ಓಂಕಾರ ಆಂಜನೇಯ ಪೂಜಾ ಮಹೋತ್ಸವ - ೨೦೧೮

ಓಂಕಾರ ಆಂಜನೇಯ ಪೂಜಾ ಮಹೋತ್ಸವ - ೨೦೧೮


ಓಂಕಾರ ಸಮಿತಿ ಮಸ್ಕತ್ ಆಯೋಜಿಸುವ ಏಳನೆಯ ವರ್ಷದ ವಾರ್ಷಿಕ ಹನುಮಾನ್ ಪೂಜಾ ಮಹೋತ್ಸವವು ಶುಕ್ರವಾರ 14ನೆಯ ಡಿಸೆಂಬರ್ 2018ರಂದು ವಿಜೃಂಭಣೆಯಿಂದ ಇಲ್ಲಿನ ದಾರಸೇಟ್ ನಲ್ಲಿರುವ ಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನೆರೆದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.


ಇಂದು ಅಂತಿಮ ಘಟ್ಟವನ್ನು ತಲುಪಿದ ಈ ಪೂಜಾ ಕೈಂಕರ್ಯಗಳ ತಯಾರಿ ಸುಮಾರು ಎರಡು ತಿಂಗಳುಗಳ ಹಿಂದಿನಿಂದಲೇ ಆರಂಭವಾಗಿತ್ತು. ಆಯೋಜಕರು ಪ್ರತಿ ವಾರವೂ ಭೇಟಿ ಮಾಡಿ ಮಹೋತ್ಸವದ ಪ್ರತಿಯೊಂದು ಹಂತವನ್ನು ವಿವರವಾಗಿ ಯೋಜಿಸಿ ತಯಾರಿ ನಡೆಸಿದ್ದರು.

ಕಾರ್ಯಕ್ರಮದ ಹಿಂದಿನ ರಾತ್ರಿ ವೇದಿಕೆಯನ್ನು ಸಜ್ಜುಗೊಳಿಸಲು, ಅಡಿಗೆ ತಂಡಕ್ಕೆ ತರಕಾರಿಯನ್ನು ಹೆಚ್ಚಿಕೊಡಲು ಸ್ವಯಂ ಸೇವಕರ ದಂಡೇ ಬಂದಿತ್ತು. ಒಂದು ಕಡೆ ಹಿರಿಯ ಮಹಿಳೆಯರು ತುಳಸಿ ಮಾಲೆ ಮತ್ತು ಹೂವಿನ ಮಾಲೆ ತಯಾರಿ ಮಾಡುತ್ತಿದ್ದರೆ, ಇನ್ನೊಂದೆಡೆ ಚಾಕು-ಮಣೆಗಳೊಂದಿಗೆ  ಸಾಲಾಗಿ ಕುಳಿತು ಹರಟೆ ಹೊಡಿಯುತ್ತಾ ತರಕಾರಿಗಳನ್ನು ಸರಾಗವಾಗಿ ಹೆಚ್ಚುತ್ತಿರುವ ಮಹಿಳೆಯರು, ವೇದಿಕೆಯನ್ನು ಸುಂದರವಾಗಿ ಸಜ್ಜುಗೊಳಿಸಲು ಉತ್ಸುಕರಾಗಿರುವ ತಂಡ- ಹೀಗೆ ಸಭಾಂಗಣ ಹಬ್ಬದ ವಾತಾವರಣದಿಂದ ಕಳೆಕಟ್ಟಿತ್ತು. ರಾತ್ರಿ ಹನ್ನೊಂದು ಗಂಟೆಯ ತನಕ ದಣಿವೆನ್ನದೆ ಉತ್ಸಾಹದಿಂದ ನಾಳಿನ ಪೂಜೆಗೆ ಅಣಿಮಾಡಿಟ್ಟರು.






ಪೂಜೆಯ ದಿನ ಬೆಳಿಗ್ಗೆ ಮುಖ್ಯ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರ ನೇತೃತ್ವದಲ್ಲಿ ದೇವಸ್ಥಾನದ ವಿಘ್ನವಿನಾಯಕ, ಕೃಷ್ಣ, ದೇವಿ- ಎಲ್ಲರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿ ಸಂಕಲ್ಪ ಪೂಜೆಯ ಮೂಲಕ ವಿಧಿವಿಧಾನಗಳು ಆರಂಭಗೊಂಡವು.

