ಓಂಕಾರ ಆಂಜನೇಯ ಪೂಜಾ ಮಹೋತ್ಸವ - ೨೦೧೮

ಓಂಕಾರ ಆಂಜನೇಯ ಪೂಜಾ ಮಹೋತ್ಸವ - ೨೦೧೮


ಓಂಕಾರ ಸಮಿತಿ ಮಸ್ಕತ್ ಆಯೋಜಿಸುವ ಏಳನೆಯ ವರ್ಷದ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವವು ಶುಕ್ರವಾರ 14ನೆಯ ಡಿಸೆಂಬರ್ 2018ರಂದು ವಿಜೃಂಭಣೆಯಿಂದ ಇಲ್ಲಿನ ದಾರಸೇಟ್ ನಲ್ಲಿರುವ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.


ಇಂದು ಅಂತಿಮ ಘಟ್ಟವನ್ನು ತಲುಪಿದ ಈ ಪೂಜಾ ಕೈಂಕರ್ಯಗಳ ತಯಾರಿ ಸುಮಾರು ಎರಡು ತಿಂಗಳುಗಳ ಹಿಂದಿನಿಂದಲೇ ಆರಂಭವಾಗಿತ್ತು. ಆಯೋಜಕರು ಪ್ರತಿ ವಾರವೂ ಭೇಟಿ ಮಾಡಿ ಮಹೋತ್ಸವದ ಪ್ರತಿಯೊಂದು ಹಂತವನ್ನು ವಿವರವಾಗಿ ಯೋಜಿಸಿ ತಯಾರಿ ನಡೆಸಿದ್ದರು.

ಕಾರ್ಯಕ್ರಮದ ಹಿಂದಿನ ರಾತ್ರಿ ವೇದಿಕೆಯನ್ನು ಸಜ್ಜುಗೊಳಿಸಲು, ಅಡಿಗೆ ತಂಡಕ್ಕೆ ತರಕಾರಿಯನ್ನು ಹೆಚ್ಚಿಕೊಡಲು ಸ್ವಯಂ ಸೇವಕರ ದಂಡೇ ಬಂದಿತ್ತು. ಒಂದು ಕಡೆ ಹಿರಿಯ ಮಹಿಳೆಯರು ತುಳಸಿ ಮಾಲೆ ಮತ್ತು ಹೂವಿನ ಮಾಲೆ ತಯಾರಿ ಮಾಡುತ್ತಿದ್ದರೆ, ಇನ್ನೊಂದೆಡೆ ಚಾಕು-ಮಣೆಗಳೊಂದಿಗೆ  ಸಾಲಾಗಿ ಕುಳಿತು ಹರಟೆ ಹೊಡಿಯುತ್ತಾ ತರಕಾರಿಗಳನ್ನು ಸರಾಗವಾಗಿ ಹೆಚ್ಚುತ್ತಿರುವ ಮಹಿಳೆಯರು, ವೇದಿಕೆಯನ್ನು ಸುಂದರವಾಗಿ ಸಜ್ಜುಗೊಳಿಸಲು ಉತ್ಸುಕರಾಗಿರುವ ತಂಡ- ಹೀಗೆ ಸಭಾಂಗಣ ಹಬ್ಬದ ವಾತಾವರಣದಿಂದ ಕಳೆಕಟ್ಟಿತ್ತು. ರಾತ್ರಿ ಹನ್ನೊಂದು ಗಂಟೆಯ ತನಕ ದಣಿವೆನ್ನದೆ ಉತ್ಸಾಹದಿಂದ ನಾಳಿನ ಪೂಜೆಗೆ ಅಣಿಮಾಡಿಟ್ಟರು.






ಪೂಜೆಯ ದಿನ ಬೆಳಿಗ್ಗೆ ಮುಖ್ಯ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರ ನೇತೃತ್ವದಲ್ಲಿ ದೇವಸ್ಥಾನದ ವಿಘ್ನವಿನಾಯಕ, ಕೃಷ್ಣ, ದೇವಿ- ಎಲ್ಲರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಸಂಕಲ್ಪ ಪೂಜೆಯ ಮೂಲಕ ವಿಧಿವಿಧಾನಗಳು ಆರಂಭಗೊಂಡವು.

ಈ ಬಾರಿ ಪೂಜಾ ವಿಧಿಯ ದಂಪತಿಗಳಾಗಿ ಶ್ರೀ ಆಂಜನೇಯ ಸ್ವಾಮಿಯ ಪರಮ ಭಕ್ತರಾಗಿರುವ ಶ್ರೀಯುತ ಅಶ್ವಿನಭಾಯಿ ಧರ್ಮಸಿ ದಂಪತಿಗಳು ನೆರವೇರಿಸಿದರು.



ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಮುಂದುವರೆದರೆ, ಒಟ್ಟಿಗೆ ನಡೆಯುತ್ತಿದ್ದ ವಿಷ್ಣು ಸಹಸ್ರನಾಮ ಪಾರಾಯಣ, ಹರಿವಾಯುಸ್ತುತಿಗಳ ಪಾರಾಯಣಗಳು ಸಭಿಕರಲ್ಲಿ ಭಕ್ತಿಭಾವವನ್ನು ಸಂಚಲಿಸಿತು. ಈ ಉತ್ಸವಕ್ಕೆಂದೇ ಭಾರತದಿಂದ ಆಗಮಿಸಿದ ಉಪ್ಪುಂದ ರಾಜೇಶ್ ಪಡಿಯಾರ ಗಾಯನವು ಈ ವರ್ಷದ ಪೂಜೆಯ ವಿಶೇಷತೆಯಾಗಿತ್ತು. ತಮ್ಮ ಮಧುರ ಕಂಠದಿಂದ ದಾಸನಾಗು, ವಿಶೇಷ ನಾಗು, ತಾನಲ್ಲ ತನ್ನದಲ್ಲ, ಹರಿಕುಣಿದ, ಬಂದ ಕೃಷ್ಣ ಚಂದದಿಂದ ಬಂದ ನೋಡೇ- ಮುಂತಾದ ಹಾಡುಗಳನ್ನು ಅದ್ಭುತವಾಗಿ ಪ್ರಸ್ತುತಪಡಿಸಿದ ಇವರ ಗಾಯನವು ಪೂಜೆಯಲ್ಲಿ ಭಾಗಿಯಾದವರ ಮನಸ್ಸನ್ನು ಸೂರೆಗೊಂಡಿತು. ಪಲ್ಲಕ್ಕಿ ಉತ್ಸವ ಆರಂಭವಾಗುವ ಮೊದಲು ಓಂಕಾರ ಮಹಿಳೆಯರ ಭಜನಾತಂಡವು ಅಚ್ಚುಕಟ್ಟಾಗಿ ಅರ್ಧಗಂಟೆ ಭಕ್ತಿಯಿಂದ ಭಜನಾಸೇವೆಯನ್ನು ಮಸ್ಕತ್ ಭಕ್ತರ ಪರವಾಗಿ ಸಲ್ಲಿಸಿದರು.












ಪಲ್ಲಕ್ಕಿ ಉತ್ಸವವು ಎಲ್ಲ ಭಕ್ತರ "ಜೈ ಹನುಮಾನ್, ಜೈ ಶ್ರೀರಾಮ್" ಘೋಷಣೆಗಳೊಂದಿಗೆ ಉತ್ಸವದ ಮಹೋನ್ನತ ಘಟ್ಟವಾಗಿ ಜನರನ್ನು ಭಕ್ತಿಭಾವದಲ್ಲಿ ತಲ್ಲೀನರಾಗುವಂತೆ ಮಾಡಿತು. ಪಲ್ಲಕ್ಕಿ ಉತ್ಸವದ ನಂತರ ಶ್ರೀ ಪ್ರಸಾದ್ ನೇತೃತ್ವದ ತಂಡದ ಚಂಡೆ ವಾದ್ಯದೊಂದಿಗೆ ಶ್ರೀದೇವರನ್ನು ಮರಳಿ ಮಂಟಪಕ್ಕೆ ತಂದು ನೈವೈಧ್ಯ ಸೇವೆ, ನಂತರ ಮಂಗಳಾರತಿ ಮಾಡಲಾಯಿತು. ವೇದಿಕೆಯ ದೀಪ ಸಂಯೋಜನೆ, ಹಿಮ್ಮೇಳದ ಚಂಡೆವಾದ್ಯ, ಒಟ್ಟಿಗೆ ರಾಜೇಶ್ ಪಡಿಯಾರ ಹನುಮಾನ್ ಚಾಲೀಸಾ ಪಾರಾಯಣ- ಎಲ್ಲವು ಸೇರಿ ಒಂದು ಅಲೌಕಿಕ ವಾತಾವರಣವನ್ನು ಸೃಷ್ಟಿಸಿ ಭಕ್ತರ ಮುಂದೆ ಹನುಮನನ್ನೇ ತಂದಿಟ್ಟಿತು.








