ಶ್ರೀ ಆಂಜನೇಯ ಸ್ವಾಮಿ ಪೂಜಾ - ೨೦೧೫

ಶ್ರೀ ಆಂಜನೇಯ ಸ್ವಾಮಿ ಪೂಜಾ - ೨೦೧೫

|| ಬುದ್ಧಿರ್ಬಲಂ ಯಶೋಧೈರ್ಯಂ ನಿರ್ಭಯತ್ವಂ ಅರೋಗತಾಮ್
ಅಜಾಡ್ಯತ್ವಂ ವಾಕ್ಪಟುತ್ವಂ ಚ ಹನುಮತ್ ಸ್ಮರಣಾತ್ ಭವೇತ್ ||

ಬುದ್ಧಿ, ಬಲ, ಯಶಸ್ಸು, ಧೈರ್ಯ, ನಿರ್ಭಯ, ಆರೋಗ್ಯ, ಛಲ ಮತ್ತು ವಾಕ್ಚಾತುರ್ಯ (ಸ್ಫುಟ ಉಚ್ಛಾರಣೆ) ಇದೆಲ್ಲವೂ ಕೇವಲ ಶ್ರೀರಾಮಭಕ್ತ, ಕಲಿಯುಗದ ಇಷ್ಟದೇವರಾದಂತಹ ಹನುಮಂತನ ಸ್ಮರಣೆಯಿಂದ ಮಾತ್ರ ಸಾಧ್ಯವೆಂಬುದನ್ನು ಅಛಲವಾಗಿ ನಂಬಿರುವಂತಹ ಮಸ್ಕತ್ ಓಂಕಾರ (ಓಮಾನ್ ಕರ್ನಾಟಕ ಅರಾಧನ) ಸಮಿತಿಯ ೪ನೇ ವರ್ಷದ ಆಂಜನೇಯ ಸ್ವಾಮಿಯ ಪೂಜೆಯು ದಾರಸೇಟ್ ಶ್ರೀಕೃಷ್ಣಮಂದಿರದ ಸಭಾಂಗಣದಲ್ಲಿ ದಿನಾಂಕ ೧೮-ಡಿಸೆಂಬರ್-೨೦೧೫ರಂದು ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ನಮ್ಮೆಲ್ಲರ ಇಷ್ಟದೇವರಾದಂತಹ ಶ್ರೀ ಆಂಜನೇಯ ಸ್ವಾಮಿಯ ಪೂಜೆಯ ಸಡಗರ ಸಂಭ್ರಮ, ತಯಾರಿ ಎಲ್ಲವೂ ೧೭-ಡಿಸೆಂಬರ್-೨೦೧೫ (ಹಿಂದಿನ ದಿನ)ದಿಂದ ಆರಂಭಗೊಂಡಿತ್ತು. ಸಾಯಂಕಾಲ ೭:೦೦ ಘಂಟೆಯ ಸುಮಾರಿಗೆ ಎಲ್ಲ ಕಾರ್ಯಕರ್ತರ ಚಟುವಟಿಕೆಗಳು ಆರಂಭಗೊಂಡವು. ಕಳೆದ ಬಾರಿಯಂತೆ ಈ ಬಾರಿಯೂ ಮಹಾಪ್ರಸಾದದ ಪಂಚಭಕ್ಷ್ಯ ನೈವೇದ್ಯದ ಅಡುಗೆಯನ್ನು ದೇವಸ್ಥಾನದ ಪರಾಂಗಣದಲ್ಲಿಯೇ ತಯಾರಿಸಬೇಕೆಂದು ನಿಶ್ಚಯವಾಗಿದ್ದರಿಂದ ಪ್ರಪ್ರಥಮವಾಗಿ ಅಡುಗೆಮನೆಯ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅಡುಗೆ ಭಟ್ಟರ ತಂಡ ಅಡುಗೆಮನೆಯಲ್ಲಿ ಮಹಿಳಾ ಕಾರ್ಯಕರ್ತರಿಗೆ ಬಗೆ ಬಗೆಯ ತರಕಾರಿಗಳನ್ನು ಹೆಚ್ಚುವಂತೆ ನಿರ್ದೇಶಿಸುತ್ತಿದ್ದರು. ಉಳಿದ ಕಾರ್ಯಕರ್ತರ ಭಕ್ತಿಪೂರ್ವಕವಾದ ಸೇವೆಯಿಂದ ಭವ್ಯವಾದ ವೇದಿಕೆ ಮತ್ತು ಆಕರ್ಷಕ ಸಭಾಂಗಣ ನಿರ್ಮಾಣಗೊಂಡಿತ್ತು. 