ಈ ಬಾರಿ ಪೂಜಾ ವಿಧಿಯ ದಂಪತಿಗಳಾಗಿ ಶ್ರೀ ಆಂಜನೇಯ ಸ್ವಾಮಿಯ ಪರಮ ಭಕ್ತರಾಗಿರುವ ಶ್ರೀಯುತ ಅಶ್ವಿನಭಾಯಿ ಧರ್ಮಸಿ ದಂಪತಿಗಳು ನೆರವೇರಿಸಿದರು.



ಪಂಚಾಮೃತ ಅಭಿಷೇಕ, ಅಲಂಕಾರ ಪೂಜೆಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಮುಂದುವರೆದರೆ, ಒಟ್ಟಿಗೆ ನಡೆಯುತ್ತಿದ್ದ ವಿಷ್ಣು ಸಹಸ್ರನಾಮ ಪಾರಾಯಣ, ಹರಿವಾಯುಸ್ತುತಿಗಳ ಪಾರಾಯಣಗಳು ಸಭಿಕರಲ್ಲಿ ಭಕ್ತಿಭಾವವನ್ನು ಸಂಚಲಿಸಿತು. ಈ ಉತ್ಸವಕ್ಕೆಂದೇ ಭಾರತದಿಂದ ಆಗಮಿಸಿದ ಉಪ್ಪುಂದ ರಾಜೇಶ್ ಪಡಿಯಾರ ಗಾಯನವು ಈ ವರ್ಷದ ಪೂಜೆಯ ವಿಶೇಷತೆಯಾಗಿತ್ತು. ತಮ್ಮ ಮಧುರ ಕಂಠದಿಂದ ದಾಸನಾಗು, ವಿಶೇಷ ನಾಗು, ತಾನಲ್ಲ ತನ್ನದಲ್ಲ, ಹರಿಕುಣಿದ, ಬಂದ ಕೃಷ್ಣ ಚಂದದಿಂದ ಬಂದ ನೋಡೇ- ಮುಂತಾದ ಹಾಡುಗಳನ್ನು ಅದ್ಭುತವಾಗಿ ಪ್ರಸ್ತುತಪಡಿಸಿದ ಇವರ ಗಾಯನವು ಪೂಜೆಯಲ್ಲಿ ಭಾಗಿಯಾದವರ ಮನಸ್ಸನ್ನು ಸೂರೆಗೊಂಡಿತು. ಪಲ್ಲಕ್ಕಿ ಉತ್ಸವ ಆರಂಭವಾಗುವ ಮೊದಲು ಓಂಕಾರ ಮಹಿಳೆಯರ ಭಜನಾತಂಡವು ಅಚ್ಚುಕಟ್ಟಾಗಿ ಅರ್ಧಗಂಟೆ ಭಕ್ತಿಯಿಂದ ಭಜನಾಸೇವೆಯನ್ನು ಮಸ್ಕತ್ ಭಕ್ತರ ಪರವಾಗಿ ಸಲ್ಲಿಸಿದರು.












ಪಲ್ಲಕ್ಕಿ ಉತ್ಸವವು ಎಲ್ಲ ಭಕ್ತರ "ಜೈ ಹನುಮಾನ್, ಜೈ ಶ್ರೀರಾಮ್" ಘೋಷಣೆಗಳೊಂದಿಗೆ ಉತ್ಸವದ ಮಹೋನ್ನತ ಘಟ್ಟವಾಗಿ ಜನರನ್ನು ಭಕ್ತಿಭಾವದಲ್ಲಿ ತಲ್ಲೀನರಾಗುವಂತೆ ಮಾಡಿತು. ಪಲ್ಲಕ್ಕಿ ಉತ್ಸವದ ನಂತರ ಶ್ರೀ ಪ್ರಸಾದ್ ನೇತೃತ್ವದ ತಂಡದ ಚಂಡೆ ವಾದ್ಯದೊಂದಿಗೆ ಶ್ರೀದೇವರನ್ನು ಮರಳಿ ಮಂಟಪಕ್ಕೆ ತಂದು ನೈವೈಧ್ಯ ಸೇವೆ, ನಂತರ ಮಂಗಳಾರತಿ ಮಾಡಲಾಯಿತು. ವೇದಿಕೆಯ ದೀಪ ಸಂಯೋಜನೆ, ಹಿಮ್ಮೇಳದ ಚಂಡೆವಾದ್ಯ, ಒಟ್ಟಿಗೆ ರಾಜೇಶ್ ಪಡಿಯಾರ ಹನುಮಾನ್ ಚಾಲೀಸಾ ಪಾರಾಯಣ- ಎಲ್ಲವು ಸೇರಿ ಒಂದು ಅಲೌಕಿಕ ವಾತಾವರಣವನ್ನು ಸೃಷ್ಟಿಸಿ ಭಕ್ತರ ಮುಂದೆ ಹನುಮನನ್ನೇ ತಂದಿಟ್ಟಿತು.