ಮಸ್ಕತ್ ಜನರಲ್ಲಿ ಹರಿವಾಯುಸ್ತುತಿ ಪಾರಾಯಣದ ಮಹತ್ವವನ್ನು ತಿಳಿಸಿ ಅದರ ಕಂಪನ್ನು ಪಸರಿಸುವದಕ್ಕಾಗಿ ಕಳೆದ ವರ್ಷದ ಆಂಜನೇಯ ಪೂಜೆಯ ಸಂದರ್ಭದಲ್ಲಿ ಆರಂಭಗೊಂಡಿದ್ದ ಹರಿವಾಯುಸ್ತುತಿ ಪರಾಯಣ ಸಮಿತಿಯು ಈ ವರ್ಷದಿಂದ ಪವಮಾನ ಸೇವಾ ಸಮಿತಿ ಮಸ್ಕತ್ ಆಗಿ ಮರುನಾಮಕರಣಗೊಂಡು ಮಸ್ಕತ್ ನಲ್ಲಿ ಸೇವೆಗಾಗಿ ಅಣಿಯಾಯಿತು.



ಮುಂದೆ ಪೂಜೆಯ ಕೊನೆಯ ಹಂತ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ. ಶ್ರೀ ರಾಜೇಶ್ ಪಡಿಯಾರರ ಗಾಯನದೊಂದಿಗೆ ಜನರೆಲ್ಲ ತಲ್ಲೀನರಾಗಿ ಸಂಗೀತವನ್ನು ಸವಿಯುತ್ತಾ ಸಾಲಾಗಿ ಪ್ರಸಾದ ಸ್ವೀಕರಿಸಿದರು. ಮೊದಲೇ ಸಜ್ಜಾಗಿದ್ದ ಸ್ವಯಂ ಸೇವಕರು ವ್ಯವಸ್ಥಿತವಾಗಿ ಯಾವುದೇ ಚ್ಯುತಿಯಿಲ್ಲದಂತೆ ಅನ್ನ ಸಂತರ್ಪಣೆಯನ್ನು ಮಾಡಿ ಮುಗಿಸಿದರು. ರುಚಿಕರವಾಗಿ ಅಡುಗೆಯನ್ನು ಮಾಡಿದ ಬದ್ರಿಯವರ ನೇತೃತ್ವದ ಅಡುಗೆ ತಂಡ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸೇವೆಗಳ ಪ್ರಸಾದದ ವಿತರಣೆ, ಸೇವಾಚೀಟಿಗಳ ವಿತರಣೆ - ಎಲ್ಲವನ್ನೂ ನಿಗದಿತ ಸ್ವಯಂ ಸೇವಕರು ಕರಾರುವಕ್ಕಾಗಿ ನಿರ್ವಹಿಸಿದರು. ಪೂಜೆಯ ವೇಳೆಯ ಸಮಯ ನಿರ್ವಹಣೆ, ದೀಪಾಲಂಕಾರ, ವೇದಿಕೆಯ ಭವ್ಯ ಅಲಂಕಾರ ಎಲ್ಲವೂ ಒಟ್ಟಾಗಿ ಹನುಮಾನ್ ಪೂಜಾ ಮಹೋತ್ಸವ ಸುಂದರವಾಗಿ ಮೂಡಿಬಂತು. ಈ ಪುಣ್ಯಕಾರ್ಯದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಕಾರ್ಯಕರ್ತರಿಗೂ ಕೃತಜ್ಞತೆಯನ್ನು ಓಂಕಾರ ಸಮಿತಿಯು ಸಲ್ಲಿಸಿತು.