ದಿನಾಂಕ ೧೮-ಡಿಸೆಂಬರ್-೨೦೧೫ರಂದು ಬೆಳಿಗ್ಗೆ ೭:೦೦ಘಂಟೆಗೆ ಎಲ್ಲ ಕಾರ್ಯಕರ್ತರು ಪೂಜೆಯ ತಯಾರಿ ಆರಂಭಿಸಿದರು. ಮುತ್ತೈದೆಯರು ದೀಪ ಹಚ್ಚುವ ಮೂಲಕ ದೇವತಾ ಪ್ರಾರ್ಥನೆ ಮಾಡಿದರು. ನಂತರ ದೇವಸ್ಥಾನದ ಆವರಣದಲ್ಲಿರುವ ಶ್ರೀ ಗಣೇಶ ದೇವಸ್ಥಾನ, ದೇವಿಯ ದೇವಸ್ಥಾನ ಹಾಗೂ ಶ್ರೀಕೃಷ್ಣ ದೇವರಿಗೆ ಪೂಜೆ ಸಲ್ಲಿಸಿ, ಸಭಾಂಗಣದಲ್ಲಿ ಪೂಜಾ ವಿಧಿ ವಿಧಾನಗಳು ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಕಳ್ಮಂಜೆಯವರ ನೇತೃತ್ವದಲ್ಲಿ ಆರಂಭವಾಯಿತು. ಸಮಸ್ತ ಮಸ್ಕತ್ ಕನ್ನಡಿಗರ ಪರವಾಗಿ ಶ್ರೀಮತಿ ಮತ್ತು ಶ್ರೀ ಶಶಿಧರ್ ಶೆಟ್ಟಿ ದಂಪತಿಗಳು ಪೂಜೆಯ ಸಂಕಲ್ಪ ನೆರವೇರಿಸಿಕೊಟ್ಟರು. 

ನಂತರ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಎಳೆನೀರಿನ ಅಭಿಷೇಕ ಮತ್ತು ಶ್ರೀ ಗಂಧದ ಅಭಿಷೇಕ ನೆರವೇರಿತು. ವಿಶೇಷವಾಗಿ ತಟ್ಟೆಯಲ್ಲಿ ಸಕ್ಕರೆಯನ್ನು ದೇವರ ಶಿರಸ್ಸಿನಿಂದ ಅಭಿಷೇಕ ಮಾಡಿದ್ದಂತು ಪ್ರತಿಯೊಬ್ಬರನ್ನು ಭಕ್ತಿಪರವಶವಾಗಿಸಿದ್ದಂತು ಸಹಜ. ನಂತರ ಆಂಜನೇಯ ಸ್ವಾಮಿಗೆ ಪ್ರಿಯವಾದ ವಡಮಾಲೆ ಮತ್ತು ವೀಳ್ಯದೆಲೆಯ ಹಾರವನ್ನು ಸಮರ್ಪಣೆ ಮಾಡಲಾಯಿತು.