ಮಸ್ಕತ್ ಜನರಲ್ಲಿ ಹರಿವಾಯುಸ್ತುತಿ ಪಾರಾಯಣದ ಮಹತ್ವವನ್ನು ತಿಳಿಸಿ ಅದರ ಕಂಪನ್ನು ಪಸರಿಸುವದಕ್ಕಾಗಿ ಕಳೆದ ವರ್ಷದ ಆಂಜನೇಯ ಪೂಜೆಯ ಸಂದರ್ಭದಲ್ಲಿ ಆರಂಭಗೊಂಡಿದ್ದ ಹರಿವಾಯುಸ್ತುತಿ ಪರಾಯಣ ಸಮಿತಿಯು ಈ ವರ್ಷದಿಂದ ಪವಮಾನ ಸೇವಾ ಸಮಿತಿ ಮಸ್ಕತ್ ಆಗಿ ಮರುನಾಮಕರಣಗೊಂಡು ಮಸ್ಕತ್ ನಲ್ಲಿ ಸೇವೆಗಾಗಿ ಅಣಿಯಾಯಿತು.



ಮುಂದೆ ಪೂಜೆಯ ಕೊನೆಯ ಹಂತ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ. ಶ್ರೀ ರಾಜೇಶ್ ಪಡಿಯಾರರ ಗಾಯನದೊಂದಿಗೆ ಜನರೆಲ್ಲ ತಲ್ಲೀನರಾಗಿ ಸಂಗೀತವನ್ನು ಸವಿಯುತ್ತಾ ಸಾಲಾಗಿ ಪ್ರಸಾದ ಸ್ವೀಕರಿಸಿದರು. ಮೊದಲೇ ಸಜ್ಜಾಗಿದ್ದ ಸ್ವಯಂ ಸೇವಕರು ವ್ಯವಸ್ಥಿತವಾಗಿ ಯಾವುದೇ ಚ್ಯುತಿಯಿಲ್ಲದಂತೆ ಅನ್ನ ಸಂತರ್ಪಣೆಯನ್ನು ಮಾಡಿ ಮುಗಿಸಿದರು. ರುಚಿಕರವಾಗಿ ಅಡುಗೆಯನ್ನು ಮಾಡಿದ ಬದ್ರಿಯವರ ನೇತೃತ್ವದ ಅಡುಗೆ ತಂಡ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸೇವೆಗಳ ಪ್ರಸಾದದ ವಿತರಣೆ, ಸೇವಾಚೀಟಿಗಳ ವಿತರಣೆ - ಎಲ್ಲವನ್ನೂ ನಿಗದಿತ ಸ್ವಯಂ ಸೇವಕರು ಕರಾರುವಕ್ಕಾಗಿ ನಿರ್ವಹಿಸಿದರು. ಪೂಜೆಯ ವೇಳೆಯ ಸಮಯ ನಿರ್ವಹಣೆ, ದೀಪಾಲಂಕಾರ, ವೇದಿಕೆಯ ಭವ್ಯ ಅಲಂಕಾರ ಎಲ್ಲವೂ ಒಟ್ಟಾಗಿ ಹನುಮಾನ್ ಪೂಜಾ ಮಹೋತ್ಸವ ಸುಂದರವಾಗಿ ಮೂಡಿಬಂತು. ಈ ಪುಣ್ಯಕಾರ್ಯದ ಯಶಸ್ಸಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲ ಕಾರ್ಯಕರ್ತರಿಗೂ ಕೃತಜ್ಞತೆಯನ್ನು ಓಂಕಾರ ಸಮಿತಿಯು ಸಲ್ಲಿಸಿತು.







