ಓಂಕಾರ ಗಣವಂದ್ಯಾಯ ಜ್ಞಾನಾನಂದೈಕ ಮೂರ್ತಯೇ ।
ಸುಗುಣೇಂದ್ರನುತಾಯ ಶ್ರೀ ಕಪಿಂದ್ರಾಯ ನಮೋ ನಮಃ ।।
ಅಕ್ಟೋಬರ್ 27, 2024 ಶುಕ್ರವಾರದ ಶುಭ ಸಂಜೆ 6:00 ಘಂಟೆಗೆ ಸರಿಯಾಗಿ ಮಸ್ಕತ್ ಶ್ರೀ ಕೃಷ್ಣ ಮಂದಿರದ ಸಭಾಂಗಣ ಸುಂದರವಾಗಿ ಅಲಂಕೃತವಾಗಿತ್ತು. ಓಮಾನ್ ಕರ್ನಾಟಕ ಆರಾಧನಾ ಸಮಿತಿಯು ಓಂಕಾರ ನಾದಾಮೃತ 2024ರ ಭಕ್ತಿಸಂಗೀತ ಕಾರ್ಯಕ್ರಮವನ್ನು ಸಾಕಾರಗೊಳಿಸಲು ನಮ್ಮ ತಾಯ್ನಾಡಿನಿಂದ ಆಗಮಿಸಿದ ಗಾನಕೋಗಿಲೆ ಕು. ಸಾಧ್ವಿನಿ ಕೊಪ್ಪ ಮತ್ತು ತಂಡದವರಿಗಾಗಿ ಸುಸಜ್ಜಿತ ವೇದಿಕೆ ತಯಾರಾಗಿತ್ತು. ರಾಮನಾಮದ ಓಂಕಾರದ ಜೊತೆಗೆ ಹನುಮ ನಾಮದ ಜೈಕಾರಕ್ಕಾಗಿ ಮಸ್ಕತ್ತಿನ ಸಂಗೀತ ಪ್ರೇಮಿಗಳೆಲ್ಲರೂ ಉತ್ಸುಕರಾಗಿದ್ದರು. ಓಂಕಾರ ಸಮಿತಿಯ ಶ್ರೀ ರವಿಕುಮಾರ್ ಅವರು ಸ್ವಾಗತಭಾಷಣ ಆರಂಭಿಸಿ ಆಗಮಿಸಿದ್ದ ಮುಖ್ಯ ಅತಿಥಿಗಳಿಗೆ ಹೂಗುಚ್ಚ ನೀಡಿ ಹಾಗೂ ನೆರೆದಿದ್ದ ಸಭಿಕರಿಗೆ ಆತ್ಮೀಯತೆಯಿಂದ ಹೃತ್ಪೂರ್ವಕ ಸ್ವಾಗತ ಕೋರುತ್ತ ಓಂಕಾರ ಸಮಿತಿಯ ಹನ್ನೆರಡು ವರ್ಷದ ಸತತ ಸಾಧನೆಯ ಕಿರುನೋಟವನ್ನು ನೆನಪಿಸಿ ಕೊಟ್ಟರು.
