೨೪-ಮಾರ್ಚ್-೨೦೧೭ ರಂದು ಓಂಕಾರ ಜ್ಞಾನಾಮೃತ ಕಾರ್ಯಕ್ರಮದಲ್ಲಿ ಮಸ್ಕತ್ತಿನ ಜನತೆಗೆ ಒಂದು ಜ್ಞಾನಭರಿತ ರಸಸಂಜೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಅಂದು ಓರ್ವ ಮೇರು ಸದೃಶ ವ್ಯಕ್ತಿತ್ವದ, ವಿಸ್ತಾರವಾದ ಓದು ಮತ್ತು ಅಪಾರವಾದ ಅನುಭವ ಹೊಂದಿರುವಂತಹ ಪದ್ಮಭೂಷಣ ಡಾ ಬಿ. ಎಂ. ಹೆಗಡೆ ಅವರ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಉಪನ್ಯಾಸದ ವಿಷಯ ಭಾರತೀಯ ಮೌಲ್ಯಗಳ ಆಧಾರಿತ ಆರೋಗ್ಯ ಮತ್ತು ಸಂತೊಷ (Health & Happiness on Indian Ethos).
ಕಾರ್ಯಕ್ರಮ ಪ್ರಾರಂಭವಾಗುವದಕ್ಕೆ ಮುನ್ನವೇ ಸಭಾಂಗಣ ಕಿಕ್ಕಿರಿದು ತುಂಬಿದ್ದು ಪದ್ಮಭೂಷಣ ಡಾ. ಬಿ. ಎಂ. ಹೆಗಡೆಯವರ ಖ್ಯಾತಿ ಮತ್ತು ಸಭಿಕರಲ್ಲಿ ಅವರ ಬಗೆಗಿನ ಉತ್ಸಾಹವನ್ನು ಎತ್ತಿ ಹೇಳುತ್ತಿತ್ತು. ಓಂಕಾರ ಸಮಿತಿಯ ಸದಸ್ಯರು ಆಗಮಿಸಿದ್ದ ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಅತ್ಯಂತ ಶ್ರಮವಹಿಸಿ ಆದಷ್ಟು ಸ್ಥಳ ಮಾಡಿಕೊಡಲು ಹವಣಿಸುತ್ತಿದ್ದರು. ನಂತರ ವೇದಿಕೆಯ ಪಕ್ಕದ ನೆಲದ ಮೇಲೆ ಚಾಪೆಯನ್ನು ಹಾಸಿ ಬಂದ ಸಭಿಕರಿಗೆ ಸ್ಥಳಾವಕಾಶ ಮಾಡಿಕೊಟ್ಟರು.
ಓಂಕಾರ ಸಮಿತಿಯ ಶ್ರೀಯುತ ಜಿ. ರವಿಕುಮಾರರವರು ಸಭಿಕರನ್ನು ಸ್ವಾಗತಿಸಿ, ಹಾಗೂ ಗಣ್ಯರಿಗೆ ಸುಂದರವಾದ ಹೂಗುಚ್ಚವನ್ನು ಪ್ರಧಾನ ಮಾಡಿಸಿದರು. ನಂತರ ಶ್ರೀಯುತ ಲಕ್ಷ್ಮೀನಾರಾಯಣ ಅಚಾರ್ಯ ಅವರು ಶ್ರೀ ಗಣಪತಿ ಮತ್ತು ಶ್ರೀ ಆಂಜನೇಯ ದೇವರಿಗೆ ಆರತಿ ಬೆಳಗುವದರ ಮೂಲಕ ಕಾರ್ಯಕ್ರಮದ ಶುಭಾರಂಭವನ್ನು ಮಾಡಿಲಾಯಿತು.
"ಶರೀರೆ ಜರ್ಝರೀಭೂತೆ ವ್ಯಾಧಿಗ್ರಸ್ತೆ ಕಲೆವರೆ |
ಔಷಧಂ ಜಾಹ್ನವೀತೊಯೆ ವೈದ್ಯೋನಾರಾಯಣೋ ಹರಿಃ ||"
ಈ ಶ್ಲೋಕದಿಂದ ಶ್ರೀಮತಿ ಲಕ್ಷ್ಮೀ ರವಿಶಂಕರ ಅವರು ಪದ್ಮಭೂಷಣ ಡಾ. ಬಿ. ಎಂ. ಹೆಗಡೆ ಅವರನ್ನು ಸಭೆಗೆ ಪರಿಚಯ ಮಾಡಿಕೊಟ್ಟರು.
