ಶ್ರೀ ಓಂಕಾರ ಆಂಜನೇಯ ಪೂಜೆ-೨೦೧೭


ಶ್ರೀ ಓಂಕಾರ ಆಂಜನೇಯ ಪೂಜೆ-೨೦೧೭



ಅಚ್ಚುಕಟ್ಟಾದ ಮತ್ತು ಉತ್ತಮ ಗುಣಮಟ್ಟದ ಕಾರ್ಯಕ್ರಮಗಳಿಗೆ ಮಸ್ಕತ್ತಿನಲ್ಲಿ ಮನೆಮಾತಾಗಿರುವ ಓಂಕಾರ (ಓಮಾನ್ ಕರ್ನಾಟಕ ಆರಾಧನಾ ಸಮಿತಿ) ಸಮಿತಿಯು ಆಯೋಜಿಸಿದ ಆರನೇಯ ವರ್ಷದ ಓಂಕಾರ ಆಂಜನೇಯ ಸ್ವಾಮಿಯ ಆರಾಧನಾ ಮಹೋತ್ಸವವು ದಿನಾಂಕ ೧೫/೧೨/೨೦೧೭ ರಂದು ಇಲ್ಲಿನ ದಾರಸೇಟ್ ನಲ್ಲಿರುವ ಶ್ರೀಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಸುಮಾರು ಸಾವಿರದ ಆರುನೂರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ಕಾರ್ಯಕ್ರಮದ ಮುನ್ನಾದಿನವಾದ ಗುರುವಾರ ದಿನಾಂಕ ೧೪/೧೨/೨೦೧೭ ರ ಸಂಜೆಗೆ ಸುಮಾರು ಒಂದು ತಿಂಗಳ ಹಿಂದಿನಿಂದ ಆರಂಭವಾದ ತಯಾರಿಯ ಅಂತಿಮ ಘಟ್ಟ. ಸಂಜೆಯಿಂದಲೇ ಎಲ್ಲ ಕಾರ್ಯಕರ್ತರಲ್ಲಿ ಒಂದು ಹಬ್ಬದ ವಾತಾವರಣ ಮತ್ತು ಅದೇ ಹುಮ್ಮಸ್ಸು. ಅಂದು ಓಂಕಾರ ಕಾರ್ಯಕರ್ತರೆಲ್ಲ ಸಭಾಂಗಣದಲ್ಲಿ ಸೇರಿ ತಂಡ-ತಂಡಗಳಾಗಿ ಕೆಲಸಗಳನ್ನು ಹಂಚಿಕೊಂಡರು. ಅಂದು ಸಂಜೆಯಿಂದಲೇ ಮಹಾಪೂಜಾ ತಯಾರಿಯ ಸಮಾಗ್ರಿಗಳೆಲ್ಲವೂ ಸಭಾಂಗಣಕ್ಕೆ ಬರಲಾರಂಬಿಸಿದವು. 

