ಪುರಂದರ ನಮನ - ೨೦೧೬
'ದಾಸರೆಂದರೆ ಪುರಂದರದಾಸರಯ್ಯಾ'-ಎಂದು ತಮ್ಮ ಗುರುಗಳಾದ ಶ್ರೀ ವ್ಯಾಸರಾಯರಿಂದಲೇ ಹಾಡಿಸಿಕೊಂಡು, ದಾಸಶ್ರೇಷ್ಠರೆನಿಸಿದ ಪುರಂದರದಾಸರನ್ನು ನೆನೆಯುತ್ತಾ, ಅವರ ಕೀರ್ತನೆಗಳನ್ನು ಹಾಡುತ್ತಾ, ಓಂಕಾರ ಸಮಿತಿಯಿಂದ 12/02/2016 ಆಯೋಜಿಸಲ್ಪಟ್ಟ' ಪುರಂದರ ನಮನ ' ಕಾರ್ಯಕ್ರಮವು ಪುರಂದರದಾಸರ ಚಿಂತನೆಗಳನ್ನು ಸ್ವದೇಶದಿಂದ ದೂರವಿರುವ ಮಸ್ಕತ್ ನಲ್ಲಿಯೂ ಮೊಳಗಿಸಿತು.
ದಿನಾಂಕ 12/02/2016ರ ಸಂಜೆ 6.00 ರಿಂದ 9.30ಯ ತನಕ ಮಸ್ಕತ್ತಿನ ಶ್ರೀಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ತಯಾರಿ ಸುಮಾರು ಒಂದು ತಿಂಗಳ ಹಿಂದೆಯೇ ಆರಂಭವಾಗಿತ್ತು. ಓಂಕಾರ ಸಮಿತಿಯು ಕಾರ್ಯಕ್ರಮದ ಕೆಲಸಗಳನ್ನು ಹಲವು ಜನರಲ್ಲಿ ವಿಂಗಡಿಸಿ - ಕಾರ್ಯಕ್ರಮದ ತಯಾರಿ ಸರಿಯಾದ ರೀತಿಯಲ್ಲಿ ನಡೆಯುತ್ತಿದೆ ಎಂದು ಮೇಲ್ವಿಚಾರಣೆ ನಡೆಸುತ್ತಿದ್ದರು. ಪುರಂದರ ಕೃತಿಗಳ ಗಾಯನ ಕಾರ್ಯಕ್ರಮವನ್ನು ಐದು ತಂಡಗಳಲ್ಲಿ ವಿಂಗಡಿಸಿ, ಎಲ್ಲ ತಂಡಗಳಿಂದಲೂ ಅವರು ಹಾಡುವ ಕೀರ್ತನೆಗಳನ್ನು ತರಿಸಿ, ಯಾವ ಕೀರ್ತನೆಯೂ ಪುನರಾವರ್ತನೆಯಾಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದರು. ಕಾರ್ಯಕ್ರಮದ ದಿನ ಕಾರ್ಯಕರ್ತರೆಲ್ಲ ಸೇರಿ ವೇದಿಕೆಯನ್ನು ಭವ್ಯವಾಗಿ ಸಜ್ಜುಗೊಳಿಸಿದರು.
ನಿಗದಿತ ಸಮಯಕ್ಕೆ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಅವರ ಪೂಜೆಯಿಂದ ಕಾರ್ಯಕ್ರಮ ಆರಂಭವಾಯಿತು. ನಂತರ ಶ್ರೀ ರವಿಕುಮಾರ್ ಅವರು ಸ್ವಾಗತ ಭಾಷಣದ ಮೂಲಕ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಆರಂಭಿಸಿದರು. ಕಾರ್ಯಕ್ರಮದ ನಿರೂಪಕಿಯಾದ ಶ್ರೀಮತಿ ಕವಿತಾ ರಾಮಕೃಷ್ಣ ಅವರು ಪುರಂದರದಾಸರ ಭವ್ಯ ಜೀವನದ ಕಿರು ಪರಿಚಯ ಮಾಡಿಸಿ, ವೇದಿಕೆಯನ್ನು ಪುರಂದರದಾಸಾಮೃತ ಗಾಯನಕ್ಕೆ ಸಜ್ಜುಗೊಳಿಸಿದರು.