ಬೆಳಿಗ್ಗೆ ೯:೧೫ರಿಂದ ಮಧ್ಯಾಹ್ನ ೧೨:೩೦ರ ವರೆಗೆ ಸತತವಾಗಿ ಡಿವೈನ್ ಪಾರ್ಕ್ ಮಸ್ಕತ್, ವಿಶ್ವಕರ್ಮ ಒಕ್ಕೂಟ ಮಸ್ಕತ್, ಓಂಕಾರ ಮಹಿಳಾ ವೃಂದ ಮಸ್ಕತ್, ಶ್ರೀ ಗಣೇಶ ವೃಂದ ಮಸ್ಕತ್ ಮತ್ತು ಜಿ ಎಸ್ ಬಿ ಸಮಾಜ ಮಸ್ಕತ್ ವತಿಯಿಂದ ಭಕ್ತಿ-ಭಜನೆಗಳ ಸಂಗೀತ ಸಭಾಂಗಣದಲ್ಲೆಲ್ಲಾ ಮೊಳಗುತ್ತಿತ್ತು. ಹರಿವಾಯುಸ್ತುತಿ ವೃಂದದವರಿಂದ ಹರಿವಾಯುಸ್ತುತಿ ಪಾರಾಯಣ ಮತ್ತು ಸತ್ಯಸಾಯಿ ಸಮಿತಿಯವರಿಂದ ಹನುಮಾನ್ ಚಾಳೀಸಾ ಪಾರಾಯಣ ನೆರವೇರಿದವು. ಸಹಸ್ರಾರು ಭಕ್ತರು ಸಾಗರೋಪಾದಿಯಲ್ಲಿ ಸಭಾಂಗಣದಲ್ಲಿ ಭಕ್ತಿಪರವಶರಾಗಿರುವದು ಓಂಕಾರ ಸಮಿತಿಯ ಕಾರ್ಯಕರ್ತರನ್ನು ಮೂಕ ವಿಸ್ಮಯರನ್ನಾಗಿಸುವಂತೆ ಮಾಡಿತ್ತು. ತದನಂತರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾನೈವೇದ್ಯವನ್ನು ಭಜನೆಯೊಂದಿಗೆ ಮತ್ತು ಮಹಾಮಂಗಳಾರತಿಯನ್ನು ಚಂಡೇವಾದ್ಯಗೋಷ್ಠಿಯೊಂದಿಗೆ ನಡೆದಾಗ ಎಲ್ಲ ಭಕ್ತ ಸಮೂಹ ಭಕ್ತಿಪರವಶದಿಂದ ಪ್ರಾಣದೇವರ ಕೃಪೆಗೆ ಪಾತ್ರರಾದರು. ಎಲ್ಲ ಭಕ್ತಿ ಸಮೂಹಕ್ಕೆ ತೀರ್ಥ-ಪ್ರಸಾದ ಮತ್ತು ಮಹಾಪ್ರಸಾದವನ್ನು ಸಮೃದ್ಧವಾಗಿ ಹಾಗೂ ಅಚ್ಚುಕಟ್ಟಾಗಿ ವಿತರಿಸಲಾಯಿತು.  

ಪೂಜೆಗೆ ಧನ್ಯತಾ ಭಾವದೊಂದಿಗೆ ತನು ಮನ ಧನದಿಂದ ಸಹಕರಿಸಿದ ಎಲ್ಲ ಕಾರ್ಯಕರ್ತರು, ಮಹಿಳಾ ಕಾರ್ಯಕರ್ತರು, ದಾನಿಗಳು, ಸೇವಾರ್ಥಿಗಳು, ಹಿಂದು-ಮಹಾಜನಕೂಟ, ಅಡುಗೆ ತಂಡ, ಭಜನಾ ತಂಡಗಳು, ಚಂಡೇವಾದ್ಯ ತಂಡ ಮತ್ತು ಸಹಾಯಕ ತಂಡಕ್ಕೆ ಓಂಕಾರ ಸಮಿತಿಯ ಪರವಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಲಾಯಿತು.    
।। ಸರ್ವೇ ಜನಾಃ ಸುಖಿನೋ ಭವಂತು ।।
।। ಸನ್ಮಂಗಳಾನಿ ಭವಂತು ।।