ಸಂಜೆ ೮:೦೦ ಘಂಟೆಗೆ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರು ಅಡುಗೆಮನೆಯ ಪ್ರಾಂಗಣದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಪೂಜೆಯೊಂದಿಗೆ ಅಡುಗೆ ತಂಡದ ಕೆಲಸಗಳಿಗೆ ಚಾಲನೆ ನೀಡಿದರು. ಓಂಕಾರ ಮಹಿಳಾ ಕಾರ್ಯಕರ್ತರು ಎಲ್ಲ ತರಕಾರಿಗಳನ್ನು ಹೆಚ್ಚುವ ಮೂಲಕ ಅಡುಗೆ ತಂಡದ ಜೊತೆಗೆ  ಕೈ ಜೋಡಿಸಿದರು. ಇನ್ನೊಂದು ಗುಂಪು ಸುಂದರವಾಗಿ ವೇದಿಕೆಯನ್ನು ಸಜ್ಜುಗೊಳಿಸಿತು. ಸ್ವಲ್ಪ ಜನರು ತುಳಸಿ ಹಾರ, ವೀಳ್ಯದೆಲೆಯ ಹಾರಗಳನ್ನು ಮಾಡಿ ಮರುದಿನದ ಮುಖ್ಯಪ್ರಾಣನ ಅಲಂಕಾರಕ್ಕೆ ತಯಾರಿ ಮಾಡಿದರು. ರಾತ್ರಿ ಹನ್ನೆರಡು ಗಂಟೆಯ ತನಕ ಈ ತಯಾರಿ ಬಹಳ ಸಡಗರದಿಂದ ನಡೆಯಿತು. ಎಲ್ಲ ಕಾರ್ಯಕರ್ತರಿಗೂ ಭೋಜನದ ವ್ಯವಸ್ಥೆಯನ್ನು ಅಲ್ಲಿಯೇ ಮಾಡಲಾಗಿತ್ತು. ತಮ್ಮ ಮಗನ/ ಮಗಳ ಮನೆಗೆ ಭಾರತದಿಂದ ಬಂದಿರುವ ತಂದೆ-ತಾಯಿಯರೂ ಬಹಳ ಉತ್ಸಾಹದಿಂದ ಈ ತಯಾರಿ ಸಡಗರದಲ್ಲಿ ಭಾಗಿಯಾಗಿದ್ದರು. ಒಟ್ಟಿನಲ್ಲಿ ಹಬ್ಬದ ವಾತಾವರಣ ಹಿಂದಿನ ದಿನವೇ ನಿರ್ಮಾಣವಾಗಿತ್ತು.

ಪೂಜೆಯ ದಿನ ಶುಕ್ರವಾರ ದಿನಾಂಕ ೧೫/೧೨/೨೦೧೭ ಬೆಳಿಗ್ಗೆ ೮.೦೦ ಗಂಟೆಗೆ ಓಂಕಾರ ಆಂಜನೇಯ ಮಹಾಪೂಜೆಯು ದೇವಸ್ಥಾನದ ಪ್ರಾಂಗಣದಲ್ಲಿರುವ ಶ್ರೀ ಗಣೇಶ ದೇವಸ್ಥಾನ, ಶ್ರೀ ದೇವಿ ದೇವಸ್ಥಾನ ಮತ್ತು ಶ್ರೀಕೃಷ್ಣ ದೇವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ಆರಂಭವಾಯಿತು. 

ಪ್ರಾರ್ಥನೆ: ಶ್ರೀ ಗಣೇಶ ಮಂದಿರ

ಪ್ರಾರ್ಥನೆ: ಶ್ರೀ ದೇವಿ ಮಂದಿರ

ಪ್ರಾರ್ಥನೆ: ಶ್ರೀ ಕೃಷ್ಣ ಮಂದಿರ

ಈ ಬಾರಿಯ ಸಂಕಲ್ಪಪೂಜೆ ದಂಪತಿಗಳಾಗಿ ನಮ್ಮೆಲ್ಲರ ಪರವಾಗಿ  ಮಸ್ಕತ್ ನ ಹಿರಿಯ ಕನ್ನಡಿಗರೂ ಆದ ಮತ್ತು ಧಾರ್ಮಿಕ ಲೋಕಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ಶ್ರೀಯುತ ಎಸ್ ಕೆ ರಾವ್ ದಂಪತಿಗಳು ನಡೆಸಿಕೊಟ್ಟರು.

