ಶ್ರೀ ಆಂಜನೇಯ ಸ್ವಾಮಿ ಪೂಜಾ - ೨೦೧೫
|| ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾಮ್
ಅಜಾಡ್ಯತ್ವಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾತ್ ಭವೇತ್ ||
ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯ, ಆರೋಗ್ಯ, ಛಲ ಮತ್ತು ವಾಕ್ಚಾತುರ್ಯ (ಸ್ಫುಟ ಉಚ್ಛಾರಣೆ) ಇದೆಲ್ಲವೂ ಕೇವಲ ಶ್ರೀರಾಮಭಕ್ತ, ಕಲಿಯುಗದ ಇಷ್ಟದೇವರಾದಂತಹ ಹನುಮಂತನ ಸ್ಮರಣೆಯಿಂದ ಮಾತ್ರ ಸಾಧ್ಯವೆಂಬುದನ್ನು ಅಛಲವಾಗಿ ನಂಬಿರುವಂತಹ ಮಸ್ಕತ್ ಓಂಕಾರ (ಓಮಾನ್ ಕರ್ನಾಟಕ ಅರಾಧನ) ಸಮಿತಿಯ ೪ನೇ ವರ್ಷದ ಆಂಜನೇಯ ಸ್ವಾಮಿಯ ಪೂಜೆಯು ದಾರಸೇಟ್ ಶ್ರೀಕೃಷ್ಣಮಂದಿರದ ಸಭಾಂಗಣದಲ್ಲಿ ದಿನಾಂಕ ೧೮-ಡಿಸೆಂಬರ್-೨೦೧೫ರಂದು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ನಮ್ಮೆಲ್ಲರ ಇಷ್ಟದೇವರಾದಂತಹ ಶ್ರೀ ಆಂಜನೇಯ ಸ್ವಾಮಿಯ ಪೂಜೆಯ ಸಡಗರ ಸಂಭ್ರಮ, ತಯಾರಿ ಎಲ್ಲವೂ ೧೭-ಡಿಸೆಂಬರ್-೨೦೧೫ (ಹಿಂದಿನ ದಿನ)ದಿಂದ ಆರಂಭಗೊಂಡಿತ್ತು. ಸಾಯಂಕಾಲ ೭:೦೦ ಘಂಟೆಯ ಸುಮಾರಿಗೆ ಎಲ್ಲ ಕಾರ್ಯಕರ್ತರ ಚಟುವಟಿಕೆಗಳು ಆರಂಭಗೊಂಡವು. ಕಳೆದ ಬಾರಿಯಂತೆ ಈ ಬಾರಿಯೂ ಮಹಾಪ್ರಸಾದದ ಪಂಚಭಕ್ಷ್ಯ ನೈವೇದ್ಯದ ಅಡುಗೆಯನ್ನು ದೇವಸ್ಥಾನದ ಪರಾಂಗಣದಲ್ಲಿಯೇ ತಯಾರಿಸಬೇಕೆಂದು ನಿಶ್ಚಯವಾಗಿದ್ದರಿಂದ ಪ್ರಪ್ರಥಮವಾಗಿ ಅಡುಗೆಮನೆಯ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅಡುಗೆ ಭಟ್ಟರ ತಂಡ ಅಡುಗೆಮನೆಯಲ್ಲಿ ಮಹಿಳಾ ಕಾರ್ಯಕರ್ತರಿಗೆ ಬಗೆ ಬಗೆಯ ತರಕಾರಿಗಳನ್ನು ಹೆಚ್ಚುವಂತೆ ನಿರ್ದೇಶಿಸುತ್ತಿದ್ದರು. ಉಳಿದ ಕಾರ್ಯಕರ್ತರ ಭಕ್ತಿಪೂರ್ವಕವಾದ ಸೇವೆಯಿಂದ ಭವ್ಯವಾದ ವೇದಿಕೆ ಮತ್ತು ಆಕರ್ಷಕ ಸಭಾಂಗಣ ನಿರ್ಮಾಣಗೊಂಡಿತ್ತು.
ದಿನಾಂಕ ೧೮-ಡಿಸೆಂಬರ್-೨೦೧೫ರಂದು ಬೆಳಿಗ್ಗೆ ೭:೦೦ಘಂಟೆಗೆ ಎಲ್ಲ ಕಾರ್ಯಕರ್ತರು ಪೂಜೆಯ ತಯಾರಿ ಆರಂಭಿಸಿದರು. ಮುತ್ತೈದೆಯರು ದೀಪ ಹಚ್ಚುವ ಮೂಲಕ ದೇವತಾ ಪ್ರಾರ್ಥನೆ ಮಾಡಿದರು. ನಂತರ ದೇವಸ್ಥಾನದ ಆವರಣದಲ್ಲಿರುವ ಶ್ರೀ ಗಣೇಶ ದೇವಸ್ಥಾನ, ದೇವಿಯ ದೇವಸ್ಥಾನ ಹಾಗೂ ಶ್ರೀಕೃಷ್ಣ ದೇವರಿಗೆ ಪೂಜೆ ಸಲ್ಲಿಸಿ, ಸಭಾಂಗಣದಲ್ಲಿ ಪೂಜಾ ವಿಧಿ ವಿಧಾನಗಳು ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಕಳ್ಮಂಜೆಯವರ ನೇತೃತ್ವದಲ್ಲಿ ಆರಂಭವಾಯಿತು. ಸಮಸ್ತ ಮಸ್ಕತ್ ಕನ್ನಡಿಗರ ಪರವಾಗಿ ಶ್ರೀಮತಿ ಮತ್ತು ಶ್ರೀ ಶಶಿಧರ್ ಶೆಟ್ಟಿ ದಂಪತಿಗಳು ಪೂಜೆಯ ಸಂಕಲ್ಪ ನೆರವೇರಿಸಿಕೊಟ್ಟರು.