ಮಾತೃಭೂಮಿಯನ್ನು ಬಿಟ್ಟು ಪರಿಕೀಯ ದೇಶವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡ ಭಾರತೀಯರಿಗೆ ನಮ್ಮ ಸಂಸ್ಕೃತಿ, ಉತ್ಸವಗಳು ಎಲ್ಲವೂ ಮರೀಚಿಕೆಯಾಗಿಬಿಡುತ್ತದೆ, ನಾವು ಕಳೆದುಕೊಂಡಿರುವ ನಮ್ಮ ಸಾಂಸ್ಕೃತಿಕ ವಾತಾವರಣ, ಬೆಳೆಯುವ ನಮ್ಮ ಮಕ್ಕಳಿಗೆ ನಮ್ಮ ಸಂಪ್ರದಾಯಗಳನ್ನು ಪರಿಚಯಿಸುವ ತವಕ - ಈ ಎಲ್ಲ ಭಾವನೆಗಳನ್ನು ಹೊಂದಿದ ಓಂಕಾರ ಸಮಿತಿಯ ಕೆಲವು ಸ್ನೇಹಿತರು ಸೇರಿ ಆರು ವರ್ಷದ (೨೧-ಡಿಸೆಂಬರ್ -೨೦೧೨ ಕ್ಕೆ ಮೊದಲ ಆಂಜನೇಯ ಪೂಜೆ) ಹಿಂದೆ ಆರಂಭಿಸಿದ ಓಂಕಾರ (ಒಮಾನ್ ಕರ್ನಾಟಕ ಆರಾಧನಾ ಸಮಿತಿ) ಸಮಿತಿಯು ಮಸ್ಕತ್ತಿನಲ್ಲಿ ಇಲ್ಲಿಯ ತನಕ ಹಲವು ಅರ್ಥಪೂರ್ಣ, ಉತ್ತಮ ಗುಣಮಟ್ಟದ ಸುಂದರ ಕಾರ್ಯಕ್ರಮಗಳನ್ನು ಆಯೋಜಿಸಿ ಅಚ್ಚುಕಟ್ಟಾದ ಕಾರ್ಯಕ್ರಮಗಳಿಗೆ ಮಾದರಿಯಾಗಿದ್ದಾರೆ. ಇವರು ಆಯೋಜಿಸುವ ಭಕ್ತಿ, ಜ್ಞಾನ ಮತ್ತು ಸಂಗೀತದ ಪರಿಕಲ್ಪನೆಯೊಂದಿಗೆ ಕ್ರಮವಾಗಿ ಶ್ರೀ ಓಂಕಾರ ಆಂಜನೇಯ ಪೂಜೆ (ಭಕ್ತಿ), ಓಂಕಾರ ಜ್ಞಾನಾಮೃತ (ಜ್ಞಾನ), ಓಂಕಾರ ನಾದಾಮೃತ (ಸಂಗೀತ) ಕಾರ್ಯಕ್ರಮಗಳು ಮಸ್ಕತ್ ಕನ್ನಡಿಗರ ಅಚ್ಚು ಮೆಚ್ಚಿನ ಕಾರ್ಯಕ್ರಮಗಳು.











ಓಂಕಾರ ಜ್ಞಾನಾಮೃತ ಕಾರ್ಯಕ್ರಮದ ಮೂಲಕ ಶ್ರೀ ಶತಾವಧಾನಿ ಆರ್. ಗಣೇಶ್, ಶ್ರೀ ಪದ್ಮಭೂಷಣ ಡಾ ಬಿ. ಎಂ. ಹೆಗಡೆ, ಮತ್ತು ಶ್ರೀ ಚಕ್ರವರ್ತಿ ಸೂಲಿಬೆಲೆ ಮುಂತಾದ ಕನ್ನಡದ ಕೆಲವು ಮಹಾನ್ ಚಿಂತಕರನ್ನು ಮಸ್ಕತ್ ಕನ್ನಡಿಗರಿಗೆ ಪರಿಚಯಿಸಿದೆ. 

ಓಂಕಾರ ನಾದಾಮೃತ ಕಾರ್ಯಕ್ರಮದ ಮೂಲಕ ಶ್ರೀ ಡಾ. ವಿದ್ಯಾಭೂಷಣ, ಶ್ರೀ ಪುತ್ತೂರು ನರಸಿಂಹ ನಾಯಕ, ಶ್ರೀ ಅನಂತ ಕುಲಕರ್ಣಿ, ಶ್ರೀ ಆರ್. ಕೆ. ಪದ್ಮನಾಭ, ಶ್ರೀಮತಿ ಸಂಗೀತ ಕಟ್ಟಿ ಮತ್ತು ಶ್ರೀ ರಾಯಚೂರು ಶೇಷಗಿರಿದಾಸ ಮುಂತಾದ ಸಂಗೀತ ವಿದ್ವಾಂಸರನ್ನು ಮಸ್ಕತ್ ಕನ್ನಡಿಗರಿಗೆ ಪರಿಚಯಿಸಿದೆ.