- ಶ್ರೀಮಾತಾ ಹಿರಿಯಣ್ಣ 

Please click here for Pooja Program photos>>>>

ಓಂಕಾರ ನಾದಾಮೃತ -೨೦೧೫

ಓಂಕಾರ ನಾದಾಮೃತ -೨೦೧೫


ಓಂಕಾರ ಸಮಿತಿ (ಓಮಾನ ಕರ್ನಾಟಕ ಆರಾಧನಾ ಸಮಿತಿ) ಯು ಪ್ರತಿ ವರ್ಷದಂತೆ ಈ ಸಾಲಿನ ಓಂಕಾರ ನಾದಾಮೃತ ಕಾರ್ಯಕ್ರಮವನ್ನು ೨ನೇ ಅಕ್ಟೋಬರ್ ೨೦೧೫ ರಂದು ಶ್ರೀಕೃಷ್ಣಮಂದಿರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಬಾರಿಯ ನಾದಾಮೃತ ಕಾರ್ಯಕ್ರಮಕ್ಕೆ ಶ್ರೀಯುತ ಅನಂತ ಕುಲಕರ್ಣಿಯವರು ಮುಖ್ಯ ಕಲಾವಿದರಾಗಿದ್ದರು. ಅವರಿಗೆ ಶ್ರೀ ರಾಜಗೋಪಾಲ ಕಲ್ಲೂರಕರ (ತಬಲಾ), ಶ್ರೀ ವೆಂಕಟೇಶ ಅಲಕೋಡ (ಹಾರ್ಮೋನಿಯಮ್), ಶಿವಲಿಂಗ ರಾಜಾಪುರ (ಕೊಳಲು) ಮತ್ತು ಸ್ಥಳೀಯ ಕಲಾವಿದರಾದ ವಿಶಾಲ ಪಡಿಯಾರ (ತಾಳ) ಸಾಥ್ ನೀಡಿದ ಕಲಾವಿದರು.

ಸಂಜೆ ೬:೨೦ಕ್ಕೆ ಕಾರ್ಯಕ್ರಮ ಶ್ರೀ ಜಿ ರವಿಕುಮಾರ್ ರಾವ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭಗೊಂಡು ಬಂದಂತಹ ಸನ್ಮಾನ್ಯ ಅತಿಥಿಗಳನ್ನು ಮತ್ತು ಎಲ್ಲ ಪ್ರೇಕ್ಷಕರನ್ನು ಸ್ವಾಗತಿಸಿ, ಶ್ರೀ ಗಜಾನನ ಮತ್ತು ಶ್ರೀ ಆಂಜನೇಯ ದೇವರಿಗೆ ಶ್ರೀ ಗುರುಪ್ರಸಾದ ಆಚಾರ್ಯ ಅವರು ಆರತಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀಮತಿ ಶ್ರೀಮಾತಾ ಹಿರಿಯಣ್ಣ ಅವರು ಕಾರ್ಯಕ್ರಮದ ನಿರೂಪಣೆವಹಿಸಿ ಎಲ್ಲ ಕಲಾವಿದರ ಪರಿಚಯ ಮಾಡುತ್ತ ವೇದಿಕೆಗೆ ಸ್ವಾಗತಿಸಿದರು.

ಶ್ರೀ ಗಜಾನನ ಸ್ತುತಿಪಾರ್ವತಿ ನಂದನಹಾಡಿನೊಂದಿಗೆ ಆರಂಭಗೊಂಡ ಸಂಗೀತ ಕಾರ್ಯಕ್ರಮರಾಮ ರತನ ಧನ ಪಾಯೋ’, ’ಭವಾನಿ ಉಮಾ ಕಾತ್ಯಯನಿ ಗೌರಿಮತ್ತುಶಿವಾ ಶಿವಾ ಎನ್ನಿರೋಹಾಡುಗಳ ನಂತರ ಅಲ್ಪ ವಿರಾಮದೊಂದಿಗೆ ಕಲಾವಿದರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮ ನಮ್ಮವರೇ ಆದ ಶ್ರೀ ಮಂಜುನಾಥ ನಾಯಕ, ಶ್ರೀ ಡಾ. ಸಿ ಕೆ ಅಂಚನ್, ಶ್ರೀ ಜಿ ವಿ ರಾಮಕೃಷ್ಣ ಮತ್ತು ಶ್ರೀ ಬಾಲಕೃಷ್ಣ ಇವರಿಂದ ನೆರವೇರಿತು. ನಂತರ ವೇದಿಕೆಯಲ್ಲಿ ಭಾರತೀಯ ಸಾಮಾಜಿಕ ಒಕ್ಕೂಟ - ಕರ್ನಾಟಕ ವಿಭಾಗದ ವತಿಯಿಂದ ಎಲ್ಲ ಕಲಾವಿದರನ್ನು ಸನ್ಮಾನಿಸಲಾಯಿತು.