ನಂತರ ಶ್ರೀಮತಿ ಮುಕ್ತಾ ಪ್ರವೀಣ ಅವರಿಂದ ಗಾನಶ್ರೀ ಕು. ಸಾಧ್ವಿನಿ ಕೊಪ್ಪರವರ ಪರಿಚಯದೊಂದಿಗೆ ಸಂಗೀತದ ನಾಡಿಮಿಡಿತಗಳಾದ ಕೀಬೋರ್ಡ್ ವಾದಕ ಶ್ರೀಯುತ ಶ್ರೀನಿಧಿ ಕೊಪ್ಪ, ರಿದಮ್ ಪ್ಯಾಡ್ ಪರಿಣಿತ ಅಭಿಷೇಕ್ ಎಂ ಎ, ತಬಲಾ ಮಾಂತ್ರಿಕ ಶ್ರೀ ಕಾರ್ತಿಕ್ ಭಟ್ ಹಾಗೂ ಸ್ಥಳೀಯ ಕೊಳಲು ವಾದಕರಾದ ಶ್ರೀ ಪ್ರದೀಪ್ ಕುಮಾರ್ ರವರ ಕಿರು ಪರಿಚಯ ಮಾಡಿಸಿ ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀ ಅರುಣಕುಮಾರ್ ಅಯ್ಯರ್ ಅವರು ಆದಿಪೂಜಿತ ಶ್ರೀ ಗಣಪತಿಗೆ ಹಾಗೂ ಓಂಕಾರ ಸಮಿತಿಯ ಆರಾಧ್ಯ ದೈವ ಹಾಗೂ ಚೈತನ್ಯ ಮೂರ್ತಿ ಶ್ರೀ ಆಂಜನೇಯ ಸ್ವಾಮಿಗೆ ಆರತಿ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಾರತದಲ್ಲಿ ಸಂಗೀತ ಪಡೆದ ನಾವು ಎಷ್ಟು ಪುಣ್ಯವಂತರು ಎಂದು ಹೇಳುತ್ತಾ ಕು ಸಾದ್ವಿನಿ ಕೊಪ್ಪರವರು "ಗಣಪತಿ ಬಪ್ಪ ಮೋರಯಾ ಮಂಗಳ ಮೂರ್ತಿ ಮೋರಯಾ" ಹಾಡುತ್ತಾ ಗಣಪತಿಗೆ ವಂದಿಸಿ ಕಾರ್ಯಕ್ರಮ ಪ್ರಾರಂಭಿಸಿದರು. ನಂತರ "ಶಂಭೋ ಶಿವ ಶಂಭೋ" ಹಾಡಿ, ಶ್ರೀಕೃಷ್ಣನ ಸಾನಿಧ್ಯದಲ್ಲಿ "ಸ್ವಾಗತಂ ಕೃಷ್ಣ ಶರಣಾಗತಂ ಕೃಷ್ಣ" ಎಂದು ಕೃಷ್ಣನನ್ನು ಆಹ್ವಾನಿಸಿದರು. ಮುಂದೆ "ರಾಮ ಎಂಬ ಎರಡಕ್ಷರ ಪಾಮರರು ತಾವೇನು ಬಲ್ಲಿರಯ್ಯಾ" ಎಂಬ ದಾಸಸಾಹಿತ್ಯದ ಮಹತ್ವವನ್ನು ಎಷ್ಟೊಂದು ಸ್ವಾರಸ್ಯವಾಗಿ ನಮಗೆ ಹಾಡಿ ತಿಳಿಸಿದರು. ಆಂಜನೇಯನ ಭಜನೆಯಾದ "ಜೈ ಜೈ ಹನುಮಾನ್ ಜೈ ಗುರು ಜೈ ಜೈ ಪವಮಾನ್ ಎಂದು ಎಲ್ಲರೂ ಕುಣಿದು ಕುಪ್ಪಳಿಸುವಂತೆ ಮಾಡಿದರು. ಹೀಗೆ ಒಂದರ ನಂತರ ಇನ್ನೊಂದು ಹಾಡು ಪ್ರತಿಯೊಬ್ಬ ಪ್ರೇಕ್ಷಕರನ್ನು ಮಂತ್ರಮುಗ್ಧನನ್ನಾಗಿಸುತ್ತಿತ್ತು. ಸುಸ್ವರ ಸಂಗೀತದೊಂದಿಗೆ ಪ್ರತಿಯೊಂದು ಹಾಡಿನ ವಿಶೇಷತೆಗಳನ್ನು ತಿಳಿಸಿ ಕೊಡುತ್ತ ತಾವು ಹಾಡುತ್ತ ಪ್ರೇಕ್ಷಕರನ್ನು ಜೊತೆಗೆ ಹಾಡಲು ಪ್ರೋತ್ಸಾಹಿಸುತ್ತಿದ್ದರು.