ಪದ್ಮಭೂಷಣ ಡಾ. ಬಿ. ಎಂ. ಹೆಗಡೆ ಅವರ ಉಪನ್ಯಾಸ ಒಂದು ಭಾಷಣಕ್ಕಿಂತ ಪ್ರೇಕ್ಷಕರ ಜೊತೆ ಒಂದು ಪರಸ್ಪರ ಮಾತುಕತೆಯ ರೀತಿಯಲ್ಲಿ ಸರಳವಾಗಿತ್ತು. ಆರೋಗ್ಯದ ಬಗ್ಗೆ ಮಾತನಾಡುತ್ತ ಅವರು ಹೇಳಿದ್ದು ಆರೋಗ್ಯ ಅಂದರೆ ರೋಗದ ಕೊರತೆ ಅಲ್ಲ, ಆರೋಗ್ಯ ಅಂದರೆ ಕೆಲಸ ಮಾಡಲು ಉತ್ಸಾಹ ಮತ್ತು ಸಂತೋಷವಾಗಿರಲು ಉತ್ಸಾಹ. ಆರೋಗ್ಯ ಮತ್ತು ಸಂತೋಷ ಎರಡು ಸೋದರರು ಇದ್ದ ಹಾಗೆ ಎನ್ನುವದನ್ನು ಸ್ಟೆಫೆನ್ ಹಾವ್ಕಿಂಗ್ಸ್ ಅವರ ಉಲ್ಲೇಖದ ಉದಾಹರಣೆಯಿಂದ ವಿವರಿಸಿದರು.
ಅದ್ವೈತ ತತ್ವದ ಮಹತ್ವದ ಬಗ್ಗೆ ವಿವರಿಸುತ್ತ, ಭೌತಶಾಸ್ತ್ರ ತಜ್ಞ ಹನ್ಸ್ ಪೀಟರ್ ಡೆಉರ್ರ್ ಹೇಳುತಾರೆ ನಾನು ಭೌತಶಾಸ್ತ್ರ (Quantum Physics) ಕಲಿತಿದ್ದು ಉಪನಿಷತ್ ಗಳಿಂದ. ಹೇಗೆ ಅಣು ಎಲ್ಲ ಕಡೆ ಇದ್ದರೂ ಕಣ್ಣಿಗೆ ಕಾಣುವುದಿಲ್ಲವೋ ಅದೇ ರೀತಿ ದೇವರು ನಮಗೆ ಕಾಣಿಸುವುದಿಲ್ಲ. ಹೇಗೆ ಕಷ್ಟ ಬಂದಾಗ ಮಾತ್ರ ನಾವು ದೇವರ ಅನುಪಸ್ಥಿತಿಯನ್ನು ನೆನಪಿಸಿಕೊಳ್ಳುತ್ತೇವೆಯೋ ಹಾಗೆಯೇ ಸುಖದಲ್ಲೂ ದೇವರನ್ನು ಕಾಣಬೇಕು.