ನಂತರ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಎಳೆನೀರಿನ ಅಭಿಷೇಕ ಮತ್ತು ಶ್ರೀ ಗಂಧದ ಅಭಿಷೇಕ ನೆರವೇರಿತು. ವಿಶೇಷವಾಗಿ ತಟ್ಟೆಯಲ್ಲಿ ಸಕ್ಕರೆಯನ್ನು ದೇವರ ಶಿರಸ್ಸಿನಿಂದ ಅಭಿಷೇಕ ಮಾಡಿದ್ದಂತು ಪ್ರತಿಯೊಬ್ಬರನ್ನು ಭಕ್ತಿಪರವಶವಾಗಿಸಿದ್ದಂತು ಸಹಜ. ನಂತರ ಆಂಜನೇಯ ಸ್ವಾಮಿಗೆ ಪ್ರಿಯವಾದ ವಡಮಾಲೆ ಮತ್ತು ವೀಳ್ಯದೆಲೆಯ ಹಾರವನ್ನು ಸಮರ್ಪಣೆ ಮಾಡಲಾಯಿತು.
ಬೆಳಿಗ್ಗೆ ೯:೧೫ರಿಂದ ಮಧ್ಯಾಹ್ನ ೧೨:೩೦ರ ವರೆಗೆ ಸತತವಾಗಿ ಡಿವೈನ್ ಪಾರ್ಕ್ ಮಸ್ಕತ್, ವಿಶ್ವಕರ್ಮ ಒಕ್ಕೂಟ ಮಸ್ಕತ್, ಓಂಕಾರ ಮಹಿಳಾ ವೃಂದ ಮಸ್ಕತ್, ಶ್ರೀ ಗಣೇಶ ವೃಂದ ಮಸ್ಕತ್ ಮತ್ತು ಜಿ ಎಸ್ ಬಿ ಸಮಾಜ ಮಸ್ಕತ್ ವತಿಯಿಂದ ಭಕ್ತಿ-ಭಜನೆಗಳ ಸಂಗೀತ ಸಭಾಂಗಣದಲ್ಲೆಲ್ಲಾ ಮೊಳಗುತ್ತಿತ್ತು. ಹರಿವಾಯುಸ್ತುತಿ ವೃಂದದವರಿಂದ ಹರಿವಾಯುಸ್ತುತಿ ಪಾರಾಯಣ ಮತ್ತು ಸತ್ಯಸಾಯಿ ಸಮಿತಿಯವರಿಂದ ಹನುಮಾನ್ ಚಾಳೀಸಾ ಪಾರಾಯಣ ನೆರವೇರಿದವು. ಸಹಸ್ರಾರು ಭಕ್ತರು ಸಾಗರೋಪಾದಿಯಲ್ಲಿ ಸಭಾಂಗಣದಲ್ಲಿ ಭಕ್ತಿಪರವಶರಾಗಿರುವದು ಓಂಕಾರ ಸಮಿತಿಯ ಕಾರ್ಯಕರ್ತರನ್ನು ಮೂಕ ವಿಸ್ಮಯರನ್ನಾಗಿಸುವಂತೆ ಮಾಡಿತ್ತು. ತದನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾನೈವೇದ್ಯವನ್ನು ಭಜನೆಯೊಂದಿಗೆ ಮತ್ತು ಮಹಾಮಂಗಳಾರತಿಯನ್ನು ಚಂಡೇವಾದ್ಯಗೋಷ್ಠಿಯೊಂದಿಗೆ ನಡೆದಾಗ ಎಲ್ಲ ಭಕ್ತ ಸಮೂಹ ಭಕ್ತಿಪರವಶದಿಂದ ಪ್ರಾಣದೇವರ ಕೃಪೆಗೆ ಪಾತ್ರರಾದರು. ಎಲ್ಲ ಭಕ್ತಿ ಸಮೂಹಕ್ಕೆ ತೀರ್ಥ-ಪ್ರಸಾದ ಮತ್ತು ಮಹಾಪ್ರಸಾದವನ್ನು ಸಮೃದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ವಿತರಿಸಲಾಯಿತು.
ಪೂಜೆಗೆ ಧನ್ಯತಾ ಭಾವದೊಂದಿಗೆ ತನು ಮನ ಧನದಿಂದ ಸಹಕರಿಸಿದ ಎಲ್ಲ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು, ದಾನಿಗಳು, ಸೇವಾರ್ಥಿಗಳು, ಹಿಂದು-ಮಹಾಜನಕೂಟ, ಅಡುಗೆ ತಂಡ, ಭಜನಾ ತಂಡಗಳು, ಚಂಡೇವಾದ್ಯ ತಂಡ ಮತ್ತು ಸಹಾಯಕ ತಂಡಕ್ಕೆ ಓಂಕಾರ ಸಮಿತಿಯ ಪರವಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.
।। ಸರ್ವೇ ಜನಾಃ ಸುಖಿನೋ ಭವಂತು ।।
।। ಸನ್ಮಂಗಳಾನಿ ಭವಂತು ।।
- ಶ್ರೀಮಾತಾ ಹಿರಿಯಣ್ಣ