ಸಂಕಲ್ಪ ಪೂಜೆ

ಶ್ರೀಯುತ ಲಕ್ಷ್ಮೀನಾರಾಯಣ ಆಚಾರ್ಯ ಅವರ ಸಮ್ಮುಖದಲ್ಲಿ ಪ್ರಾರ್ಥನೆ ಮತ್ತು ಸಂಕಲ್ಪ ಪೂಜೆಯೊಂದಿಗೆ  ಶ್ರೀ ಓಂಕಾರ ಆಂಜನೇಯನ ಪೂಜಾ ವಿಧಿಗಳು ಆರಂಭಗೊಂಡವು. ಮುಖ್ಯಪ್ರಾಣದೇವರ ಪಂಚಾಮೃತ-ಮಹಾಅಭಿಷೇಕ ಮತ್ತು ಅಲಂಕಾರ ಪೂಜೆ ಮುಂದುವರಿಯಿತು. 


ಅಭಿಷೇಕ ಮತ್ತು ಅಲಂಕಾರ:








ಅಲಂಕಾರ ಪೂಜೆಯ ನಂತರ ಶ್ರೀ ಓಂಕಾರ ಆಂಜನೇಯ ಸ್ವಾಮಿಯ ಪಲ್ಲಕ್ಕಿ ಉತ್ಸವ ನಡೆಯಿತು. ಪಲ್ಲಕ್ಕಿ ಮೆರವಣಿಗೆಯ ಸಮಯದಲ್ಲಿ ಇಡೀ ಸಭಾಭವನ "ಶ್ರೀ ರಾಮ್ ಜಯರಾಮ್ ಜೈ ಜೈ ರಾಮ್ ಮಂತ್ರದಿಂದ" ಗೂಂಜಿಡುತ್ತಿತ್ತು. ಭಕ್ತರೆಲ್ಲ ಪಲ್ಲಕ್ಕಿಗೆ ಹೆಗಲು ಕೊಟ್ಟು ಧನ್ಯತೆಯನ್ನು ಅನುಭವಿಸಿದರು. ಪಲ್ಲಕ್ಕಿ ಉತ್ಸವವು ಈ ಭಾರಿಯ ಹನುಮಾನ್ ಆರಾಧನೆಯ ಪ್ರಮುಖ ಆಕರ್ಷಣೆಯಾಗಿತ್ತು. 

ಪಲ್ಲಕ್ಕಿ ಉತ್ಸವ:











ನಂತರ ಮುಕ್ಕಾಲು ಘಂಟೆಗಳ ಕಾಲ ಚಂಡೆ ವಾದ್ಯದೊಂದಿಗೆ ಮಹಾನೈವೈದ್ಯ ಮತ್ತು ಮಂಗಳಾರತಿಯನ್ನು ಮಾಡಿ ನೆರೆದ ಭಕ್ತ ಸಮೂಹವು  ಭಕ್ತಿಭಾವ ತಾರಕಕ್ಕೆ ತಲುಪಿತು. ಚಂಡೆವಾದ್ಯ ನೆರೆದ ಸಾವಿರಾರು ಭಕ್ತರಲ್ಲಿ ಭಕ್ತಿಯ ಸಂಚಲನವನ್ನೇ ಹರಿಸಿತ್ತು.

ಮಹಾನೈವೇದ್ಯ ಮತ್ತು ಮಹಾಮಂಗಳಾರತಿ










ಸಂಕಲ್ಪದ ನಂತರದ ಆರಾಧನೆಯ ಉದ್ದಕ್ಕೂ ವಿವಿಧ ತಂಡದವರಿಂದ ಭಕ್ತಿ ತುಂಬಿದ ಭಜನೆಗಳಿಂದ ನೆರೆದವರ ಮನವನ್ನು ಪುಳಕಿತಗೊಳಿಸಿದರು. ಭಜನ ತಂಡಗಳು  ಕ್ರಮವಾಗಿ ಇಂತಿವೆ. 