ಹಿಂದು, ಇಸ್ಲಾಮ್, ಕ್ರಿಸ್ಚಿಯನ್ ಎಲ್ಲ ಧರ್ಮಗಳ ಸಂದೇಶ ಒಂದೇ - ನೀವು ಬೇರೆಯವರಿಗೆ ಸಹಾಯ ಮಾಡಿ, ಇದು ನಿಮಗೆ ಸಹಾಯ ಮಾಡುತ್ತದೆ (Give Help, It Helps You)
ಇವತ್ತಿನ ಆರೋಗ್ಯದ ಸಮಸ್ಯೆಯ ಮುಖ್ಯ ಕಾರಣ ಮನುಷ್ಯನ "ಆಹಂ" ಅದಕ್ಕೆ ಅವರು ಹೇಳಿದ್ದು ನಾನು ಅಂದರೆ ಅನಾರೋಗ್ಯ ಮತ್ತು ನಾವು ಅಂದರೆ ಕ್ಷೇಮ (I means Illness, WE means Wellness). ಇಂದಿನ ಜೀವನದಲ್ಲಿ ನಾವೆಲ್ಲರೂ ನಮ್ಮ ಸುತ್ತ ಒಂದು ಅಹಂಕಾರದ ಗೋಡೆ ಕಟ್ಟಿಕೊಂಡಿದ್ದೇವೆ, ಅದೇ ಇಂದು ನಮ್ಮನ್ನು ನಿಧಾನವಾಗಿ ಕೊಲ್ಲುತ್ತಿದೆ. ನಾವೆಲ್ಲರೂ ಜೀವನದಲ್ಲಿ ಒಂದು ಮಗುವಿನ ತರಹ ಇರಬೇಕು. ಒಂದು ಮಗು ದಿನದಲ್ಲಿ ಸಾವಿರಾರು ಬಾರಿ ನಗುತ್ತದೆ, ಅದಕ್ಕೆ ನಾನು ಎನ್ನುವ ಅಹಂ ಇಲ್ಲದಿರುವದೇ ಮುಖ್ಯ ಕಾರಣ. ಅಲೆಕ್ಸಿಸ್ ಕಾರ್ರೆಲ್ ಹೇಳುತ್ತಾರೆ ನವಜಾತ ಶಿಶು ಹುಟ್ಟಿನಿಂದಲೇ ತುಂಬು ಫ್ರತಿಭೆ ಹೊಂದಿರುತ್ತದೆ ಆದರೆ ಆಧುನಿಕ ಶಿಕ್ಷಣ ಅದನ್ನು ಮಂದನನ್ನಾಗಿ ಪರಿವರ್ತಿಸುತ್ತದೆ. ಹುಟ್ಟಿನ ಪ್ರತಿಭೆಯ ಶ್ರೀ ರವೀಂದ್ರನಾಥ್ ಟಾಗೋರ್ ಅವರು ಶಾಲೆಗೆ ಹೋಗದಿದ್ದರೂ ನೋಬೆಲ್ ಪಾರಿತೋಷಕ ವಿಜೇತರಾದ ಉದಾಹರಣೆಯೊಂದಿಗೆ ವಿವರಿಸಿದರು.
ವೈದ್ಯರಲ್ಲಿನ ವ್ಯತ್ಯಾಸದ ಬಗ್ಗೆ ಹೇಳುತ್ತ ಅವರು- ಓರ್ವ ವೈದ್ಯನಿಗೆ ರೋಗಕ್ಕೆ ಚಿಕಿತ್ಸೆ ಹೇಗೆ ಮಾಡಬೇಕೆಂದು ಗೊತ್ತಿರುತ್ತದೆ, ಓರ್ವ ಉತ್ತಮ ವೈದ್ಯನಿಗೆ ಯಾವಾಗ ಚಿಕಿತ್ಸೆ ಮಾಡಬೇಕೆಂದು ಗೊತ್ತಿರುತ್ತದೆ, ಆದರೆ ಓರ್ವ ಅತ್ತ್ಯುತ್ತಮ ವೈದ್ಯನಿಗೆ ಯಾವಾಗ ಚಿಕಿತ್ಸೆ ಮಾಡಬಾರದೆಂಬುದು ಗೊತ್ತಿರುತ್ತದೆ. ವೈದ್ಯರಲ್ಲಿ ಇರುವ ನಮ್ಮ ನಂಬಿಕೆ ನಮ್ಮನ್ನು ಗುಣಪಡಿಸುತ್ತದೆ ಅದಕ್ಕೆ ವೈದ್ಯರ ಪಾತ್ರ ತುಂಬಾ ಮುಖ್ಯ ಎಂದು ವೈದ್ಯರಿಗೆ ತಿಳಿಸಿದರು.
ಉಪನಿಷತ್ ಗಳನ್ನು ಉಲ್ಲೇಖಿಸುತ್ತ ಡಾ ಹೆಗಡೆ ಅವರು ಹೇಳಿದ್ದು ನಮ್ಮ ಮಕ್ಕಳು ನಮ್ಮವರಲ್ಲ. ಆವರು ನಮ್ಮ ಮೂಲಕ ಈ ಪ್ರಪಂಚಕ್ಕೆ ಬಂದವರು. ಈ ಜಗತ್ತು ಒಂದು ಮಾಯೆ. ಆದು ಕೇವಲ ನಮ್ಮ ಕಣ್ಣುಗಳಲ್ಲಿ ಅಥವಾ ಅರಿವುಗಳಲ್ಲಿ ಅಸ್ತಿತ್ವದಲ್ಲಿರುತ್ತದೆ ಎನ್ನುವದಕ್ಕೆ ಅನಿಶ್ಚಯ ತತ್ವ (Uncertainty Principle) ವಿಜ್ಞಾನದ ಬಹುದೊಡ್ಡ ಸತ್ಯ.