ಓಂಕಾರ ಸಮಿತಿಯು ಹೀಗೆಯೇ ಉತ್ತಮ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಲಿ ಎನ್ನುವುದು ಮಸ್ಕತ್ತಿನ ಕನ್ನಡಿಗರ ಕಳಕಳಿಯ ಆಶಯ.

ವರದಿ: ಶ್ರೀಮತಿ ಸುಧಾ ಶಶಿಕಾಂತ

ಓಂಕಾರ ನಾದಾಮೃತ - ೨೦೧೮

ಓಂಕಾರ ನಾದಾಮೃತ - ೨೦೧೮

ಮಸ್ಕತ್ ನ ಓಂಕಾರ ಸಮಿತಿಯ (ಓಮಾನ್ ಕರ್ನಾಟಕ ಆರಾಧನಾ ಸಮಿತಿ) "ಓಂಕಾರ ನಾದಾಮೃತ -೨೦೧೮" ಭಕ್ತಿ ಸಂಗೀತ ಕಾರ್ಯಕ್ರಮವನ್ನು ಸೆಪ್ಟೆಂಬರ್ ೨೮ - ೨೦೧೮ ರಂದು ದಾರ್ಸೇಟ್ ನ ಶ್ರೀಕೃಷ್ಣಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಸುವ್ಯವಸ್ಥಿತವಾಗಿ ಆಯೋಜಿಸಲಾಗಿದ್ದ ನಾದಾಮೃತ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು.


ಓಂಕಾರ ನಾದಾಮೃತ-೨೦೧೮ ರ ಭಕ್ತಿಸಂಗೀತ ಕಾರ್ಯಕ್ರಮವನ್ನು ಸಾಕಾರಗೊಳಿಸಲು ನಮ್ಮ ಕನ್ನಡನಾಡಿನ ಭಕ್ತಿಸಂಗೀತ ವಿದ್ವಾನ್ ಹರಿದಾಸ ಶ್ರೀ ಸಂಗೀತ ಶಿರೋಮಣಿ ಎಂದೇ ಖ್ಯಾತರಾಗಿರುವ ಶ್ರೀಯುತ ರಾಯಚೂರು ಶೇಷಗಿರಿದಾಸರು ಆಗಮಿಸಿದ್ದರು. ಶ್ರೀಯುತರ ಭಕ್ತಿಪ್ರಧಾನ ಗಾಯನಕ್ಕೆ ತಬಲಾ ವಾದಕರಾದ ಶ್ರೀ ಗೋಪಾಲರಾವ್ ಗುಡಿಬಂಡೆ, ಹಾರ್ಮೋನಿಯಮ್ ವಾದಕರಾದ ಶ್ರೀ ಶ್ರೀಪಾದ ದಾಸ, ಕೊಳಲು ವಾದಕರಾದ ಶ್ರೀ ಜಯತೀರ್ಥ ಕುಲಕರ್ಣಿ ಹಾಗೂ ತಾಳದಲ್ಲಿ ನಮ್ಮ ಮಸ್ಕತ್ ನ ಕಲಾವಿದರಾದ ಶ್ರೀ ಸಚಿನ್ ಕಾಮತ್ ರವರು ಸಾಥ್ ನೀಡಿದರು.

ಸಾಯಂಕಾಲ ಸರಿಯಾಗಿ ೬:೩೦ಕ್ಕೆ ಶ್ರೀಯುತ ರವಿಕುಮಾರ ರಾವ್ ಅವರು ಸ್ವಾಗತ ಭಾಷಣದೊಂದಿಗೆ ಕಲಾವಿದರನ್ನು, ಗಣ್ಯರನ್ನು ಹಾಗೂ ಸಭಿಕರನ್ನು ಅತ್ಯಂತ ಅತ್ಮೀಯವಾಗಿ ಬರಮಾಡಿಕೊಂಡರು. 

ಸ್ವಾಗತ ಭಾಷಣ: ಶ್ರೀ ರವಿಕುಮಾರ ರಾವ್ 

ಕಾರ್ಯಕ್ರಮದ ನಿರೂಪಕಿಯಾದ ಶ್ರೀಮತಿ ಶ್ರೀಮಾತಾ ಹಿರಿಯಣ್ಣ ಅವರು ಕನ್ನಡನಾಡಿನ ಕಲಾವಿದರನ್ನು ಹೂಗುಚ್ಚದೊಂದಿಗೆ ವೇದಿಕೆಗೆ ಆಹ್ವಾನಿಸಿ ಕಿರುಪರಿಚಯ ಮಾಡಿಕೊಟ್ಟರು. 

