ಪುರಂದರ ನಮನ -೨೦೧೫
ಓಂಕಾರ ಸಮಿತಿಯು ಶ್ರೀ ಪುರಂದರದಾಸರ ಪುಣ್ಯತಿಥಿಯ ಅಂಗವಾಗಿ ವಿನೂತನವಾದ ’ಪುರಂದರ ನಮನ-೨೦೧೫’ ಕಾರ್ಯಕ್ರಮವನ್ನು ದಿನಾಂಕ ೨೩-ಜನವರಿ-೨೦೧೫ರಂದು ಶ್ರೀ ಕೃಷ್ಣಮಂದಿರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
’ಪುರಂದರ ನಮನ’ ದಾಸವರೇಣ್ಯ ಮತ್ತು ಕರ್ನಾಟಕ ಸಂಗೀತದ ಪಿತಾಮಹ ಎಂದೇ ಪ್ರಖ್ಯಾತರಾಗಿರುವ ಶ್ರೀ ಪುರಂದರದಾಸರ ನೆನಪಿನಲ್ಲಿ ಅವರ ಕೃತಿಗಳ ಸಂಗೀತೋತ್ಸವವನ್ನು ಸ್ಥಳೀಯ ಕಲಾವಿದರಿಂದ ಆಚರಿಸುವ ಒಂದು ಮಹತ್ತರ ಕಾರ್ಯಕ್ರಮವಾಗಿದೆ.
ಆರಂಭಿಕವಾಗಿ ಸ್ವಾಗತ ಭಾಷಣ ಮಾಡಿದ ಶ್ರೀ ರವಿಕುಮಾರ ರಾವ್ ನಂತರ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಅವರಿಂದ ಶ್ರೀ ಆಂಜನೇಯ ಸ್ವಾಮಿಯ ಪೂಜೆ, ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಪೂಜೆ ನಂತರ ಶ್ರೀ ಪುರಂದರದಾಸರ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪೂಜೆಯ ನಂತರ ಸಂಗೀತ ಕಾರ್ಯಕ್ರಮ ಸದಸ್ಯರ ಮಕ್ಕಳಾದ ಕು. ಅಮೂಲ್ಯ, ಕು. ಅನಘ ಉಡುಪ, ಕು. ನಿಖಿತಾ, ಕು. ಸ್ಮೃತಿ ಪ್ರಭು, ಕು. ರಿಷಭ ರಾವ್, ಕು. ಕುಶಲ ರಾಜು ಇವರಿಂದ ’ಲಂಬೋದರ’, ’ಪಿಳ್ಳಾರಿ ಗೀತೆ’, ’ರಾಗಿ ತಂದೀರಾ’ ಮುಂತಾದ ಹಾಡುಗಳಿಂದ ಸಂಗೀತೋತ್ಸವಕ್ಕೆ ಶುಭಾರಂಭ ನೀಡಿತು.
ಶ್ರೀ ಏ ಎಸ್ ರವಿಪ್ರಕಾಶ ಅವರ ಸುಮಧುರ ಕಂಠದಿಂದ ’ಯಾರೇ ಬಂದವರು’, ’ಬಾರೋ ನೀ ಎನ್ನ’ ಮತ್ತು ’ಶಕ್ತನಾದರೆ’ ಹಾಡುಗಳ ಸುರಿಮಳೆಯಾದರೆ, ನಂತರ ಶ್ರೀಮತಿ ಕಲಾ ಶ್ರೀನಿವಾಸನ್ ಅವರಿಂದ ಜಲತರಂಗದಿಂದ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡಿನ ಸಂಗೀತ ಹೊರಹೊಮ್ಮಿತು. ಶ್ರೀಮತಿ ಶುಭಾ ಶ್ರೀನಿವಾಸರಿಂದ ’ದೇವಕಿ ಕಂದ ಮುಕುಂದ’ ಎಲ್ಲರನ್ನು ಮುಗ್ಧರನ್ನಾಗಿಸಿತು.
ಹೀಗೆ ಸಂಗೀತದ ರಥವನ್ನು ಶ್ರೀ ಸಚಿನ್ ಕಾಮತರು ’ನಾನೇನ ಮಾಡಿದೆನೋ ರಂಗಯ್ಯ’, ’ಕಲಿಯುಗದೊಳು’ ಮತ್ತು ’ಪಿಳ್ಳಂಗೋವಿಯ’ ತಮ್ಮ ಹಾಡಿನ ಶೈಲಿಯಿಂದ ಪುರಂದರ ನಮನ ಕಾರ್ಯಕ್ರಮವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರೆಂದರೆ ತಪ್ಪಾಗಲಾರದು. ತದನಂತರ ಶ್ರೀಮತಿ ವೀಣಾ ಶ್ರೀನಿವಾಸರಿಂದ ’ತಾರಕ್ಕೆ ಬಿಂದಿಗೆ’, ’ಜಗದೋದ್ದಾರನ’ ಮತ್ತು ’ರಾಮ ಮಂತ್ರವ ಜಪಿಸೋ’ ಹಾಡುಗಳು ಕರ್ನಾಟಕ ಸಂಗೀತದ ಸಿಹಿ ಎಲ್ಲರಿಗೂ ತಲುಪುವಂತಾಯಿತು.