ಪದ್ಮಭೂಷಣ ಡಾ. ಬಿ. ಎಂ. ಹೆಗಡೆಯವರು ಆರೋಗ್ಯ ಹಾಗೂ ಸಂತೋಷದ ಜೀವನಕ್ಕೆ ಈ ಕೆಳಗಿನ ಸೂತ್ರಗಳನ್ನು ಪಾಲಿಸುವದು ಅತ್ಯವಶ್ಯಕವೆಂದು ಸೇರಿದ ಎಲ್ಲ ಪ್ರೇಕ್ಷಕರಿಗೆ ಕಿವಿಮಾತು ಹೇಳಿದರು.
- ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಉಲ್ಲೇಖಿಸಿರುವಂತೆ ನಾವು ಆಹಾರವನ್ನು ಹಿತ-ಮಿಥವಾಗಿ ತೆಗೆದುಕೊಳ್ಳಬೇಕು.
- ನಾವು ನಮ್ಮ ಕೆಲಸವನ್ನು ಶ್ರದ್ಧೆಯಿಂದ ಹಾಗೂ ಶ್ರಮವಹಿಸಿ ಮಾಡಬೇಕು ಮತ್ತು ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಬೇಕು
- ನಾವು ಯಾರಿಗೂ ಮೋಸ ಮಾಡಬಾರದು.
- ನಾವು ದಾನಿಗಳಾಗಬೇಕು ಹಾಗೂ ದಾನ ಮಾಡುವುದರಲ್ಲಿ ಸಂತೋಷಪಡಬೇಕು.
- ನಾವು ಕೋಪ ಮಾಡಿಕೊಳ್ಳಬಾರದು ಮತ್ತು ಕ್ಷಮಿಸುವುದನ್ನು ಕಲಿಯಬೇಕು.
ಈ ಮೇಲಿನ ಸಂದೇಶದೊಂದಿಗೆ ಡಾ ಹೆಗಡೆಯವರು ತಮ್ಮ ಉಪನ್ಯಾಸವನ್ನು ಸಂಪೂರ್ಣಗೊಳಿಸಿದರು. ಸಂಪೂರ್ಣ ಉಪನ್ಯಾಸವು ಉಲ್ಲೇಖ ಹಾಗೂ ಅಂಕಿ-ಅಂಶಗಳ ಆಧಾರಗಳ ಸಹಿತ ನಡೆಸಿಕೊಟ್ಟ ಅತ್ಯದ್ಭುತವಾದ ಕಾರ್ಯಕ್ರಮವಾಗಿ ಹೊರ ಹೊಮ್ಮಿ ನೆರೆದ ಸಹಸ್ರಾರು ಸಭಿಕರನ್ನು ಜ್ಞಾನಸಾಗರದಲ್ಲಿ ಮುಳುಗಿಸಿತೆಂದರೆ ಅದು ತಪ್ಪಾಗಲಾರದು.
ಉಪನ್ಯಾಸದ ನಂತರ ಈ ಅನೇಕ ಸಂಘ-ಸಂಸ್ಥೆಗಳಿಂದ ಪದ್ಮಭೂಷಣ ಡಾ ಬಿ. ಎಂ. ಹೆಗಡೆ ಅವರನ್ನು ಸನ್ಮಾನಿಸಲಾಯಿತು.
ಮೊದಲಿಗೆ ಓಮಾನ್ ತುಳುವೆರ್ - ಮಸ್ಕತ್ ಇವರಿಂದ ತುಳುನಾಡಿನ ಶೋಭೆಯಾದ ಪದ್ಮಭೂಷಣ ಡಾ. ಬಿ. ಎಂ. ಹೆಗಡೆಯವರನ್ನು ಸನ್ಮಾನಿಸಲಾಯಿತು.
ನಂತರ ಬಂಟ್ಸ್ ಓಮಾನ್ ಸಮುದಾಯದಿಂದ ವತಿಯಿಂದ ಸಮುದಾಯದ ಮೇರುಮುಕುಟ ಪದ್ಮಭೂಷಣ ಡಾ. ಬಿ. ಎಂ. ಹೆಗಡೆಯವರನ್ನು ಸನ್ಮಾನಿಸಲಾಯಿತು.