ಡಿವೈನ್  ಪಾರ್ಕ್ ವತಿಯಿಂದ ಭಜನೆ 

ಉಡುಪಿ ಬ್ರಾಹ್ಮಣ ವೃಂದದಿಂದ ಭಜನೆ

ವಿಶ್ವಬ್ರಾಹ್ಮಣ ಒಕ್ಕೂಟ ಮಸ್ಕತ್ ನಿಂದ ಭಜನೆ

ಶ್ರೀ ಗುರುರಾಘವೇಂದ್ರ ತಂಡದಿಂದ ಭಜನೆ

ಗಣೇಶ ವೃಂದ ದಿಂದ ಭಜನೆ

ಓಂಕಾರ ಮಹಿಳಾ ಸಮಿತಿಯಿಂದ ಭಜನೆ

ಗೌಡ ಸಾರಸ್ವತ ಬ್ರಾಹ್ಮಣ (ಜಿ ಎಸ ಬಿ) ತಂಡ ದಿಂದ ಭಜನೆ 

ಹರಿವಾಯುಸ್ತುತಿ ಪಾರಾಯಣ  ವೃಂದದಿಂದ ಹರಿವಾಯುಸ್ತುತಿ ಪಾರಾಯಣ

ಶ್ರೀ ಸತ್ಯಸಾಯಿ ಸಮಿತಿಯಿಂದ ಹನುಮಾನ್ ಚಾಳೀಸಾ ಪಾರಾಯಣ

ಸಾಯಿ ಭಜನಾ ಮಂಡಳಿ. ಪಲ್ಲಕ್ಕಿ ಸೇವೆಯ ಹೊತ್ತಿಗೆ ಮೂಡಿಬಂದ ಸುಂದರವಾದ ಹನುಮಾನ ಚಾಲೀಸಾ ಪಾರಾಯಣ ಮುದವಾಗಿತ್ತು. ಹರಿವಾಯು ಮಂಡಳಿಯು  ಹರಿವಾಯು ಸ್ತುತಿಯನ್ನು ಸ್ಪುಟವಾಗಿ ಮಾಡಿದರೆ , ಚಂಡೆ ವಾದ್ಯವು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. 



ನಂತರ ಭಕ್ತರಿಗೆ ಸರದಿಯಲ್ಲಿ ತೀರ್ಥ-ಪ್ರಸಾದವನ್ನು, ಸೇವೆ-ಪ್ರಸಾದಗಳನ್ನು ವಿತರಿಸಲಾಯಿತು. 

ಶ್ರೀಯುತ ಬದ್ರಿಯವರ ನೇತೃತ್ವದಲ್ಲಿ ಸೇವೆಯ ರೂಪದಲ್ಲಿ ರುಚಿಯಾದ ಅಡಿಗೆಮಾಡಿದ ತಂಡವನ್ನು ಎಲ್ಲರೂ ಹರಸಿದರು.


ಕೊನೆಯಲ್ಲಿ ನೆರೆದ ಭಕ್ತರಿಗೆಲ್ಲ ಮಹಾಪ್ರಸಾದದ ಅನ್ನ ಸಂತರ್ಪಣೆಯ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. 



ಸಂಪೂರ್ಣವಾದ ಸೇವೆಯನ್ನು ನೀಡಿದ ಓಂಕಾರವು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರಿಗೆಲ್ಲ ಕೃತಜ್ಞತೆಯನ್ನು ಸಲ್ಲಿಸಿತು. ಹೀಗೆಯೇ ನಿರಂತರ ಸೇವೆಯನ್ನು ನೀಡುವ ಅವಕಾಶವನ್ನು ಕಲ್ಪಿಸೆಂದು ಶ್ರೀ ಮುಖ್ಯಪ್ರಾಣನನ್ನು ಪ್ರಾರ್ಥಿಸುತ್ತ ಈ ವರ್ಷದ ಓಂಕಾರ ಆಂಜನೇಯ ಮಹಾಪೂಜೆಯು ಸಂಪೂರ್ಣಗೊಂಡಿತು.



ವರದಿ: ಶ್ರೀಮತಿ ಸುಧಾ ಶಶಿಕಾಂತ, ಮಸ್ಕತ್