ಣ ಅವಕಾಶದಲ್ಲಿ ಭಾಗಿಯಾಗಲು ಕರೆಕೊಟ್ಟರು.
ಆ ನಂತರದಲ್ಲಿ ಪುರಂದರದಾಸರು, ಕನಕದಾಸರು, ಪ್ರಸನ್ನ ವೆಂಕಟದಾಸರು, ಅಭಿನವ ಜನಾರ್ಧನ ವಿಠ್ಠಲದಾಸರು, ವಾದಿರಾಜರ ಕೃತಿಗಳು, ವಚನಗಳು, ಕೊಂಕಣಿ ಮತ್ತು ತುಳು ಭಾಷೆಗಳ ರಚನೆಗಳು ಕರ್ನಾಟಕದ ಅಖಂಡತೆಯನ್ನು ಬಿಂಬಿಸುವಂತಿತ್ತು.
ದಶಾವತಾರ ವರ್ಣನೆ ಕೃತಿ ವಿವಿಧ ರಾಗಗಳಲ್ಲಿ ಜ್ಞಾನ, ಭಕ್ತಿ, ವೈರಾಗ್ಯವನ್ನು ದಯಪಾಲಿಸೆಂದ ಭಾಗ್ಯದ ಲಕ್ಷ್ಮಿಯನ್ನು ಬರುವಂತೆ ಬೇಡುವದು. ದೇವರು ಕೊಟ್ಟಾನು ಕೊಟ್ಟಾನು ಕೊಟ್ಟಾನು ಅಲ್ಲಿಯವರೆಗೆ ನಾವು ಹೇಗೆ ತಾಳ್ಮೆಯಿಂದಿರಬೇಕು ಎಂಬ ರಚನೆ. ಪವಮಾನ, ಏಸುಕಾಯಂಗಳ ಕಳೆದು, ತುಂಗಾತೀರದೀ ನಿಂತ ಸುಯತಿವರ ಹಾಗೂ ಕೊನೆಯದಾಗಿ ನಮ್ಮೆಲ್ಲರ ತಂದೆ, ತಾಯಿ, ಬಂಧುಬಳಗ ಎಲ್ಲವೂ ಆದ ಶ್ರೀ ನಾರಸಿಂಹ ದೇವರ ಸ್ಮರಣೆ ಮಾಡಿಸಿ ಜ್ಞಾನ ಹಾಗೂ ಗಾನಭಂಡಾರವನ್ನೇ ಶ್ರೀ ಪುತ್ತೂರು ನರಸಿಂಹ ನಾಯಕ ಮತ್ತು ವೃಂದದವರು ನಮ್ಮೊಂದಿಗೆ ಹಂಚಿದರು. ಸುಮಾರು ಮೂರುವರೆ ಘಂಟೆಗಳ ಕಾಲ ನಾದಾಮೃತವನ್ನು ಯಶಸ್ವಿಯಾಗಿ ಮುನ್ನಡೆಸಿ ಕೊಟ್ಟರು.
ಶ್ರೀಯುತ ಶಿವಣ್ಣ ಬರಗೂರು ಇವರು ಸಭಿಕರ ಒತ್ತಾಯದ ಮೇರೆಗೆ ಎರಡನೇ ಬಾರಿಗೆ ಆಗಮಿಸಿ ತಮ್ಮ ಕಂಠಸಿರಿಯಿಂದ ಗಾಂಧರ್ವ ಲೋಕಕ್ಕೆ ಕರೆದೊಯ್ದ ಶ್ರೀ ಪುತ್ತೂರು ನರಸಿಂಹ ನಾಯಕ ಮತ್ತು ವೃಂದದವರಿಗೆ, ಸಹಾಯ ಮಾಡಿದವರಿಗೆ, ಸಭಿಕರಿಗೆ ಮತ್ತು ಸ್ವಯಂಸೇವಕರಿಗೆ ವಂದನೆಗಳನ್ನು ಸಲ್ಲಿಸಿ ಕರ್ಯಕ್ರಮಕ್ಕೆ ಮುಕ್ತಾಯ ಹಾಡಿದರು.
ವರದಿ: ಶ್ರೀಮತಿ ಕವಿತಾ ರಾಮಕೃಷ್ಣ