ಅಲ್ಲಿಂದ ಮತ್ತೇ ಆರಂಭಗೊಂಡ  ಶ್ರೀ ಅನಂತ ಕುಲಕರ್ಣಿ ಅವರ ಸಂಗೀತ ಸುಧೆ ರಾತ್ರಿ ೯:೩೦ರವರೆಗೆ ಸುಶ್ರಾವ್ಯವಾಗಿ ತೇಲಿ ಬಂತು. ದಾಸ ಸಾಹಿತ್ಯದ ಸೊಗಡನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟು ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯದ ಕೊಡುಗೆಯನ್ನು ಎಲ್ಲರ ಮನ ಮುಟ್ಟುವಂತೆ ತಿಳಿಸಿ ಕೊಟ್ಟಿದ್ದು ಈ ಕಾರ್ಯಕ್ರಮದ ವಿಶೇಷ. ಪ್ರತಿ ಹಾಡಿನ ಸಾಂದರ್ಭಿಕ ಹಿನ್ನೆಲೆ, ಕೃತಿ ಪರಿಚಯ ಮತ್ತು ಹಾಡಿನಲ್ಲಿರುವ ಅಕ್ಷರಗಳ ಉಪಯೋಗ ಮತ್ತು ಉಚ್ಚಾರದ ಮಹತ್ವವನ್ನು ಸೂಕ್ಷ್ಮವಾಗಿ ವರ್ಣಿಸಿ ಪ್ರತಿ ಹಾಡುಗಳು ಎಲ್ಲರ ಮನ ಮುಟ್ಟಿಸುವಲ್ಲಿ ಯಶಸ್ವಿಯಾದರು. ದಾಸರ ವರ್ಣನೆ ಮಾಡುತ್ತ ಮಹಿಪತಿ ದಾಸರು, ಪ್ರಸನ್ನ ವೆಂಕಟದಾಸರ ಸಾಂದರ್ಭಿಕ ಕಥೆಗಳು ಅವರ ಬಗೆಗಿನ ಸಾಕ್ಶ್ಯ ಚಿತ್ರವನ್ನು ನೆನಪಿಗೆ ತರುತ್ತಿದ್ದವು. ಲಯಬದ್ಧತೆ ಮತ್ತು ಸ್ಪಷ್ಟ ಉಚ್ಚಾರಕ್ಕೆ ಖ್ಯಾತಿ ಪಡೆದಿರುವ ಶ್ರೀ ಅನಂತ ಕುಲಕರ್ಣಿ ಅವರು ಶ್ರೀ ಪುರಂದರ ದಾಸರು, ಶ್ರೀ ಕನಕದಾಸರು, ಶ್ರೀ ಮಹಿಪತಿ ದಾಸರು, ಶ್ರೀ ವಿಜಯ ವಿಠ್ಠಲದಾಸರು, ಶ್ರೀ ಪ್ರಸನ್ನ ವೆಂಕಟದಾಸರು ಮತ್ತು ಇತರ ದಾಸರ ಕೃತಿಗಳನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮಕ್ಕೆ ಪೂರ್ಣ ವಿರಾಮದಂತೆ ಶ್ರೀ ಏ ಎಸ್ ರವಿಪ್ರಕಾಶರಿಂದ ವಂದನಾರ್ಪಣಾ ಕಾರ್ಯಕ್ರಮದೊಂದಿಗೆ ಓಂಕಾರ ನಾದಾಮೃತ-೨೦೧೫ರ ಕಾರ್ಯಕ್ರಮ ಮುಕ್ತಾಯಗೊಂಡಿತು.