ಕಾರ್ಯಕ್ರಮದಲ್ಲಿ ಕಲಾವಿದರನ್ನು ಗೌರವಿಸಿ ಸನ್ಮಾನಿಸುವದೂ ಮುಖ್ಯ ಎಂಬಂತೆ ಮಸ್ಕತ್ ನ ಇಂಡಿಯನ್ ಡಾಕ್ಟರ್ಸ್ ಅಸೋಸಿಯೇಷನ್ ಕರ್ನಾಟಕ ವಿಭಾಗದವರು ಕು ಸಾಧ್ವಿನಿ ಕೊಪ್ಪ ಅವರನ್ನು ಸನ್ಮಾನಿಸಿದರು. ತದನಂತರ ಉಪಸ್ಥಿತರಿದ್ದ ಗಣ್ಯರಿಂದ ರಿದಮ್ ಪ್ಯಾಡ್ ಕಲಾವಿದ ಅಭಿಷೇಕ ಎಂ ಎ, ತಬಲಾ ವಾದಕ ಕಾರ್ತೀಕ ಭಟ್, ಕೊಳಲು ವಾದಕ ಪ್ರದೀಪ್ ಕುಮಾರ ಹಾಗೂ ಕೀಬೋರ್ಡ್ ವಾದಕರಾದ ಶ್ರೀನಿಧಿ ಕೊಪ್ಪರವರನ್ನು ಓಂಕಾರ ಸಮಿತಿಯ ಪರವಾಗಿ ಸನ್ಮಾನಿಸಿದರು. ನಂತರ ಓಂಕಾರ ಸಮಿತಿಯ ಎಲ್ಲ ಸದಸ್ಯರು ವೇದಿಕೆಗೆ ಆಗಮಿಸಿ ನಾದಾಮೃತ 2024ರ ಕಾರ್ಯಕ್ರಮದ ಕೇಂದ್ರ ಬಿಂದುವಾದ ಹೆಮ್ಮೆಯ ಕನ್ನಡತಿ ಕು ಸಾಧ್ವಿನಿ ಕೊಪ್ಪ ಅವರಿಗೆ ಗೌರವಪೂರ್ವಕವಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ಮನೆಗೆ ಬಂದು ಹೆಣ್ಣುಮಕ್ಕಳಿಗೆ ಸಂಪ್ರದಾಯದಂತೆ ಬಾಗಿನ ಕೊಟ್ಟು ಖುಷಿಯಿಂದ ಕಳುಹಿಸಿಕೊಡುವ ಹಾಗೆ ನಮ್ಮ ಓಂಕಾರ ಸಮಿತಿಯ ಮಹಿಳೆಯರು ಕು ಸಾಧ್ವಿನಿ ಕೊಪ್ಪ ಅವರಿಗೆ ಬಾಗಿನ ನೀಡಿ ಭಾವನಾತ್ಮಕವಾದ ಶುಭ ಹಾರೈಸಿದರು.
ಕಾರ್ಯಕ್ರಮ ಮುಂದುವರಿದು "ರಘುಕುಲ ನಂದನ ರಾಜಾರಾಮ ಕರುಣಾಸಾಗರ ಶ್ರೀ ಸೀತಾರಾಮ" ಎಂದು ಇಡೀ ರಾಮಾಯಣವನ್ನು ನಮಗೆ ತಿಳಿಸಿಕೊಟ್ಟರು. ಅದರ ಜೊತೆಗೆ ನಮ್ಮನ್ನು ಭಕ್ತಿಯಲ್ಲಿ ತಲ್ಲೀನರಾಗಿಸಿದರು. ವಿಠ್ಠಲನ ಭಜನೆಯಂತೂ ಪಂಡರಪುರಕ್ಕೆ ಹೋಗಿ ಬಂದಂತಿತ್ತು. "ವಿಠ್ಠಲ ವಿಠ್ಠಲ" ಎಂದು ಕಣ್ಣು ಭಜನೆ ಮಾಡುತ್ತಿದ್ದರೆ ಸ್ವತಃ ಪಾಂಡುರಂಗನೇ ಕಣ್ಣು ಮುಂದೆ ಬಂದಂತಹ ಅನುಭವ ಆಗಿತ್ತು. ಭಜನೆ ಮಾಡುತ್ತಾ ಓಂಕಾರ ಸಮಿತಿಯ ಸದಸ್ಯರುಗಳು ನೃತ್ಯವಂತೂ ಸಭಿಕರೆಲ್ಲರಲ್ಲಿ ಒಂದು ಅದ್ಭುತವಾದ ಖುಷಿ ತಂದುಕೊಟ್ಟಿತು. "ಜಗದೋದ್ಧಾರನ ಆಡಿಸಿದಳು ಯಶೋಧೆ" ಹಾಗೂ "ಕಾನಡಾ ರಾಜಾ ಪಂಡರೀಚಾ" ಎಂಬ ಮರಾಠಿ ಹಾಡುಗಳು ಸಭಿಕರ ಮನಸ್ಸಿಗೆ ಆನಂದ ತಂದುಕೊಟ್ಟವು. ಭಕ್ತಿಗೀತೆ ಜೊತೆಗೆ ಮೂಡಲಮನೆ ಧಾರವಾಹಿಯ ಖ್ಯಾತ ಶೀರ್ಷಿಕೆಯ ಹಾಡು "ನಂಬಿ ಕೊಂಬೆಯ ಮೇಲೆ ಗೂಡು ಕಟ್ಟುತವ ರೆಕ್ಕೆ ಬಲಿತ ಹಕ್ಕಿ" ಎಂದು ಅದೇ ಭಾಷೆಯ ಸೊಗಡಿನಲ್ಲಿ ಹಾಡಿದ್ದು ಇನ್ನೊಂದು ವಿಶೇಷತೆಯಾಗಿತ್ತು. ಅದರ ಜೊತೆಗೆ "ಉಧೋ ಉಧೋ ಎಲ್ಲಮ್ಮ" ಎಂಬ ರೇಣುಕೆ ಎಲ್ಲಮ್ಮನ ಹಾಡು ಪ್ರೇಕ್ಷಕರ ವಿಶೇಷ ಮನಸೆಳೆದಿತ್ತು. ಇನ್ನೂ ಭಕ್ತಿಯಲ್ಲಿ ಮಗ್ನರಾಗಿದ್ದ ಸಂಗೀತ ಪ್ರಿಯರಿಗೆ ಕಾರ್ಯಕ್ರಮ ಹೇಗೆ ಮುಕ್ತಾಯದ ಹಂತಕ್ಕೆ ಬಂತು ಅಂತ ಗೊತ್ತಾಗಲಿಲ್ಲ. ಕಡೆಯದಾಗಿ ಸಭಿಕರ ಕೋರಿಕೆಯ ಮೇರೆಗೆ "ಭಾಗ್ಯದ ಲಕ್ಷ್ಮಿ ಬಾರಮ್ಮ" ಮತ್ತು "ಪವಮಾನ ಜಗದ ಪ್ರಾಣ" ಹಾಡುಗಳ ಮೂಲಕ ಮಂಗಳ ಹಾಡಿದರು. ಹೀಗೆ ಸತತವಾಗಿ ಮೂರು ಗಂಟೆಗಳ ಕಾಲ ಶ್ರದ್ಧಾ ಭಕ್ತಿಯಿಂದ ಸುಶ್ರಾವ್ಯವಾಗಿ, ಸುಮಧುರವಾಗಿ ಹಾಡಿದ ಕುಮಾರಿ ಸಾಧ್ವಿನಿ ಕೊಪ್ಪ ಅವರು ಪ್ರತಿಯೊಬ್ಬ ಪ್ರೇಕ್ಷಕನನ್ನು ಭಗವಂತನ ಕೃಪಾಕಟಾಕ್ಷಕ್ಕೆ ಪಾತ್ರರನ್ನಾಗಿಸಿದಂತೂ ಸತ್ಯ.
ಶ್ರೀಯುತ ಅರುಣ ಹೊಳ್ಳರವರು ವೇದಿಕೆಗೆ ಆಗಮಿಸಿ, ತಮ್ಮ ಕಂಠಸಿರಿಯಿಂದ ಸಭಿಕರನ್ನು ಭಕ್ತಿ ಲೋಕಕ್ಕೆ ಕರೆದೊಯ್ದ ಕು. ಸಾಧ್ವಿನಿ ಕೊಪ್ಪ ಮತ್ತು ತಂಡದವರಿಗೆ, ಮಂದಿರದ ಆಡಳಿತ ಮಂಡಳಿಗೆ, ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ, ಸಭಿಕರಿಗೆ ಮತ್ತು ಓಂಕಾರ ಸಮಿತಿಯ ತಂಡದ ಎಲ್ಲಾ ಸದಸ್ಯರಿಗೆ ವಂದನೆಯನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಮುಕ್ತಾಯ ಹೇಳಿದರು. ಉಪಸ್ಥಿತರಿದ್ದ ಎಲ್ಲ ಪ್ರೇಕ್ಷಕರಿಗೆ ಹಣ್ಣು ಹಾಗೂ ಲಘು ಉಪಹಾರದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.
ಲೇಖನ : ಶ್ರೀಮತಿ ಮುಕ್ತಾ ಪ್ರವೀಣ್