ಓಂಕಾರ ನಾದಾಮೃತ -೨೦೧೫
ಸಂಜೆ ೬:೨೦ಕ್ಕೆ
ಕಾರ್ಯಕ್ರಮ ಶ್ರೀ ಜಿ ರವಿಕುಮಾರ್ ರಾವ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭಗೊಂಡು ಬಂದಂತಹ ಸನ್ಮಾನ್ಯ
ಅತಿಥಿಗಳನ್ನು ಮತ್ತು ಎಲ್ಲ ಪ್ರೇಕ್ಷಕರನ್ನು ಸ್ವಾಗತಿಸಿ, ಶ್ರೀ ಗಜಾನನ
ಮತ್ತು ಶ್ರೀ ಆಂಜನೇಯ ದೇವರಿಗೆ ಶ್ರೀ ಗುರುಪ್ರಸಾದ ಆಚಾರ್ಯ ಅವರು ಆರತಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ
ಚಾಲನೆ ನೀಡಲಾಯಿತು. ಶ್ರೀಮತಿ ಶ್ರೀಮಾತಾ ಹಿರಿಯಣ್ಣ ಅವರು ಕಾರ್ಯಕ್ರಮದ
ನಿರೂಪಣೆವಹಿಸಿ ಎಲ್ಲ ಕಲಾವಿದರ ಪರಿಚಯ ಮಾಡುತ್ತ ವೇದಿಕೆಗೆ ಸ್ವಾಗತಿಸಿದರು.
ಶ್ರೀ ಗಜಾನನ ಸ್ತುತಿ ’ಪಾರ್ವತಿ
ನಂದನ’ ಹಾಡಿನೊಂದಿಗೆ ಆರಂಭಗೊಂಡ ಸಂಗೀತ ಕಾರ್ಯಕ್ರಮ ’ರಾಮ ರತನ ಧನ ಪಾಯೋ’, ’ಭವಾನಿ ಉಮಾ ಕಾತ್ಯಯನಿ ಗೌರಿ’
ಮತ್ತು ’ಶಿವಾ ಶಿವಾ ಎನ್ನಿರೋ’ ಹಾಡುಗಳ ನಂತರ ಅಲ್ಪ ವಿರಾಮದೊಂದಿಗೆ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮ ನಮ್ಮವರೇ ಆದ ಶ್ರೀ ಮಂಜುನಾಥ ನಾಯಕ,
ಶ್ರೀ ಡಾ. ಸಿ ಕೆ ಅಂಚನ್, ಶ್ರೀ
ಜಿ ವಿ ರಾಮಕೃಷ್ಣ ಮತ್ತು ಶ್ರೀ ಬಾಲಕೃಷ್ಣ ಇವರಿಂದ ನೆರವೇರಿತು. ನಂತರ ವೇದಿಕೆಯಲ್ಲಿ
ಭಾರತೀಯ ಸಾಮಾಜಿಕ ಒಕ್ಕೂಟ - ಕರ್ನಾಟಕ ವಿಭಾಗದ ವತಿಯಿಂದ ಎಲ್ಲ ಕಲಾವಿದರನ್ನು
ಸನ್ಮಾನಿಸಲಾಯಿತು.
ಅಲ್ಲಿಂದ ಮತ್ತೇ
ಆರಂಭಗೊಂಡ ಶ್ರೀ ಅನಂತ ಕುಲಕರ್ಣಿ ಅವರ ಸಂಗೀತ ಸುಧೆ
ರಾತ್ರಿ ೯:೩೦ರವರೆಗೆ ಸುಶ್ರಾವ್ಯವಾಗಿ ತೇಲಿ ಬಂತು. ದಾಸ ಸಾಹಿತ್ಯದ ಸೊಗಡನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟು
ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯದ ಕೊಡುಗೆಯನ್ನು ಎಲ್ಲರ ಮನ ಮುಟ್ಟುವಂತೆ ತಿಳಿಸಿ ಕೊಟ್ಟಿದ್ದು
ಈ ಕಾರ್ಯಕ್ರಮದ ವಿಶೇಷ. ಪ್ರತಿ ಹಾಡಿನ ಸಾಂದರ್ಭಿಕ ಹಿನ್ನೆಲೆ, ಕೃತಿ ಪರಿಚಯ
ಮತ್ತು ಹಾಡಿನಲ್ಲಿರುವ ಅಕ್ಷರಗಳ ಉಪಯೋಗ ಮತ್ತು ಉಚ್ಚಾರದ ಮಹತ್ವವನ್ನು ಸೂಕ್ಷ್ಮವಾಗಿ ವರ್ಣಿಸಿ ಪ್ರತಿ
ಹಾಡುಗಳು ಎಲ್ಲರ ಮನ ಮುಟ್ಟಿಸುವಲ್ಲಿ ಯಶಸ್ವಿಯಾದರು. ದಾಸರ ವರ್ಣನೆ ಮಾಡುತ್ತ ಮಹಿಪತಿ ದಾಸರು,
ಪ್ರಸನ್ನ ವೆಂಕಟದಾಸರ ಸಾಂದರ್ಭಿಕ ಕಥೆಗಳು ಅವರ ಬಗೆಗಿನ ಸಾಕ್ಶ್ಯ ಚಿತ್ರವನ್ನು ನೆನಪಿಗೆ
ತರುತ್ತಿದ್ದವು. ಲಯಬದ್ಧತೆ ಮತ್ತು ಸ್ಪಷ್ಟ ಉಚ್ಚಾರಕ್ಕೆ ಖ್ಯಾತಿ ಪಡೆದಿರುವ ಶ್ರೀ ಅನಂತ ಕುಲಕರ್ಣಿ
ಅವರು ಶ್ರೀ ಪುರಂದರ ದಾಸರು, ಶ್ರೀ ಕನಕದಾಸರು, ಶ್ರೀ ಮಹಿಪತಿ ದಾಸರು, ಶ್ರೀ ವಿಜಯ ವಿಠ್ಠಲದಾಸರು, ಶ್ರೀ ಪ್ರಸನ್ನ ವೆಂಕಟದಾಸರು ಮತ್ತು ಇತರ ದಾಸರ ಕೃತಿಗಳನ್ನು ಪ್ರಸ್ತುತಪಡಿಸಿದರು.
ಕಾರ್ಯಕ್ರಮಕ್ಕೆ
ಪೂರ್ಣ ವಿರಾಮದಂತೆ ಶ್ರೀ ಏ ಎಸ್ ರವಿಪ್ರಕಾಶರಿಂದ ವಂದನಾರ್ಪಣಾ ಕಾರ್ಯಕ್ರಮದೊಂದಿಗೆ ಓಂಕಾರ ನಾದಾಮೃತ-೨೦೧೫ರ ಕಾರ್ಯಕ್ರಮ
ಮುಕ್ತಾಯಗೊಂಡಿತು.