ಪುರಂದರ ನಮನ -೨೦೧೫


ಪುರಂದರ ನಮನ -೨೦೧೫




ಓಂಕಾರ ಸಮಿತಿಯು ಶ್ರೀ ಪುರಂದರದಾಸರ ಪುಣ್ಯತಿಥಿಯ ಅಂಗವಾಗಿ ವಿನೂತನವಾದ ’ಪುರಂದರ ನಮನ-೨೦೧೫’ ಕಾರ್ಯಕ್ರಮವನ್ನು ದಿನಾಂಕ ೨೩-ಜನವರಿ-೨೦೧೫ರಂದು ಶ್ರೀ ಕೃಷ್ಣಮಂದಿರ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

’ಪುರಂದರ ನಮನ’ ದಾಸವರೇಣ್ಯ ಮತ್ತು ಕರ್ನಾಟಕ ಸಂಗೀತದ ಪಿತಾಮಹ ಎಂದೇ ಪ್ರಖ್ಯಾತರಾಗಿರುವ ಶ್ರೀ ಪುರಂದರದಾಸರ ನೆನಪಿನಲ್ಲಿ ಅವರ ಕೃತಿಗಳ ಸಂಗೀತೋತ್ಸವವನ್ನು ಸ್ಥಳೀಯ ಕಲಾವಿದರಿಂದ ಆಚರಿಸುವ ಒಂದು ಮಹತ್ತರ ಕಾರ್ಯಕ್ರಮವಾಗಿದೆ.

ಆರಂಭಿಕವಾಗಿ ಸ್ವಾಗತ ಭಾಷಣ ಮಾಡಿದ ಶ್ರೀ ರವಿಕುಮಾರ ರಾವ್ ನಂತರ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಅವರಿಂದ ಶ್ರೀ ಆಂಜನೇಯ ಸ್ವಾಮಿಯ ಪೂಜೆ, ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಪೂಜೆ ನಂತರ ಶ್ರೀ ಪುರಂದರದಾಸರ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪೂಜೆಯ ನಂತರ ಸಂಗೀತ ಕಾರ್ಯಕ್ರಮ ಸದಸ್ಯರ ಮಕ್ಕಳಾದ ಕು. ಅಮೂಲ್ಯ, ಕು. ಅನಘ ಉಡುಪ, ಕು. ನಿಖಿತಾ, ಕು. ಸ್ಮೃತಿ ಪ್ರಭು, ಕು. ರಿಷಭ ರಾವ್, ಕು. ಕುಶಲ ರಾಜು ಇವರಿಂದ ’ಲಂಬೋದರ’, ’ಪಿಳ್ಳಾರಿ ಗೀತೆ’, ’ರಾಗಿ ತಂದೀರಾ’ ಮುಂತಾದ ಹಾಡುಗಳಿಂದ ಸಂಗೀತೋತ್ಸವಕ್ಕೆ ಶುಭಾರಂಭ ನೀಡಿತು.

ಶ್ರೀ ಏ ಎಸ್ ರವಿಪ್ರಕಾಶ ಅವರ ಸುಮಧುರ ಕಂಠದಿಂದ ’ಯಾರೇ ಬಂದವರು’, ’ಬಾರೋ ನೀ ಎನ್ನ’ ಮತ್ತು ’ಶಕ್ತನಾದರೆ’ ಹಾಡುಗಳ ಸುರಿಮಳೆಯಾದರೆ, ನಂತರ ಶ್ರೀಮತಿ ಕಲಾ ಶ್ರೀನಿವಾಸನ್ ಅವರಿಂದ ಜಲತರಂಗದಿಂದ ’ಭಾಗ್ಯದ ಲಕ್ಷ್ಮೀ ಬಾರಮ್ಮ’ ಹಾಡಿನ ಸಂಗೀತ ಹೊರಹೊಮ್ಮಿತು. ಶ್ರೀಮತಿ ಶುಭಾ ಶ್ರೀನಿವಾಸರಿಂದ ’ದೇವಕಿ ಕಂದ ಮುಕುಂದ’ ಎಲ್ಲರನ್ನು ಮುಗ್ಧರನ್ನಾಗಿಸಿತು.