ನಿರೂಪಣೆ: ಶ್ರೀಮತಿ ಶ್ರೀಮಾತಾ ಹಿರಿಯಣ್ಣ 





ನಂತರ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರವರು ಶ್ರೀ ಗಣೇಶ ದೇವರಿಗೆ ಮತ್ತು ಓಂಕಾರ ಸಮಿತಿಯ ಆರಾಧ್ಯದೇವರಾದ ಶ್ರೀ ಆಂಜನೇಯ ಸ್ವಾಮಿಗೆ ಆರತಿ ಬೆಳಗುವದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. 

ಆರತಿ: ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ

ಶ್ರೀಯುತ ರಾಯಚೂರು ಶೇಷಗಿರಿದಾಸ ಅವರು "ಆರಾಧಿಪ ಭಕ್ತರಭಿಷ್ಠ ಪೂರೈಸುವ ಪ್ರಭುವೇ ಬಾರೋ , ರಾಘವೇಂದ್ರ ಬಾರೋ" ಎಂದು ಭಕ್ತಿಪರವಶವಾಗಿ ಹಾಡುತ್ತ ತಮ್ಮ ಗಾಯನಲಹರಿಯನ್ನು ಪ್ರಾರಂಬಿಸಿದರು. ರಾಯ ಬಾರೋ ರಾಘವೇಂದ್ರ ಬಾರೋ, ಜೈ ಜೈ ಹನುಮಾನ್ ಕಿ ಜೈ, ಪವಮಾನ ಜಗದ ಪ್ರಾನ, ಶಿವನು ಬೈರಾಗಿಯಾಗಿ ಬಂದ ನೋಡೇ ಹಾಡುಗಳಿಂದ ಕಾರ್ಯ್ಕ್ರಮದ ರಂಗೇರಿತು. ಶ್ರೀಯುತರು ಹಾಡಿಗೂ ದಾಸ ಸಾಹಿತ್ಯ, ದಾಸವಾಣಿ ಹಾಗೂ ಹಾಡಿನ ತಾತ್ಪರ್ಯದ ಬಗ್ಗೆ ನೀಡುತ್ತಿದ್ದ ಮಾಹಿತಿ ಪ್ರತಿಯೊಬ್ಬ ಸಭಿಕರನ್ನು ತಲ್ಲೀನನನ್ನಾಗಿಸಿ ಗಾಯನದ ಮಾಧುರ್ಯತೆಯನ್ನು ಇಮ್ಮಡಿಗೊಳಿಸಿತು.




ನಂತರ ಕಾರ್ಯಕ್ರಮಕ್ಕೆ ಚಿಕ್ಕ ವಿರಾಮ ನೀಡಿ ತಾಯ್ನಾಡಿನ ಕಲಾವಿದರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡುವ ಸಮಾರಂಭ ನೆರವೇರಿತು. 


ಭಾರತೀಯ ಸಮಾಜಿಕ ಒಕ್ಕೂಟ - ಕರ್ನಾಟಕ ವೇದಿಕೆಯವರಿಂದ ಶ್ರೀ ರಾಯಚೂರು ಶೇಷಗಿರಿದಾಸ ಇವರಿಗೆ ನೆನಪಿನ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಭಾರತೀಯ ಸಾಮಾಜಿಕ ವೇದಿಕೆ - ಕರ್ನಾಟಕ ವಿಭಾಗದಿಂದ ಸನ್ಮಾನ

ಕಾರ್ಯಕ್ರಮಕ್ಕೆ ಉಪಸ್ಥಿತರಾಗಿದ್ದ ಶ್ರೀಯುತ ಜಿ ವಿ ರಾಮಕೃಷ್ಣ, ಶ್ರೀಯುತ ಡಾ ಸಿ ಕೆ ಅಂಚನ್, ಶ್ರೀಯುತ ಮಂಜುನಾಥ ನಾಯಕ ಹಾಗೂ ಶ್ರೀಯುತ ಅನಂತ ಪದ್ಮನಾಭ ಇವರು ಎಲ್ಲ ಕಲಾವಿದರಿಗೆ ಶಾಲು ಹೊದಿಸಿ ಸ್ಮರಣಿಕೆ ಮತ್ತು ಹಣ್ಣಿನ ತಟ್ಟೆ ನೀಡಿ ಸನ್ಮಾನಿಸಿದರು.