ತದನಂತರ ಭಾರತೀಯ ಸಾಮಾಜಿಕ ಒಕ್ಕೂಟ - ಕರ್ನಾಟಕ ವಿಭಾಗದ ವತಿಯಿಂದ ನಮ್ಮೆಲ್ಲರ ಕನ್ನಡ ನಾಡಿನ ಹೆಮ್ಮೆಯ ಪದ್ಮಭೂಷಣ ಡಾ. ಬಿ. ಎಂ. ಹೆಗಡೆಯವರನ್ನು ಸನ್ಮಾನಿಸಲಾಯಿತು.
ಇದೆಲ್ಲದರ ನಂತರ, ಈ ಅದ್ಭುತವಾದ ಕಾರ್ಯಕ್ರಮವನ್ನು ಮಸ್ಕತ್ ಜನತೆಗೆ ನೀಡಲು ಅತ್ಯಂತ ಶ್ರಮ ಹಾಗೂ ಶ್ರದ್ಧೆಯಿಂದ ಏರ್ಪಾಡು ಮಾಡಿದ ಓಂಕಾರ ಸಮಿತಿ, ಮಸ್ಕತ್ ವತಿಯಿಂದ ಶ್ರೀ. ಬಕುಲ್ ಮೆಹತಾ, ಶ್ರೀ ಡಾ. ಸಿ ಕೆ ಅಂಚನ್ ಮತ್ತು ಶ್ರೀ ಜಿ. ವಿ. ರಾಮಕೃಷ್ಣ ಅವರಿಂದ ಪದ್ಮಭೂಷಣ ಡಾ ಬಿ. ಎಂ. ಹೆಗಡೆ ಅವರಿಗೆ ಸಾಂಪ್ರದಾಯಿಕವಾಗಿ ಶಾಲು, ಹಣ್ಣು ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಭಾರತ ಹಾಗೂ ಅಂತರ್ ರಾಷ್ಟ್ರೀಯ ವೈದ್ಯಕೀಯ ಕ್ಷೇತ್ರದಲ್ಲಿ ತಮ್ಮ ಅದ್ವೀತೀಯ ಹಾಗೂ ಅವರ್ಣನೀಯ ಸೇವೆಯನ್ನು ಸಲ್ಲಿಸಿದ ಸ್ಮರಣಾರ್ಥ ಪದ್ಮಭೂಷಣ ಡಾ. ಬಿ. ಎಂ. ಹೆಗಡೆಯವರಿಗೆ ಓಂಕಾರ ಸಮಿತಿಯು "ಓಂಕಾರಶ್ರೀ" ಪ್ರಶಸ್ತಿಯನ್ನು ಉಪಸ್ಥಿತರಿದ್ದ ಎಲ್ಲ ಗಣ್ಯರು ಮತ್ತು ಸಹಸ್ರಾರು ಸಭಿಕರ ಸಮ್ಮುಖದಲ್ಲಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.
ಸನ್ಮಾನ ಸಮಾರಂಭದ ನಂತರ ಡಾ ಬಿ. ಎಂ. ಹೆಗಡೆಯವರು ಸ್ವಲ್ಪ ಸಮಯ ಕನ್ನಡದಲ್ಲಿ ಮಾತನಾಡಿ ನಮ್ಮ ಆರೊಗ್ಯ ಮತ್ತು ಸಂತೋಷಕ್ಕೋಸ್ಕರ ಯಾರನ್ನೂ ದ್ವೇಷಿಸದೆ ಎಲ್ಲರ ಜೊತೆ ಪ್ರೀತಿಯಿಂದ ಇರಬೇಕು ಹಾಗೂ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡಬೇಕೆಂದು ಪುನರುಚ್ಚರಿಸಿದರು.
ಶ್ರೀಮತಿ ಸುಷ್ಮಾ ಸುಧೀಂದ್ರ ಅವರ ವಂದನಾರ್ಪಣೆಯೊಂದಿಗೆ ಓಂಕಾರ ಜ್ಞಾನಾಮೃತ-೨೦೧೭ನ್ನು ಮುಕ್ತಾಯಗೊಳಿಸಲಾಯಿತು.
ನಿರೂಪಣೆ : ಶ್ರೀಮತಿ ಎಂ. ಜಿ. ಲಕ್ಶ್ಮಿ