ಹೀಗೆ ಸಂಗೀತದ ರಥವನ್ನು ಶ್ರೀ ಸಚಿನ್ ಕಾಮತರು ’ನಾನೇನ ಮಾಡಿದೆನೋ ರಂಗಯ್ಯ’, ’ಕಲಿಯುಗದೊಳು’ ಮತ್ತು ’ಪಿಳ್ಳಂಗೋವಿಯ’ ತಮ್ಮ ಹಾಡಿನ ಶೈಲಿಯಿಂದ ಪುರಂದರ ನಮನ ಕಾರ್ಯಕ್ರಮವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದರೆಂದರೆ ತಪ್ಪಾಗಲಾರದು. ತದನಂತರ ಶ್ರೀಮತಿ ವೀಣಾ ಶ್ರೀನಿವಾಸರಿಂದ ’ತಾರಕ್ಕೆ ಬಿಂದಿಗೆ’, ’ಜಗದೋದ್ದಾರನ’ ಮತ್ತು ’ರಾಮ ಮಂತ್ರವ ಜಪಿಸೋ’ ಹಾಡುಗಳು ಕರ್ನಾಟಕ ಸಂಗೀತದ ಸಿಹಿ ಎಲ್ಲರಿಗೂ ತಲುಪುವಂತಾಯಿತು.

ಬೆಳೆಯುತ್ತಿರುವ ಪ್ರತಿಭೆಗಳಾದ ಕು. ಸಾಕ್ಷಿ ಭಾಗವತ್ ಮತ್ತು ಕು. ಪ್ರೀತಿ ಕೋಡಂಚ ಇವರ ’ವಾಸುದೇವ ಚರಣ’, ’ಸುಲಭ ಪೂಜೆಯ ಮಾಡಿ’ ಮತ್ತು ’ದಾರಿ ಯಾವುದಯ್ಯ’ ಹಾಡುಗಳು ನಮ್ಮ ಮುಂದಿನ ಪೀಳಿಗೆಯಲ್ಲಿರುವ ಕಲೆಯನ್ನು ತೋರಿಸಿಕೊಟ್ಟವು. ನಂತರ ಶ್ರೀಮತಿ ಸ್ವರ್ಣಲತಾ ಹೆಬ್ಬಾರ ಇವರಿಂದ ಸುಮಧುರವಾಗಿ ’ಮನವೇ ಚಂಚಲ’, ’ನಿನ್ನನೇ ನಂಬಿದೆ’ ’ಮುರೂತಿಯನ್ನು ತೋರಿಸೋ’ ಹಾಡುಗಳು ಹರಿದು ಬಂದವು.

ಶ್ರೀಮತಿ ಸುಮನಾ ಶಶಿಧರ ಇವರ ಕಂಠಸಿರಿಯಿಂದ ’ಅಂಬಿಗ ನಾ ನಿನ್ನ’, ಮಂದಗಮನೆ’ ಮತ್ತು ’ಗುಮ್ಮನ ಕರೆಯದಿರೆ’ ಹಾಡುಗಳಾದರೆ ಮಸ್ಕತ್ ನಲ್ಲಿ ತಮ್ಮ ಸಂಗೀತ ಶೈಲಿ ಮತ್ತು ಸಂಗೀತ ಸೇವೆಗೆ ಮನೆಮಾತಾಗಿರುವ ಶೀ ಕರುಣಾಕರ ರಾವ್ ಅವರಿಂದ ’ಕೇಳನೋ ಹರಿ ತಾಳನೋ’, ’ಕರುಣಿಸೋ ರಂಗ ಕರುಣಿಸೋ’ ಮತ್ತು ’ಹರಿ ಕುಣಿದ ನಮ್ಮ ಹರಿ ಕುಣಿದಾ’ ಹಾಡುಗಳು ಎಲ್ಲ ಪ್ರೇಕ್ಷಕ ವರ್ಗವನ್ನು ಮೆಚ್ಚುವಂತೆ ಮಾಡಿತು.