ಸನ್ಮಾನ: ಶ್ರೀ ಸಚಿನ್ ಕಾಮತ

ಸನ್ಮಾನ : ಶ್ರೀ ಜಯತೀರ್ಥ ಕುಲಕರ್ಣಿ

ಸನ್ಮಾನ: ಶ್ರೀ ಶ್ರೀಪಾದ ದಾಸ

ಸನ್ಮಾನ: ಗೋಪಾಲರಾವ ಗುಡಿಬಂಡೆ

ಓಂಕಾರ ಸಮಿತಿಯು ಶ್ರೀಯುತ ರಾಯಚೂರು ಶೇಷಗಿರಿದಾಸ ಅವರು ಭಕ್ತಿಸಂಗೀತ ಲೋಕಕ್ಕೆ ನೀಡಿದ ಅಪ್ರತೀಮ ಸೇವೆಯನ್ನು ಪರಿಗಣಿಸಿ "ಓಂಕಾರಶ್ರೀ" ಬಿರುದನ್ನು ನೀಡಿ ಗೌರವಿಸಿತು.

ಸನ್ಮಾನ: ಶ್ರೀ ರಾಯಚೂರು ಶೇಷಗಿರಿದಾಸ

ಓಂಕಾರಶ್ರೀ ಬಿರುದು ನೀಡಿ ಸನ್ಮಾನ

ವಿರಾಮದ ನಂತರ ಆರು ತೂಗಿದರೂ ಮಲಗನು ಬಾರೇ ಗೋಪಮ್ಮಾ, ಹನುಮಂತ ಹನುಮಂತ, ಗೊಪಿ ಕೇಳೇ ನಿನ್ನ ಮಗ ಚೋರ, ಎನ ಸವಿ ಎನ ಸವಿ ಹರಿನಾಮ ಹಾಡಿನಿಂದ ಸಭಿಕರನ್ನೆಲ್ಲಾ ರೋಮಾಂಚನಗೊಳಿಸಿದರು. ಕಂಡೆನಾ ನರಸಿಂಹನಾ, ಪಂಢರಾಪುರವೆಂಬ ದೊಡ್ಡ ನಗರ ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರಾ, ತೋಳು ತೋಳು ತೋಳು ರಂಗ ತೋಳನ್ನಾಡೈ ಮುಂತಾದ ಭಕ್ತಿಗೀತೆಗಳನ್ನು ಸುಮಧುರವಾಗಿ ಹಾಡಿದರು.



ಸಾಂಪ್ರದಾಯಿಕ ಹಾಡಾದ ಬುದ್ಧಿಮಾತು ಹೇಳಿದರೆ ಕೇಳಬೇಕಮ್ಮಾ ಹಾಡಿನಿಂದ ಸಭಿಕರ ಹರ್ಷೋದ್ಗಾರಕ್ಕೆ ಪಾತ್ರರಾದರು.


ಪ್ರತಿಬಾರಿಯೂ ಸಭಿಕರೆಲ್ಲರೂ ತಮ್ಮ ಕರತಾಳದ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. ತಬಲಾ ಹರ್ಮೋನಿಯಂ, ಕೊಳಲು ಹಾಗೂ ತಾಳವಾದ್ಯದ ಜೊತಗೆ ಸಾಥ್ ನೀಡುತ್ತಿದ್ದ ಕಲಾವಿದರು ಮಧ್ಯ ಮಧ್ಯದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ತಬಲಾ : ಶ್ರೀ ಗೋಪಾಲರಾವ ಗುಡಿಬಂಡೆ

ಹಾರ್ಮೋನಿಯಮ್ : ಶ್ರೀ ಶ್ರೀಪಾದ ದಾಸ

ಕೊಳಲು : ಶ್ರೀ ಜಯತೀರ್ಥ ಕುಲಕರ್ಣಿ
ತಾಳ : ಶ್ರೀ ಸಚಿನ್ ಕಾಮತ


ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು. ಸುಮಾರು ಮೂರು ಘಂಟೆಗಳ ಕಾಲ ಸುಶ್ರಾವ್ಯವಾಗಿ ಭಕ್ತಿಗೀತೆಗಳನ್ನು ಹಾಡಿ ಓಂಕಾರ ನಾದಾಮೃತ-೨೦೧೮ ರ ಕಾರ್ಯಕ್ರಮವನ್ನು ಅರ್ಥಗರ್ಭಿತವಾಗಿಸಿದರು. 