ಬೆಳೆಯುತ್ತಿರುವ ಪ್ರತಿಭೆಗಳಾದ ಕು. ಸಾಕ್ಷಿ ಭಾಗವತ್ ಮತ್ತು ಕು. ಪ್ರೀತಿ ಕೋಡಂಚ ಇವರ ’ವಾಸುದೇವ ಚರಣ’, ’ಸುಲಭ ಪೂಜೆಯ ಮಾಡಿ’ ಮತ್ತು ’ದಾರಿ ಯಾವುದಯ್ಯ’ ಹಾಡುಗಳು ನಮ್ಮ ಮುಂದಿನ ಪೀಳಿಗೆಯಲ್ಲಿರುವ ಕಲೆಯನ್ನು ತೋರಿಸಿಕೊಟ್ಟವು. ನಂತರ ಶ್ರೀಮತಿ ಸ್ವರ್ಣಲತಾ ಹೆಬ್ಬಾರ ಇವರಿಂದ ಸುಮಧುರವಾಗಿ ’ಮನವೇ ಚಂಚಲ’, ’ನಿನ್ನನೇ ನಂಬಿದೆ’ ’ಮುರೂತಿಯನ್ನು ತೋರಿಸೋ’ ಹಾಡುಗಳು ಹರಿದು ಬಂದವು.
ಶ್ರೀಮತಿ ಸುಮನಾ ಶಶಿಧರ ಇವರ ಕಂಠಸಿರಿಯಿಂದ ’ಅಂಬಿಗ ನಾ ನಿನ್ನ’, ಮಂದಗಮನೆ’ ಮತ್ತು ’ಗುಮ್ಮನ ಕರೆಯದಿರೆ’ ಹಾಡುಗಳಾದರೆ ಮಸ್ಕತ್ ನಲ್ಲಿ ತಮ್ಮ ಸಂಗೀತ ಶೈಲಿ ಮತ್ತು ಸಂಗೀತ ಸೇವೆಗೆ ಮನೆಮಾತಾಗಿರುವ ಶೀ ಕರುಣಾಕರ ರಾವ್ ಅವರಿಂದ ’ಕೇಳನೋ ಹರಿ ತಾಳನೋ’, ’ಕರುಣಿಸೋ ರಂಗ ಕರುಣಿಸೋ’ ಮತ್ತು ’ಹರಿ ಕುಣಿದ ನಮ್ಮ ಹರಿ ಕುಣಿದಾ’ ಹಾಡುಗಳು ಎಲ್ಲ ಪ್ರೇಕ್ಷಕ ವರ್ಗವನ್ನು ಮೆಚ್ಚುವಂತೆ ಮಾಡಿತು.
ಕೊನೆಗೆ ಶ್ರೀಯುತ ಗಣಪತಿ ಪೈ ಅವರಿಂದ ಸೋಹಿಣಿ, ದರ್ಬಾರಿ ಮತ್ತು ಭೈರವಿ ರಾಗದಲ್ಲಿ ’ಈ ಪರಿಯ ಸೊಬಗು’ ಮತ್ತು ’ಕೋಮಲಾಂಗ ನಮ್ಮ’ ಹಾಡುಗಳು ಸಭಾಂಗಣವನ್ನು ಮಂತ್ರ ಮುಗ್ಧರನ್ನಾಗಿಸಿದ್ದವು.
ಶ್ರೀಮತಿ ಕವಿತಾ ರಾಮಕೃಷ್ಣ ಅವರ ಕಾರ್ಯಕ್ರಮ ನಿರೂಪಣೆ ಅವರ ಪೂರ್ವ ತಯಾರಿ ಮತ್ತು ಶ್ರೀ ಪುರಂದರದಾಸರ ಬಗೆಗಿನ ಮಾಹಿತಿ ಸಂಗ್ರಹ ಕಾರ್ಯಕ್ರಮಕ್ಕೆ ಹೊಸ ರಂಗು ಕೊಟ್ಟಿತ್ತು.
ಶ್ರೀ ಸಿ ಕೆ ಅಂಚನ ಮತ್ತು ಶ್ರೀ ಜಿ ವಿ ರಾಮಕೃಷ್ಣ ಅವರಿಂದ ಭಾಗವಹಿಸಿದ ಎಲ್ಲ ಕಲಾವಿದರಿಗೆ ’ಪುರಂದರ ನಮನ-೨೦೧೫’ ಕಾರ್ಯಕ್ರಮದ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಶ್ರೀ ವೆಂಕಟೇಶ ಗುಡಗುಡಿ ಇವರಿಂದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು ಮತ್ತು ಓಂಕಾರ ಸಮಿತಿಯ ಪರವಾಗಿ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿತ್ತು.
ಓಂಕಾರ ಪುರಂದರ ನಮನ-೨೦೧೫ (ಭಾಗ-೧)