ಕೊನೆಗೆ ಶ್ರೀಯುತ ಗಣಪತಿ ಪೈ ಅವರಿಂದ ಸೋಹಿಣಿ, ದರ್ಬಾರಿ ಮತ್ತು ಭೈರವಿ ರಾಗದಲ್ಲಿ ’ಈ ಪರಿಯ ಸೊಬಗು’ ಮತ್ತು ’ಕೋಮಲಾಂಗ ನಮ್ಮ’ ಹಾಡುಗಳು ಸಭಾಂಗಣವನ್ನು ಮಂತ್ರ ಮುಗ್ಧರನ್ನಾಗಿಸಿದ್ದವು.

ಸಂಗೀತ ವಾದ್ಯ ವೃಂದದಲ್ಲಿ ವಿದ್ವಾನ್ ಶ್ರೀ ಸುಂದರೇಶನ್, ಶ್ರೀ ಕರುಣಾಕರ ರಾವ್ (ಹಾರ್ಮೋನಿಯಮ್), ಶ್ರೀ ನವೀನ ಆಚಾರ್ಯ (ತಬಲಾ), ಶ್ರೀ ಗಿರೀಶ ನಾಯಕ (ತಬಲಾ), ಶ್ರೀ ಸುರೇಂದ್ರ ಆಚಾರ್ಯ (ಹಾರ್ಮೋನಿಯಮ್), ಕು. ಅರುಣಕುಮಾರ್ (ವಯೋಲಿನ್), ಕು. ಪ್ರೀತಿ ಕೋಡಂಚ (ವಯೋಲಿನ್) ಮತ್ತು ಕು. ಸಂತೃಪ್ತ ವೇದಾಂತಿ ಭಾಗವಹಿಸಿದ್ದರು.

ಶ್ರೀಮತಿ ಕವಿತಾ ರಾಮಕೃಷ್ಣ ಅವರ ಕಾರ್ಯಕ್ರಮ ನಿರೂಪಣೆ ಅವರ ಪೂರ್ವ ತಯಾರಿ ಮತ್ತು ಶ್ರೀ ಪುರಂದರದಾಸರ ಬಗೆಗಿನ ಮಾಹಿತಿ ಸಂಗ್ರಹ ಕಾರ್ಯಕ್ರಮಕ್ಕೆ ಹೊಸ ರಂಗು ಕೊಟ್ಟಿತ್ತು.

ಶ್ರೀ ಸಿ ಕೆ ಅಂಚನ ಮತ್ತು ಶ್ರೀ ಜಿ ವಿ ರಾಮಕೃಷ್ಣ ಅವರಿಂದ ಭಾಗವಹಿಸಿದ ಎಲ್ಲ ಕಲಾವಿದರಿಗೆ ’ಪುರಂದರ ನಮನ-೨೦೧೫’ ಕಾರ್ಯಕ್ರಮದ ನೆನಪಿನ ಕಾಣಿಕೆಯನ್ನು ನೀಡಲಾಯಿತು.

ಶ್ರೀ ವೆಂಕಟೇಶ ಗುಡಗುಡಿ ಇವರಿಂದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು ಮತ್ತು ಓಂಕಾರ ಸಮಿತಿಯ ಪರವಾಗಿ ಪ್ರಸಾದ ವಿತರಣೆಯ ವ್ಯವಸ್ಥೆ ಮಾಡಲಾಗಿತ್ತು.



ಓಂಕಾರ ಪುರಂದರ ನಮನ-೨೦೧೫ (ಭಾಗ-೧)
ಓಂಕಾರ ಪುರಂದರ ನಮನ-೨೦೧೫ (ಭಾಗ-೨)