ಕೊನೆಯದಾಗಿ ಶ್ರೀ ಪವನ್ ಕುಮಾರ ಅವರು ಕಾರ್ಯಕ್ರಮ್ರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾ ವಂದನಾರ್ಪಣಾ ಕಾರ್ಯಕ್ರಮ ನೆರವೇರಿಸಿದರು.

ವಂದನಾರ್ಪಣೆ : ಶ್ರೀ ಪವನಕುಮಾರ
    
"ಇದು ನನ್ನ ಜೀವನದ ವಿದೇಶದ ಕಾರ್ಯಕ್ರಮಗಳಲ್ಲಿ ಅತ್ತ್ಯುತ್ತಮ ಕಾರ್ಯಕ್ರಮ" ಎಂಬ ಶ್ರೀಯುತ ರಾಯಚೂರು ಶೇಷಗಿರಿದಾಸರ ಭಾವುಕ ನುಡಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಲ್ಲೂ ಸಂತೃಪ್ತಿ ಹಾಗೂ ಸಾರ್ಥಕಥೆಯ ಭಾವ ವ್ಯಕ್ತವಾಗುತ್ತಿತ್ತು.


ಓಂಕಾರ ತಂಡದೊಂದಿಗೆ

ಓಂಕಾರ ಮಹಿಳಾ ತಂಡದೊಂದಿಗೆ

ವರದಿ: ಶ್ರೀಮತಿ ಶ್ರೀಮಾತಾ ಹಿರಿಯಣ್ಣ


=======================================================================================

Watch the complete Omkar Naadamrutha-2018 on Youtube:

--------------------------------------------------------------------------------------------------------------------------------------------------------

Omkar Naadamrutha - 2018 (Part-1)


Omkar Naadamrutha - 2018 (Part-2)



=======================================================================================

Listen or download the songs of Omkar Naadamrutha-2018:

--------------------------------------------------------------------------------------------------------------------------------------------------------


Araadipa bhaktarabhista pooriasuva prabhuve baaro/ ಆರಾಧಿಪ ಭಕ್ತರಭಿಷ್ಠ ಪೂರೈಸುವ ಪ್ರಭುವೇ ಬಾರೋ


Raaya baaro raghavendra baaro / ರಾಯ ಬಾರೋ ರಾಘವೇಂದ್ರ ಬಾರೋ


Shivanu bairagiyagi banda node / ಶಿವನು ಬೈರಾಗಿಯಾಗಿ ಬಂದ ನೋಡೇ


Jai Jai Hanuman ki jai / ಜೈ ಜೈ ಹನುಮಾನ್ ಕಿ ಜೈ


Pavamana Jagada Prana / ಪವಮಾನ ಜಗದ ಪ್ರಾಣ


Enu Olle Hariya Ninna stutisi keluvadu / ಏನು ಒಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವದು


Hanumanta Hanumanta / ಹನುಮಂತ ಹನುಮಂತ


aaru toogidearoo malaganu Baare Gopamaa / ಆರೂ ತೂಗಿದರೂ ಮಲಗನು ಬಾರೆ ಗೋಪಮಾ


Gopi kele ninna maga yaara iva chora / ಗೋಪಿ ಕೇಳೇ ನಿನ್ನ ಮಗಾ ಯಾರ ಇವಾ ಚೋರಾ


Ena Savi Ena Savi hari naama / ಏನ ಸವಿ ಏನ ಸವಿ ಹರಿನಾಮಾ


Buddhi Maatu Helidare kelabekamma magale / ಬುದ್ಧಿ ಮಾತು ಹೇಳಿದರೇ ಕೇಳಬೇಕಮ್ಮಾ ಮಗಳೇ


Kande Naa Narasimhana / ಕಂಡೆ ನಾ ನರಸಿಂಹನಾ


Pandharapuravemba Dodda nagara alli vithobhanemba dodda saukaara / ಪಂಢರಪುರವೆಂಬ ದೊಡ್ಡ ನಗರ, ಅಲ್ಲಿ ವಿಠೋಬನೆಂಬ ದೊಡ್ಡ ಸಾಹುಕಾರ


Tolu Tolu Tolu Ranga tolannarai / ತೋಳು ತೋಳು ತೋಳು ರಂಗ ತೋಳನ್ನಾರೈ


Bhagyada Lakshmi Baramma / ಭಾಗ್ಯದ ಲಕ್ಷ್ಮೀ ಬಾರಮ್ಮಾ