ಮಾತೃಭೂಮಿಯನ್ನು ಬಿಟ್ಟು ಪರಿಕೀಯ ದೇಶವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡ ಭಾರತೀಯರಿಗೆ ನಮ್ಮ ಸಂಸ್ಕೃತಿ, ಉತ್ಸವಗಳು ಎಲ್ಲವೂ ಮರೀಚಿಕೆಯಾಗಿಬಿಡುತ್ತದೆ, ನಾವು ಕಳೆದುಕೊಂಡಿರುವ ನಮ್ಮ ಸಾಂಸ್ಕೃತಿಕ ವಾತಾವರಣ, ಬೆಳೆಯುವ ನಮ್ಮ ಮಕ್ಕಳಿಗೆ ನಮ್ಮ ಸಂಪ್ರದಾಯಗಳನ್ನು ಪರಿಚಯಿಸುವ ತವಕ - ಈ ಎಲ್ಲ ಭಾವನೆಗಳನ್ನು ಹೊಂದಿದ ಓಂಕಾರ ಸಮಿತಿಯ ಕೆಲವು ಸ್ನೇಹಿತರು ಸೇರಿ ಆರು ವರ್ಷದ (೨೧-ಡಿಸೆಂಬರ್ -೨೦೧೨ ಕ್ಕೆ ಮೊದಲ ಆಂಜನೇಯ ಪೂಜೆ) ಹಿಂದೆ ಆರಂಭಿಸಿದ ಓಂಕಾರ (ಒಮಾನ್ ಕರ್ನಾಟಕ ಆರಾಧನಾ ಸಮಿತಿ) ಸಮಿತಿಯು ಮಸ್ಕತ್ತಿನಲ್ಲಿ ಇಲ್ಲಿಯ ತನಕ ಹಲವು ಅರ್ಥಪೂರ್ಣ, ಉತ್ತಮ ಗುಣಮಟ್ಟದ ಸುಂದರ ಕಾರ್ಯಕ್ರಮಗಳನ್ನು ಆಯೋಜಿಸಿ ಅಚ್ಚುಕಟ್ಟಾದ ಕಾರ್ಯಕ್ರಮಗಳಿಗೆ ಮಾದರಿಯಾಗಿದ್ದಾರೆ. ಇವರು ಆಯೋಜಿಸುವ ಭಕ್ತಿ, ಜ್ಞಾನ ಮತ್ತು ಸಂಗೀತದ ಪರಿಕಲ್ಪನೆಯೊಂದಿಗೆ ಕ್ರಮವಾಗಿ ಶ್ರೀ ಓಂಕಾರ ಆಂಜನೇಯ ಪೂಜೆ (ಭಕ್ತಿ), ಓಂಕಾರ ಜ್ಞಾನಾಮೃತ (ಜ್ಞಾನ), ಓಂಕಾರ ನಾದಾಮೃತ (ಸಂಗೀತ) ಕಾರ್ಯಕ್ರಮಗಳು ಮಸ್ಕತ್ ಕನ್ನಡಿಗರ ಅಚ್ಚು ಮೆಚ್ಚಿನ ಕಾರ್ಯಕ್ರಮಗಳು.











ಓಂಕಾರ ಜ್ಞಾನಾಮೃತ ಕಾರ್ಯಕ್ರಮದ ಮೂಲಕ ಶ್ರೀ ಶತಾವಧಾನಿ ಆರ್. ಗಣೇಶ್, ಶ್ರೀ ಪದ್ಮಭೂಷಣ ಡಾ ಬಿ. ಎಂ. ಹೆಗಡೆ, ಮತ್ತು ಶ್ರೀ ಚಕ್ರವರ್ತಿ ಸೂಲಿಬೆಲೆ ಮುಂತಾದ ಕನ್ನಡದ ಕೆಲವು ಮಹಾನ್ ಚಿಂತಕರನ್ನು ಮಸ್ಕತ್ ಕನ್ನಡಿಗರಿಗೆ ಪರಿಚಯಿಸಿದೆ. 

ಓಂಕಾರ ನಾದಾಮೃತ ಕಾರ್ಯಕ್ರಮದ ಮೂಲಕ ಶ್ರೀ ಡಾ. ವಿದ್ಯಾಭೂಷಣ, ಶ್ರೀ ಪುತ್ತೂರು ನರಸಿಂಹ ನಾಯಕ, ಶ್ರೀ ಅನಂತ ಕುಲಕರ್ಣಿ, ಶ್ರೀ ಆರ್. ಕೆ. ಪದ್ಮನಾಭ, ಶ್ರೀಮತಿ ಸಂಗೀತ ಕಟ್ಟಿ ಮತ್ತು ಶ್ರೀ ರಾಯಚೂರು ಶೇಷಗಿರಿದಾಸ ಮುಂತಾದ ಸಂಗೀತ ವಿದ್ವಾಂಸರನ್ನು ಮಸ್ಕತ್ ಕನ್ನಡಿಗರಿಗೆ ಪರಿಚಯಿಸಿದೆ.


ಓಂಕಾರ ಸಮಿತಿಯು ಹೀಗೆಯೇ ಉತ್ತಮ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲಿ ಎನ್ನುವುದು ಮಸ್ಕತ್ತಿನ ಕನ್ನಡಿಗರ ಕಳಕಳಿಯ ಆಶಯ.

ವರದಿ: ಶ್ರೀಮತಿ ಸುಧಾ ಶಶಿಕಾಂತ