ಮೊದಲಿಗೆ ವೇದಿಕೆಯನ್ನೇರಿದ ಓಂಕಾರ ಮಹಿಳಾ ವೃಂದವು- ಶರಣು ಸಿದ್ದಿ ವಿನಾಯಕ, ವೇಣುನಾಥ ಬಾರೋ, ಚಂದ್ರಚೂಡ ಶಿವಶಂಕರ, ರಾಮ ರಾಮ ಎನ್ನಿರೋ, ತೂಗಿರೆ ರಂಗನ- ಕೀರ್ತನೆಗಳ ರಸಾಮೃತವನ್ನು ಉಣಬಡಿಸಿದರು.
ನಂತರ ಶ್ರೀ ಗುರುರಾಘವೇಂದ್ರ ಪೂಜಾ ಸಮಿತಿಯು - ಗಜವದನ ಬೇಡುವೆ, ಅನುಭವದಡಿಗೆಯ ಮಾಡಿ, ಯಾರೇ ರಂಗನ, ಗೋವಿಂದ ನಿನ್ನ ನಾಮವೆ ಚಂದ, ಓಡಿ ಬಾರಿಯ ವೈಕುಂಠಕೆ, ಕಾಗದ ಬಂದಿದೆ, ಎಲ್ಲರು ಮಾಡುವುದು ಹೊಟ್ಟೆಗಾಗಿ, ನಾರಾಯಣ ನಿನ್ನ ನಾಮ-ಕೃತಿಗಳನ್ನು ಹಾಡಿ ಕಾರ್ಯಕ್ರಮದ ಕಳೆಯೇರಿಸಿದರು.
ಮುಂದೆ ವೇದಿಕೆಯನ್ನೇರಿದ ಕನ್ನಡ ಮಕ್ಕಳ ವೃಂದವು - ವಂದಿಸುವುದಾದಿಯಲಿ ಗಣನಾಥನ, ಆಚಾರ ವಿಲ್ಲದ ನಾಲಿಗೆ, ನಲಿದಾಡೆ ನನ್ನ ನಾಲಿಗೆ ಮೇಲೆ ಸರಸ್ವತಿ, ನಾರಾಯಣ ತೇ ನಮೋ, ಬಿಡುವೆನೇನಯ್ಯಾ ಹನುಮ - ಕೀರ್ತನೆಗಳನ್ನು ಸುಶಾೃವ್ಯವಾಗಿ ಹಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ವೇದಿಕೆಯನ್ನೇರಿದ ನಾಲ್ಕನೇಯ ತಂಡವಾದ ಗೌಡ ಸಾರಸ್ವತ ಬ್ರಾಹ್ಮಣ ಭಜನಾ ವೃಂದವು - ನಿನ್ನ ನೋಡಿ ದಯನಾದೆನೋ, ಕರುಣಿಸೊ ರಂಗ, ಶೀೃನಿವಾಸ ನೀನೇ ಪಾಲಿಸೊ, ದಾಸನ ಮಾಡಿಕೊ ಎನ್ನ, ಯಾದವ ನೀ ಬಾ, ದಾಸರೆಂದರೆ ಪುರಂದರದಾಸರಯ್ಯಾ - ಕೃತಿಗಳನ್ನು ಭಕ್ತಿಭಾವದಿಂದ ಹಾಡಿ ಪ್ರೇಕ್ಷಕರನ್ನು ಭಕ್ತಿ ಮತ್ತು ಸಂಗೀತದ ಇನ್ನೊಂದು ಲೋಕಕ್ಕೆ ಕೊಂಡೊಯ್ದರು.
ಮುಂದೆ ಹಾಡಿದ ಶ್ರೀ ಗಣೇಶ ವೃಂದದವರು - ದೇವ ಬಂದ ನಮ್ಮ, ಹೂವು ತರುವರ ಮನೆಗೆ, ಮಧುಕರ ವೃತ್ತಿ, ರಾಗಿ ತಂದಿರಾ, ತತ್ತ ಧಿಮಿತ ಹರಿ ಆಡಿದನು, ನೀನೆ ಅನಾಥ ಬಂಧು, ಕಂಡು ಕಂಡು ನೀ ಎನ್ನ, ಬಾ ರಂಗ ಎನ್ನ ನಾಲಿಗೆಯೊಳು- ಎಂಬ ಕೃತಿಗಳನ್ನು ಸುಂದರವಾಗಿ ಎಲ್ಲರ ಮನ ಮುಟ್ಟುವಂತೆ ಪ್ರಸ್ತುತ ಪಡಿಸಿದರು.
ಇಷ್ಟರಲ್ಲಿ ಮಂಗಳದ ಸಮಯವಾಯಿತು. ಅದೇ ವೇಳೆಗೆ ವೇದಿಕೆಗೆ ಬಂದ ಮಸ್ಕತ್ತಿನ ಹಿರಿಯ ಗಾಯಕ ಶ್ರೀ ಎಂ, ಜಿ ಪೈ ಯವರು ಭಾಗ್ಯದ ಲಕ್ಷ್ಮಿ ಬಾರಮ್ಮ ಮತ್ತು ಮಂಗಳಗೀತೆಗಳನ್ನು ತಮ್ಮದೇ ಶೈಲಿಯಲ್ಲಿ ಹಾಡಿ ಪ್ರೇಕ್ಷಕರನ್ನು ಭಕ್ತಿರಸದ ಪರಮಾವಧಿಗೆ ಕೊಂಡೊಯ್ದರು. ಅದೇ ಸರಿಯಾಗಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರಿಂದ ಮಂಗಳಾರತಿಯೂ ಜರುಗಿತು.
ತರುವಾಯ ಓಂಕಾರ ಸಮಿತಿಯ ವತಿಯಿಂದ ಭಜನಾ ತಂಡಗಳನ್ನು ಮತ್ತು ಕಾರ್ಯಕ್ರಮದ ನಿರೂಪಕಿಯಾದ ಶ್ರೀಮತಿ ಕವಿತಾ ರಾಮಕೃಷ್ಣ ಅವರನ್ನು ಪುರಂದರ ಪ್ರಸಾದೊಂದಿಗೆ ಸನ್ಮಾನಿಸಲಾಯಿತು. ಕೊನೆಗೆ ಶ್ರೀಮತಿ ಸುಧಾ ಶಶಿಕಾಂತ್ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಬಂದ ಅತಿಥಿಗಳಿಗೆಲ್ಲ ಪ್ರಸಾದ ವಿತರಣೆ ಮಾಡಲಾಯಿತು.
ಹೀಗೆ 'ಪುರಂದರ ನಮನ - 2016' ಭಕ್ತಿ ಮತ್ತು ಸಂಗೀತದ ಸುಂದರ ಸಂಯೋಗವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಎಲ್ಲ ಸ್ಥಳೀಯ ಕಲಾವಿದರಿಗೆ ಅವಕಾಶವನ್ನು ಕೊಟ್ಟು ಕಾರ್ಯಕ್ರಮವನ್ನು ಸಮರ್ಪಕವಾಗಿ ಆಯೋಜಿಸಲಾಗಿದೆ ಎಂದು ಎಲ್ಲರೂ ಪ್ರಶಂಸಿಸಿದರು. ಇಲ್ಲಿಯೇ ಬೆಳೆದ ನಮ್ಮ ಮಕ್ಕಳು ಪುರಂದರ ದಾಸರ ಕೃತಿಗಳನ್ನು ಕಲಿಸುವಂತೆ ಮಾಡಿದ್ದು ಈ ಕಾರ್ಯಕ್ರಮದ ಹೆಗ್ಗಳಿಕೆ.
- ಶ್ರೀಮತಿ ಸುಧಾ ಶಶಿಕಾಂತ ಕೊಡಾಂಚ
For program photos click here